ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಸು ಕುಡಿಕೆ: ಗುರುಗುಂಟಿರಾಯರ ಬಾಂಡ್ ಫಂಡ್ ವ್ಯಾಮೋಹ.

ಕಾಸು ಕುಡಿಕೆ- 4

ಜಯದೇವ ಪ್ರಸಾದ ಮೊಳೆಯಾರ

An Investment in knowledge gives the best return. . . .  .Benjamin Franklin

ಜ್ಞಾನದಲ್ಲಿ ಹೂಡಿಕೆ ಅತ್ಯಧಿಕ ಪ್ರತಿಫಲ ನೀಡುತ್ತದೆ. . . . . . . . . . . . . . . . ಬೆಂಜಮಿನ್ ಫ್ರಾಂಕ್ಲಿನ್

ಮೊನ್ನೆ ಒಂದಿನ ಬಸ್ಟಾಂಡ್ ಬಳಿ ಗುರುಗುಂಟಿರಾಯರು ಸಿಕ್ಕರು. ಅವರು ನನ್ನ ಹಳೆಯ ಪರಿಚಯ. ಈಗಷ್ಟೇ ವೃತ್ತಿಯಿಂದ ನಿವೃತ್ತರಾಗಿದ್ದ ರಾಯರು ಲವಲವಿಕೆಯಿಂದಿದ್ದರು.  ಪಕ್ಕದ ಹೋಟೆಲಿನಲ್ಲಿ ಕುಳಿತು ಮಸಾಲ ದೋಸೆ ತಿನ್ನುತ್ತಾ ತಮ್ಮ ಕಾಸು ಕುಡಿಕೆಯ ಬಗ್ಗೆ ಮಾತು ಬಿಚ್ಚಿದರು. ನಿವೃತ್ತಿಯೊಂದಿಗೆ ಕೈಯಲ್ಲಿ ಐದಾರು ಲಕ್ಷ ದುಡ್ಡು ಬಂದ ಹಾಗಿತ್ತು. ಶೇರು ಮಾರುಕಟ್ಟೆ ಎಂಬ ಜೂಜಾಟ ಅವರಿಗೆ ಆಗದು. ರಿಸ್ಕ್ ಎಂದರೆ ಅಲರ್ಜಿ.  ಅದಕ್ಕೇ ಯಾವುದಾದರೂ ಒಳ್ಳೆಯ ಗ್ಯಾರಂಟಿಯುಳ್ಳ ‘ಬಾಂಡ್ ಫಂಡ್’ ನಲ್ಲಿ ದುಡ್ಡು ತೊಡಗಿಸುವ ಗುಂಗಿನಲ್ಲಿದ್ದರು. ಕಳೆದ ಒಂದು ವರ್ಷದಲ್ಲಿ ಹೆಚ್ಚಿನ ಬಾಂಡ್ ಫಂಡ್ ಗಳು 25-30% ರಷ್ಟು ಪ್ರತಿಫಲ ನೀಡಿದ್ದನ್ನು ಹಾಡಿ ಹೊಗಳತೊಡಗಿದರು. ರಿಸ್ಕೂ ಇಲ್ಲ, ರಿಟರ್ನೂ ಅತ್ಯಧಿಕ, ಅದೇ ಬೆಸ್ಟ್, ಎಂಬಂತೆ!

ಬಾಂಡ್ ಫಂಡ್ ನಲ್ಲಿ ದುಡ್ಡು ಹಾಕಬಹುದು, ಸಾರ್. ಆದರೆ ಗ್ಯಾರಂಟಿ ಪ್ರತಿಫಲ ಇರದು. ನಷ್ಟವಾಗಲೂ ಬಹುದು ಎಂದೆ.

ಆಂ! ಅದು ಹೇಗೆ? ನಷ್ಟ ಆಗಲು ಸಾಧ್ಯವೇ ಇಲ್ಲ. Gilt ಗಳಲ್ಲೇ ಹಾಕಿದರೆ ನಷ್ಟ ಹೇಗೆ ಬರೋದು? ಗಿಲ್ಟ್, ಸರಕಾರದ ಸಾಲ ಪತ್ರ ಅಲ್ಲವೇ? ಸವೆರಿನ್ ಗ್ಯಾರಂಟಿಯೊಂದಿಗೆ ಭಾರತ ಸರಕಾರದ ಭದ್ರತೆಯೊಂದಿಗೆ ಬರುತ್ತದಲ್ಲವೇ? ಎಂದು ಒಂದು ಬ್ರಹ್ಮಾಸ್ತ್ರ ಎಸೆದು ವಿಜಯದ ನಗೆ ಬೀರಿದರು.

ಉಪಾಧ್ಯಾಯರಿಗೆ ಸಾಲಪತ್ರಗಳ (Debt Instruments) ಬಗ್ಗೆ ಜಾಸ್ತಿ ಮಾಹಿತಿ ಇಲ್ಲ. ಅಲ್ಲಿಲ್ಲಿಂದ ಅಲ್ಪಸ್ವಲ್ಪ ತಿಳಿದುಕೊಂಡಿದ್ದಾರೆ ಎಂದು ಗೊತ್ತಾಯಿತು. ಖಾಲಿಯಾದ ಮಸಾಲೆ ದೋಸೆಯ ತಟ್ಟೆಯನ್ನು ಪಕ್ಕಕ್ಕೆ ಸರಿಸಿ, ಲೋಟದಲ್ಲಿದ್ದ ನೀರು ಕುಡಿದು, ಒಂದು ಪುಟ್ಟ ಭಾಷಣಕ್ಕೆ ರೆಡಿಯಾದೆ.

ಅದು ಹಾಗಲ್ಲ ಸರ್. ಭದ್ರತೆಯ ಮಟ್ಟಿಗೆ ನೀವು ಹೇಳಿದ್ದೆಲ್ಲವೂ ಸರಿಯಾದರೂ, ಬಿಳಿಯಿರುವುದೆಲ್ಲಾ ಹಾಲಲ್ಲ. ಸುಣ್ಣದ ನೀರೂ ಆಗಿರಬಹುದು.

ಅಂದ್ರೆ. . . .? Please explain.”. ಗುರುಗುಂಟಿರಾಯರು ಹುಬ್ಬೇರಿಸಿದರು.

ಸರ್, ನೋಡಿ, ಮೂಲಭೂತವಾಗಿ ಹೂಡಿಕೆಯಲ್ಲಿ ಇಕ್ವಿಟಿ (ಶೇರು) ಮತ್ತು ಡೆಟ್ (ಸಾಲಪತ್ರ) ಎಂಬ ಎರಡು ವರ್ಗ. ಹೆಚ್ಚಿನವರು ಶೇರಿಗೆ ಸಂಬಂಧಿತ ರಿಸ್ಕ್ ಬೇಡ ಎಂದು ಸಾಲಪತ್ರಗಳ ಮೊರೆ ಹೋಗುತ್ತಾರೆ. ಅದರಲ್ಲಿ ನಿಗದಿತ ಬಡ್ಡಿ ದರ ನಮೂದಿಸಲ್ಪಟ್ಟಿರುತ್ತದೆ. ಮತ್ತು ಆದಷ್ಟು ಭದ್ರ ಸಂಸ್ಥೆಗಳ ಸಾಲಪತ್ರವನ್ನು ಖರೀದಿಸಿದರೆ ಭದ್ರತೆಯೂ ಇದೆ, ಉತ್ತಮ ಪ್ರತಿಫಲವೂ ಇದೆ ಎಂದು ಹಲವರು ತಿಳಿದುಕೊಳ್ಳುತ್ತಾರೆ.

ಅಲ್ವೇ?, ಅಲ್ವೇ ಮತ್ತೆ? ಗುರುಗುಂಟಿರಾಯರು ಮಸಾಲೆ ದೋಸೆ ಮುಗಿಸಿ ನನ್ನನ್ನೇ ದೃಷ್ಟಿಸಿದರು.

ಖಂಡಿತಾ ಅಲ್ಲ! ಇಲ್ನೋಡಿ, ಸಾಲಪತ್ರಗಳ ಮ್ಯೂಚುವಲ್ ಫಂಡ್ ಅಥವ ಡೆಟ್ ಫಂಡ್ ಗಳ ಮಹಿಮೆ ಅಪಾರ. ಅವುಗಳು ಹಲವಾರು ಅವತಾರಗಳನ್ನೆತ್ತಿ ತಮ್ಮ ಸಹಸ್ತ್ರ ನಾಮಗಳೊಂದಿಗೆ ಮಾರುಕಟ್ಟೆಗೆ ಬರುತ್ತವೆ. ಉದಾಹರಣೆಗಾಗಿ,

1.    ಸಾವೆರಿನ್ ಭದ್ರತೆಯುಳ್ಳ ಸರಕಾರೀ ಸಾಲಪತ್ರ (G-Securities) ಗಳಲ್ಲಿ  ಹೂಡುವ ಗಿಲ್ಟ್ ಫಂಡ್ ಗಳು.

2.    ಕಂಪೆನಿ (ಕಾಪರ್ೊರೇಟ್) ಡಿಬೆಂಚರ್ ಮತ್ತು ಸರಕಾರೀ ವಿತ್ತೀಯ ಸಂಸ್ಥೆಗಳ ಬಾಂಡ್ಗಳಲ್ಲಿ ಹೂಡುವ ಬಾಂಡ್ ಫಂಡ್ ಗಳು.

3.    ಆರ್.ಬಿ.ಐ (ಸರಕಾರ) ಮತ್ತು ಅಂತರ್-ಬ್ಯಾಂಕಿನ ದೈನಂದಿನ ನಗದು ಲೇವಾದೇವಿ (ಮನಿ ಮಾಕರ್ೆಟ್) ಗೆ ಸಂಬಂಧ ಪಟ್ಟ ಅಲ್ಪಾವಧಿಯ (ಶಾಟರ್್ ಟಮರ್್) ಲಿಕ್ವಿಡ್ ಫಂಡ್.

4.    ಸಾಲಪತ್ರ ಮತ್ತು ಶೇರುಗಳ ಮಿಶ್ರಣವುಳ್ಳ ಬ್ಯಾಲನ್ಸೆಡ್ ಫಂಡ್, ಮಂಥ್ಲಿ ಇನ್ ಕಂ ಪ್ಲಾನ್ (ಎಮ್.ಐ.ಪಿ)

5.    ನಿಗಧಿತ ಅವಧಿಯ (ಕ್ಲೋಸ್ಡ್ ಎಂಡೆಡ್) ಫéಿಕ್ಸ್ಡ್ ಮೆಚ್ಯೂರಿಟಿ ಪ್ಲಾನ್ (ಎಫé್.ಎಮ್.ಪಿ)

6.    ಬ್ಯಾಂಕು ಮತ್ತು ಕಂಪೆನಿಗಳ ಫéಿಕ್ಸ್ಡ್ ಡೆಪಾಸಿಟ್(ಎಫé್.ಡಿ)ಗಳು.

ಇವೆಲ್ಲಾ ಡೆಟ್ಗಳೇ. ಎಲ್ಲವೂ ಬೇರೆ ಬೇರೆ. ಪ್ರತಿಯೊಂದಕ್ಕೂ ಅದರದ್ದೇ ಆದ ಗುಣದೋಷಗಳಿವೆ. ಸರಿಯಾಗಿ ಅರಿತೇ ನಮಗೆ ಅತಿಸೂಕ್ತವಾದ ಸ್ಕೀಂನಲ್ಲಿ ದುಡ್ಡು ಹೂಡಬೇಕು. ಪೀಠಿಕೆ ಶಾಸ್ತ್ರ ಮುಗಿಸಿ ಇನ್ನೊಂದಷ್ಟು ನೀರು ಕುಡಿದೆ.

ಗುರುಗುಂಟಿರಾಯರೂ ಸ್ವಲ್ಪ ನೀರು ಕುಡಿದು ಬಳಿಗೆ ಬಂದ ವೈಟರಿಗೆ ಎರಡು ಕಾಫಿ ಎಂದು ವಿಕ್ಟರಿ ಮಾರ್ಕ್ ನಲ್ಲಿ ಬೆರಳೆತ್ತಿ ಆರ್ಡರಿಸಿ ಕಾಫಿ ಆಗಬಹುದಲ್ಲವೇ? ಎಂದು ಸ್ವಲ್ಪ ಬಿಗುವಾಗಿಯೇ ನನ್ನ ಮುಖ ನೋಡಿದರು.

ಆಗಬಹುದು ಎಂದು ತಲೆಯಾಡಿಸುತ್ತಾ ಮಾತು ಮುಂದುವರಿಸಿದೆ. ಈಗ ನೀವು ಹೇಳಿದ್ದು, ಬಾಂಡ್ ಫಂಡ್! ಸಧ್ಯಕ್ಕೆ ಅದನ್ನು ಮಾತ್ರ ನೋಡೋಣ. ಬಹುತೇಕ, ಮೊದಲಿನ ಎರಡು ನಮೂನೆಯ ಫಂಡ್ ಗಳನ್ನು ಬಾಂಡ್ ಫಂಡ್ ಎಂದು ಸಡಿಲವಾಗಿ ಕರೆಯುತ್ತಾರೆ. ಅಂದರೆ ಸರಕಾರೀ ಸಾಲಪತ್ರದ ಗಿಲ್ಟ್ ಫಂಡ್ ಗಳು, ಮತ್ತು ಕಂಪೆನಿ ಡಿಬೆಂಚರ್ ಹಾಗೂ ಸರಕಾರೀ ವಿತ್ತೀಯ ಸಂಸ್ಥೆಗಳ ಬಾಂಡ್ ಫಂಡ್ ಗಳು.

ಸರಿ ಗೊತ್ತಾಯಿತು. ಅವುಗಳಲ್ಲಿ ಲಾಸ್ ಬರುವುದು ಹೇಗೆ ಅದು ಮೊದ್ಲು ಹೇಳಿ.  ಗುರುಗುಂಟಿರಾಯರಿಗೆ ಸಹನೆ ಮೀರುತ್ತಿತ್ತು.

ಅದು ಆ ಫಂಡ್ ಗಳ ಕಾರ್ಯ ವೈಖರಿಯಿಂದ. ಸರಕಾರಿ ಗಿಲ್ಟ್ ಪತ್ರವಿರಲಿ, ಕಂಪೆನಿ ಡಿಬೆಂಚರ್ ಇರಲಿ, ವಿತ್ತ ಸಂಸ್ಥೆಗಳ ಬಂದ್ ಗಳೇ  ಇರಲಿ, ಅವೆಲ್ಲವೂ ಒಂದು ನಿರ್ಧಿಷ್ಟ ಬಡ್ಡಿದರ (ಕೂಪನ್ ರೇಟ್) ಗಳೊಂದಿಗೆ ಬಿಡುಗಡೆಯಾಗುತ್ತವೆ. ಅಮೇಲೆ ಅವುಗಳು ಸಾಲಪತ್ರಗಳ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತವೆ. ಮ್ಯೂಚುವಲ್ ಫಂಡ್ ಗಳು ಇದೇ ಮಾರುಕಟ್ಟೆಯಲ್ಲಿ ಈ ಬಾಂಡುಗಳನ್ನು ಕೊಡುತ್ತಾರೆ, ಕೊಳ್ಳುತ್ತಾರೆ. ಮಾರಾಟವಾಗುತ್ತವೆ ಅಂದಮೇಲೆ ಅದಕ್ಕೊಂದು ಮಾರುಕಟ್ಟೆಯ ಬೆಲೆ ಇರುತ್ತದಲ್ಲವೇ? ಪ್ರಚಲಿತ ಬಡ್ಡಿದರ ಇಳಿದಂತೆಲ್ಲ ಹಳೆಯ ಹೆಚ್ಚಿನ ಬಡ್ಡಿದರ (ಕೂಪನ್ ರೇಟ್) ಗಳುಳ್ಳ ಬಾಂಡುಗಳ ಬೆಲೆ ಮಾರುಕಟ್ಟೆಯಲ್ಲಿ ಏರುತ್ತವೆ. ಅದರಿಂದಾಗಿ ಬಡ್ಡಿ ದರ ಇಳಿದಂತೆಲ್ಲ ಹಳೆಯ ಬಾಂಡ್ ಫಂಡುಗಳ ಮೌಲ್ಯ ಅಥವ NAV ಹೆಚ್ಚಾಗುತ್ತಾ ಹೋಗುತ್ತದೆ. ಈ ರೀತಿಯಲ್ಲಿ ಇಳಿಮುಖ ಬಡ್ಡಿದರದ ಕಾಲದಲ್ಲಿ ಬಾಂಡ್ ಫಂಡುಗಳಿಗೆ ಸುಗ್ಗಿ. 25% ಯಾಕೆ 50% ಕೂಡಾ ಪ್ರತಿಫಲ ತೋರಿಸಬಹುದು. ಕಳೆದ ವರ್ಷ ರಿಸೆಶನ್ ಸಲುವಾಗಿ ಸರಕಾರವು ಬಡ್ಡಿದರವನ್ನು ಸತತವಾಗಿ ಇಳಿಸಿತ್ತು ಅಲ್ಲವೇ? ಹಾಗಾಗಿ ಈ ವರ್ಷ ಅಷ್ಟು ಪ್ರತಿಫಲ ಸಿಕ್ಕಿತು. ಬಾಂಡುಗಳಲ್ಲಿ ಪ್ರತಿಫಲ ಬರುವುದು ಅದರಲ್ಲಿ ನಮೂದಿಸಿದ ಕೂಪನ್ ರೇಟ್ ನಿಂದ ಮಾತ್ರವಲ್ಲ; ಅದರ ಮಾರುಕಟ್ಟೆಯ ಸಧ್ಯದ ಬೆಲೆಯಿಂದಲೂ.

ಹೌದಾ? ಎಂದು ಅಚ್ಚರಿಪಟ್ಟರು ಗುರುಗುಂಟಿ. ರಾಯರ ಬಿಗಿ ಕಡಿಮೆಯಾಗಿತ್ತು. ಮುಖದಲ್ಲಿ ಕುತೂಹಲ ಮೂಡಿತ್ತು.

ಹೌದು. ಆದರೆ, ಹಿಂದಿನ ಸಾಧನೆ ಭವಿಷ್ಯದ ಪ್ರತಿಫಲನ ಅಲ್ಲವಲ್ಲ? ಇದು ಶಾಸನವೇ ವಿಧಿಸಿದ ಎಚ್ಚರಿಕೆ. ಆದ್ರೆ ಕಾನ್ಸರ್ ಚಿತ್ರ ನೋಡಿ ಯಾರಾದರೂ ಸಿಗರೇಟ್ ಸೇವನೆ ನಿಲ್ಲಿಸಿದ್ದಾರೆಯೇ? ಮ್ಯೂಚುವಲ್ ಫಂಡುಗಳಲ್ಲೂ ಹಾಗೇನೇ. ಹಿಂದಿನ ಸಾಧನೆಯನ್ನೇ ನೋಡಿ ಜನ ಮುಗಿ ಬಿದ್ದು ದುಡ್ಡು ಹೂಡುತ್ತಾರೆ, ಭವಿಷ್ಯವನ್ನು ನಿರೀಕ್ಷಿಸಿಕೊಂಡು ಅಲ್ಲ! ಅದರೆ, ಮುಂದೊಂದು ದಿನ ಬಡ್ಡಿದರ ಏರುಮುಖವಾದಾಕ್ಷಣ ಬಾಂಡ್ ಫಂಡುಗಳು ಇಡೀ ಪ್ರಕ್ರಿಯೆ ಉಲ್ಟಾ ಆಗಿ NAV ಕಡಿಮೆಯಾಗಿ ನಷ್ಟ ತೋರಿಸಲು ಆರಂಭಿಸುತ್ತದೆ. ಜನರು ಹೂಡಿದ ಹಣ ಕಳೆದುಕೊಳ್ಳುತ್ತಾರೆ. ಬಾಂಡ್ ಫಂಡ್ ಗಳಲ್ಲಿ ಲಾಸ್ ಬರುವುದು ಹೀಗೆ. ಗೊತ್ತಾಯ್ತಾ ಸರ್?

ಗುರುಗುಂಟಿರಾಯರಿಗೆ ಗೊತ್ತಾದಂತಿತ್ತು. ಯಾಕೆಂದರೆ ಅವರ ಮುಖ ಕಳೆಗುಂದಿತ್ತು. ಬಾಂಡ್ ಫಂಡ್ ಗಳ ಕಾರ್ಯವೈಖರಿ ಮತ್ತು ಪ್ರತಿಫಲದ ತತ್ವ ಅವರು ಯೋಚಿಸಿದ್ದಕ್ಕಿಂತ ಬಹಳ ಭಿನ್ನವಾಗಿತ್ತು.

ನಾನೇ ನಿಧಾನವಾಗಿ ಮುಂದುವರಿಸಿದೆ. ಬಾಂಡ್ ಫಂಡುಗಳೂ ಕೂಡಾ ರಿಸ್ಕಿಯೇ. ಬಡ್ಡಿ ದರ ಆಧಾರಿತ ರಿಸ್ಕ್ ಖಂಡಿತಾ ಇದೆ. ಶೇರು ಬೆಲೆ ತಮ್ಮ ಬಿಸಿನೆಸ್ ಹೊಂದಿಕೊಂಡು ಏರಿಳಿದಂತೆ ಬಾಂಡ್ ಬೆಲೆ ಪ್ರಚಲಿತ ಬಡ್ಡಿದರವನ್ನು ಹೊಂದಿಕೊಂಡು ಏರಿಳಿಯುತ್ತವೆ. ಬಡ್ಡಿದರ ಇಳಿದಂತೆ ಬಾಂಡ್ ದರ  ಏರುತ್ತದೆ ಹಾಗೂ ಬಡ್ಡಿದರ ಏರಿದಂತೆ ಬಾಂಡ್ ದರ ಇಳಿಯುತ್ತದೆ. ಇದನ್ನು ಅರ್ಥ ಮಾಡಿಕೊಂಡು ಮುಂದೆ ಬಡ್ಡಿ ದರ ಏರುವುದೋ ಇಳಿಯುವುದೋ ಎಂದು ನಿರೀಕ್ಷಿಸಿಕೊಂಡೇ ಬಾಂಡ್ ಫಂಡ್ ಗಳಲ್ಲಿ ದುಡ್ಡು ಹಾಕಲು ಹೋಗಬೇಕು.

ಹಾಗಾದರೆ ಸಧ್ಯೋ ಭವಿಷ್ಯತ್ತಿನಲ್ಲಿ ಬಡ್ಡಿದರ ಏರುವುದೋ? ಬಾಂಡ್ ಫಂಡ್ ಗಳಲ್ಲಿ ದುಡ್ಡು ಹೂಡಿದರೆ ಲಾಸ್ ಆಗುವ ಸಂಭವ ಇದೆಯೋ? ಗುರುಗುಂಟಿರಾಯರು ಬಾಟಮ್ ಲೈನ್ ಪ್ರಶ್ನೆ ಕೇಳೇ ಬಿಟ್ಟರು.

ಅದನ್ನು ನಾನು ಹೇಳ ಬಾರದು ಸರ್. ಭವಿಷ್ಯ ನುಡಿಯುವುದು ನನ್ನ ಕೆಲಸವಲ್ಲ. ವಿವರಣೆಗಳನ್ನೆಲ್ಲ ಕೊಟ್ಟಿದ್ದೇನೆ. ನೀವೇ ಸ್ಟಡಿ ಮಾಡಿ ಡಿಸೈಡ್ ಮಾಡಿ. ಆದರೆ ಇಷ್ಟು ಮಾತ್ರ ಹೇಳಬಲ್ಲೆ. ಪ್ರಧಾನ ಮಂತ್ರಿ, ವಿತ್ತ ಮಂತ್ರಿ ಸಹಿತ ಪ್ರತಿಯೊಬ್ಬರೂ ಬಡ್ಡಿದರ ಏರುವ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ. ಸಧ್ಯದ ಪರಿಸ್ಥಿತಿಯಲ್ಲಿ ಬಡ್ಡಿದರ ಇನ್ನೂ ಇಳಿಯುವ ಬಗ್ಗೆ ಮಾರುಕಟ್ಟೆಯಲ್ಲಿ ಯಾರೊಬ್ಬರೂ ಮಾತನಾಡುತ್ತಿಲ್ಲ.

ಕಾಫಿಯ ಕೊನೇ ಸಿಪ್ ಹೀರಿ ಕಪ್ ಕೆಳಗಿಟ್ಟ ಗುರುಗುಂಟಿರಾಯರು ಬಿಲ್ ಎತ್ತಿಕೊಂಡು ‘ಲೇಟಾಗುತ್ತೆ’ ಎಂದು ಹೇಳುತ್ತಾ ಎದ್ದುಬಿಟ್ಟರು. ನಾನೂ ಕಾಫಿ ಮುಗಿಸಿ ಎದ್ದುಬಿಟ್ಟೆ. ಅಂದು ‘ತುಂಬಾ ಥಾಂಕ್ಸ್ ಇದೆಲ್ಲ ಹೇಳಿದ್ದಕ್ಕೆ’ ಎಂದು ಬೀಳ್ಕೊಟ್ಟ ರಾಯರು ಮತ್ತೆ ನನಗೆ ಸಿಗಲಿಲ್ಲ. ಕೊನೆಗೆ, ಬಾಂಡ್ ಫಂಡಿನಲ್ಲಿ ಯಾವ ರೀತಿ ದುಡ್ಡು ಹೂಡಿದರೋ ತಿಳಿಯಲಿಲ್ಲ.

‍ಲೇಖಕರು avadhi

4 April, 2010

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

2 Comments

  1. rgbellal

    ಜೆ ಪಿ ಮೊಳೆಯಾರರೇ
    ಲೇಖನ ಸಮಯೋಚಿತವಾಗಿತ್ತು
    ನಿಮ್ಮ ಲೇಖನ ನನ್ನಂತೋರಿಗೆ ಜ್ಞಾನವರ್ಧಕವಾಗಿತ್ತು.
    ಧನ್ಯವಾದಗಳು.

    • jayadev

      dhanyavaadagalu

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading