ಸತೀಪ್ರೀತಿ
ವಿಜಯಾ ದಬ್ಬೆ
ಸತೀಪ್ರೀತಿಯ ಸೃಷ್ಟಿ ಮಣಿಕರಣ.
ಇರಬಹುದು ಗಂಗೆ ಜಟೆಯಲ್ಲಿ
ಅದು ಬೇರೆ ಮಾತು,
ಆದರೆ ಪಾರ್ವತಿಯೊಂದು ಕಳಚಿದೋಲೆ
ಪಾತಾಳ ಹೊಕ್ಕಾಗ ನಾಗ ಹಿಡಿದದ್ದಕ್ಕೆ
ಸಿಟ್ಟಿಗೆದ್ದ ಶಿವನಿಟ್ಟ ಹೆಜ್ಜೆ ಮಣಿಕರಣ
ಅದೆಂಥ ಸಿಟ್ಟಿರಬಹುದು!
ಊಹಿಸದೆ, ಊಹಿಸಿ ಸೋಲದೆ
ಹಿಮಾಲಯ ಶ್ರೇಣಿಯಲಿ
ಮಣಿಕರಣವೇರಿದರೆ
ಶಿವನ ಸಿಟ್ಟಿನ ಬಿಸಿ ಮುಟ್ಟಿಸುತ್ತವೆ
ಆ ಬಿಸಿನೀರ ಬುಗ್ಗೆಗಳು.
ಪಾದಕ್ಕಿಳಿದ ಸಿಟ್ಟೇ ಹೀಗಿದ್ದರೆ
ನತ್ತಿಗೇರಿದ ಸಿಟ್ಟು ಹೇಗಿರಬೇಕು!

ಶಿವನ ಸಿಟ್ಟಿನ ಮೂಲ ತಿಳಿದರೂ
ತಿಳಿಯದಿದ್ದರೂ ಗಂಗೆ ಕುದಿದಿರಬೇಕು.
ಪ್ರೇಮದಾಹದ ಸತೀಸ್ತೋಮದಲ್ಲಿ
ಕಿಚ್ಚಿಡುತ್ತದೆ ಪಾರ್ವತಿಯ ಖುಷಿ
ಈ ಸತಿಯರಿಡುವ ಹೆಜ್ಜೆ
ಸೃಷ್ಟಿಸುತ್ತಲೇ ಇದೆ
ಅಸಂಖ್ಯ ಅದೃಶ ಬಿಸಿಬುಗ್ಗೆಗಳ.
ಸಾಂತಃಕರಣದ ಸಂಗಾತಿಗೆ
ಸತಿಯೇ ಏನು
ಮಹಾಸತಿಯನು ಹೋಗುವರಿವರು.
ದುಗುಡದಿ ಮೈದಡಹುವ ಶಿವನಿದ್ದರೆ
ದಕ್ಷನೆ ಏನು
ಅದಕ್ಷನ ಅಗ್ನಿಗೂ ಹಾರುವರಿವರು
ಬಂದೆಯಾ ಬಾರೆ ಬಾ ಸೀತೆ
ಎನ್ನುವ ರಾಮನ ಕಣ್ಣೆವೆ ಇದ್ದರೆ
ಅಗ್ನಿಯ ಕುಂಡವೆ ಏಕೆ
ಅಗ್ನಿಸಮುದ್ರಕು ಹಾರುವರಿವರು.
ಶಿವಾಗಮನದಲ್ಲಿ ನಿದ್ರಿಸದೆ
ಈ ಸತೀಪ್ರೀತಿ
ಎಂದು ಎದ್ದುಬಂದೀತೆಂದು
ಕಾಯುತ್ತಲೇ ಇದ್ದಾರೆ
ಸಹಸ್ರಾರು ಸತಿಯರು
ಅಸೇತು ಹಿಮಾಚಲ
–
ಹಿಮಾಲಯ ಪರ್ವತ ಶ್ರೇಣಿಯಲ್ಲಿ ಬಿಸಿಬುಗ್ಗೆಗಳ ತಾಣ ಮಣಿಕರಣ. ಪಾರ್ವತಿಯ ಓಲೆ ಇಲ್ಲಿ ಬಿದ್ದಾಗ ಒಬ್ಬ ನಾಗ ಅದನ್ನು ತೆಗೆದುಕೊಂಡನೆಂಬ ಸಿಟ್ಟಿನಲ್ಲಿ ಶಿವ ಇಟ್ಟ ಹೆಜ್ಜೆಗಳೇ ಈ ಬಿಸಿಬುಗ್ಗೆಗಳಾದವು ಎಂಬುದು ಇಲ್ಲಿಯ ಸ್ಥಳಪುರಾಣ.







ಆಹಾ …ಯಾವ ಸಂಕಲನ ?
tumba chennaagide.