ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಡು ಮತ್ತು ಕಡಲಿನ ಸಾನ್ನಿಧ್ಯದಲ್ಲಿ…

ಜಿ ಪಿ ಬಸವರಾಜು

ಕರ್ನಾಟಕದ ಅತ್ಯಂತ ಸುಂದರ ಜಿಲ್ಲೆಗಳಲ್ಲಿ ಪ್ರಮುಖ ಜಿಲ್ಲೆಯಾಗಿರುವ ಉತ್ತರ ಕನ್ನಡ ಜಿಲ್ಲೆಯನ್ನು ಒಡೆಯಬೇಕಾಗಿ ಬಂದರೆ ಸುಲಭವಾಗಿ ಎರಡು ಭಾಗಗಳಾಗಿ ಮಾಡಬಹುದು. ಒಂದು ಭಾಗವನ್ನು ಕರಾವಳಿಯ ಕನ್ನಡ ಜಿಲ್ಲೆ ಎಂದು ಮಾಡಿದರೆ, ಮತ್ತೊಂದು ಭಾಗವನ್ನು ಕಾನನದ ಕನ್ನಡ ಜಿಲ್ಲೆಯಾಗಿ ರೂಪಿಸಬಹುದು. ಇವುಗಳಲ್ಲಿ ಯಾವುದು ಹೆಚ್ಚು ಸೊಗಸು ಎಂದರೆ ಹೇಳುವುದು ಕಷ್ಟ. ಎರಡೂ ಭಾಗಗಳು ಸುಂದರವೇ. ಒಂದರಲ್ಲಿ ಕರಾವಳಿ ಮೋಹಕ; ಇನ್ನೊಂದರಲ್ಲಿ ಕಾನನ ಮರುಳು ಮಾಡುತ್ತದೆ. ಕಾನನವು ಭಯಾನಕ ಎನ್ನುವುದಾದರೆ, ಕಡಲೂ ಭಯಾನಕವೇ. ದೂರದಿಂದ ನೋಡುವವರಿಗೆ ಎರಡೂ ಚಂದವೇ. ಆದರೆ ಒಳಹೊಕ್ಕು ನೋಡುವಾಗ ಮಾತ್ರ ಎರಡೂ ಭಯಾನಕ.
ಕಾರವಾರದ ದೇವಬಾಗ್ ಬೀಚಿನಲ್ಲಿ ಕುಳಿತು ಸೂರ್ಯಾಸ್ತವನ್ನು ನೋಡುತ್ತಿದ್ದೆವು. ಒಂದು ಅಲೆಯ ಬೆನ್ನು ಹತ್ತಿ ಬರುವ ಇನ್ನೊಂದು ಅಲೆ; ಅವುಗಳ ರಭಸ; ಬೆಳ್ನೊರೆಯ ನಿರಂತರ ನಗು. ನಿಧಾನಕ್ಕೆ ಕೆಂಪನೆಯ ಗೋಲವಾಗುತ್ತ ನೀರಿಗಿಳಿಯುವ ಸೂರ್ಯ. ಬಣ್ಣಗಳನ್ನು ಬಳಿದುಕೊಂಡು ರಂಗೇರುವ ಆಕಾಶ. ಒಂದರೊಳಗೊಂದು ಬೆರೆಯುವ ಮೋಹಕ ದೃಶ್ಯಕ್ಕೆ ಮರುಳಾಗಿ ಮೈಮರೆತರೆ ಕತ್ತಲು ನಿಧಾನಕ್ಕೆ ನಮ್ಮನ್ನೆಲ್ಲ ಆವರಿಸುತ್ತಿತ್ತು. ಅಲೆಗಳ ಆರ್ಭಟ ಹೆಚ್ಚುತ್ತಿತ್ತು. ಅವುಗಳ ಮೊರೆತ ನಿರಂತರ ಶ್ರುತಿಯಂತೆ ಹಿನ್ನೆಲೆಯಲ್ಲಿ ಸ್ಥಾಯಿಯಾಗಿತ್ತು. ದೂರದ ಕೂರ್ಮಗಡ ದೊಡ್ಡ ಬಂಡೆಯಂತೆ, ಹಸಿರನ್ನು ಹೊದ್ದು ಕತ್ತಲಲ್ಲಿ ಮರೆಯಾಗುತ್ತಿತ್ತು.

ನಿಧಾನಕ್ಕೆ ಒಂದೊಂದೆ ದೋಣಿಗಳನ್ನು ಮೊಗವೀರರು ನೀರಿಗಿಳಿಸುತ್ತಿದ್ದರು. ದೂರಕ್ಕೆ ಮಕ್ಕಳ ಆಟಿಕೆಯ ದೋಣಿಗಳಂತೆ ಕಾಣಿಸುವ ಪುಟ್ಟ ದೋಣಿಗಳ ಹುಟ್ಟುಹಾಕುತ್ತ ಹೊರಟೇಬಿಟ್ಟರು ಮೀನುಗಾರರು. ಅಲೆಯಲ್ಲಿ ಏರುತ್ತ ಇಳಿಯುತ್ತ ಸಾಗುವ ದೋಣಿಗಳಿಗೇ ಕಣ್ಣಿಟ್ಟರೆ ಅಲ್ಲಿನ ಹೋರಾಟ ಸ್ಪಷ್ಟವಾಗುತ್ತಿತ್ತು. ದೋಣಿಗಳನ್ನು ಎತ್ತಿ ಎಸೆಯುತ್ತ, ತನ್ನೊಳಗೆ ಎಳೆದುಕೊಳ್ಳಲು ಹವಣಿಸುವ ಕಡಲು. ಹುಟ್ಟುಹಾಕುತ್ತ, ತೇಲುತ್ತ, ಮುಂದೆಮುಂದೆ ಸಾಗಲು ಸೆಣಸುವ ವೀರರು. ಕಡಲ ಮೇಲಿಂದ ತೇಲಿಬರುವ ಗಾಳಿಯ ರಭಸ ಹೆಚ್ಚಾಯಿತು; ಅಲೆಗಳ ಬಿರುಸೂ ಹೆಚ್ಚಾಯಿತು. ಮೊಗವೀರರ ರಟ್ಟೆಗಳು ಬಲಿಷ್ಠವಾಗಿಲ್ಲದಿದ್ದರೆ ದೋಣಿಗಳು ಮೊಗಚಿಕೊಳ್ಳಬೇಕು. ಆದರೆ ಹಾಗಾಗಲಿಲ್ಲ. ಅಲೆಗಳೊಂದಿಗೆ ಸೆಣಸುವ ಮೊಗವೀರರು ಸಮರ್ಥವಾಗಿ ಹುಟ್ಟುಹಾಕುತ್ತ ದೋಣಿಗಳನ್ನು ತೇಲಿಸಿದರು. ನಿಧಾನಕ್ಕೆ ತೇಲುತ್ತ ತೇಲುತ್ತ, ಸಾಗುತ್ತ ಸಾಗುತ್ತ ಕಡಲ ಒಳಕ್ಕೆ ಸರಿದವು ದೋಣಿಗಳು. ನಿಧಾನಕ್ಕೆ ಬಲೆಯನ್ನು ಹರವುತ್ತ ತಮ್ಮದೇ ಸೀಮೆಯನ್ನು ಗುರುತಿಸಿಕೊಂಡರು ದೋಣಿವೀರರು. ಈ ದೃಶ್ಯವನ್ನು ನೋಡುತ್ತ ಹೋದಂತೆ, ಸುಂದರ ಕಡಲಿನ ರುದ್ರರೂಪ ಮನಸ್ಸಿನೊಳಕ್ಕೆ ಇಳಿಯುತ್ತಿತ್ತು. ಹೋರಾಟವಿಲ್ಲದೆ ಒಂದು ಹೆಜ್ಜೆಯನ್ನೂ ಮುಂದಿಡಲು ಸಾಧ್ಯವಾಗದು. ಮಳೆ, ಗಾಳಿ, ಕಡಲಿನ ಏರಿಳಿತ, ಅಬ್ಬರ, ಪ್ರಶಾಂತ ಸ್ಥಿತಿ ಎಲ್ಲವನ್ನೂ ಅರಿತೇ ನಡೆಯಬೇಕು. ಇಲ್ಲವಾದರೆ ಅಪಾಯ ಕಟ್ಟಿಟ್ಟದ್ದು. ಮೊಗವೀರರಿಗೆ ಕಡಲಿನ ಎದೆಬಡಿತವೂ ಗೊತ್ತು; ಅಬ್ಬರವೂ ಗೊತ್ತು. ಗಾಳಿಯ ಸುಳಿದಾಟವೂ ಸಾಮಾನ್ಯವಾಗಿ ಗೊತ್ತಿರುತ್ತದೆ. ಒಮ್ಮೊಮ್ಮೆ ಅವರ ಎಲ್ಲ ಲೆಕ್ಕಾಚಾರ ತಲೆಕೆಳಗಾಗುವುದೂ ಉಂಟು. ಈ ಕಾಳಿ ಕಡಲಿನೊಂದಿಗೆ ನಿತ್ಯ ಸೆಣಸುವ ಮೊಗವೀರರು ಸಾವಿನೊಂದಿಗೂ ಸೆಣಸುತ್ತಾರೆಂಬ ಸತ್ಯ ಸ್ಪಷ್ಟವಾಯಿತು. ದೂರಕ್ಕೆ ಸುಂದರವಾಗಿ ಕಾಣಿಸುವ ಕಡಲು ತನ್ನ ನಿಜರೂಪವನ್ನು ತೆರೆದರೆ ಮೃತ್ಯುಕೂಪವೇ ಎಂಬುದೂ ಅರಿವಿಗೆ ಬಂತು.
ಗಣೇಶಗುಡಿಯಿಂದ ಕಾರವಾರಕ್ಕೆ ಸಾಗುವ ಹಾದಿ. ಎತ್ತರದ ಜಾಗದಲ್ಲಿ ನಿಂತು ಸುತ್ತ ನೋಟ ಹರಿಸಿದರೆ ನೋಡಿದಷ್ಟೂ ದೂರಕ್ಕೆ ವಿಸ್ತಾರವಾದ ಕಾಡು. ಒಂದೇ ಒಂದು ಅಂಗುಲ ಜಾಗವೂ ಇಲ್ಲವೇನೋ ಎನ್ನುವಂತೆ ಮರಗಿಡಗಳು ದಟ್ಟ ಹಸಿರು ಹೊದಿಕೆಯನ್ನು ಹೊದ್ದಿಸಿದ್ದವು. ಸುತ್ತ ಸಹ್ಯಾದ್ರಿ ಸಾಲು. ಆಳದ ಕಣಿವೆಗಳು. ಎಲ್ಲಿಯೋ ಹರಿಯುವ ಝರಿಗಳು; ಧುಮ್ಮಿಕ್ಕುವ ಜಲಪಾತಗಳು. ಮೇಲಿಂದ ಕೆಳಗೆ ಧುಮ್ಮಿಕ್ಕುವ ಹಾಲಿನ ಧಾರೆಯಂತೆ ಕಾಣುವ ಜಲಪಾತಗಳ ಹತ್ತಿರ ಹೋದರೆ ಅವುಗಳ ಸಾಮೀಪ್ಯದ ಸುಖ ಮೈ ಮನಸ್ಸುಗಳನ್ನು ತುಂಬಿಕೊಳ್ಳುತ್ತದೆ. ಅವುಗಳ ಕಡಿದಾದ ಹಾದಿ ಮೈನಡುಗಿಸುತ್ತದೆ. ಮನುಷ್ಯ ಕಾಲು ಜಾರಿದರೆ ಮೂಳೆಯೂ ಸಿಕ್ಕದಂಥ ದುರ್ಗಮ ಹಾದಿ. ತಣ್ಣನೆಯ ನೀರು ಮಾತ್ರ ನಿರ್ಭಯವಾಗಿ ಧುಮುಕುತ್ತದೆ. ಸಾವಿರ ಹೋಳಾಗಿ ಸಿಡಿದರೂ, ಮತ್ತೆ ಭೂಮಿಯನ್ನು ಮುಟ್ಟಿ ಛಲದಿಂದ ಧಾರೆಯಾಗಿ ಮುಂದೆ ಸಾಗುತ್ತದೆ.
