ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಡು ಹೂವಿನ ಹಾಡು : ಅಂತರಂಗದ ದನಿಗಳು

ರೇಣುಕಾ ನಿಡಗುಂದಿ

ಬಾಲ್ಯವೆನ್ನುವುದು ಎಲ್ಲರ ಬದುಕಿನ ಒಂದು ಅವಿಸ್ಮರಣೀಯ ಘಟ್ಟ. ಅದನ್ನು ಮರೆಯಲಾಗದು. ದೇಹ ಮಾಗಿದರೂ, ಮನಸು ದಣಿದರೂ ಬಾಲ್ಯದ ನೆನವರಿಕೆಗೆ ಮನಸ್ಸು ತಂತಾನೆ ಅರಳಿ ತೂಗುತ್ತದೆ. ಅದರಲ್ಲೂ ಬಾಲ್ಯದಲ್ಲಿ ಕೂಡಿ ಆಡಿದ ಸ್ನೇಹವೆಂದೂ ಮರೆಯಲಾಗದು. ಹಾಗೇ ನನಗೆ ನನ್ನ ಗೆಳತಿ ಸಂಧ್ಯಾ. ಆಕೆ ನಾನು ನಮ್ಮ ಓದು ಮುಗಿದ ನಂತರದಿಂದ ಒಬ್ಬರಿಗೊಬ್ಬರು ಕಂಡಿಲ್ಲ. ಆದರೆ ನಮ್ಮ ಒಡನಾಟ, ತುಂಟಾಟ, ಸಾಂಗತ್ಯದ ಆಪ್ತ ಕ್ಷಣಗಳು ಮೊನ್ನೆ ಮೊನ್ನಿನಷ್ಟು ಹಸಿರಾಗಿವೆ. ಆಕೆ ನನ್ನೊಳಗಿನ ಅಂತರಂಗದ ದನಿಯಾಗಿ ನನ್ನೊಳಗನ್ನು ತಟ್ಟುವ ತಂತಿಯಂತೆ, ಮೀಟುವ ನಾದದಂತೆ ನನ್ನೊಂದಿಗೆ ಯಾವಾಗಲೂ ಇದ್ದಾಳೆ ಅನಿಸುತ್ತದೆ. ’ಯಾರಿಗೂ ಹೇಳೂಣು ಬ್ಯಾಡ’ ದಂತಹ ಮುದತರುವ ಗುಟ್ಟುಗಳು, ಪರೀಕ್ಷೆಯಲ್ಲಿ ಪಡೆದ ಅಂಕಗಳು, ಛೇಡಿಸುವ ಹುಡುಗರ ದಂಡುಗಳು, ಹದಿವಯಸ್ಸಿನ ಬಿಂಕ ಬಿನ್ನಾಣಗಳು, ನಾವು ಮಾಡುತ್ತಿದ್ದ ಫ್ಯಾಶನ್ನುಗಳು ಇಂದು ನಗು ತರಿಸುತ್ತವೆ.
ಇದೇ ಸಂಧ್ಯಾ ದಶಕಗಳ ನಂತರ ಒಮ್ಮೆ ಧಾರವಾಡಕ್ಕೆ ಹೋದಾಗ ನನ್ನನ್ನು ಕೇಳಿಕೊಂಡು ಊರಲ್ಲಿನ ಮನೆಗೆ ಹೋಗಿದ್ದನ್ನು ಅಲ್ಲೆ ಅಜ್ಜಿ ಮನೆಯಲ್ಲಿದ್ದು ಓದುತ್ತಿದ್ದ ನನ್ನ ಮಗನೊಂದಿಗೆ ಹರಟಿ, ನಾನು ನಿನ್ನ ಅಮ್ಮ ಜೊತೆಯಾಗಿ ಓದಿದವರು ಇತ್ಯಾದಿಯೆಲ್ಲ ನೆನಪಿಸಿಕೊಂಡಳಂತೆ. ನನ್ನ ಅತ್ತಿಗೆ ಇದನ್ನೆಲ್ಲ ತಿಳಿಸಿ ಆಕೆಗೆ ನನ್ನ ಮೊಬೈಲ್ ನಂಬರೂ ಕೊಟ್ಟರು. ಅವತ್ತಿನಿಂದ ಆಗೀಗ ಹಬ್ಬ ಹರಿದಿನ, ಹೊಸವರ್ಷ ಎಂದು ಫೋನಾಯಿಸಿಕೊಂಡು ಇಬ್ಬರೂ ಮಾತನಾಡುತ್ತೇವೆ. ನಾನು ಕೆಲವೊಮ್ಮೆ ಆಫೀಸಿನಿಂದ ಲಂಚ್ ಹೊತ್ತಿನಲ್ಲಿ ಫೋನ್ ಮಾಡಿದಾಗ ಆಕೆ ಊಟಕ್ಕೆ ಮನೆಗೆ ಬರುವ ಗಂಡನಿಗೆ ’ಬಿಸಿಬಿಸಿ ಭಕ್ಕರಿ’ ಬಡಿಯುತ್ತಿರುತ್ತಾಳೆ. ಹಾಗೇ ಫೋನೆತ್ತಿ ’ಅಯ್ಯ…ಭಕ್ಕರಿ ಬಡಿಲಿಕ್ಕತ್ತೀನಿ ತಡಿ….- ಎಂದು ಹೇಳಿ ಮೂರುಗಂಟೆಗೆ ಮಾತಾಡ್ತಿನಿ ಇರು ಅಂದು ಕಟ್ ಮಾಡುತ್ತಾಳೆ.
ಮತ್ತೊಮ್ಮೆ ನೆರೆಯಲ್ಲಿನ ಗೆಳತಿಯೊಬ್ಬಳ ಹತ್ತಿರ ಹರಟೆಗೆ ಹೋಗಿರುತ್ತಾಳೆ. ಫೋನಿನಲ್ಲಿ ಮಾತನಾಡತೊಡಗಿದರೆ ಥೇಟ್ ಅವರ ’ಕಾಕೂ’ ಮಾತಾಡಿದಂತೆಯೇ ಅನುಭವವಾಗುತ್ತದೆ. ಸಂಧ್ಯಾ ನನ್ನ ಮಾತಿಗೆಲ್ಲ ’ಹೋ..ಹೌದಲ್ಲ..ಚಲೋ ಆಯಿತು ಬಿಡು, ಚಲೋ ಆಯಿತು….ಅನ್ನುವಾಗ ಅವಳ ಮುಖ ನನ್ನೆದುರಿಗೆ ಮೂಡಿ ಹಾಗೆ ಸಣ್ಣ ನಗುವೊಂದು ಹಾದುಹೋಗುತ್ತದೆ ತುಟಿಯಲ್ಲಿ. ದೊಡ್ಡ ಹೆಂಗಸಿನಂತೆ ಬಸ ಬಸ ದಮ್ಮು ಹತ್ತಿದವರಂತೆ ಮಂಗಳ ನುಡಿಯುವ ಅವಳಿಗೆ ನಮ್ಮ ತುಂಟಾಟದ ,ಸಿಂಗಾರದ ದಿನಗಳನ್ನು ನೆನಪಿಸಿ, ಇದೆಲ್ಲ ನೆನಪಾಗುವುದಿಲ್ಲವೇನೆ ? ಎಂದರೆ. ಆಗ್ತದಲಾ…ಯಾಕಾಗುವುದಿಲ್ಲ ? ಅಂದು ದೊಡ್ಡ ಹೆಂಗಸಿನಂತೆಯೇ ನಕ್ಕಳೂ.
ಯಾಕೋ ಅವಳ ದನಿಯಲ್ಲಿ ಹುಡುಗುತನವಿಲ್ಲ, ಮಗುತನದ ಮುಗ್ಧತೆ ಇಲ್ಲ ಎನಿಸುತ್ತದೆ. ಆಕೆ ಬಹು ವಯಸ್ಸಾದ ದೊಡ್ದ ಹೆಂಗಸಿನಂತೆಯೂ ನಾನು ಅದೇ ಅವರ ಮನೆ ಅಟ್ಟ ಹತ್ತುವ ಅದೇ ಸ್ಕರ್ಟ ತೊಟ್ಟ ಹುಡುಗಿಯಂತೆಯೂ ಅನಿಸತೊಡಗಿ ’ಹೋಗ್ ಮಾರಾಯತೀ, ನಿನ್ನ ಹತ್ತಿರ ಮಾತಾಡೋ ನೂರು ಮಾತುಗಳಲ್ಲಿ ಒಂದನ್ನೂ ನಂಗೆ ಮಾತಾಡೊಕ್ಕಾಗೊದಿಲ್ಲ, ಅದೇನು ನಿನ್ನ ಭಕ್ಕರಿ ಬಡಿಯೂದು, ಅದೇನು ನಿನ್ನ ಹರಟಿಕಟ್ಟಿ, ಅದೇನು ನಿನ್ನ ಮಧ್ಯಾಹ್ನದ ಮಡ್ದ ನಿದ್ದಿ, ಒಮ್ಮೆನೂ ಖಾಲಿ ಅದೀನಿ ಅಂದಿಲ್ಲ ನೀನು ಎಂದು ಕಾಡುವ ನಾನು. ನಿಜವಾಗಲೂ ಆಕೆಗೆ ಮಾತ್ರ ಹೇಳಬೇಕಾದ್ದ ಕೆಲ ವಿಷಯಗಳನ್ನು ಹೇಳಲು ಸಾಧ್ಯವಾಗದೇ ಪರಕೀಯತೆಯ ಭಾವವೊಂದು ಬಾಯಿ ಕಟ್ಟುತ್ತಿತ್ತು. ಅವಳೊಂದಿಗೆ ಮಾತಾಡುವಾಗ ನಾನು ಅದೇ ಹದಿನಾರು ವರ್ಷದ ಹುಡುಗಿಯಾಗಿಬಿಡುತ್ತೇನೆ. ನನ್ನ ಮಾತೆಲ್ಲ ’ಅಸಡ್ದಾಳ ಅನಿಸ್ತಾವೇನು ನಿಂಗss? – ಅಂದರೆ, ಇಲ್ಲಲಾ..ಹಂಗ್ಯಾಕ ಅನ್ಕೋತಿ? ಅಂತ ನಗುತ್ತಾಳೆ.
ಹೌದು, ತನ್ನೊಳಗಿನದು ಹೇಳಬೇಕೆಂದರೆ ಅವಳೇ ಬೇಕು. ನನ್ನ ಕನ್ನಡಿ ಇದ್ದಂತೆ ಅವಳು. ಅವಳಿಗೆ ಕಾಣುವ ನಾನು ಬೇರಾರಿಗೂ ಕಾಣಲಾರೆ. ನಮ್ಮ ಬಾಲ್ಯವನ್ನು ನೆನೆಸಿಕೊಂಡರೆ ಆಗ ಅವಳಷ್ಟು ಚೆಂದದ ಬಟ್ಟೆ, ಹೊಸ ಹೊಸ ನಮೂನೆಯ ಫ್ರಾಕು, ಸ್ಕರ್ಟು, ರಿಬ್ಬನ್ನು, ಬಳೆ, ಮೆತ್ತಗಿನ ಬಾಟಾ ಚಪ್ಪಲಿ ಹೀಗೆ ಇವ್ಯಾವವೂ ತಕ್ಷಣ ದೊರಕದ ನನಗೆ ಆಕೆಯೆ ನನ್ನ ರೋಲ್ ಮಾಡೆಲ್. ಗುಳ್ಳುಗುಳ್ಳೆಯ ಹಾಂಕಾಂಗ್ ಬಟ್ಟೆ, ನವಿರಾದ ವೆಲ್ವೆಟ್ ಬಟ್ಟೆಗಳ ಚೆಂದ ಚೆಂದದ ಫ್ರಾಕ್, ಮುಂದೆ ಬಾಂಬೆ ಡೈಯಿಂಗ್ ಮೆತ್ತಗಿನ ಮಸ್ತ ಕಾಟನ್ ಬಟ್ಟೆ, ಬ್ರಾಸ್ಸೋ ಸೀರೆಯಿಂದ ಹೊಲಿಸಿದ ಲಂಗಕ್ಕೆ ಪ್ಲೇನ್ ದಾವಣಿ, ದೊಡ್ದ ಕೊರಳಿನ ಬ್ಯಾಕ್ ಬಟನ್ನಿನ ಕೆಂಪು ಬ್ಲೌಸ್, ಸಿನೇಮಾದಲ್ಲಿನ ನೀತೂ ಸಿಂಗಳಂತೆ ಉದ್ದಕೂದಲಿಗೆ ಬಾಬಿ ರಿಬ್ಬನ್ ಕಟ್ಟಿ ಕೂದಲನ್ನು ಹಾಗೆ ಪೋನಿಕಟ್ಟಿ ಹಾರಾಡಲು ಬಿಡುವುದು.

ಶಾಂಪೂ ಹಾಕಿ ತೊಳೆದರೆ ಕೂದಲನ್ನು ಮಿರಮಿರನೆ ಮಿಂಚುವಂತೆ, ರೇಶಿಮೆದಾರದೆಳೆಯಂತೆ ನವಿರಾಗಿಸಬಹುದೆಂಬ ಗುಟ್ಟಿನಿಂದ ಹಿಡಿದು ನಾವಿಬ್ಬರೂ ಯೌವನಕ್ಕೆ ಕಾಲಿಟ್ಟ ನಂತರ ಎನ್ ಫ್ರೆಂಚ್ ಬಳಸುವ ಪರಿಯನ್ನೂ, ಬಟ್ಟೆಯ ಬದಲಿಗೆ ಸ್ಯಾನಿಟರಿ ನ್ಯಾಪ್ಕಿನ್ ಬಳಸುವುದನ್ನು ಹೇಳಿಕೊಟ್ಟಿದ್ದರಲ್ಲಿ ಆಕೆಯೇ ನನ್ನ ಗುರು. ಆಗೆಲ್ಲಿ ಪಾರ್ಲರು ಇದ್ದವು? ಮನೆಯಲ್ಲೇ ಟ್ವೀಜರ್ ನಿಂದ ಹುಬ್ಬನ್ನು ಬಿಲ್ಲಿನಂತೆ ವಿನ್ಯಾಸಗೊಳಿಸಿ, ಪೆನ್ಸ್ಲಿಲ್ ತೀಡಿ ಶೇಪ್ ಅಂದವಾಗಿಸುವುದು ಎಲ್ಲಕ್ಕೂ ಅವಳೇ ಬೇಕು.
ಅವಳ ಮನೆಯಲ್ಲಿ ಇನ್ನೂ ಮೂವರು ಹರಯದ ಅಕ್ಕಂದಿರಿದ್ದು ಇದೆಲ್ಲ ಅವಳಿಗೆ ಗೊತ್ತಾಗುತ್ತಿತ್ತು. ನನ್ನ ಮನೆಯಲ್ಲಿ ನಾನೇ ಹಿರಿಯಳು. ಸಿಂಗಾರದ ಸಾಮಾನುಗಳನ್ನು ಬಳಸುವವರು ಯಾರೂ ಇಲ್ಲದ ನಮ್ಮವ್ವ ಒಂದು ಮುಖಕ್ಕೆ ಹಚ್ಚುವ ಎಂಥದ್ದೋ ಹೆಸರಿನ ಪೌಡರ್ ತಂದಿಟ್ಟರೆ ಅದೇ ನಮಗೆ ದೊಡ್ದದು. ಎರೆದುಕೊಳ್ಳಲು ಸೀಗೆಕಾಯಿ ಕುದಿಸಿಡುತ್ತಿದ್ದಳು. ಮುಖಕ್ಕೆ ಬರೀ ಪೌಡರ್ ಫಪ್ ನಿಂದ ಬಳಿದುಕೊಂಡು ಹಣೆಗೆ ಸಾದನ್ನು ಹಚ್ಚಿ ಶಾಲೆಗೆ ಹೋಗುತ್ತಿದ್ದ ದಿನಗಳಲ್ಲಿ ಹರಯಕ್ಕೆ ಕಾಲಿಡುವ ಬೆಚ್ಚಗಿನ ಚೈತ್ರದ ಎದೆಗೂಡಲ್ಲಿ ಬಣ್ಣ ಬಣ್ಣದ ಚಿಟ್ಟೆಗಳ ಚಿತ್ತಾರ ಬಿಡಿಸಿ ಎಲ್ಲೆ ಇಲ್ಲದ ಸ್ವಚ್ಚಂದ ಆಗಸದಲ್ಲಿ ಹಾರಲು ಬಿಡುತ್ತಿದ್ದ ನನ್ನ ಪ್ರಿಯ ಗೆಳತಿ ಓದಿನಲ್ಲಿ ಮಾತ್ರ ದಡ್ಡಿ ಅಂದರೆ ದಡ್ಡಿ. ಒಂದು ಚಾಪ್ಟರಿನ ಪ್ರಶ್ನೆಗಳಿಗೆ ಉತ್ತರವನ್ನು ಆಕೆ ನನ್ನ ನೋಟ್ ಬುಕ್ ಇಸಿದುಕೊಂಡೆ ಮಾಡುವುದು. ಒಬ್ಬಳೇ ಅಭ್ಯಾಸ ಮಾಡಿದ್ದನ್ನು ನಾನು ನೋಡೇ ಇಲ್ಲ. ಆಕೆಗದು ಆಸಕ್ತಿಯೂ ಇದ್ದಿಲ್ಲ. ಅಂತೂ ನನ್ನ ಜೊತೆ ಜೊತೆ ಪಾಸಾಗುತ್ತ ನಡೆದಳು.
ನನಗೆ ಅಭ್ಯಾಸದ ಹೊರತಾಗಿ ಶೃಂಗಾರ, ಫ್ಯಾಶನ್, ಸಿನೆಮಾ ಸುದ್ದಿ, ಹುಡುಗರ ಸುದ್ದಿ, ಅವ ಲೈನ್ ಹೊಡೆದ ಇವ ಲೈನ್ ಹೊಡಿತಿದ್ದಾನೆ, ಇವ ನಿನ್ನ ನೋಡಿದಾ, ಅವ ನನ್ನ ನೋಡಿದಾ ಎಂಬ ಯೌವನ ಸಹಜ ಕುತೂಹಲಗಳನ್ನು, ಉನ್ಮಾದದ, ಪುಳಕ ಹುಟ್ಟಿಸುವ ಜ್ಞಾನವನ್ನು ಅವಳ ಸಾನಿಧ್ಯದಲ್ಲಿ ವಿಸ್ತರಿಸಿಕೊಳ್ಳುತ್ತಿದ್ದೆ. ನನ್ನ ಅರೆಬರೆ ಗೆರೆಗಳ ಕನಸುಗಳನ್ನು ಅವಳು ರಂಗೋಲಿಯಾಗಿಸುತ್ತಿದ್ದಳು. ಕಾಮನಬಿಲ್ಲಿನ ಕನಸುಗಳನ್ನು ನಕ್ಷತ್ರವಾಗಿಸುತ್ತಿದ್ದಳು. ನಮ್ಮ ನಮ್ಮ ಕನಸಿನ ಹುಡುಗರನ್ನು ಕುರಿತು ಮಾತಾಡಿಕೊಳ್ಳುತ್ತಿದ್ದೆವು. ಈಗ ಮಾತಾಡುವಾಗಲೂ ’ ಅಂತೂ ನೀ ಮಾಡಬೇಕೆಂದುದ್ದನ್ನ ಸಾಧಿಸಿದಿಯಲ್ಲ……ಛಲೋ ಆತು’ ಅನ್ನುವಾಗ ಈಗಲೂ ನಾನೆಂದರೆ ಆಕೆಗೆ ’ಜಾಣೆ, ಛಲಗಾರ್ತಿ’ ಎಂಬ ಅಭಿಮಾನವಿದ್ದೆ ಇದೆ.
ಅರೆ..ನನ್ನ ಒಂದೊಂದು ಕನಸನ್ನೂ ಆಕೆಯಿನ್ನೂ ಮರೆತಿಲ್ಲ. ಎಲ್ಲ ನೆನಪಿದೆ ಅವಳಿಗೆ. ಅವಳ ಜತೆ ಸೇರಿ ನೀನೂ ಫೇಲ್ ಆಗ್ತಿ ಅನ್ನುವ ಅವ್ವನ ಬೆದರಿಕೆಗೆ ನಾಲ್ಕು ದಿನ ಸುಮ್ಮನಿದ್ದರೂ ಐದನೇ ದಿನ ಅವಳ ಮನೆಗೆ ಓಡಿರುತ್ತಿದ್ದೆ. ಮಹಡಿ ಮೇಲಿನ ರೂಮಿನಲ್ಲಿ ಕೂತು ಐಬ್ರೋ ಟ್ವೀಜ್ ಮಾಡಿಕೊಳ್ಳೋದೋ, ಎದುರು ಮನೆ ಅಜೀಜನ ಲೈನ್ ಹೊಡೆಯುವಿಕೆ ಎಲ್ಲಿಗೆ ಬಂತು ಎಂದೋ, ಮಾಲಕ್ಕನ ಲವ್ ಸ್ಟೋರಿ ಎಲ್ಲಿವರೆಗೆ ಬಂತೆಂದೋ, ಕುಸುಮಬಾಯಿ ಅವರ ಮಗಳು ಮುಂಬಾಯಿಗೆ ಹೋಗಿದ್ದು ನಿಜವೋ, ಇಲ್ಲಾ ಲವರ್ ಜತೆ ಓಡಿಹೋಗಿದ್ದೇ ನಿಜವೋ ಎಂದು ದೊಡ್ಡವರಂತೆ ಬಿಸಿಬಿಸಿ ಚರ್ಚೆಗಳನ್ನು ನಡೆಸುವುದೆಷ್ಟು ಮಜವಾಗಿರುತ್ತಿತ್ತು. ನಿಜಕ್ಕೂ ಅಜೀಜನನ್ನು ಕನ್ನಡಿಯ ಬಿಂಬದಲ್ಲಿ ನೋಡಿ ಕಣ್ಣುತುಂಬಿಕೊಳ್ಳುತ್ತಿದ್ದ ಸಂಧ್ಯಾ ನನಲ್ಲಿ ಏನೆಲ್ಲ ಆಮಿಷಗಳನ್ನು ಒಡ್ಡುತ್ತಿದ್ದಳು!!
“ಕೆಳಗ ಬರ್ರೇಏಏ….ಏನ್ ನಡಿಸೀರಿ ಇಬ್ಬ್ರೂ” ಎಂದು ಕಾಕೂ, ಗಿರಿಜಕ್ಕ ಬೈದು ನಮ್ಮನ್ನು ಅಟ್ಟದಿಂದ ಕೆಳಗಿಳಿಸುತ್ತಿದ್ದರು. ಬಾಗಿಲ ಪಕ್ಕದ ಗೋಡೆಗೆ ತೂಗುಹಾಕಿದ ಕನ್ನಡಿಯಲ್ಲಿ ಮುಖಕ್ಕೆ ಸ್ನೋ, ಲ್ಯಾಕ್ಟೋ ಹಾಕಿ, ಕಣ್ಣಿಗೆ ಕಾಡಿಗೆ ತೀಡಿ, ಪುಟ್ಟ ಸಾದನ್ನು ಹಚ್ಚುತ್ತಿದ್ದರೆ ಕನ್ನಡಿಯ ಪಕ್ಕದ ಗೋಡೆಗೆ ಹಾಕಿದ ರಾಯರ ದೊಡ್ದ ಫೋಟೋದಲ್ಲಿ ಎದುರು ಮನೆಯ ಅಜೀಜ್ ಆಗಾಗ ಹೊರಬಂದು ಹೊರಕಟ್ಟೆ ಮೇಲೆ ನಿಂತದ್ದು ನೆರಳಾಗಿ ನಿಚ್ಚಳವಾಗಿ ಕಾಣಿಸುತ್ತಿತ್ತು. ಅವ ಬೇಕೆಂದೇ ಬರುತ್ತಿದನೋ ಎನೋ. ಗೊತ್ತಿದ್ದೂ ಗೊತ್ತಿಲ್ಲದವಳಂತೆ ತಯಾರಾಗಿ ಕಾಕೂಗೆ ಹೇಳಿ ಮೆಟ್ಟಲಿಳಿಯುತ್ತಿದ್ದೇವು. ರಾಯರ ಫೋಟೊ ಗುಟ್ಟು ನಮ್ಮಿಬ್ಬರಿಗಷ್ಟೇ ಗೊತ್ತಿತ್ತು. ಅದು ಆ ವಯಸ್ಸಿನ ಹುಚ್ಚೋ ಗೊತ್ತಿಲ್ಲ. ಅವಳ ಮದುವೆಯಾದರೆ ಅವಳು ಅಜೀಜ್ ನನ್ನೇ ಆಗಬಹುದು ಅಥವಾ ಇನ್ಯಾರನ್ನೋ ಲವ್ ಮಾಡಿಯೇ ಮಾಡಿಕೊಂಡಿರಬಹುದು ಎನ್ನುವ ಗುಮಾನಿ ಮೊನ್ನೆ ಮೊನ್ನೆಯವರೆಗೂ ನನಗಿತ್ತು.
ದಡ್ಡಿಯೋ ಪಡ್ಡಿಯೋ! ಮುಂದೆ ಯಾವ ಕಾಲೇಜು ಸೇರಿದಳೋ, ಏನು ಓದಿದಳೋ, ಲವ್ ಮ್ಯಾರೇಜೋ ಅರೇಂಜ್ಡೋ ಅಂತೂ ದಾವಣಗೆರೆಗೆ ತಂದೆ ತಾಯಿ ಕಡೆಗೆ ಹೋದ ನಂತರ ನನ್ನ ಅವಳ ಸಂಪರ್ಕ ಕಡಿದೇ ಹೋಯಿತು. ಅವಳ ಅಂದಿನ ಸೋಗು, ಶೋಕಿ ನೆನೆದರೆ ಈಗ ನನಗೆ ನಂಬಲಾಗುವುದಿಲ್ಲ. ಓಣಿಯ ಹುಡುಗರು ನಮ್ಮನ್ನು ಸೀತಾ ಔರ್ ಗೀತಾ’ ಅನ್ನುತ್ತಿದ್ದರು ನಮಗೆ ಕೇಳಿಸುವಂತೆ. ಇಬ್ಬರನ್ನು ನೋಡಲು ರೋಮಿಯೋಗಳ ಗುಂಪು ಕೂಟಿಗೆ ನಿಂತಿರುತ್ತಿತ್ತು. ಅವಳು ಶಿಸ್ತಾಗಿ ರಾಯರ ಮಠಕ್ಕೋ, ನಗರೇಶ್ವರ ಗುಡಿಗೋ ಹೊರಟರೆ ನಾನು ದಂಗಾಗಿ ನೋಡುತ್ತಿದ್ದೆ. ನಮ್ಮ ಸ್ನೇಹ ಮರುಕಳಿಸಿದ ನಂತರ “ನಿನ್ನದೇನೂ ಲವ್ ಮ್ಯಾರೇಜಾ – ಅಂತಾ ಕೇಳಿಯೇ ಬಿಟ್ಟೆ. ಇಲ್ಲಾ ಮನೆಯವರೇ ನೋಡಿ ಮಾಡಿದ್ದು ಅಂದಳು. ಯಾಕೇ ? ಅಂತ ಆಕೆ ಮರುಪ್ರಶ್ನೆ ಹಾಕಿದಾಗ ನನಗೆ ಮಾತಾಡುವ ದಾರಿಯೇ ತೋಚಲಿಲ್ಲ. ಏನಿಲ್ಲಾ ಹಾಗೇ ಕೇಳಿದೆ ಬಿಡು ಅಂದೆ.
ನನ್ನ ಲೋಕದಲ್ಲೇ ನಾನು ಮುಳುಗಿಹೋಗಿದ್ದೆ. ಒಟ್ಟಾರೆ ಅನುಭವಗಳ ಮೊತ್ತವೇ ಬದುಕು. ಅಂದು ಅವಳಿದ್ದವಳು ಇಂದಿಲ್ಲ, ಅಂದಿದ್ದ ನಾನು ನಾನಾಗಿಲ್ಲ…ಅವಳಲ್ಲಿನ ಅವಳು ರೂಪಗೊಂಡದ್ದು, ನನ್ನಲ್ಲಿನ ನಾನು ಪರಿವರ್ತನಗೊಂಡುದು ಅಂತಃಶಕ್ತಿಯ ಆವಾಹನೆಯಿಂದಲೆ. ಕಾಲಪ್ರವಾಹದಲ್ಲಿ ಇಬ್ಬರ ಸ್ವರೂಪ, ಸ್ವಭಾವ, ಸ್ವೀಕರಿಸಿಕೊಂಡ ಬದುಕು, ಹೊಂದಿಕೊಂಡ ತಲ್ಲಣಗಳೇನೇ ಇದ್ದರೂ ಆಕೆ ನನ್ನಂತರಂಗದ ದನಿ…..ನಾನು ಅವಳಿಗೆ ಹೇಗೋ ಅರಿಯೆ….ಆದರೂ ಈ ವೈಶಾಖದ ಬಿರು ಬಿಸಿಲಲ್ಲಿ ಬಂಗಾರದ ರೇಖನ್ನು ಸುರಿಯುವ ಅಮಲ್ತಾಸ್, ಉನ್ಮಾದದ ಗುಲಮೊಹರಿನ ಕೆಂಪು ಮನಕ್ಕಡರುವ ಹೊತ್ತಿಗೆ, ಗಂದನಿಗಾಗಿ ಭಕ್ಕರಿ ಬಡಿಯುವ ಸಂಧ್ಯಾಳನ್ನೂ..ಮಧ್ಯಾಹ್ನದ ನಿದ್ದಿ ಹೊಡಿಯುವ ದೊಡ್ದ ಹೆಂಗಸನ್ನೂ ಕಲ್ಪಿಸಿಕೊಂಡು ಸುಮ್ಮನೇ ನಗುತ್ತಿದ್ದೇನೆ…:)
 

‍ಲೇಖಕರು avadhi

25 May, 2013

1 Comment

  1. bharathi

    Entha madhura nwnapu .. chanda ide

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading