ಮಂಜುನಾಯಕ ಟಿ
ಕಾಂಪಿಟೇಟಿವ್ ಪರೀಕ್ಷೆಗಳ ಜಮಾನ ಇದು. ರಾಜ್ಯ ಮತ್ತು ಕೇಂದ್ರ ಲೋಕ ಸೇವಾ ಆಯೋಗಗಳು, ರೇಲ್ವೆಯವರು, ವಿವಿಧ ಬ್ಯಾಂಕುಗಳು ಮತ್ತು ಇನ್ನಿತರ ಸಂಸ್ಥೆಗಳು ನಡೆಸುವ ಸ್ಪಧರ್ಾತ್ಮಕ ಪರೀಕ್ಷೆಗಳಿಗಾಗಿ ಪಟ್ಟು ಹಿಡಿದು ತಯಾರಿ ನಡೆಸುತ್ತಿರುವ ಯುವ ಜೀವಗಳ ದಂಡೇ ಇದೆ. ಎಸ್ಸೆಲ್ಸಿ ಆಯಿತು, ಪಿಯುಸಿ ಆಯಿತು, ಡಿಗ್ರಿ ಆಯಿತು ಇನ್ನೆಷ್ಟಂತ ಓದುತ್ತ ತಂದೆ ತಾಯಿಗಳಿಗೆ ಭಾರವಾಗುವುದು ಅಂತ ನಿರ್ಧರಿಸಿ ಸ್ಪಧರ್ಾವಿಜೇತವನ್ನೋ ಕಾಂಪಿಟೇಟಿವ್ ರಿಫ್ರೆಶನರ್ ಅನ್ನೋ ಭಾರತದ ಸಂವಿಧಾನವನ್ನೋ ಇಲ್ಲಾ ಎಂಟನೆ ತರಗತಿಯ ವಿಜ್ಞಾನ ಪುಸ್ತಕವನ್ನೋ ಹಿಡಿದುಕೊಂಡು ಲೈಬ್ರರಿಯ ಮೂಲೆಯೊಂದರಲ್ಲಿ ಕುಳಿತು ಬಿಟ್ಟಿದ್ದಾರೆ. ಧಾರವಾಡದಲ್ಲಿ ಗ್ರಂಥಾಲಯಗಳಿಗೇನು ಕಡಿಮೆ. ಜಿಲ್ಲಾ ಗ್ರಂಥಾಲಯ, ಗರಗದ ಸಿದ್ದಪ್ಪ ಗ್ರಂಥಾಲಯ, ಕರ್ನಾಟಕ ಕಾಲೇಜಿನ ಗ್ರಂಥಾಲಯ, ಯುನಿವರ್ಸಿಟಿಯ ಹಸಿರು ಗ್ರಂಥಾಲಯ, ಉಳವಿ ಬಸಪ್ಪನ ಗುಡಿ ಸೇರಿದಂತೆ ಮುಂತಾದ ಕಡೆ ಇವರದೇ ಚಿಲಿಪಿಲಿ ಈಗ. ತಿಂಗಳುಗಳಿಂದ ಬೇರೆ ಏನನ್ನೂ ಯೋಚಿಸಿಲ್ಲ. ಪ್ರಜಾವಾಣಿ, ದಿ ಹಿಂದು, ಸ್ಪರ್ಧಾವಿಜೇತ, ಮಿಲ್ಲೇನಿಯಮ್ ಇಯರ್ ಬುಕ್, ಹೈಸ್ಕೂಲು ಪಠ್ಯಗಳು, ಮೆಂಟಲ್ ಎಬಿಲಿಟಿ, ಸಂಕಲ್ಪ ಸಂಸ್ಥೆಯವರು ವಾರ ವಾರ ನಡೆಸೋ ಮೋಕ್ಟೆಸ್ಟುಗಳು, ಹತ್ತಾರು ವರ್ಷದ ಹಿಂದಿನ ಪ್ರಶ್ನೆ ಪತ್ರಿಕೆಗಳು, ವಾರಕ್ಕೊಂದರಂತೆ ತುಂಬಿ ಗುಡ್ಡೆ ಆಗಿರುವ ಚಲನ್ನುಗಳು- ಇವೇ ಮುಂತಾದ ಸಂಗತಿಗಳು ಇವರ ದಿನಚರಿಯನ್ನು ಪೂರ್ತಿಯಾಗಿ ಆವರಿಸಿಕೊಂಡುಬಿಟ್ಟಿವೆ.

ಬದುಕು ತಂದೊಡ್ಡಿರುವ ಆರ್ಥಿಕ ಒತ್ತಡದಿಂದ ಪಾರಾಗಲು ಅದೆಷ್ಟೋ ಕನಸುಗಳನ್ನು ಮುಂದಕ್ಕೆ ಹಾಕಿ ಇಲ್ಲಾ ಪರ್ಮನೆಂಟಾಗಿ ಬಾಯಿ ಮುಚ್ಚಿಸಿ, ಯಾವುದಾದರೊಂದು ಸರ್ಕಾರಿ ನೌಕರಿ ಹಿಡಿದು ಬದುಕಿಕೊಂಡರಾಯಿತು ಅಂತ ನಿಟ್ಟುಸಿರು ಬಿಡುತ್ತಿರುವವರೆಷ್ಟೋ? ದುಡಿದು ದುಡಿದು ಕೃಶವಾಗಿರುವ ಅಪ್ಪ. ಮೊಣಕಾಲು ಸವೆಸಿಕೊಂಡು ಒದ್ದಾಡುತ್ತ ದಿನಕ್ಕೊಂದು ಕೆಂಪು ಡೈಕ್ಲೋಫೆನ್ಯಾಕ್ ಗುಳಿಗೆ ನುಂಗಿ ಹೆಂಗೋ ಸುಧಾರಿಸಿಕೊಂಡು ನಗುವ ಅವ್ವ. ಮಾಸಲು ಮಾಸಲು ಬಟ್ಟೆಗಳಲ್ಲೇ ಬುಧವಾರ ಶಾಲೆಗೆ ಹೋಗುವ ತಮ್ಮ ತಂಗಿಯರು. ಸಾಕಷ್ಟು ಕಲಿಯುವ, ಕಲಿತು ಸಾಧಿಸುವ ಕನಸುಗಳನ್ನೆಲ್ಲ ಯಾವತ್ತೋ ಅರ್ಧಕ್ಕೆ ನಿಲ್ಲಿಸಿ ಮನಸಿಲ್ಲದ ಮದುವೆಗೆ ಒಪ್ಪಿಕೊಂಡು ಸೀರಿಯಲ್ಲು ನೋಡುತ್ತ ಕಂಗೆಡುತ್ತಿರುವ ಅಕ್ಕ. ದುಡಿಯಲು ಬೆಂಗಳೂರಿಗೆ ಹೋಗುತ್ತೀನಂತ ಲುಂಗಿ ಬಿಟ್ಟು ಯಾರದೋ ದೋಗಳೆ ಪ್ಯಾಂಟು ಹಾಕಿಕೊಂಡು ಸಿದ್ದನಾಗಿರುವ ಅಣ್ಣ. ತಿಂದಿದ್ದು ಹೆಚ್ಚಾಗಿ ಅರಗಿಸಿಕೊಳ್ಳಲು ಸುಮ್ಸುಮ್ನೆ ಆಡಿಕೊಳ್ಳುವ ಶ್ರೀಮಂತ ಸಂಬಂಧಿಕರು- ಇವರನ್ನೆಲ್ಲ ನೋಡಲಾರದೆ ಧಾರವಾಡದ ಬಸ್ಸು ಹತ್ತಿದ್ದಾರೆ ಇವರು.
ಅಪ್ಪ ಬೈಯುತ್ತಲೇ ಸಾಲ ಇಸಿದುಕೊಂಡು ತಂದು ತುರುಕಿದ ಒಂದಷ್ಟು ನೋಟುಗಳಿವೆ ಜೇಬಿನಲ್ಲಿ. ಅವ್ವ ಮನೆದೇವರ ಮುಂದಿನ ಅಂಗಾರವನ್ನು ಅರಿವೆಯ ಚೂರಲ್ಲಿ ಸುತ್ತಿ ಉಡದಾರಕ್ಕೆ ಕಟ್ಟಿ ಹಣೆ ಸವರಿ ಕಳಿಸಿದ್ದಾಳೆ. ಗೆಳೆಯ ತನ್ನ ಹಾಸ್ಟೆಲಿನಲ್ಲಿ ಗೆಸ್ಟ್ ಆಗಿ ಇರುವೀಯಂತೆ ಅಂತ ಹೇಳಿದ್ದಾನೆ. ಕಲ್ಯಾಣ ನಗರ, ಸಪ್ತಾಪುರಗಳಲ್ಲಿ ರೂಮು ಮಾಡುವಷ್ಟು ದುಡ್ಡೆಲ್ಲಿದೆ? ಊಟಕ್ಕೆ ಗೆಳೆಯನ ರೂಮಿನಲ್ಲೇ ಪಲಾವು ಕುದಿಸಿಕೊಂಡರಾಯಿತು. ಹೇಗಿದ್ದರೂ ಅನ್ನಭಾಗ್ಯದ ಅಕ್ಕಿ ಇದೆಯಲ್ಲ. ಕಣ್ಣತುಂಬ ಸರ್ಕಾರಿ ಕೆಲಸದ ಅನಿವಾರ್ಯ ಕನಸೊಂದು ತುಂಬಿಕೊಂಡಿದೆ. ಯಾವುದಾದರೂ ಸರಿ. ಬದುಕಿನ ಮುಂದೆ ನಿಂತು ಇಂಥದ್ದೇ ನೌಕರಿ ಬೇಕು ಅಂತ ಚೌಕಾಸಿ ಮಾಡಿ ಪಡೆದುಕೊಳ್ಳುವಷ್ಟು ಸಮಯವಾದರೂ ಎಲ್ಲಿದೆ? ಅವ್ವ ಅಪ್ಪರನ್ನು ದಿನ ದಿನಕ್ಕೂ ಬಡಕಲಾಗಿಸುತ್ತ ಸೊರಗಿಸುತ್ತ ಸಾಗುತ್ತಿರುವ ಕಾಲವನ್ನು ನಿಲ್ಲಿಸುವವರ್ಯಾರು? ತಮ್ಮ ತಂಗಿಯರು ಈಗಾಗಲೆ ಹೈಸ್ಕೂಲು ಮುಗಿಸಲಿಕ್ಕೆ ಬಂದಿದ್ದಾರೆ. ಅಕ್ಕನ ಮದುವೆಗಾಗಿ ಅಪ್ಪ ಹಳ್ಳದ ಕಡೆ ಇರುವ ಮೂರುಪಾವು ಹೊಲವನ್ನು ಮಾರಲಿಕ್ಕೆ ನಿಂತಿದ್ದಾನೆ. ಜಗಳವಾಡಿಕೊಂಡೇ ಅಣ್ಣ ಬೆಂಗಳೂರಿಗೆ ಹೊರಟದ್ದು… ಇವ್ಯಾವೂ ಯಾವುದೋ ಈಸ್ಟ್ಮನ್ ಕಲರ್ರಿನ ಕನ್ನಡ ಸಿನಿಮಾದ ದೃಶ್ಯಗಳಲ್ಲ. ನಮ್ಮೂರೋ ನಿಮ್ಮೂರೋ ಮತ್ಯಾವುದೋ ಊರಿನ ‘ಆಮ್ ಆದ್ಮಿ’ ಮನೆಯೊಂದರ ಧಾರಾವಾಹಿಯ ನೈಜ ನೈಜ ಎಪಿಸೋಡುಗಳು.
ಆದಷ್ಟು ಬೇಗ ನೌಕರಿಯೊಂದಾದರೆ ಕುಂಟುತ್ತ ಸಾಗುತ್ತಿರುವ ಜೀವನಕ್ಕೆ ಒಂದು ಜೊತೆ ಚಪ್ಪಲಿ ಕೊಳ್ಳುವಷ್ಟಾದರೂ ದುಡ್ಡು ಸಂಪಾದಿಸಬಹುದು. ಅಕ್ಕನ ಮದುವೆನ್ನು ತಕ್ಕಮಟ್ಟಿಗಾದರೂ ಚೆನ್ನಾಗಿ ಮಾಡಬಹುದು. ಅವ್ವನ್ನ ಕರೆದುಕೊಂಡು ಕೀಲುತಜ್ಞರ ಹತ್ತಿರ ಹೋಗಿ ಬರಬಹುದು. ತಮ್ಮ ತಂಗಿಯರಿಗೆ ಸೈನ್ಸು ಮಾಡಿಸಬಹುದು. ಅಣ್ಣನಿಗೆ ಒಂದು ಜೊತೆ ಪ್ಯಾಂಟು ಹೊಲಿಸಿಕೊಳ್ಳಬಹುದು. ಹೋದ ಬೆಳೆಯಲ್ಲಿ ಮಾಡಿದ ಸಾಲದ ಚಕ್ರಬಡ್ಡಿಯ ಸುಳಿಯಲ್ಲಿ ಸಿಲುಕಿ ಹೈರಾಣಾಗುತ್ತಿರುವ ಅಪ್ಪನ ಚಿಂತೆ ಪರಿಹರಿಸಬಹುದು. ಲೋನು ಮಾಡಿಸಿ ಚೆಂದದೊಂದು ಸ್ಪ್ಲೆಂಡರ್ ಬೈಕು ಕೊಂಡು ಬುರ್..ಅಂತ ಸಂಬಂಧಿಕರ ಮುಂದೆ ಪೋಸು ಕೊಡುತ್ತ ತಿರುಗಬಹುದು. ಕೈಯಲ್ಲಿ ನೌಕರಿಯೊಂದಿದ್ದರೆ ಮಾವನ ಮಗಳನ್ನು ಕೇಳುವ ಸಾಹಸಕ್ಕೂ ಕೈ ಹಾಕಬಹುದು… ಹೆಚ್ಚುಕಡಿಮೆ ಇಂಥವೇ ಸಣ್ಣ ಸಣ್ಣ ಆಸೆ ಕನಸು ಕನವರಿಕೆ ಇತ್ಯಾದಿಗಳು. ದೊಡ್ಡ ದೊಡ್ಡ ಕನಸುಗಳು? ಅವುಗಳೊಂದಿಗೆ ರಾಜಿ ಮಾಡಿಕೊಂಡು ಯಾವುದೋ ಕಾಲವಾಗಿದೆ. ಅವೆಲ್ಲ ದೀಪಾವಳಿ ಬಟ್ಟೆ ಖಾತ್ರಿಯಿದ್ದವರಿಗೆ ಮಾತ್ರ ಸಲ್ಲುವಂಥ ಕನಸುಗಳಂತ ನಿರ್ಧರಿಸಿ ಸುಮ್ಮನಾಗಿ ಬಿಟ್ಟಿದ್ದಾರೆನಿಸುತ್ತೆ.
ನೌಕರಿಯೇನು ಅವಲತ್ತುಕೊಂಡರೆ ಬಂದುಬಿಡುತ್ತಾ? ರಕ್ತವನ್ನೇ ಸುರಿಸಬೇಕು. ಲಕ್ಷಾನುಗಟ್ಟಲೆ ಜನರಿರುತ್ತಾರೆ ಇರುವ ಸಾವಿರದಿಪ್ಪತ್ತು ನೌಕರಿಗಳಿಗೆ(ನೌಕರಿಗಳು ಈಗಾಗಲೆ ಬೀಕರಿಯಾಗಿರುತ್ತವೆ ಎಂಬ ಸುದ್ದಿ ಬೇರೆ ಕಂಗಾಲಾಗಿಸುತ್ತಿದೆ) ಡಾರ್ವಿನ್ನನ ‘ಉಳಿವಿಗಾಗಿ ಹೋರಾಟ’ ಮತ್ತು ‘ಬಲಿಷ್ಟರ ಉಳಿವು’ ಥಿಯರಿಗಳಿಗೆ ಪಕ್ಕಾ ಉದಾಹರಣೆಯಿದು. ಎಲ್ಲ ಗೋಳು, ಕಷ್ಟ, ಸಂಕಟಗಳು ಸ್ಪೂತರ್ಿಗಳಾಗಬೇಕೇ ಹೊರತು ಸಮಯ ಕೊಲ್ಲುವ ಚಿಂತೆಗಳಾಗಬಾರದು. ಕಣ್ಣು ನೋಯೋವರೆಗೂ ಓದಬೇಕು, ಬೆರಳು ಸವೆಯೋವರೆಗೂ ನೋಟ್ಸು ಮಾಡಕೊಳ್ಳಬೇಕು, ಕ್ಲಿಷ್ಟಕರ ವಿಷಯಗಳನ್ನು ಅರ್ಥಮಾಡಿಕೊಳ್ಳಬೇಕು, ನೆನಪಿಟ್ಟುಕೊಳ್ಳಬೇಕು, ದಿನ ದಿನಕ್ಕೂ ಅಪ್ಡೇಟ್ ಆಗಬೇಕು… ಮಡಿಯದೆ ಬದುಕಿ ಉಳಿಯಲು ಹಲ್ಲು ಕಚ್ಚಿಕೊಂಡು ಹೋರಾಡದೆ ಬೇರೆ ಆಯ್ಕೆಗಳಿಲ್ಲ.
ಎಲ್ಲ ಕಾಂಪಿಟೇಟಿವ್ ಜೀವಗಳಿಗೆ ಶುಭವಾಗಲಿ. .






super manju….
ನಿಮ್ಮ ಬರಹ ಚೆನ್ನಾಗಿದೆ ಸರ್,
ತುಂಬಾ ಧನ್ಯವಾದಗಳು
Houdu sankalpa bahalashtu kelasa madtidare.ene agali guri muttalebeku.fine write up.
puttu baraha super ide. eradu matilla. ettana B. se ettana barahavayya? secend jayant kaykini agbeku mattek? keep on write maga.