ಅವಳು
ಹೆಚ್ ಸಿ ಭವ್ಯ ನವೀನ್
ನನ್ನ ಬಗ್ಗೆ ಹೇಸಿಕೊಳ್ಳಿ
ನಿಮ್ಮ ಶಿಷ್ಟಾಚಾರದ ಕೋಣೆಗಳಿಂದ
ಕತ್ತಿಡಿದು ಆಚೆ ದಬ್ಬಿ..
ನಿಮ್ಮ ಶಕ್ತಿಗಳನ್ನು ಮೀರಲೇಬೇಕು
ನನ್ನ ಜರೆಯುವುದಕ್ಕೆ
ದಯಮಾಡಿ ಮೀರಿಬಿಡಿ
ನಾನೋ
ಅನಾವಶ್ಯ, ಹೂ ಬಿಡದ ಚಿಗುರನ್ನು ಅನಾದಿಗಳಿಂದ ಬೆಳೆಸಿದವಳು
ಹನಿಸದ ಮೋಡಗಳನ್ನು
ಎದೆ ತುಂಬಾ ಬಿಟ್ಟುಕೊಂಡವಳು
ಹೀಗೇ…
ಹಸಿವನ್ನೆಲ್ಲ ಅಡಮಾಡಿ
ಭತ್ತ ನಾಟಿದವಳು
ಹಸಿವು ಕೊಳ್ಳಲಾಗದೇ
ಹಳಸಾದವಳು

ನೀವು ನಿರ್ಲಕ್ಷಿಸಿ..
ಗುಳಿಕಣ್ಣುಗಳನ್ನು ತೋರಗೊಡದೆ
ನಿತ್ಯದ ತಮಾಷಾಗಳಲ್ಲಿ ಕುಣಿಯುತ್ತಾ
ನಿಮ್ಮ ಚಪ್ಪಾಳೆಗಳ ಪೋಷಿಸಿದ್ದನ್ನು
ಕಾಲು ಹೊಕ್ಕಿದ ಮುಳ್ಳು ಮುರಿದು ಸುಮ್ಮನಾಗದೇ
ಹಾದಿ ಗುಡಿಸಿ ಹಸ್ತ ಹರಿದುಕೊಂಡದ್ದನ್ನೂ
ಮೂರ್ಖಳೆನ್ನಿ
ನಗುವುದಾದರೆ ಅದೂ ಸರಿ…
ನಿಮ್ಮ ಮುಖಗಳಿಗೆ ಕನ್ನಡಿ ಹಿಡಿದು
ನಿಮ್ಮ ಗುರುತಿಸಿಕೊಟ್ಟದ್ದಕ್ಕೆ…
ಆ ಬಣ್ಣದ ಚೆಹರೆಗಳಲ್ಲಿ
ನನ್ನ ಚೆಹರೆ ಮಾಸಲಾಗಿ ಮರೆತು ಹೋದದ್ದಕ್ಕೆ..
ನಿಮ್ಮ ನಾಲಗೆಯ ಕಥೆಗಳನ್ನು ನಿರ್ದೇಶಿಸದ ನಾನು
ನಿಮಗೆ ಬೇಕಿದ್ದ ಕಿವಿಯಾಗಲಿಲ್ಲ
ಕ್ಷಮಿಸಬೇಡಿ ಅದನ್ನು
ಒಳಗೊಳಗಿನ ಗುಡುಗಿನ ಸುದ್ದಿಯಿದೆ
ಬೇಷರತ್ ವಿರೋಧಿಸಿ
ಅವಶೇಷಗಳಿಲ್ಲದ
ಎಂದೋ ಸದ್ದು ನಿಲ್ಲಿಸಿದ
ನಿಮ್ಮೆದೆಯ ಪ್ರಾಮಾಣಿಕ ನೆನಪುಗಳಲ್ಲಿನ
ಅವಳನ್ನು
ಆಪಾದಿಸಿ
‘ನನಗೆ’
ಮತ್ತೆ-ಮತ್ತೆ, ಮತ್ತೆ-ಮತ್ತೆ
ಸಾಬೀತುಪಡಿಸಿ ನನ್ನ ಬೇಕಾರೀ ಉಪಸ್ಥಿತಿ
ನಿಮ್ಮ ಶಕ್ತಿಗಳ ಮೀರಲೇಬೇಕು
ನನ್ನೆದೆಯ ಕವಿತೆಗಳನ್ನು ನಿರಾಕರಿಸುವುದಕ್ಕೆ
ದಯಮಾಡಿ ಮೀರಿಬಿಡಿ






ಹನಿಸದ ಮೋಡಗಳನ್ನು
ಎದೆ ತುಂಬಾ ಬಿಟ್ಟುಕೊಂಡವಳು…..
ಸಬೀತು ಪಡಿಸಿ ನನ್ನ ಬೇಕಾರಿ ಉಪಸ್ಥಿತಿ
ಈ ಸಾಲುಗಳು ತುಂಬಾ ಹಿಡಿಸಿದವು. ಕವನವೂ ಮನಸಿಗೆ ನಾಟುವಂತಿದೆ ಭವ್ಯ ಅವರೇ…
ನಿಮ್ಮ ಮುಖಗಳಿಗೆ ಕನ್ನಡಿ ಹಿಡಿದು
ನಿಮ್ಮ ಗುರುತಿಸಿಕೊಟ್ಟದ್ದಕ್ಕೆ…
ಆ ಬಣ್ಣದ ಚೆಹರೆಗಳಲ್ಲಿ
ನನ್ನ ಚೆಹರೆ ಮಾಸಲಾಗಿ ಮರೆತು ಹೋದದ್ದಕ್ಕೆ..
Superb…
ತುಂಬಾ ಒಳ್ಳೆ ಕವಿತೆ..ಥ್ಯಾಂಕ್ಸ್ ಭವ್ಯ ಮೇಡಮ್..ಮತ್ತು ಅವದಿ
very nice… samvedhanasheelavaagide
ಸಿಕ್ಕಾಪಟ್ಟೆ ಇಷ್ಟ ಆಯ್ತು ಹುಡುಗಿ..ಇದೇ ಧಾಟಿ..ಇದೇ ಭಾವ..ಇದೇ ನಿರ್ಭಿಢೆ ಮುಂದುವರೆದರೆ.. ನೀನು ನಿಜಕ್ಕೂ ಭರವಸೆಯ ಕವಯತ್ರಿ.ಸಾಬೀತುಪಡಿಸು ನಿನ್ನ ಉಪಸ್ಥಿತಿಯ..ಸಾಲು ಸಾಲು ಕವಿತೆಗಳಳಿ, ಓದುತ್ತೇವೆ ಶಕ್ತಿಮೀರಿ.
tumba tumba chenngide..very nice..!