ತೇಜಸ್ವಿ ನಿಮ್ಮ ಪಕ್ಕದಲ್ಲಿ ಕುಳಿತು ಗದರುತ್ತಾರೆ..

ಶಿವು ಕೆ

“ಮತ್ತೆ ಮತ್ತೆ ತೇಜಸ್ವಿ” ಸಾಕ್ಷ್ಯಚಿತ್ರವನ್ನು ನೋಡಿದವನು ಒಂದರ್ಧ ಗಂಟೆ ಮೌನವಾಗಿ ಕುಳಿತುಬಿಟ್ಟೆ. ಎಂಥ ಅದ್ಬುತವಾದ ಪ್ರಯತ್ನವದು. ನಿಜಕ್ಕೂ ಇದನ್ನು ಹೊರತಂದ “ಟೋಟಲ್ ಕನ್ನಡ” ಸಂಸ್ಥೆಗೆ ಸಾವಿರ ಸಲಾಂ. ತೇಜಸ್ವಿಯನ್ನು ಇಷ್ಟು ಚೆನ್ನಾಗಿ ಕಣ್ಣಮುಂದೆ ಅವರಿಲ್ಲದೇ ಕಟ್ಟಿಕೊಟ್ಟಿರುವ ನಿರ್ದೇಶಕ ಪರಮೇಶ್ವರ ಕೆ ಕೃಷ್ಣಪ್ಪ  ತಂಡದ ಪರಿಶ್ರಮ, ಸಂಶೋಧನೆ ಎದ್ದುಕಾಣುತ್ತದೆ.

ಸಾಹಿತ್ಯಾಸಕ್ತರು ಮಾತ್ರವಲ್ಲ, ಬೇರೆ ಇತರ ಕ್ಷೇತ್ರಗಳ ಅಭಿರುಚಿಯುಳ್ಳವರು ಕೂಡ ಒಮ್ಮೆ “ಮತ್ತೆ ಮತ್ತೆ ತೇಜಸ್ವಿ” ಸಾಕ್ಷಚಿತ್ರವನ್ನು ಹಾಕಿಕೊಂಡು ನೋಡಲು ಕುಳಿತುಬಿಟ್ಟರೆ ಸಾಕು. ಎರಡು ಗಂಟೆ ಇಪ್ಪತ್ತೇಳು ನಿಮಿಷ ನಿಮ್ಮ ಮೈಮನಸ್ಸಿನೊಳಗೆ ತೇಜಸ್ವಿ ಒಂದಾಗುತ್ತಾರೆ. ಬೈಯುತ್ತಾರೆ, ವ್ಯಂಗ್ಯ ಮಾಡುತ್ತಾರೆ, ನಿಮ್ಮ ಪಕ್ಕದಲ್ಲಿ ಕುಳಿತು ಗದರುತ್ತಾರೆ, ಬದುಕಿನ ಪುಟಗಳನ್ನು ತೆರೆದುಕೊಳ್ಳುತ್ತಲೇ ತಮ್ಮ ಕೋವಿಯ ದಾರಿ, ಫಿಷಿಂಗ್ ದಾರಿ, ಫೋಟೊಗ್ರಫಿಯ ದಾರಿಯಲ್ಲಿ ನಿಮ್ಮನ್ನು ಕೈಯಿಡಿದು ಕರೆದುಕೊಂಡು ಹೋಗುತ್ತಾರೆ. ಫಿಷಿಂಗ್ ನ ಮೌನದೊಳಗೆ ಕರೆದುಕೊಂಡು ಹೋಗುತ್ತಾರೆ. ಫೋಟೊಗ್ರಫಿಯ ದಾರಿಯಲ್ಲಿ ಕ್ಯಾಮೆರ ಮತ್ತು ಹಕ್ಕಿಗಳ ನಡುವಿನ ಮಾತು ತೋರಿಸುತ್ತಾರೆ..ಮತ್ತಷ್ಟು ಸರಳವಾಗುತ್ತಾ ಪರಿಸರದ ಕೌತುಕತೆಯನ್ನು ತೆರೆದಿಡುತ್ತಾರೆ……..ಹೀಗೆ ಹೇಳುತ್ತಾ ಹೋದರೆ ಖಂಡಿತ ಮುಗಿಯುವುದಿಲ್ಲ.

“ಅವರು ಇಷ್ಟಪಡುವ ಬಿರಿಯಾನಿ ತಿಂದು ಸ್ವಲ್ಪ ಹೊತ್ತಿನ ನಂತರ…….ನಮ್ಮ ತೋಟದ ದೊಡ್ಡ ಮರ ಬಿದ್ದು ಹೋಯ್ತು” ಎಂದು ಶ್ರೀಮತಿ ರಾಜೇಶ್ವರಿ ತೇಜಸ್ವಿಯವರು ಹೇಳುವಾಗ ನನಗರಿವಿಲ್ಲದಂತೆ ನನ್ನ ಕಣ್ತುಂಬಿಕೊಂಡವು. ಅವರ ಬದುಕಿನ ಒಡನಾಡಿಗಳು, ಗೆಳೆಯರು, ಮೇಷ್ಟ್ರು, ಕೆಲಸಗಾರರು, ಸಾಹಿತಿಗಳು ಇನ್ನಿತರರನ್ನು ಮಾತಾಡಿಸುತ್ತಲೇ….ಅದ್ಬುತವಾದ ಮತ್ತೆ ಮತ್ತೆ ನೆನಪಿಸಿಕೊಳ್ಳುವ ತೇಜಸ್ವಿಯವರನ್ನು ತೋರಿಸುವ, ಪರಿಸರದ ಬಗೆಗಿನ ಉತ್ಸುಕತೆಯನ್ನು ಹೆಚ್ಚಿಸುವ ಕುತೂಹಲ ಮೂಡಿಸುವ ಈ ಕಿರುಚಿತ್ರ ಖಂಡಿತ ಕನ್ನಡದ ಮಟ್ಟಿಗೆ ಅದರಲ್ಲೂ ನಮ್ಮ ಮುಂದಿನ ಪೀಳಿಗೆಯವರಿಗೆ ಒಂದು ಅಮೋಘ ದಾಖಲೆಯಾಗಬಹುದು. ಅವರನ್ನು ಹತ್ತಿರದಿಂದ ನೋಡಿದ ಕಡಿದಾಳ್ ಮಂಜಪ್ಪ, ಜಿ.ಎಚ್. ನಾಯಕ್, ಜಯಂತ್ ಕಾಯ್ಕಿಣಿ, ಬಾಪು ಗಣೇಶ್, ಧನಂಜಯ ಜೀವಾಳ, ಪ್ರದೀಪ್ ಕೆಂಜಿಗೆ, ರಾಘವೇಂದ್ರ, ಡಾ. ಚಂದ್ರಶೇಖರ್ ಕಂಬಾರ್, ತೇಜಸ್ವಿಯವರ ಅಕ್ಕ ತಾರಿಣಿ , ಶ್ರೀಮತಿ ರಾಜೇಶ್ವರಿ ತೇಜಸ್ವಿ, ಗಿರೀಶ್ ಕಾಸರವಳ್ಳಿ….ಇನ್ನೂ ಅನೇಕರು ಅವರೊಂದಿಗಿನ ಒಡನಾಟವನ್ನು ಆತ್ಮೀಯವಾಗಿ ಹಂಚಿಕೊಳ್ಳುವಾಗ ಕೆ ಪಿ ಪೂರ್ಣಚಂದ್ರ ತೇಜಸ್ವಿಯವರು ಇನ್ನತ್ತು ವರ್ಷವಾದರೂ ನಮ್ಮೊಂದಿಗೆ ಇರಬಾರದಿತ್ತಾ…ಅನ್ನಿಸುತ್ತದೆ.

ಈ ಸಾಕ್ಷಚಿತ್ರವನ್ನು ಕೊಂಡಿದ್ದು ೧೨೫ ರೂಪಾಯಿಗಳಿಗೆ. ಅದನ್ನು ಈಗ ನೋಡಿದ ಮೇಲೆ ಸಾವಿರ ರೂಪಾಯಿಯಷ್ಟರ ಅನುಭವವಾಗಿ ನಿಮ್ಮನ್ನು ಕಾಡತೊಡಗುತ್ತದೆ. ತೇಜಸ್ವಿಯವರನ್ನು ಮುಖತ: ನಾನು ನೋಡಿದ್ದು ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ. ಅದಷ್ಟೇ ನನ್ನ ಭಾಗ್ಯವಾಗಿತ್ತು. ಆದ್ರೆ ನನ್ನ ಮುಂದಿನ ಪೀಳಿಗೆಯವರಿಗೆ ಈ ಸಾಕ್ಷ್ಯಚಿತ್ರವನ್ನು ತೋರಿಸಲು ಜೋಪಾನವಾಗಿ ಎತ್ತಿಟ್ಟಿದ್ದೇನೆ. ಕಡಿಮೆಯೆಂದರೂ ನಾನು ಸಾಯುವಷ್ಟವರಲ್ಲಿ ಒಂದು ಸಾವಿರ ಜನರಿಗಾದರೂ ಇದನ್ನು ತೋರಿಸಿ ತೇಜಸ್ವಿಯವರ ಬಗ್ಗೆ, ಅವರ ಪುಸ್ತಕಗಳು, ಬರವಣಿಗೆ, ಪರಿಸರ ಕಾಳಜಿ, ಫೋಟೊಗ್ರಫಿಗಳ ಬಗ್ಗೆ ಅರಿವು ಮೂಡಿಸಬೇಕೆಂದು ನಿರ್ಧರಿಸಿದ್ದೇನೆ.

“ಅವರನ್ನು ಪುಸ್ತಕದಲ್ಲಿ ಓದುವುದೊಂದು ದೊಡ್ಡ ಸುಖ” ಯೋಗರಾಜ್ ಭಟ್ಟರ ಮಾತು ಕೇಳಿ ನಾನು ಮತ್ತೆ ಮತ್ತೆ ತೇಜಸ್ವಿಯ ನೆನಪಿಗಾಗಿ, ಈ ಮೊದಲು ಎಷ್ಟು ಸಲ ಓದಿದ್ದರೂ ಬೇಸರವಾಗದೇ ಸಿಗುವ ದೊಡ್ದ ಸುಖಕ್ಕಾಗಿ, ತೇಜಸ್ವಿಯವರ ಪುಸ್ತಕ ಮತ್ತೆ ಓದಲು ಹೋಗುತ್ತಿದ್ದೇನೆ.

‍ಲೇಖಕರು avadhi

May 25, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. Badarinath Palavalli

    ಸದಾ ನನ್ನ ಜೊತೆ ಇರುವ ಕೆಲವೇ ನೆರಳುಗಳಲ್ಲಿ ತೇಜಸ್ವಿಯೊಬ್ಬರು. ಈ ಸಿ.ಡಿ. ನಾನೂ ಕೊಳ್ಳುತ್ತೇನೆ.

    ಪ್ರತಿಕ್ರಿಯೆ
  2. Satyanarayana BR

    ಶಿವು ಅಭಿನಂದನೆಗಳು.
    ಅದು ಕಡಿದಾಳು ಮಂಜಪ್ಪ ಅಲ್ಲ; ಕಡಿದಾಳು ಶಾಮಣ್ಣ.

    ಪ್ರತಿಕ್ರಿಯೆ
  3. chalam

    namma angadiyallu maarata madabekide.avara vilasa,number needi.innu thejasvi namma sakshiprajne.

    ಪ್ರತಿಕ್ರಿಯೆ
  4. samyuktha

    ಮತ್ತೆ ಮತ್ತೆ ತೇಜಸ್ವಿ – ನಿಜಕ್ಕೂ ಇದು ಒಳ್ಳೆಯ ಪ್ರಯತ್ನ. ಇದನ್ನು ಎಲ್ಲರೂ ನೋಡಲೇ ಬೇಕು. ಚೆನ್ನಾಗಿ ಬರೆದಿದ್ದೀರಿ ಶಿವೂ.

    ಪ್ರತಿಕ್ರಿಯೆ
  5. shivu K

    ಬದರಿನಾಥ್ ಪಲವಳ್ಳಿ ಸರ್, ಚಿನ್ಮಯ ಭಟ್, ಸಂಯುಕ್ತ: ಎಲ್ಲರಿಗೂ ಧನ್ಯವಾದಗಳು. ಸತ್ಯನಾರಾಯಣ ಸರ್: ತಿದ್ದಿದ್ದಕ್ಕೆ ಧನ್ಯವಾದಗಳು.
    ಚಲಮ್: ಜಯನಗರದ ಅವರ ಪುಸ್ತಕದ ಅಂಗಡಿಯ ಮಳಿಗೆಗೆ ಹೋಗಿ ವಿಚಾರಿಸಬಹುದು.

    ಪ್ರತಿಕ್ರಿಯೆ
  6. ಜಿ.ಎನ್ ನಾಗರಾಜ್

    ಮತ್ತೆ ಮತ್ತೆ ತೇಜಸ್ವಿ ಒಂದು ದೃಶ್ಯ-ಶ್ರಾವ್ಯ ಕಾವ್ಯವೆಂದು ನಮಗೆಲ್ಲ ಭಾವವಾಗುವಂತೆ ಬಣ್ಣಿಸಿದ್ದೀರಿ.ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಒಂದು ಒಳ್ಳೆಯ ಕೊಡುಗೆ ಕೊಟ್ಟ ಚಿತ್ರ ತಂಡಕ್ಕೆ ಅಭಿನಂದನೆಗಳು.
    ತೇಜಸ್ವಿಯವರ ಬಗೆಗಿನ ಕನ್ನಡ ಸಹೃದಯರ ಸಂಭ್ರಮ ನಿರಂತರವಾಗಿರಲಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: