ಜಯಂತ ಕಾಯ್ಕಿಣಿ ‘ಪಾರ್ಲರ್ ಕಿಟಕಿಯಿಂದ’ ಎನ್ನುವ ಲಹರಿಯನ್ನು ಕಟ್ಟಿಕೊಟ್ಟಿದ್ದರು. ಅದು ‘ಅವಧಿ’ಯಲ್ಲಿ ಪ್ರಕಟವಾಗಿತ್ತು.
ಇಷ್ಟು ದಿನ ಕಾಯ್ಕಿಣಿ ಪಾರ್ಲರ್ ಗೆ ಬಾಲ ಜೋಡಿಸಿದ್ದು ಗದ್ಯ ಬರಹಗಳೇ , ಇಲ್ಲಿ ಕ್ಲಿಕ್ಕಿಸಿ
ಆದರೆ ಕಾವ್ಯಾ ಸಂತೋಷ್ ನಾಗರಕಟ್ಟೆ ಇದೇ ಮೊದಲ ಬಾರಿಗೆ ಕವಿತೆ ಮೂಲಕ ಎಂಟ್ರಿ ಕೊಟ್ಟಿದ್ದಾರೆ
ಓದಿ
ನಿಮ್ಮ ಮನದಾಳದೊಳಗೂ ನವಿರಾದ ಭಾವಗಳಿದ್ದರೆ ತಡ ಯಾಕೆ?
ನೀವೂ ಬರೆದು ಕಳಿಸಿ
ಪಾರ್ಲರಿನ ಹುಡುಗಿಯ ಬೆರಳುಗಳು..
ಕಾವ್ಯಾ ಕಡಮೆ ನಾಗರಕಟ್ಟೆ
ಪಾರ್ಲರಿನ ಹುಡುಗಿಯ ತುಂಬು ಬೆರಳಂಚಲ್ಲಿ
ವೃತ್ತ ಕೋನ ಚೌಕಾಕಾರ ತೀಡುತ್ತ ನಿಂತ ಗತ್ತಲ್ಲೇ
ಮೊಗದ ಗೆರೆಗಳ ಹಿಂದೆ ಸರಿಸುವ ಹುನ್ನಾರ
ನಾಲ್ಕೂ ಬದಿ ಗೋಡೆಗೆ ಕನ್ನಡಿ ಹೊದಿಸಿದ್ದೇ ಧಗೆ
ಒಳಗೆ ಝಳವಂಟದ ಅವಳ ಕಣ್ಣು ಗಾಜುಗೊಳ
ಎರಡೇ ಬೆರಳಲ್ಲಿ ಸುತ್ತಿ ಮಾಟವಾಗಿ ಎಳೆಯ
ಗಂಟಾಗಿಸಿ ಎಳೆಯುತ್ತ ಒಂದೊಂದೇ ರೋಮವ
ಹುಬ್ಬನು ಬಿಲ್ಲ ಕಮಾನಾಗಿಸುವಾಗ
ತನ್ನ ಮುಂದೆ ಕಣ್ಮುಚ್ಚಿ ಶರಣಾಗಿ ಕುಳಿತ
ನಿರಾಯುಧರ ಕಂಡು ಅವಳ ಕೈಯ್ಯೂ
ಕಂಪಿಸುವುದು ಒಮ್ಮೊಮ್ಮೆ ದಾರದೆಳೆಯಿಂದೆಳೆದೆಳೆವ
ಮೈಮರೆವಿನಲ್ಲಿ
ಮಧ್ಯಾಹ್ನದೂಟಕ್ಕೆ ಸವಿದ ಚಿಕನ್ ಸುಕ್ಕಾ
ಗ್ರಾಹಕರ ಮೂಗಿಗೆ ಬಡಿಯಬಾರದೆಂದು ಕೈಗಳಿಗೆ
ಸುವಾಸನೆಯ ಪೂಸಿ ಹುಬ್ಬು ತೀಡಿದ ತರುವಾಯ
ನೋವಾಗದಿರಲೆಂದು ಅದ್ಯಾವುದೋ ಕ್ರೀಮು ಪೌಡರು
ಹಚ್ಚಿ ಹರಳಿಲ್ಲದ ಅವಳ ಬೆರಳೇ
ಗಾಯ ಮಾಯಿಸುವ ಅರಳೆ
ಗೀತಾ ಸರಳಾ ನಿಹಾರಿಕಾ ಸೋನಲ್ ಬೀನಾ
ರೈನಾ ಹೆನಲ್ ಸಾರಿಕಾ ಹೆಲನ್ ನವನೀತಾ
ಥರ ಥರ ಹೆಸರಿನಲ್ಲಿಯೇ ನಿಲುವುಗನ್ನಡಿ
ಒಮ್ಮೆಯಂತೂ ಇತ್ತ ನನ್ನ ಹೆಸರೇ ಅತ್ತ
ಅವಳದೂ ಆಗಿದೆ
ಯಾವತ್ತೂ ಕಣ್ಮುಚ್ಚಿಯೇ ಕೂರುವವಳು
ಅಂದೊಮ್ಮೆ ಮಾತ್ರ ಯಾಕೋ ಕಣ್ತೆರೆದೆ-
ಐಬ್ರೋ ತೀಡುವ ಹುಡುಗಿಯ ಹುಬ್ಬು
ದಟ್ಟ ಪೊದೆ ಮುಖದ ಮೇಲೆ ಜೊಂಪೆ
ಮುಂಗುರುಳು ಆ ಹುಬ್ಬುಗಳ ಮಧ್ಯೆ
ಒಂದು ಪುಟ್ಟ ಹಾದಿಯಿದೆ ಮೂಗು ದಾಟಿ
ತಿರುಗಿ ಅವಳ ಹಣೆಯ ಸೇರಲು
ತನ್ನದೇ ವಿಶ್ವದಲ್ಲಿರುವ ಅವಳು ಎಡತುಟಿಯ
ತುಸು ವಾರೆ ಮಾಡಿ ಕಚ್ಚಿ ಹಿಡಿದು
ಹರಿಯಬಿಡುವಳು ನೂಲ ಕೆಲಸ ಮಾಡಲು
ಅವಳ ಮತ್ತು ನನ್ನ ಲೋಕವ ಈ ಎಳೆಯೊಂದೇ
ಸೇತುವೆಯಾಗಿ ನಿಂತು ಒಂದಾಗಿಸಿದೆ ಪ್ರತ್ಯೇಕಿಸಿಯೂ
ದಿನವಿಡೀ ದಾರ ಹಿಡಿದೆಳೆವ ಅವಳ ಬೆರಳಂಚಲ್ಲಿ
ಬಿರುಸುಗೆಟ್ಟ ನಾಲ್ಕಾರು ಖಾಯಂ ರೇಕುಗಳಿವೆ.





ಬ್ರಶ್ ಬದಲು ದಾರದಿಂದ ಬರೆದ ಚಿತ್ರ ನವಿರು ನವಿಲು. ಸೋಮವಾರದಂತಹ ಸೋಮವಾರವೂ ಚೆಂದವಾಗಿ ಅರಳಬಹುದು! 🙂
ಇದಪ್ಪಾ ಇದು …….ಅಭಿನಂದನೆಗಳು
ಅದ್ಭುತವಾಗಿದೆ. ಧನ್ಯವಾದಗಳು.
ಪ್ರತಿಕ್ರಿಯಿಸಿದ ನಿಮಗೆಲ್ಲ ತುಂಬಾ ಧನ್ಯವಾದಗಳು:) ಕಾವ್ಯಾ
ಕವಿತೆಯಿಂದ ನಿಮ್ಮ ಹೆಸರು ಸಾರ್ಥಕವಾಯಿತು!
ಕೆ.ವಿ. ತಿರುಮಲೇಶ್
Nimma kavite nalliro hosatana. Hosa lokavanne parichayisutte medam
Nimma kaviteya abhimani nanu