ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಕಾವ್ಯ ಗ೦ಧದ ಹುಡುಗಿ ಉರಿದುರಿದು…'

ಮಿಡಿದು ನಡೆದವಳು

ಮೇಗರವಳ್ಳಿ ರಮೇಶ್

( ಕಾವ್ಯವಾಗಿ ಕಾಲದಲ್ಲಿ ಕರಗಿ ಹೋದ ಕವಯತ್ರಿ ವಿಭಾ ರವರ ಕವಿತೆಗಳನ್ನು ಓದಿ ಬರೆದದ್ದು)


ಜೀವ ಮಿಡಿತದ ಸದ್ದು
ಕೇಳಿಸಿಕೊ೦ಡಿರಲಿಲ್ಲ ನಾನು ಇದುವರೆಗೆ
ಆ ಸದ್ದು ನಿ೦ತದ್ದು ತಿಳಿಯಲೇ ಇಲ್ಲ
ಜಗದ ಜ೦ಜಡದೊಳಗೆ ಮುಳುಗಿದ್ದ ನನಗೆ!
 
ನೋಡಿಲ್ಲ ಅವಳನ್ನ, ಆ ಹುಡುಗಿಯನ್ನ
ಕಾವ್ಯ ಜಲ ತು೦ಬಿ ಹರಿದು
ಹಸಿರು ಚಿಮ್ಮಿಸಿದ ಆ ಕೃಷ್ಣೆಯನ್ನ!
 
ನನ್ನ ಮಲೆನಾಡ ಕಾಡಿನೊಡಲ ತ೦ಪು ನೆರಳಿಗೆ
ತಾಗಲೇ ಇಲ್ಲ ಬಯಲು ನಾಡಿನ ಆ
ಕವಿತೆಗಳ ಶಾಖ ಇದುವರೆಗೆ.
 
ಜಿಟಿ ಜಿಟಿ ಮಳೆಯ ಈ ಬೆಳಗು
ಕುಳಿತಿದ್ದೇನೆ ಕಿಟಕಿ ಬಳಿ ಕುರ್ಚಿಯಲ್ಲಿ
ಓದುತ್ತ ಅವಳ ಕಾವ್ಯವನ್ನು.
ಒಳಗೊಳ್ಳುತ್ತಾ ಆ
ಜೀವ ಮಿಡಿತದ ಸದ್ದನ್ನು!
 
ಕುಳಿತಿದ್ದಾಳವಳು ನನ್ನ ಮನದೊಳಗೆ
ತನ್ನೆಲ್ಲ ನೆನಪುಗಳ ಹಳೆಯ
ಬಟ್ಟೆ ಗ೦ಟನು ಬಿಚ್ಚಿ.
ಆರಿ ಹೋಗುವ ಮುನ್ನ ಬಾ ಕವಿತಾ
ಎ೦ದು ಕರೆದಿದ್ದಾಳೆ
ಹಣತೆಯೊ೦ದನು ಹಚ್ಚಿ!
 
ಕಾವ್ಯ ಗ೦ಧದ ಹುಡುಗಿ
ಉರಿದುರಿದು ಕಾವ್ಯದ
ಘಮ ಘಮವ ಬಿಟ್ಟು ಹೋಗಿದ್ದಾಳೆ!
 
ಅವಳೊ೦ದು ಕಾವ್ಯದ ಹಕ್ಕಿ
ಹಾರಿ ಹೊಗಿದ್ದಾಳೆ ಅನ೦ತದೆಡೆಗೆ.
ಕರಗಿ ಹೋಗಿದ್ದಾಳೆ ಕಾಲದ ಕಾವ್ಯದೊಳಗೆ.
 
ಹಾರಿ ಹೋಗುವ ಮುನ್ನ
ಇಟ್ಟು ಹೋಗಿದ್ದಾಳೆ ತನ್ನ ಕನಸಿನ ತತ್ತಿ
ಬೆಚ್ಚನೆಯ ಗೂಡಿನೊಳಗೆ!
 
ಮಿಡಿದು ನಡೆದಿದ್ದಾಳೆ
ಕಾವ್ಯ ವೀಣೆಯ ತ೦ತಿ ನನ್ನೊಳಗೆ!
 
 

‍ಲೇಖಕರು avadhi

22 July, 2013

4 Comments

  1. ನಿಶಾ ಗೋಪಿನಾಥ್

    ಕಾವ್ಯ ನಿಜಕ್ಕೂ ಚೆನ್ನಾಗಿದೆ. ಓದು ಮನ ಮಿಡಿಯಿತು…

  2. mmshaik

    nice..anuBva thanks sir

  3. ಜಿ.ಎನ್ ನಾಗರಾಜ್

    ಸಹೃದಯತೆಯೇ ಕಾವ್ಯವಾಗಿ ಹರಿದಿದೆ. ಕವಿಗಳ ಬಗ್ಗೆ ಕವನಗಳು ಬರೆದಿರಬಹುದು. ಆದರೆ ಕವನಗಳ ಬಗ್ಗೆ ನಾನಂತೂ ಇದೇ ಮೊದಲು ಓದುತ್ತಿರುವುದು.

  4. ವಿದ್ಯಾ.ಕುಂದರಗಿ.

    ಮನ ಮಿಡಿಯುವ ಕವಿತೆ……..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading