ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಿಚ್ಚssದ ಜಳಕ ನಿನ ಬಾಗ್ಯೆs

ಭುವನಾ ಹಿರೇಮಠ

ಹೊತ್ತೇರಿ ಮಾರಿ ತೊಳಿಬ್ಯಾಡ ಹೆಣ್ಣss
ಗುಟ್ಟೀಲೆ ನೀರ ಕುಡಿಬ್ಯಾಡ| ಅಂಗಳಕ
ದಿಟ್ಟಿsಯ ನೆಟ್ಟು ನಿಲಬ್ಯಾಡss

ಮಗ್ಗಲದ ಮುಳ್ಳ ಮರಿಬ್ಯಾಡ ಹೆಣ್ಣss
ಮಲ್ಲೀಗಿ ಹೂವ ಮುಡಿಬ್ಯಾಡ| ಹೊಳ್ಳೆಳ್ಳೆ
ನೀರೊಳಿ ನೀರಾಗ ಜಿಗಿಬ್ಯಾಡ

ಕುಂತsರ ಕುಣಿಬ್ಯಾಡ ಎದ್ದsರ ಮಣಿಬ್ಯಾಡ
ಕಣ್ಣೀಯ ಮಲುವ ಮರಿಬ್ಯಾಡ| ಹೆಣ್ಣ
ನಸಗುಣಕಿ ಬಲಿಗೆ ಬಿಳಬ್ಯಾಡss

ಕುಂಬೀಯ ಮ್ಯಾಲೊಂದು ಕುಂಭದ ಕುಡಕಿ
ನವಿಲಿsನ ಗರಿಯ ಇಡಬ್ಯಾಡ| ಮಲಿಕಟ್ಟ
ಮರವೀಲೆ ತಿರವಿ ನಿಲಬ್ಯಾಡss

ಮಣಕಾಲ ತೆಳಗ ನಿನ ಅರವು ಹೆಣ್ಣ
ಮಣಕೈಯ್ಯ ಕೆಳಗ ನಿನ ಬಳಿಯ| ನೆಲದಾಕಿ
ಗುಡ್ಡssದ ಸರಿಸಮ ನಿಲಬ್ಯಾಡss

ಹಂದರದ ಪೂಜಿಗೆ ಕಂದರದ ಕಣವಿsಗೆ
ಮುತ್ತೋದಿ ಕಂಬsದ ಕಂಕಣಕ| ಕೈಕೊಟ್ಟು
ತಲಿಬಾಗಿ ದಂಡೋತು ಹಾಕಬೇಕ| ಕುಂತಲ್ಲೆ
ಕಿಚ್ಚssದ ಜಳಕ ನಿನ ಬಾಗ್ಯೆs
ಕಿಚ್ಚssದ ಜಳಕ ನಿನ್ನೈಸಿರಿಯೆs

ಸಿವನೇ ಮಾದೇವ

ಆ ಸೀಮೆಯ ಹಣೆಗೆ ಐದೂ ಬೆರಳಿಟ್ಟು
ಸಿವನೇ ಮಾದೇವಾ ಎಂದು ನಡೆದು ಹೋಗುವ
ಭವಿಷ್ಯದ ಮುದುಕಿ ನಾನು
ಆವಾಗಲೂ ನಾಲಿಗೆ ಹಲ್ಲೊಳಗೇ ಅಡಗಿರುತ್ತದಾ
ಸಿವನೇ ಬಲ್ಲ ಮಾದೇವಾ ನನ್ನಿಂದ ದೂರ ದೂರ

ಆ ಹಾಸುಗಲ್ಲಿನ ಮೇಲೆ ಅಂಗಾತ ಮಲಗಿ
ಸಿವನೇ ಮಾದೇವಾ ಎಂದು ಜಪಿಸುತ್ತಲೇ
ಸೆರಗನೆ ಹೊದ್ದು ನಿದ್ದೆಗೆ ಜಾರುವ
ಭವಿಷ್ಯದ ಅರೆವಯಸ್ಸಿನ ಹೆಂಗಸು ನಾನು
ಆವಾಗಲೂ ನನ್ನ ಕಣ್ಣುಗಳು ದಿಕ್ಕು ಮರೆತಾವೆ
ಸಿವನೇ ಬಲ್ಲ ಮಾದೇವ ನನ್ನಿಂದ ದೂರ ದೂರ

ಈ ಹಾಸಿಗೆಯ ನೆಚ್ಚಿಕೊಂಡು
ನಿನ್ನ ತುದಿಬೆರಳ ಕೂಟದಲಿ ಮುಲುಕುವ
ಅರೆಬೆಂದ ಹೆಂಗಸು ನಾನು
ಈ ಹಸಿಬಿಸಿ ಇನ್ನೆಷ್ಟು ದಿನ
ಇದನ್ನೂ ಸಿವನೇ ಬಲ್ಲನೊ
ಮಾದೇವ ಹತ್ತಿರದಲ್ಲೆ ಇರುವಾಗ

ಹೆಂಗಸು ಬೇಯಬಾರದು ಒಳಗೆ
ಹಸಿಬಿಸಿಯಾಗಿರಬಾರದು ಹೊರಗೆ

ಅರೆವಯಸ್ಸಿನಲಿ ಹೆರಬಾರದು ಹೊರಗೆ
ಅರಳುತ್ತ ಹೊರಳುತ್ತಿರಬೇಕು ಒಳಗೊಳಗೆ

ಮುಪ್ಪಿನಲಿ ಮುದುಕಿ ಮಾಗಬೇಕು ಹೊರಗೆ
ಹಲ್ಲು ಬೀಳದಿದ್ದರೂ ಬಾಯೊಳಗೆ

ಸಿವನೂ ದೂರ ದೂರ
ಮಾದೇವನೂ ದೂರ ದೂರ
ಎದ್ದರೂ ಕುಂತರೂ
ಸಿವನೇ ಮಾದೇವ

‍ಲೇಖಕರು Avadhi

13 September, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading