ಜಯಂತ ಕಾಯ್ಕಿಣಿ ‘ಪಾರ್ಲರ್ ಕಿಟಕಿಯಿಂದ’ ಎನ್ನುವ ಲಹರಿಯನ್ನು ಕಟ್ಟಿಕೊಟ್ಟಿದ್ದರು. ಅದು ‘ಅವಧಿ’ಯಲ್ಲಿ ಮೊನ್ನೆ ಮೊನ್ನೆ ತಾನೇ ಪ್ರಕಟವಾಗಿತ್ತು.
ಅದು ಕಟ್ಟಿಕೊಟ್ಟ ಶಬ್ದ ಚಿತ್ರಗಳು ಗಾಢವಾಗಿ ತಾಕಿದ್ದು ಸಂಯುಕ್ತಾ ಪುಲಿಗಳ್ ಅವರನ್ನು.. ಅವರನ್ನೂ ಸಹಾ. ತಕ್ಷಣ ಪೆನ್ ಕೈಗೆತ್ತಿಕೊಂಡವರೇ sorry.. ಕೀಲಿಮಣೆಯ ಮೇಲೆ ಬೆರಳು ಆಡಿಸಿದವರೇ ಕಾಯ್ಕಿಣಿ ಲಹರಿಗೆ ತಮ್ಮ ಲಹರಿಯನ್ನೂ ಜೋಡಿಸಿದ್ದಾರೆ.
ಕಾಯ್ಕಿಣಿ ಎಲ್ಲಿ ನಿಲ್ಲಿಸಿದ್ದರೋ ಅಲ್ಲಿಂದ ಸಂಯುಕ್ತಾ ಮುಂದುವರೆಸಿದ್ದಾರೆ. ಓದಿ..
ನಿಮಗೂ ಇಷ್ಟವಾದರೆ
ಅಥವಾ ನಿಮ್ಮ ಮನದೊಳಗೆ ಈ ಲಹರಿ ಇನ್ನೂ ಬೆಳೆದರೆ ನಮಗೆ ಕಳಿಸಿಕೊಡಿ..

Thrilled by reading it….!
ಓದಿ ಇದರ ಗುಂಗಲ್ಲೇ ಇದ್ದೆ. ಸುಮ್ಮನೇ ಇದನ್ನು ಮುಂದುವರೆಸೋಣ ಎಂದೆನಿಸಿ…. ಅನಿಸಿದ್ದು ಬರೆದಿದ್ದೇನೆ.
ತಪ್ಪೆನಿಸಿದರೆ ಬೇಸರಿಸಬೇಡಿ

ಸಂಯುಕ್ತಾ ಪುಲಿಗಳ್
ಕಣ್ಣತುಂಬ ಕನಸ ಹೊತ್ತಿರುವ, ಬೆದರಿದ ಜೀವದ ಗೊಂಬೆ ಆ ಮದುಮಗಳು, ಪ್ಲಾಸ್ಟಿಕ್ಕಿನ ಬಾರ್ಬಿಯಾಗುವ ತಯಾರಿಯಲ್ಲೇ ಮುಖ ನಿರ್ಮಮವಾಗಿ ಆ ಬ್ಯೂಟಿಶಿಯನ್ ಕೈಯಲ್ಲಿಟ್ಟು ಗಾಜೊರೆಸುವ ಹುಡುಗನನ್ನೇ ನೋಡುತ್ತಿರುವಾಗ, ಪಕ್ಕದ ಕಮ್ಫ಼ರ್ಟ್ ಸೀಟಿನ ಮೇಲೆ ಥ್ರೆಡ್ಡಿಂಗ್ ಮಾಡಿಸಿಕೊಳ್ಳಲು ಕಾಯುತ್ತಿದ್ದ ಮಧ್ಯವಯಸ್ಕ ಹೆಂಗಸೊಬ್ಬಳು ಇವಳನ್ನು ಗಮನಿಸುತ್ತಾಳೆ.
ಈಕೆ ಅವಳ ತೀಡುತ್ತಿದ್ದ ಹುಬ್ಬಿನಡಿಯ ಇರಾದೆಗಳ ತಣ್ಣನೆಯ ಪಳೆಯುಳಿಕೆಯಾಗಿದ್ದಳು. ನಾಲ್ಕು ಮಹಡಿ ಏರಲಾಗದೆ ಲಿಫ಼್ಟಿಗಾಗಿ ಕಾಯುತ್ತಾ ನಿಂತಾಗ, ಕರೆಂಟಿಲ್ಲವೆಂದು ತಿಳಿದು, ನಿಧಾನವಾಗಿ ಒಂದೊಂದೇ ಮೆಟ್ಟಿಲೇರುತ್ತಾ ಒಂದಂತಸ್ತು ಏರಿದ ಕೂಡಲೇ, ಕರೆಂಟು ಬಂದದ್ದು ತಿಳಿದು, ಲಿಫ಼್ಟಿನ ಮೂಲಕ ಬೇಗ ಪಾರ್ಲರಿಗೆ ಸೇರಿ… ಏ.ಸಿಯ ರಿಮೋಟನ್ನು ಒತ್ತಿ ಒಂದೆರಡಂಕಿ ಹೆಚ್ಚಿಸಿ, ಉಸ್ ಎಂದು ಕೂತಿದ್ದಳು. ಘಳಿಗೆಗೊಮ್ಮೆ ಪುಸುಕ್ ಎಂದು ಘಮಿಸುವ ಸೆಂಟನ್ನು ಎರಚುವ ಮೇಜಿನ ಮೇಲಿನ ಪುಟಾಣಿ ಡಬ್ಬದೆದುರಿಗೇ ಕೆಳಗೆ, ಅಷ್ಟೇನೂ ಫ಼್ರೆಶ್ ಎನಿಸದ ಹರಿವೇ ಸೊಪ್ಪಿನ ಬುಟ್ಟಿಯನ್ನು ಬಿಳೀ ಬಣ್ಣದ ಬಟ್ಟೆಯಲ್ಲಿ ಮುಚ್ಚಿಟ್ಟಿದ್ದಾಳೆ. ಮನೆಯೂಟವನ್ನೇ ಮಾಡದ ಮಗ, ಅರ್ಜೆಂಟಾಗಿ ಕೆಲಸದ ಮೇಲೆ ಡೆಲ್ಲಿಗೆ ಹೊರಡಬೇಕಾದ ಗಂಡ, ಮೀಟಿಂಗಿಗೆ ಅರ್ಧ ತಯಾರಾದ ಪ್ರೆಸೆಂಟೇಶನ್ನೂ, ನಿನ್ನೆಯಷ್ಟೇ ಓದಿಸಿಕೊಂಡು ತೂಫ಼ಾನಿನಲ್ಲಿ ಸಿಲುಕಿಸಿದ ಜಯಂತರ ತೂಫ಼ಾನ್ ಮೇಲ್, ಎಲ್ಲವೂ, ಆ ಸೆಂಟಿನ ಘಮಲು ಮತ್ತು ಹರಿವೇ ಸೊಪ್ಪಿನ ಹಸಿ ಸೊಗಡಿನ ಬೆರಕೆ ಉಂಟುಮಾಡಿದ ವಿಚಿತ್ರ ವಾಸನೆಯಲ್ಲಿ ಹಾಗೇ ತೇಲಿಬಂದು ಹೋದ ನೆನಪಿನ ಅಲೆ.
ಅವಳಿಗೆ ಕಿಟಕಿಯಾಚೆಗಿನ ಬಿಸಿಲು, ಒಣ ಹವೆ, ಸಿಗ್ನಲ್ಲಿನ ಭರಾಟೆ ಯಾವುದೂ ಹೊಸತಲ್ಲ! ಕಂಡಿದ್ದಾಳೆ, ಉಂಡಿದ್ದಾಳೆ, ಈಗ ಕಾಣಿಸದೆ ಮರೆಮಾಚಿಸಲು ಪಾರ್ಲರಿನಲ್ಲಿ ಯತ್ನಿಸುತ್ತಿದ್ದಾಳೆ. ಹೊಸ ಮದುಮಗಳ ಕಣ್ಣ ಸಿಗ್ಗಿನ ಬೆಳಕು ಇವಳ ಹೊಕ್ಕಳ ಹಾಯ್ದು, ಬಿಸಿಲ ಝಳಪಿಗೆ ಹೊಳೆಯುತ್ತಿರುವ ತನ್ನ ಬಿಳಿಗೂದಲ ನೇರ ಗೆರೆಯನ್ನು ಕನ್ನಡಿ ನೆನಪಿಸುತ್ತದೆ.
ಆ ಹೊಸ ಹುಡುಗಿಯ ಸಂಭ್ರಮದ ಪರಿಗೆ ಇವಳ ನಿರ್ಭಾವುಕ ನೆರಳು ತಾಕದಂತೆ ಇವರಿಬ್ಬರ ನಡುವೆ ನಿಂತ ಬ್ಯೂಟಿಶಿಯನ್ “ಮೇಡಮ್ ಇನ್ನು ಫ಼ೈವ್ ಮಿನಿಟ್ಸ್, ಬಂದೆ” ಎಂದು ಎಚ್ಚರಿಸುತ್ತಾಳೆ. ಕೆಡವಿದ ಲಹರಿಯನ್ನು ತೊರೆದು, ಆಲ್ಮೋಸ್ಟ್ ತಯಾರಾದ ಮದುಮಗಳ ಕಡೆ ಕನ್ನಡಿಯಲ್ಲೇ ನೋಡಿ ಒಂದು ಸಣ್ಣ ನಗೆ ಬೀರುತ್ತಾಳೆ. ಸುಂದರ ಪುತ್ಥಳಿಯಂತೆ ತಯಾರಾದ ಆಕೆ, ನಾಲ್ಕು ಮಹಡಿ ಕೆಳಗಿರುವ ಅವಳ ಹುಡುಗನಿಗೆ, “ಇಗೋ ಆಯ್ತು ಬಂದೇ…” ಎಂದು ಜೊತೆಗೆ ನಾಚಿ ನಗುವ ಸ್ಮೈಲಿ ಹಾಕಿ ಮೆಸೇಜು ಕಳಿಸಿ…ಕನ್ನಡಿಯಲ್ಲಿ ತನ್ನನ್ನೇ ನೋಡಿ ಸಂಭ್ರಮದಿಂದ ರಮಿಸಿಕೊಳ್ಳುತ್ತಾಳೆ. ಸಾಧಾರಣ ಹುಡುಗಿಯನ್ನು ಸುಂದರ ಮದುಮಗಳನ್ನಾಗಿಸಿದ್ದು ಆ ಬ್ಯೂಟಿಶಿಯನ್ನೇ ಎಂದು ಅವಳಿಗೆ ಖಚಿತವಾಗಿ ಆ ಕ್ಷಣಕ್ಕೆ ಅವಳೊಬ್ಬಳು ಗಂಧರ್ವ ಕಿನ್ನರಿಯಾಗಿ ಕಾಣಿಸಿ “ಥ್ಯಾಂಕ್ಯೂ…” ಎಂದು ಧೀರ್ಘವೆಳೆಯುತ್ತಾಳೆ.
ಗೋಡೆಯಗಲಕ್ಕೂ ಹರಿದಿದ್ದ ಆರಡಿ ಉದ್ದದ ಕನ್ನಡಿಯಲ್ಲಿ….ಇವರಿಬ್ಬರೂ, ಬ್ಯೂಟೀಶಿಯನ್ನೂ, ಹಿಂದಿರುವ ಅಗಲದ ಕಿಟಕಿಯಾಚೆಗಿನ ನಗರದ ಮೆಟ್ರೋ ರೈಲೂ ಎಲ್ಲವನ್ನೂ ಒಟ್ಟಿಗೇ ಸುಮ್ಮನೇ ನೋಡುತ್ತಾ ಕೂತ ಆಕೆಯ ಭುಜವನ್ನು ಹಿಡಿದು, “ಬರೀ ಐಬ್ರೋ ಸಾಕಾ ಆಂಟೀ, ಫ಼ೇಶಿಯಲ್ ಮಾಡಿಸಿಕೊಳ್ಳಿ, ಸ್ಕಿನ್ ತುಂಬಾ ಡ್ರೈ ಆಗಿದೆ” ಎನ್ನುತ್ತಾ, ತುಟಿಗಳ ನಡುವೆ ದಾರ ಹಿಡಿಯುತ್ತಾಳೆ ಬ್ಯೂಟಿಶಿಯನ್. ಕಿಟಕಿಯ ಗಾಜೊರೆಸುವ ಹುಡುಗ ನಾಲ್ಕು ಮೆಟ್ಟಿಲು ಇಳಿದು ಹತ್ತಿ ಬಂದ ಮಿಂಚಿನ ವೇಗದಲ್ಲೇ ಅವರೆದುರಿಗಿದ್ದ ಕನ್ನಡಿಗೆ ಸೋಪಿನ ನೀರೆರಚುತ್ತಾ ಒರೆಸುತ್ತಾ ಮಸುಕಾಗಿಸುತ್ತಾನೆ. ಕನ್ನಡೀಯ ಮೇಲೆ ಚಕಚಕನೆಂದು ಹರಿಯುವ ಆ ಹುಡುಗನ ಕೈಯ ಚುರುಕು ಹೆಚ್ಚು ವೇಗವೋ, ಕಿಟಕಿಯಾಚೆಗಿನ ಜಗತ್ತನ್ನು ಬೇಗ ಮೆಟ್ಟಿಲಿಳಿದು ಸೇರುತ್ತಿರುವ ಆ ಹುಡುಗಿಯ ಸಡವರ ಹೆಚ್ಚು ವೇಗವೋ ತಿಳಿಯದೆ ಈ ಹೆಂಗಸು ಕಣ್ಣು ಮುಚ್ಚಿ ಕಂಫ಼ರ್ಟ್ ಸೀಟಿಗೊರಗಿ, ಸಿದ್ಧಳೆಂಬಂತೆ ಹುಬ್ಬು ಮೇಲೇರಿಸುತ್ತಾಳೆ…

ಕಾಯ್ಕಿಣಿ ಫೋಟೋ ಮತ್ತು ವಿನ್ಯಾಸ : ಅಪಾರ
ಸಂಯುಕ್ತಾ ಫೋಟೋ : ರವಿ ಕುಲಕರ್ಣಿ





Simply fabulous 🙂