ಕಾವ್ಯಾ ಕಡಮೆ
ನೀನು 1
ಒಂದು ನಿರಮ್ಮಳ ಶ್ವಾಸದಂತೆ
ನನಗೆ ನೀನು
ಮುಗಿಯದ ಸಂತೆಯೊಂದು ನನ್ನಾಳವ ತೊಟ್ಟಿಕ್ಕುವಾಗ
ನೀನು ನೋಡುತ್ತೀ ದೂರದಿಂದ
ಹತ್ತಿರ ಬಂದರೆ ಕನಲಿ ಹೋಗುತ್ತದೆಂದು ಹೆದರುತ್ತೀ
ಹಾರಿದಷ್ಟೂ ದಾರಿ ತೆರೆಯುತ್ತದೆ
ಮುಗಿಲು
ರೆಕ್ಕೆ ನೋಯಲಿ ಎಂದು ಕಾಯುತ್ತದೆ
ರೆಕ್ಕೆ
ಕಲ್ಪಿಸಿಕೊಂಡಿದ್ದಾದರೆ ಮರೆಯಾಗುತ್ತಿತ್ತು
ಅಂಟಿಸಿಕೊಂಡದ್ದಾದರೆ ಕೈಗೆ ಬರುತ್ತಿತ್ತು
ರೂಢಿಸಿಕೊಂಡದ್ದಾದರೆ ಸೋತು ಕೂಡುತ್ತಿತ್ತು
ಮೈಗಂಟಿ
ಯಾವುದೂ ಅಲ್ಲದ ಕಾರಣ ರೆಕ್ಕೆ
ನನ್ನ ದೇಹದೊಳು ಸೇರಿ ಮಾಯ್ದಿತು
ಚರ್ಮದೊಳಗೆ ಸೇರಿ ಹೋಗಿಯೂ
ಕಲೆ ಉಳಿಸುವ ಗಾಯ ಚರ್ಮವೇ ಆದಂತೆ
ಸುಮ್ಮನೇ ಅಲ್ಲ
ಈ ಎಲ್ಲ ಸಂಭ್ರಮವ ಒಮ್ಮೆ ನೀನೇ ಬಂದು ನೋಡಬೇಕು
ಖುದ್ದು ನೀನೇ ಬಂದು.

ನೀನು 2
ನಿನ್ನ ನನ್ನ ನಡುವೆ ಯುದ್ಧಗಳೇ ನಡೆಯಬಹುದಿತ್ತು
ಗೆದ್ದು ಸೋತು ಅಳಿಸಿ ನಗಿಸಿ ಸೋಲಿಸಿ ರೋಧಿಸಿ
ಬಿಗಿದು ಹೊಡೆದು ಮುತ್ತಿಟ್ಟು ಶೋಧಿಸಿ ರಮಿಸಿ
ಮತ್ತೆ ಬೈದು ರೇಗಿಸಿ ಉಳಿಸಿ ಬೆಂಕಿ
ತಗುಲಿಸಿ ಆರಿಸಿ ರಕ್ತ ಕಾರಿಕೊಂಡು-
ನಾವು ಒಂದಾಗಬಹುದಿತ್ತು
ಹಾಗೇನೂ ಆಗದೆಯೂ ನಮ್ಮ
ಧ್ಯಾನ ಮೀಟಿತು
ಈ ಕ್ಷಣ ಲೋಕದ ಜನರ ಸಿಹಿ ಅಸೂಯೆಗೆ
ನಾವು ಜವಾಬ್ದಾರರಲ್ಲ

ನೀನು 3
ಮೈಗೆ ಆತುಕೊಳ್ಳುವುದು ಹೋಗಲಿ ಕೈಗೆ
ಕೈ ತಾಗಿಸದೆಯೂ ನಾವು ಬಹು
ದೂರ ನಡೆಯಬಲ್ಲೆವು ಜತೆಗೆ
ರೆಕ್ಕೆಗೆ ಚಿಟ್ಟೆ ಭಾರವಾಗದ ಹಾಗೆ
ಸಹಜ ಉಸಿರಿನ ಹಾಗೆ ನಿರರ್ಗಳ
ಹರಿಯುವ ಜೀವಜಲದ ಹಾಗೆ
ದೇಹದ ಪ್ರತೀ ನರದಲ್ಲಿಯೂ ಹೊಕ್ಕಿ ಹೊರ
ಬೀಳುವ ಕೆಂಪು ದ್ರಾವಣದ ಹಾಗೆ ಪೂತರ್ಿ
ಯಾದುದೊಂದು ಗೋಲದ ಹಾಗೆ
ನಡೆಯಬಲ್ಲೆವು ನಾವು ಕ್ಷಿತಿಜದ ಕೊನೆಯವರೆಗೂ
ಭಾರವಿಲ್ಲದೇ ಅಪೂರ್ಣತೆ ನಮ್ಮನು
ಕಂಗೆಡಿಸದ ತನಕ

ನೀನು 4
ಮುಂದೊಂದು ದಿನ ಈ ಹೊತ್ತು
ಚಿಟ್ಟೆ ಹಾರಿದರೂ ಹಾರ
ದಿದ್ದರೂ ರೆಕ್ಕೆಯ ರೋಮಾಂಚ
ಮಾಯುತ್ತದೆ ಕಾಲನೊಡನೆ ಎಂದು ಗೊತ್ತಾದ
ಗತ್ತು
ಆಗ ಕಾಲನ ವಾರಸುದಾರ ಗಡಿಯಾರ
ತನ್ನ ಮುಳ್ಳ ಹಿಂದಕ್ಕೋಡಿಸಿದರೆ
ಆತಂಕದಿಂದ ನೋಯುತ್ತೇವೆ ನಾವಿಬ್ಬರೂ
ವಿಚಾರಿಸುತ್ತೇವೆ ಲೋಕದ ಆರೋಗ್ಯದ ಬಗ್ಗೆ
ಅದೇ ಚಣ ನಮಗರಿವಿಲ್ಲದೇ ಹಸ್ತದ ರೇಖೆಗಳು
ಅದಲು ಬದಲಾಗುತ್ತವೆ ಮೈಯ ಗೆರೆಗಳು ಮಾಸುತ್ತವೆ
ಆತ್ಮದ ಸುಕ್ಕುಗಳು ನವಿರೇಳುತ್ತವೆ
ನನ್ನೊಳಗೊಂದು ಪುಟ್ಟ ದೀಪ ನಿನ್ನ
ನನ್ನ ಶ್ವಾಸ ಸೇರಿ ಉಸಿರು ಪಡೆಯುತ್ತದೆ
ನಿರಮ್ಮಳ ಪಯಣದ ಜತೆಯಾಗುತ್ತದೆ.







ಚಿಟ್ಟೆ ಹಾರಿದರೂ ಹಾರ/ದಿದ್ದರೂ ರೆಕ್ಕೆಯ ರೋಮಾಂಚ/ಮಾಯುತ್ತದೆ ಕಾಲನೊಡನೆ ಎಂದು ಗೊತ್ತಾದ/ಗತ್ತು
ಒಳ್ಳೆಯ ಸಾಲುಗಳು. ಲೌಕಿಕದ ಆಕರ್ಷಣೆ ಮೀರಿಯೂ ಮೀರದ ಚಿಂತನ ಕ್ರಮ ನಿನ್ನ ವಯಸ್ಸಿನವರಿಗೆ ಈ ಕಾಲದಲ್ಲಿ ಅತಿ ದುರ್ಲಭ. ಕಾವ್ಯ ಕೃಷಿ ’ಕಡಿಮೆ’ಯಾಗದಿರಲಿ ’ಕಾವ್ಯಾ ಕಡಮೆ’.
ಕಾವ್ಯಾಳ ಈ ಕವಿತೆಗಳಲ್ಲಿ ಒಂದು ತಾಜಾತನವಿದೆ,ಮೃದುತ್ವ ಇದೆ.ಪೂರ್ಣತೆಯ ತಾತ್ವಿಕತೆಯಲ್ಲಿರುವ ವಿಶ್ವಾಸ,ಎರಡು ಒಂದಾಗುವ ತನ್ಮಯತೆಯ ಪಕ್ವ ಗ್ರಹಿಕೆ,ವರ್ತಮಾನದ ಅಶಾಶ್ವತತೆಯ ಅರಿವು ಮರೆಯಾಗದಂತೆ ಕಾಲದ ಪ್ರಜ್ಞೆ,ಮನುಷ್ಯ ಸಂಬಂಧಗಳ ಸೂಕ್ಷ್ಮ ನಿರೂಪಣೆ…,ತುಂಬ ಒಳ್ಳೆಯ ಪದ್ಯಗಳು.
ಧ್ವನಿ ಹೀಗಿದ್ದರೆ ಚೆಂದ. ಹಲವು ಕಾಲಗಳವರೆಗೆ ಎದೆಯೊಳಗೆ ಸುತ್ತಿ ಸುತ್ತಿ ಹಣ್ಣು ಹಣ್ಣಾಗಿ ಮಾತಾಡದೆ ಪದಗಳಾದ ಪ್ರೇರಣೆ ಎಂದರೆ ಇದು. ಕಾಗದ ಕ್ಯಾನ್ವಾಸಿನಲ್ಲಿ ಪಿಪಿಳಿ ಕಣ್ಣು ಬಿಡುತ್ತಿದೆ. ಈ ರೀತಿಯ ಕಾವ್ಯ ಕೃಷಿ ಕೆಲವೇ ಕೆಲವು ಕವಯತ್ರಿಯಲ್ಲಿ ಮಾತ್ರ ಕಂಡಿದ್ದೇನೆ.
ಕ್ರೈಸ್ಟ ಕಾಲೇಜಿನ ಸ್ಪರ್ಧೆಯಿಂದಲೂ ನಿನ್ನ ರಚನೆಗಳನ್ನು ಓದುತ್ತಿದ್ದೇನೆ, ಇವು ಅವೆಲ್ಲಕ್ಕಿಂತ ತುಸುವೇನು ಹೆಚ್ಚೇ ಭಿನ್ನವಾಗಿಯೂ ಗಾಢವಾಗಿಯೂ ಕಾಣುತ್ತವೆ, ನಮ್ಮನ್ನು ಇನ್ನಷ್ಟು ಮತ್ತಷ್ಟು ಓದಿಸಿ
kavite hidisidavu, thanku Avadhi