ಈ ಹಿಂದೆ ಕನ್ನಡಪ್ರಭ ಕವಿಮನೆಗಳ ಇಂದಿನ ಕಥೆಯನ್ನು ಕುರಿತು ಆಸಕ್ತಿ ಹೊಂದಿ ಅದರ ಶೋಧ ನಡೆಸಿತ್ತು. ಕನ್ನಡದ ಮಹಾ ಮನಗಳು ಇದ್ದ ಕುರುಹುಗಳು ಇದೆಯೇ? ಎಂದು ಬೆನ್ನು ಹತ್ತಿತ್ತು. ಈಗ ಹೇಗಿದೆ ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಓಡಾಟ ನಡೆಸಿತ್ತು.
ಆ ಸರಣಿಯಲ್ಲಿ ಕನ್ನಡದ ಪ್ರಜ್ಞೆಯನ್ನು ಕಲಕಿದ, ಚಿಂತನೆಗೆ ಹಚ್ಚಿದ, ತಲೆಮಾರುಗಳ ಓದುಗರನ್ನು ಪ್ರಶ್ನಿಸಲು ಪ್ರೇರೇಪಿಸಿದ ಗೌರೀಶ ಕಾಯ್ಕಿಣಿ ಹುಟ್ಟೂರಿಗೆ ವಸಂತಕುಮಾರ್ ಕತಗಾಲ ಹೋಗಿ ಬಂದಿದ್ದಾರೆ.
ಅವರು ಕಂಡದ್ದು ಇಲ್ಲಿದೆ.

ವಸಂತಕುಮಾರ್ ಕತಗಾಲ
ಆ ಕಡೆ ಅರಬ್ಬಿ ಸಮುದ್ರದ ಅಲೆಗಳು. ಈ ಕಡೆ ಇರುವ ಮನೆಯಲ್ಲಿ ಸಾಹಿತ್ಯದ ಅಲೆಗಳು
. ದಕ್ಷಿಣ ಕಾಶಿ ಎಂದೇ ಕರೆಯಲಾಗುವ ಗೋಕರ್ಣ ಶ್ರದ್ಧೆ, ಭಕ್ತಿ ಕೇಂದ್ರ. ಅಲ್ಲೇ ಇರುವ ಈ ಮನೆ ವೈಚಾರಿಕತೆಯ ಕೇಂದ್ರ. ಹೌದು. ಇದು ಗೋಕರ್ಣದಲ್ಲಿನ ಗೌರೀಶ ಕಾಯ್ಕಿಣಿ ನಿವಾಸ. ಗೌರೀಶರು ಇಂದು ನಮ್ಮೊಂದಿಗಿಲ್ಲ. ಪ್ರತಿದಿನವೂ ಸಾಹಿತ್ಯ, ವೈಚಾರಿಕತೆಯ ಸಮಾರಾಧನೆ ನಡೆಯುತ್ತಿದ್ದ ಆ ಮನೆಗೀಗ ಬೀಗ ಬಿದ್ದಿದೆ.
ಗೌರೀಶ ಕಾಯ್ಕಿಣಿ ಸಾಹಿತ್ಯದ ಬಹುತೇಕ ಎಲ್ಲ ಪ್ರಕಾರಗಳಲ್ಲೂ ತಮ್ಮತನವನ್ನು ಅಚ್ಚೊತ್ತಿದ್ದಾರೆ. ಕಾವ್ಯ, ಕಥೆ, ಸಾಹಿತ್ಯ ಸಮೀಕ್ಷೆ, ವೈಚಾರಿಕ ಲೇಖನಗಳು, ನಾಟಕಗಳು, ವ್ಯಕ್ತಿ ಚಿತ್ರಣ, ಪ್ರವಾಸ, ಅನುವಾದ ಸೇರಿದಂತೆ ಕೊಂಕಣಿ ಹಾಗೂ ಇಂಗ್ಲಿಷ್ ಭಾಷೆಯಲ್ಲೂ ಕೃತಿ ರಚಿಸಿದ್ದಾರೆ. ರಾಜ್ಯೋತ್ಸವ, ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಪ್ರಶಸ್ತಿಗಳು ಇವರಿಗೆ ದೊರೆತಿವೆ. 2002ರಲ್ಲಿ ಗೌರೀಶರು ನಿಧನರಾದರು.
