
ಕಥೆಗಾರ ಆನಂದ
ಈ ಕಾಜಾಣ ಜೋಡಿ ಕನ್ನಡಿಗರಿಗೆ ಚಿರಪರಿಚಿತ.. ಇದನ್ನು ಚಿತ್ರಿಸಿದವರ ಕುತೂಹಲಕರ ಮಾಹಿತಿ ‘ನೆನಪಿನ ದೋಣಿಯಲ್ಲಿ’ ಸಿಕ್ಕಿತು.. ಕತೆಗಾರ ‘ಆನಂದ'(ನಾನು ಕೊಂದ ಹುಡುಗಿ) ಇದನ್ನು ರಚಿಸಿದವರಂತೆ..ಬೇರೆ ಕೆಲವು ಕುವೆಂಪು ಪುಸ್ತಕಗಳಿಗೂ ‘ಆನಂದ’ ಅವರು ಮುಖಪುಟ ಚಿತ್ರ ಬರೆದುಕೊಟ್ಟಿದ್ದಾರಂತೆ!
-ಪಿ ಮಹಮದ್
ಮಹಮ್ಮದ್, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾದ ಕೆ.ವಿ, ನಾರಾಯಣ್ ರವರು. ಅನುವಾದದಲ್ಲಿ ಶ್ರೇಷ್ಠ ಕೃತಿಗಳಿಗೆ ನೀಡುವ ಪ್ರಶಸ್ತಿಯ ಜೊತೆಗೆ ಈ ಸುಂದರ ಕಾಜಾಣಗಳ ಪ್ರತಿಮೆಯನ್ನು ನೆನಪಿನ ಕಾಣಿಕೆಯಾಗಿ ನೀಡುತ್ತಿದ್ದಾರೆ. ನನ್ನ ಮರುಭೂಮಿಯ ಹೂ ಕೃತಿಗೆ ಸಿಕ್ಕ ಬಹುಮಾನಕ್ಕಿಂತ ನನ್ನ ಮೆಚ್ಚಿನ ಕವಿಯ ಈ ಜೋಡಿ ಕಾಜಾಣಗಳ ಪ್ರತಿಮೆ ಸಿಕ್ಕಿದ್ದು ನನಗೆ ಹೆಚ್ಚು ಖುಷಿ ನೀಡಿತು.
-ಜಗದೀಶ್ ಕೊಪ್ಪ
ಶಿವಮೊಗ್ಗ ಕರ್ನಾಟಕ ಸಂಘದ ಎಂಬ್ಲೆಮ್ ನರ್ತಿಸುತ್ತಿರುವ ನವಿಲಿನ ಚಿತ್ರ ಬಿಡಿಸಿದವರೂ ಕೂಡ ಆನಂದರೇ. ಈ ಸಂಘದ ವಾರ್ತಾಪತ್ರದ ಹೆಸರನ್ನೂ ಕೂಡ ಎಲ್ಲರ ಸಮ್ಮತಿ ಮೇರೆಗೆ ‘ನವಿಲು ಹೆಜ್ಜೆ’ ಎಂದು ಬದಲಿಸಿದ್ದೆ.
-ಸರ್ಜಾಶಂಕರ ಹರಳೀಮಠ





ಯುಗದಕವಿ, ಜಗದಕವಿ, ಋಷಿಕವಿ, ದಾರ್ಶನಿಕಕವಿ, ರಾಷ್ಟ್ರಕವಿ-ಕುವೆಂಪುರವರಿಗೆ ಕೋಗಿಲೆಗಿಂತಲೂ ಅತ್ಯಂತ ಆಪ್ತ-ಆತ್ಮೀಯ-ಪ್ರಿಯಪಾತ್ರವಾದದ್ದು-ಕಾಜಾಣ. ತನ್ನ ಪಂಚಮದ ಇಂಚರದಿಂದ, ವಸಂತದೂತ, ಚೂತವನಖ್ಯಾತಿಯ ಕೋಗಿಲೆಯದು-ಕುಹೂ ಕುಹೂ ಎಂಬ ಏಕತಾನತೆಯ ರಾಗ. ಆದರೆ ವಿವಿಧ-ವಿಭಿನ್ನ-
ವಿಶಿಷ್ಟ ರಾಗಲಹರಿಯ ಮಧುರ ಗಾನಾಮೃತ ಧಾರೆ ಹರಿಸುವ ಕಾಜಾಣವೇ ನನಗೆ ಬಲು ಇಷ್ಟವೆಂದು ಕುವೆಂಪು ಹಲವು ಸಲ ಹೇಳಿದ್ದಾರೆ. ಕೊಳಲು ಪ್ರಥಮ ಕವನ ಸಂಕಲನದಿಂದ ಮೊದಲ್ಗೊಂಡು ಅವರ ಎಲ್ಲಾ ಕೃತಿಗಳನ್ನೂ ಮನಸೆಳೆವ ಮೋಹಕ ಕಾಜಾಣ ಜೋಡಿಯ ಚಿತ್ರ ರಸಿಕರ ಪ್ರಮುಖ ಆಕರ್ಷಣೆ. ಮುಂದೆ ಅವರದೇ ಸ್ವಂತ “ಉದಯರವಿ ಪ್ರಕಾಶನ”ದ ಶಾಶ್ವತ ಲಾಂಛನವಾಗಿಯೂ ಜೋಡಿ ಕಾಜಾಣ ಸುಪ್ರಸಿದ್ಧ. ಪುಸ್ತಕಾಲಯಗಳ ಕೈಗೆಟುಕದ ದೂರದಲ್ಲಿದ್ದರೂ, ಅತೀ ಎತ್ತರದ ಮೇಲು ಸಾಲಿನಲ್ಲಿದ್ದರೂ ಕಾಜಾಣ ಹಕ್ಕಿಯ ಜೋಡಿ ಚಿತ್ರ ನೋಡಿಯೇ ಓ! ಅಲ್ಲಿದೆ ಕುವೆಂಪು ಪುಸ್ತಕ ಎಂದು ಎಲ್ಲರೂ ಗುರುತಿಸುತ್ತಿದ್ದುದು ಅವಿಸ್ಮರಣೀಯ. “ನಾನು ಕೊಂದ ಹುಡುಗಿ”-ಕಥೆಯ ಆನಂದ ಕೈಚಳಕದ ಕಾಜಾಣ ಜೋಡಿಯ ಚಿತ್ರ ಅಚಂದ್ರಾರ್ಕ. ಅವಧಿಯ ಈ ಬರಹದೊಂದಿಗೇ ಇನ್ನೂ ಒಂದು ನೆನಪು ಧುತ್ತೆಂದು ತೇಲಿಬಂತು. ಬಳ್ಳಾರಿ ಮೆಡಿಕಲ್ ಕಾಲೇಜು ವಿದ್ಯಾರ್ಥಿ ವಿಭಾಗದ ವಿಷಯ ನಿರ್ವಾಹಕನಾಗಿದ್ದ ನಾನು ತಿಂಗಳಿನಲ್ಲಿ ಎರಡು ಮೂರು ಬಾರಿ ಕರ್ತವ್ಯದ ನಿಮಿತ್ತ ಬೆಂಗಳೂರು ಆನಂದರಾವ್ ವೃತ್ತದ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯಕ್ಕೆ ಹೋಗುತ್ತಿದ್ದೆ. ಒಮ್ಮೊಮ್ಮೆ ಎರಡು ಮೂರು ದಿನ ತಂಗಬೇಕಾದ ಜರೂರಿ ಇರುತ್ತಿತ್ತು. ಆಗೆಲ್ಲಾ ಬೆಂಗಳೂರು ಬುಕ್ ಬ್ಯೂರೋ ನನ್ನ ಅಚ್ಚುಮೆಚ್ಚಿನ ತಾಣ. ಕುವೆಂಪುರವರ ಬಹುತೇಕ ಕೃತಿಗಳನ್ನು ಖರೀದಿಸಿದ್ದು ಅಲ್ಲಿಯೇ. 1986 ಅಥವಾ 1987ನೇ ಸೆಪ್ಟಂಬರ್ ಕೆಲಸ ಮುಗಿದ ಮೇಲೆ ಅಲ್ಲಿಗೆ ಹೋದೆ. ಕುವೆಂಪುರವರ “ಕಲಾಸುಂದರಿ”ಮತ್ತು “ಪಾಂಚಜನ್ಯ” ಎರಡು ಪುಸ್ತಕ ಎಷ್ಟು ಹುಡುಕಿದರೂ ಸಿಕ್ಕಲಿಲ್ಲ. ಸೇಲ್ಸ್ ಗರ್ಲ್ ಸಾರ್ ನಮ್ಮ ಇನ್ನೊಂದು ಬ್ರ್ಯಾಂಚ್ ನಲ್ಲಿ ಇವೆ. ನಾಳೆ ಬಂದರೆ ಖಂಡಿತಾ ಕೊಡುತ್ತೇನೆಂದಳು. ಹ್ಯಾಗೂ ಮರುದಿನದ ಹಂಪಿ ಎಕ್ಸ್ ಪ್ರೆಸ್ ರೈಲಿಗೆ ರಿಸರ್ವೇಶನ್ ಇದ್ದುದರಿಂದ ಪುಸ್ತಕ ತೆಗೆದುಕೊಂಡೇ ಹೋದರಾಯ್ತೆಂದು ಬೆಂಗಳೂರು ಮೆಡಿಕಲ್ ಕಾಲೇಜು ಹಾಸ್ಟೆಲ್ ರೂಮಿಗೆ ಹಿಂದಿರುಗಿದೆ. (ಲಾಡ್ಜ್ ರೂಮ್ ಹಿಡಿಯುವಷ್ಟು ಸಾಮರ್ಥ್ಯವಿಲ್ಲದ ಕಾರಣ ಪ್ರಾಚಾರ್ಯರ ಔದಾರ್ಯದಿಂದ ಇಲ್ಲಿಯ ಲೈಬ್ರರಿ ರೂಮಿನಲ್ಲಿ ಉಚಿತವಾಗಿ ತಂಗುತ್ತಿದ್ದೆ.) ರಾತ್ರಿ ಎಂಟುಗಂಟೆಗೆ ಇದ್ದಕ್ಕಿದ್ದಂತೇಕೋ ಮಡದಿ-ಮಕ್ಕಳ ನೆನಪು ವಿಪರೀತವಾಗಿ ಕಾಡತೊಡಗಿತು. ಅದೇಕೋ-ಏನೋ ಮರುದಿನ ರಿಸರ್ವೇಶನ್ ಇದ್ದರೂ ಇಂದೇ ಬಸ್ಸಿಗೆ ಹೊರಡಬೇಕೆಂದು ಮನಸ್ಸು ಚಡಪಡಿಸತೊಡಗಿತು. ಪುಸ್ತಕ ಇನ್ನೊಮ್ಮೆ ಬಂದಾಗ ತೆಗೆದುಕೊಂಡರಾಯ್ತೆಂದು ಬಳ್ಳಾರಿಗೆ ಬಸ್ಸಿಗೆ ಹೊರಟೇಬಿಟ್ಟೆ. ಆಗ ಮೊಬೈಲ್ ಇನ್ನೂ ಬಂದಿರಲಿಲ್ಲ. ಫೋನ್ ಸೌಲಭ್ಯವೂ ಅಷ್ಟಕ್ಕಷ್ಟೇ. ಸಂಜೆ ಬೆಂಗಳೂರು ಆಕಾಶವಾಣಿಯ ಪ್ರದೇಶ ಸಮಾಚಾರ ಆಲಿಸಿ ದಿಗ್ಭ್ರಾಂತನಾದೆ. ಬೆಂಗಳೂರು ಬುಕ್ ಬ್ಯೂರೋ ಇದ್ದ ಗಂಗಾರಾಮ್ ಕಟ್ಟಡ ಕುಸಿದು ಬಿದ್ದು ಮಾಲಕರ ಮಗನೂ ಸೇರಿದಂತೆ 127ಜನ ಸಜೀವ ಭೂಸಮಾಧಿಯಾಗಿದ್ದರು. ಅಕಾಸ್ಮಾತ್ ನಾನೇನಾದರೂ ಪುಸ್ತಕ ತೆಗೆದುಕೊಂಡೇ ಹೋದರಾಯ್ತೆಂದುಕೊಂಡಿದ್ದರೆ ನನ್ನ ಆಯುಷ್ಯದ ಲೆಕ್ಕ ಚುಕ್ತಾ ಆಗಿಬಿಡುತ್ತಿತ್ತಲ್ಲವೇ?.
ಹೋ,,,, ಪತ್ತಾರರ ಅನುಭವ! ! !.
ಜೋಡಿ ಕಾಜಾಣದ ಮಾಹಿತಿಗೆ ಮತ್ತು ಅಪರೂಪದ ಆನಂದರ ಫೋಟೋಗೆ ತ್ಯಾಂಕ್ಯೂ ಅವಧಿ