ಪ್ರವಾಸಿಗರಾಗಿ ಬಂದುಹೋಗುವ ಎಲ್ಲರಿಗೂ ಈ ದೃಶ್ಯಗಳೆಲ್ಲ ಕ್ಯಾಮೆರಾಗಳಲ್ಲಿ ಉಳಿಯುತ್ತವೆ. ವೀಡಿಯೋ ತುಣುಕುಗಳಾಗಿ ಕ್ಷಣಕಾಲ ಜೀವಂತವಾಗಿ ಎದುರಾಗಬಹುದು. ಆದರೆ ಈ ಕಾಡುಗಳಲ್ಲಿ ಬದುಕುವವರ, ಇಲ್ಲಿಯೇ ಕೃಷಿ ಮಾಡುವವರ, ಮುಳುಗಡೆಯಾದ ಊರುಗಳ ಜನರ, ಬುಡಕಟ್ಟು ಜನಾಂಗಗಳ ನಿತ್ಯದ ಬದುಕು ಹೇಗಿರುತ್ತದೆ? ಕಾಡಿನಲ್ಲಿ ಅಲ್ಲಲ್ಲಿ ಕೆಲವು ರಸ್ತೆಗಳೇನೋ ಹರಿದಾಡಿವೆ. ಆದರೆ ಕಾಡಿನ ತೀರ ಒಳಭಾಗದಲ್ಲಿ ಬದುಕುವವರ ಸ್ಥಿತಿ ಏನು? ಕಾಡಿನ ಪ್ರಾಣಿಗಳ ಜೊತೆ ಅವರು ವ್ಯವಹರಿಸಬೇಕು. ಮಳೆಗಾಲದಲ್ಲಿ ಇವರ ಬವಣೆ ಹೇಗಿರಬೇಡ. ಪ್ರಾಣಾಂತಿಕ ಕಾಯಿಲೆಗಳು, ತುತರ್ು ಚಿಕಿತ್ಸೆ ಇತ್ಯಾದಿ ಆಪತ್ತಿನ ಸಂದರ್ಭಗಳಲ್ಲಿ ಅವರೇನು ಮಾಡುತ್ತಾರೆ? ಇಂಥ ಹಲವಾರು ಪ್ರಶ್ನೆಗಳಿಗೆ ಉತ್ತರ ಸುಲಭವಾಗಿ ಸಿಕ್ಕುವುದಿಲ್ಲ.
ನಾವು ಹಾದು ಹೋದ ಅಣಶಿ ಭಾಗದ ಅಭಯಾರಣ್ಯದಲ್ಲಿ ಹುಲಿ, ಚಿರತೆಗಳಿವೆ ಎಂದು ಹೇಳಿದರು. ಯಲ್ಲಾಪುರ, ಸಿರಸಿ ಮೊದಲಾದ ಭಾಗಗಳಲ್ಲಿ ಆನೆಗಳು ತೋಟಗಳಿಗೆ ನುಗ್ಗಿಬಂದು ಇಡೀ ತೋಟವನ್ನು ಧ್ವಂಸಮಾಡಿದ ಸುದ್ದಿಗಳನ್ನು ಓದಿದ ನೆನಪು. ಮಂಗಗಳಂತೂ ಹಣ್ಣು ಕಾಯಿ ಹೀಚನ್ನೂ ಬೀಡದ ಸರ್ವನಾಶಕ ಬುದ್ಧಿಯವು. ಇವುಗಳನ್ನು ಬೆದರಿಸಲೆಂದೇ ಅನೇಕರ ಮನೆಗಳಲ್ಲಿ ಬಂದೂಕುಗಳಿವೆ. ಕೆಲವರ ತೋಟಗಳಿಗೆ ವಿದ್ಯುತ್ ಹಾಯಿಸಿದ ತಂತಿಬೇಲಿಗಳು. ಕಾಡುಪ್ರಾಣಿಗಳು ಬರದಂತೆ ತಡೆಯುವ ಎಷ್ಟೋ ಉಪಾಯ.
ಅಂತೂ ಮನುಷ್ಯ ಕಾಡಿನ ಜೊತೆ ನಿರಂತರ ಅನುಸಂಧಾನ ನಡೆಸಬೇಕು. ಈ ಅನುಸಂಧಾನದಲ್ಲಿ ಸೆಣಸಾಟವೂ ಇರುತ್ತದೆ; ಪಳಗಿಸುವ ಉಪಾಯಗಳೂ ಇರುತ್ತವೆ. ಸ್ವಲ್ಪ ಮೈಮರೆತರೆ ಕಾಡಿನಲ್ಲಿ ಬದುಕುವ ಜನ ತಮ್ಮ ಬಲಿಯನ್ನೇ ಕೊಡಬೇಕಾಗುತ್ತದೆ. ಆದರೂ ಕಾಡಿನ ಸಖ್ಯದಿಂದ ಇವರು ದೂರ ಸರಿಯಲಾರರು.
ಪ್ರವಾಸಿಗರಾಗಿ ಮಾತ್ರ ಬಂದುಹೋಗುವಾಗ ಈ ಕಾಡು, ಈ ಕಡಲಿನ ನೆನಪು. ನಂತರ ಅದಕ್ಕೂ ನಮಗೂ ಸಂಬಂಧವೇ ಇಲ್ಲ ಎನ್ನುವ ಮನೋಭಾವ. ಸರ್ಕಾರದ ಯಂತ್ರವಾದವರು, ರಾಜಕಾರಣಿಗಳಾಗಿ ಜನರ ಹಣೆಬರಹವನ್ನು ಬರೆಯಬೇಕಾದವರು ಎಲ್ಲರಿಗೂ ಇದೇ ನಿರ್ಲಿಪ್ತ ಸ್ಥಿತಿ. ಅದಕ್ಕೇ ಈ ಕಾಡುಗಳಿಂದ ದೂರ ಸರಿಯಲು ಹೊಸ ತಲೆಮಾರು ನೋಡುತ್ತದೆ. ಅಕ್ಷರದ ಮೂಲಕ ಹೊಸಲೋಕಕ್ಕೆ ರಹದಾರಿ ಗಿಟ್ಟಿಸಿಕೊಳ್ಳುವವರು ಮತ್ತೆ ಇತ್ತ ತಲೆಹಾಕಲಾರರು. ಕಾಡು ಮತ್ತು ಕಡಲು ಅವರನ್ನು ಅಷ್ಟು ಹೆದರಿಸಿರುತ್ತದೆ. ಇಲ್ಲಿಯೇ ಉಳಿದು ಹಲ್ಲುಕಚ್ಚಿ ಬದುಕಬೇಕಾದವರು ಧೀರರು. ಅವರು ಯಾರನ್ನೂ ಬೇಡುವುದಿಲ್ಲ; ಯಾವುದಕ್ಕೂ ಜಗ್ಗುವುದಿಲ್ಲ. ನಿತ್ಯದ ತಮ್ಮ ಸೆಣಸಾಟದಲ್ಲಿ ಅವರು ಬದುಕಿನ ರೂಪರೇಷೆಗಳನ್ನು ಬರೆಯುತ್ತಲೇ ಇರುತ್ತಾರೆ. ಹಾಗೆಂದು ಅವರನ್ನು ಅವರ ಪಾಡಿಗೇ ಬಿಡುವುದು ಸರಿಯೇ? ಅವರ ಸಂಪತ್ತಿಗೇ ಕೈಹಾಕುವ ಈ ವ್ಯವಸ್ಥೆ ಅವರನ್ನು ಅವರ ಪಾಡಿಗೆ ಬಿಡುವುದಿಲ್ಲ ಎಂಬುದೂ ನಮಗೆಲ್ಲ ಗೊತ್ತಿರುವ ಸಂಗತಿಯೇ. ಸರ್ವರಿಗೆ ಸಮಪಾಲು ಎಂಬ ತತ್ವಕ್ಕೆ ಬದ್ಧವಾದ ಪ್ರಜಾಪ್ರಭುತ್ವ ವ್ಯವಸ್ಥೆ, ಈ ಕಾಡು ಮತ್ತು ಕಡಲನ್ನು ನಂಬಿ ಬದುಕುತ್ತಿರುವವರಿಗೂ ಅವರ ಪಾಲನ್ನು ಕೊಡಬೇಕಲ್ಲವೇ? ಕೊಡದಿದ್ದರೆ ಇದನ್ನು ಪ್ರಜಾಪ್ರಭುತ್ವ ಎಂದು ಹೇಳುವುದು ಹೇಗೆ? ಈ ಜಿಲ್ಲೆಯ ಕುಣಬಿಗಳು, ಗೌಳಿಗರು, ಹಾಲಕ್ಕಿಗಳು ಮತ್ತು ಇಂಥವೇ ಹಲವಾರು ಬುಡಕಟ್ಟುಗಳ ಜನ ಒಂದು ದಿನ ನಮ್ಮೆದುರಿಗೆ ನಿಂತು ಇದೇ ಪ್ರಶ್ನೆಯನ್ನು ಕೇಳಬಹುದು. ಆಗ ನಮ್ಮಲ್ಲಿ ಉತ್ತರ ಇರುತ್ತದೆಯೇ?

‍ಲೇಖಕರು G

5 January, 2015

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading