ನನ್ನ ಕವಿತೆಗಳು
-ಡಾ ದಿನಮಣಿ ಬಿ ಎಸ್
ನನ್ನ ಕವಿತೆಗಳು
ನರಳಿದ ನಿನ್ನೆಗಳಲ್ಲ
ಗಳಿಸಿಕೊಂಡ ಅನುಭವಗಳು
ಕಾಣದ ನಾಳೆಗಳಲ್ಲ
ಭವಿತವ್ಯದ ಹೊಂಬೆಳಕು
ನನ್ನ ಕವಿತೆಗಳು
ಮೊಗ್ಗಿನ ಮನದೊಳಗಣ
ಆಶಾವಾದದ ಕನಸುಗಳು
ನೋವಿನಲೂ ನಗಬಲ್ಲ
ದಿಟ್ಟ ಆತ್ಮಸ್ಥೈರ್ಯ
ನನ್ನ ಕವಿತೆಗಳು
ಕಾರಿರುಳ ಸೀಳಿ ಬರುವ
ಸೂರ್ಯ ಕಿರಣ
ಕಾಳ್ಗಿಚ್ಚ ನಂದಿಸುವ
ದಿವ್ಯ ವರ್ಷಧಾರೆ
ನನ್ನ ಕವಿತೆಗಳು
ಮರುಭೂಮಿಯಲೂ ಚಿಮ್ಮವ
ನೀರಿನೊರತೆ
ದ್ವೇಷಕೂ ಪ್ರೀತಿಯನೇ
ವಿನಿಮಯಿಸುವ ಜೀವದಾತೆ
ನನ್ನ ಕವಿತೆಗಳು
ಅಂತರಂಗದಲುರಿವ
ಪುಟ್ಟ ಹಣತೆ
ಎಲ್ಲರೆದೆಯಲು ಉಲಿವ
ಭಾವಗೀತೆ






0 Comments