ಹೇಮಾ ಸದಾನಂದ್ ಅಮೀನ್
ಕಲ್ಪನೆಯಿಂದ ಸ್ವಲ್ಪ ಇತ್ತ ಬಂದು
ನಿಡುಸುಯ್ಯುವಿಕೆಗಳನ್ನು
ಒಂದರ ಬೆನ್ನಿಗೆ ಒಂದನ್ನು ಹೆಣೆದು
ರಾತ್ರಿಯ ಕೊರಳಿನ ಮಾಲೆಯನ್ನು
ಹಗಲಿನ ಎದೆ ಮಧ್ಯದಲ್ಲಿ ಇಳಿಬಿಡಬೇಕಾಗಿದೆ.
ಇಂದು ಅವನ ಕಣ್ಣ ಕನ್ನಡಿಯಲ್ಲಿ
ಇಷ್ಷಿಷ್ಟೆ ಇಳಿದು ನಾನು ಅವನಾಗಬೇಕಾಗಿದೆ.
ಸ್ಷರ್ಶದ ರೇಖಾಚಿತ್ರಗಳ ಅಳಿಸದ ಟ್ಯಾಟುಗಳನ್ನು
ಮೈಯಿಡಿ ಬಿಡಿಸಿಕೊಳ್ಳಬೇಕಾಗಿದೆ
ಮಾತಿಗೆ ಅರ್ಧ ದಿನದ

ಅಧಿಕೃತ ರಜೆ ಘೋಷಿಸಿ
ಮೌನದ ಮರಿ ಮಕ್ಕಳು ಆಡುವುದನ್ನು
ಕಣ್ತುಂಬ ನೋಡಬೇಕಾಗಿದೆ
ಇನ್ನು ಈ ನಿಡುಸುಯ್ಯುವುಕೆ ಮಾಲೆಯ
ಘಮಲು ಅಸುಪಾಸು ಪಸರಿದರೆ?
ಮೆಲ್ಲನೆ ಅದನ್ನು ಎದೆಯ ಸಂದೂಕಿನಲ್ಲಿಟ್ಟು
ಭರವಸೆಯ ಬೀಗ ಜಡಿದು ಗಾಳಿಯಲ್ಲಿ
ತೇಲಿಸಿ ‘ಛು ಮಂಥರ್’ಎಂದು ನಿರಾಳವಾಗಬೇಕಾಗಿದೆ






0 Comments