ನಾ ದಿವಾಕರ
ಇಟ್ಟ ಹೆಜ್ಜೆಗಳ ಮರೆತು
ದಿಟ್ಟತನದಲಿ ಮೆರೆದು ಹೆಜ್ಜೆ
ಗುರುತುಗಳನಳಿಸಿ ಗತಿಸಿದ
ಗೆಜ್ಜೆ ನಾದಗಳ ತೊರೆದು ತನ್ನ
ನೆರಳ ಕಾಣದೆ ಮುನ್ನಡೆವ ಜೀವಕೆ
ಇದೋ ದೂರದಲ್ಲೊಂದು ಪ್ರಣತಿ !
ಕಾಲದ ಬಿಂಬ ಅಸ್ಪಷ್ಟ
ಬಿಂಬಿತ ಕಾಲವೂ ಅಷ್ಟೇ
ಎತ್ತಲೋ ಹೊರಟ ಹೆಜ್ಜೆಗಳು
ಪಳೆಯುಳಿಕೆಗಳನರಸಿ
ಹಿಂದಿರುಗಿದಾಗ ನೆರಳು
ಹಿಂಬಾಲಿಸುತ್ತದೆ ಕಾಲನ
ಕಾಲ ಸದ್ದನು ನೆನೆದು !
ಗೆಜ್ಜೆಯ ನಾದವೋ
ಹೆಜ್ಜೆಯ ಉನ್ಮಾದವೋ ಸುತ್ತ
ಆವರಿಸಿದ ಮಬ್ಬಿನಲಿ
ದಿಕ್ಕುಗಾಣದಂತಾದಾಗ
ನೆನಪಾಗುತ್ತದೆ ಇಟ್ಟ ದಿಟ್ಟ
ಹೆಜ್ಜೆಗಳು ಸುಟ್ಟ
ಬಿಟ್ಟ ದಟ್ಟ ಭಾವನೆಗಳು !
ಹೊರೆಯಾಗದು ಬಾಳು
ನೆರೆಯ ತೊರೆಯಲಿ ಮಿಂದು
ಸೆರೆಯ ಸೆಲೆಯನು ತೊರೆದು
ಮುಂದಡಿ ಇಡುವಾಗ
ಹೊರೆಯಾಗದು ಬಾಳು ;
ಎಲ್ಲೋ ಒಂದು
ಸದ್ದು ಗುನುಗುನಿಸುತ್ತದೆ
ತಪ್ಪು ಹೆಜ್ಜೆಗಳನಿಡುವಾಗ !
ಬಿಂಬ ಪ್ರತಿಬಿಂಬಗಳೊಡನಾಟದಿ
ಧ್ವನಿ ಪ್ರತಿಧ್ವನಿಯ ಹೊಯ್ದಾಟದಿ
ದನಿ ಅಡಗಿದಾಗ ಮಾರ್ದನಿಸುತ್ತದೆ
ಕಾಲನ ಕರೆ ;
ಎನಿತು ಕ್ರಮಿಸಿದರೂ
ಎನಿತು ಶ್ರಮಿಸಿದರೂ
ಬಾಹುಗಳು ತೆರೆದಿರುತ್ತವೆ
ಆಲಂಗಿಸಲು
ಸಾಕ್ಷಾತ್ಕಾರದ ನೆಲೆ
ತೋರಲು !
ಕ್ಷಣ ಕ್ಷಣದ ಮಾಧುರ್ಯ
ಕಣಕಣಗಳಲಿ ಬೆರೆತು
ಗತಕಾಲವ ನೆನಪಿಸುವಾಗ
ಕನ್ನಡಿಯೊಳಗಿನ ಗಂಟು
ಕಗ್ಗಂಟಾಗುತ್ತದೆ ;
ಬಿಂಬ ಪ್ರತಿಬಿಂಬದ
ನಡುವೆ ಜೀವ
ದಿಗಂತದ ಮೆಟ್ಟಿಲೇರುವಾಗ
ಕಾಲನ ಸದ್ದೊಂದೇ ಸತ್ಯ
ಉಳಿದುದೆಲ್ಲವೂ ಮಿಥ್ಯ !





0 Comments