ಅದಕ್ಕೂ ಮುನ್ನ ಗೋಕರ್ಣದ ಕಡಲತೀರದಲ್ಲಿನ ಇವರ ನಿವಾಸ ಪರ್ಣಕುಟಿಯಲ್ಲಿ ಪ್ರತಿದಿನವೂ ಬಿಡುವಿಲ್ಲದ ಚಟುವಟಿಕೆ. ಶಿವರಾಮ ಕಾರಂತ, ದ.ರಾ. ಬೇಂದ್ರೆ, ಗೋಪಾಲಕೃಷ್ಣ ಅಡಿಗ, ವಿ.ಕೃ. ಗೋಕಾಕ. ಜಿ.ಎಸ್. ಆಮೂರ ಮತ್ತಿತರ ಖ್ಯಾತ ಸಾಹಿತಿಗಳು ಈ ಪರ್ಣಕುಟಿಗೆ ಭೇಟಿ ನೀಡುತ್ತಿದ್ದರು. ಗೌರೀಶರೊಂದಿಗೆ ವಿಚಾರ ವಿನಿಮಯ, ಚರ್ಚೆ ನಡೆಸುತ್ತಿದ್ದರು. ಊರಿನ ಚಿಕ್ಕಪುಟ್ಟ ಘಟನೆಯಿಂದ ಹಿಡಿದು ಜಾಗತಿಕ ಸಮಸ್ಯೆಯ ಬಗ್ಗೆಯೂ ಇಲ್ಲಿ ಚರ್ಚೆ ನಡೆಯುತ್ತಿತ್ತು.ಅಜ್ಞೇಯವಾದಿ ಎಂದು ಕರೆದುಕೊಳ್ಳುತ್ತಿದ್ದ ಗೌರೀಶ ಕಾಯ್ಕಿಣಿ ನಿವಾಸಕ್ಕೆ ಪ್ರತಿದಿನವೂ ವೇದ ವಿದ್ವಾಂಸರು, ವೈದಿಕರು ಭೇಟಿ ನೀಡಿ ಮಾತುಕತೆ ನಡೆಸುತ್ತಿದ್ದರು. ತಮಗೆ ಉಂಟಾದ ಸಮಸ್ಯೆಗಳಿಗೆ ಕಾಯ್ಕಿಣಿ ಅವರಿಂದ ಪರಿಹಾರ ಪಡೆಯುತ್ತಿದ್ದರು.ಗೌರೀಶರ ನಿಧನದ ನಂತರ ಅವರ ಪತ್ನಿ ಶಾಂತಾ ಕಾಯ್ಕಿಣಿ ಇಲ್ಲಿ ನೆಲೆಸಿದ್ದರು. ಆದರೆ ದೈನಂದಿನ ಸಾಹಿತ್ಯಿಕ ಚಟುವಟಿಕೆಗೆ ತೆರೆ ಬಿತ್ತು. ಗೌರೀಶರ ಮಗ, ಖ್ಯಾತ ಕವಿ ಜಯಂತ ಕಾಯ್ಕಿಣಿ ಮನೆಗೆ ಬಂದಾಗಲೆಲ್ಲ ಮತ್ತದೇ ವಾತಾವರಣ ಕಾಣಿಸುತ್ತಿತ್ತು. ಗೌರೀಶರ ಕುರಿತು ಆಗಾಗ ನಡೆಯುತ್ತಿದ್ದ ಕಾರ್ಯಕ್ರಮಗಳು ಈ ಮನೆಗೆ ಮೆರುಗು ನೀಡಿದವು. ಕಳೆದ ಹತ್ತು ತಿಂಗಳ ಹಿಂದೆ ಶಾಂತಾ ಕಾಯ್ಕಿಣಿ ನಿಧನರಾದಾಗ ಮನೆಗೆ ಬೀಗ ಬಿತ್ತು. ಜಯಂತ ಕಾಯ್ಕಿಣಿ ಮನೆಗೆ ಆಗಮಿಸಿದಾಗಲೆಲ್ಲ ಮತ್ತೆ ಸಾಹಿತಿಗಳು, ಕವಿಗಳು, ವಿಚಾರವಾದಿಗಳು ಮನೆಯಲ್ಲಿ ಸೇರುತ್ತಾರೆ. ಆಗ ಮನೆಯಲ್ಲಿ ಸಾಹಿತ್ಯಿಕ ಸಡಗರ.
ತಿಂಗಳಿಗೊಮ್ಮೆಯಾದರೂ ಬರುವ ಜಯಂತ ಮನೆಯಲ್ಲಿ ಕೆಲ ದಿನಗಳ ಮಟ್ಟಿಗೆ ತಂಗುತ್ತಾರೆ. ಜಯಂತ ಇನ್ನು 2-3 ವರ್ಷಗಳಲ್ಲಿ ಇದೇ ಮನೆಯಲ್ಲಿ ಕಾಯಂ ಆಗಿ ನೆಲೆಸುವ ಸಿದ್ಧತೆ ನಡೆಸಿದ್ದಾರೆ. ಇಲ್ಲಿ ನೆಲೆಸುವುದು ಜಯಂತ ಅವರಿಗೆ ತುಂಬ ಇಷ್ಟದ ಸಂಗತಿ. ಜಯಂತಣ್ಣ ಇಲ್ಲೇ ವಾಸಿಸಲಿ ಎನ್ನುವುದೂ ಸಹ ಸ್ಥಳೀಯರ, ಇಡಿ ಜಿಲ್ಲೆಯ ಸಾಹಿತ್ಯದ ವಲಯದ ಆಶಯ.
ಈಗೇನಿದೆ?

ಗೌರೀಶ ಕಾಯ್ಕಿಣಿ ನಿವಾಸದಲ್ಲಿ ಈಗ ಅಮೂಲ್ಯ ಕೃತಿಗಳಿವೆ. ಅವುಗಳನ್ನೆಲ್ಲ ಪೆಟ್ಟಿಗೆಯಲ್ಲಿ ಜೋಡಿಸಿಡಲಾಗಿದೆ. ಗೌರೀಶರಿಗೆ ಬಂದ ಪ್ರಶಸ್ತಿ ಪುರಸ್ಕಾರಗಳು, ಫಲಕಗಳನ್ನು ಇಡಲಾಗಿದೆ. ಮನೆ ಬೀಗ ತೆರೆದೊಡನೆ ಗೌರೀಶರು ಬರೆಯಲು ಕುಳಿತುಕೊಳ್ಳುತ್ತಿದ್ದ ಕುರ್ಚಿ, ಟೇಬಲ್ ಹಾಗೆಯೇ ಇದೆ. ಕಿಟಕಿಗೆ ಗೌರೀಶ ಕಾಯ್ಕಿಣಿ ಎಂಬ ಫಲಕ, ಪಕ್ಕದಲ್ಲಿರುವ ಆರಾಮ ಕುರ್ಚಿ ಇವೆಲ್ಲವೂ ಗೌರೀಶರ ನೆನಪನ್ನು ತರುತ್ತವೆ.
ಜಯಂತ ಕಾಯ್ಕಿಣಿ ತಮ್ಮ ತಂದೆಯ ಎಲ್ಲ ವಸ್ತುಗಳನ್ನೂ ಜತನದಿಂದ ಕಾಪಿಟ್ಟಿದ್ದಾರೆ. ಆದರೆ ಒಮ್ಮೆ ಮಳೆಯಿಂದ ನೀರು ತುಂಬಿ ಸಾಕಷ್ಟು ಪುಸ್ತಕ ಹಾನಿಗಳೊಳಗಾಗಿವೆ. ಗೌರೀಶರ ನಿಧನಾನಂತರ ಹಲವು ಪುಸ್ತಕಗಳನ್ನು ಕರ್ನಾಟಕ ಸಂಘಕ್ಕೆ ನೀಡಲಾಗಿದೆ. ಮನೆಗೆಲಸಕ್ಕೆಂದು ಒಬ್ಬ ಮಹಿಳೆಯನ್ನುನಿಯೋಜಿಸಲಾಗಿದೆ. ಗೌರೀಶರು ಇಲ್ಲದಿದ್ದರೂ ಸಾಹಿತ್ಯಾಸಕ್ತರು, ಗೋಕರ್ಣಕ್ಕೆ ಆಗಮಿಸಿದ ಹಲವರು ಮನೆ ನೋಡಿ ಸಮಾಧಾನ ಹೊಂದುತ್ತಾರೆ. ಮಹಾಬಲೇಶ್ವರ ದೇವಾಲಯದ ಬಳಿ ಗೌರೀಶ ಕಾಯ್ಕಿಣಿ ರಸ್ತೆ ಎಂದು ಫಲಕ ಓದಿಯೇ ಕೆಲವರು ಆ ರಸ್ತೆಯಲ್ಲಿ ಸಾಗಿ ಗೌರೀಶರ ನಿವಾಸವನ್ನು ನೋಡಿಕೊಂಡು ಬರುತ್ತಾರೆ.
ಮೌನ ಬೇಸರ ಉಂಟುಮಾಡುತ್ತಿದೆ
ಅಪ್ಪ ಇರುವಾಗ ನಮ್ಮ ಮನೆ ಯಾವಾಗಲೂ ಸಾಹಿತಿಗಳು, ಆಪ್ತರಿಂದ ತುಂಬಿರುತ್ತಿತ್ತು. ಸ್ವಾಗತ ಗೀತೆ, ಭಾಷಣ, ಪ್ರಬಂಧ ಬರೆಸಿಕೊಳ್ಳಲು ವಿದ್ಯಾರ್ಥಿಗಳೂ ಆಗಮಿಸುತ್ತಿದ್ದರು. ಪ್ರತಿ ಆರಾಂ ಕುರ್ಚಿ ಕೆಳಗಡೆ ಖಾಲಿ ಕಪ್ ಇದ್ದೇ ಇರುತ್ತಿತ್ತು (ಅತಿಥಿ ಸತ್ಕಾರ ದಿನವಿಡೀ ನಡೆಯುತ್ತಿತ್ತು). ತಂದೆಯ ದೇಹಾಂತದ ತರುವಾಯ ಜನ ಬರುವುದು ಕಡಿಮೆಯಾಯಿತು. ಈಗ ಮನೆಗೆ ಹೋಗಿ ಕೀ ತೆಗೆದಾಗ ಆ ಮನೆಯ ಸೈಲೆನ್ಸ್ ತುಂಬ ಬೇಸರ ಬರಿಸುತ್ತದೆ. ಆದರೂ ಆ ಮನೆಯಲ್ಲಿ ಒಂದು ಮನಸ್ಸಿದೆ. ತಿರುಗಿ ಹೋಗುವಾಗಲೂ ಬೇಸರವಾಗುತ್ತದೆ. 2-3 ವರ್ಷಗಳ ತರುವಾಯ ಈ ಮನೆಯಲ್ಲೇ ವಾಸ್ತವ್ಯ ಮಾಡಲು ನಿರ್ಧರಿಸಿದ್ದೇನೆ.– ಜಯಂತ ಕಾಯ್ಕಿಣಿ


ಮೌನ ಬೇಸರ ಉಂಟುಮಾಡುತ್ತಿದೆ
ಜಯಂತ ಕಾಯ್ಕಿಣಿ ಅವರಿಂದ ಎಂತಹ ಅದ್ಭುತ ನಿರ್ಧಾರ.
Great decision. Very few have this luxury and wisdom to decide like this.
Mane kuritu marukavaguthide..jayantara nirdhara hemme tandide..3 generation Sahitya krishi li nirataragiruvadarinada Sahitya Sadagara/merugu marukalisuvudu nischita….
Namma jilleya mahaan saahitiya mane avara nalmeya kudiyinda saahitya sannidhiyinda belhagalide endu tilhidu tumbaa santasavayitu..