ಕವಿತೆಯೆಂದರೆ..
ಕೇಶವ ರೆಡ್ಡಿ ಹಂದ್ರಾಳ

ಎಂಬತ್ತೋ ಎಂಬತ್ತೊಂದನೆಯ ಇಸವಿ ಇರಬೇಕು . ನಾನಾಗ ಯೂನಿವರ್ಸಿಟಿಯಲ್ಲಿ ಸ್ನಾತಕೋತ್ತರ ಓದುತ್ತಿದ್ದೆ . ಬಂಡಾಯ ಸಾಹಿತ್ಯ ಚಟುವಟಿಕೆ ಉತ್ತುಂಗದಲ್ಲಿದ್ದ ಕಾಲ . ನಾನೂ ಪದ್ಯಗಳನ್ನು ಬರೆಯುತ್ತಿದ್ದೆ . ಎಂ ಎ ಓದುತ್ತಿರುವಾಗಲೇ ನನ್ನ ‘ ನನ್ನ ಕ್ರಾಂತಿಯ ಹುಡುಗಿ ‘ ಎನ್ನುವ ಕವನ ಸಂಕಲನ ಬಿಡುಗಡೆಯಾಗಿತ್ತು . ಆದರೆ ಕಾವ್ಯ ಕೈ ಹಿಡಿಯಲಿಲ್ಲ . ಬದಲಾಗಿ ಕಥನ ಕನ್ಯೆ ಬಲವಾಗಿ ತಬ್ಬಿಕೊಂಡಳು .

ಆ ವರ್ಷ ಉಗಾದಿಗೆ ಆಕಾಶವಾಣಿಯಲ್ಲಿ ಕವಿತೆ ವಾಚಿಸಲು ನನಗೂ ಕರೆ ಬಂದಿತ್ತು . ನಾನು ‘ನಿಂಗಜ್ಜಿಯ ಉಗಾದಿ ‘ ಎಂಬ ಕವನದೊಂದಿಗೆ ಹೋಗಿದ್ದೆ . ಬಡವಿ ನಿಂಗಜ್ಜಿ ಉಗಾದಿ ಹಬ್ಬದಂದು ಹಬ್ಬ ಮಾಡದೆ ಸಂಕಟಪಡುವುದನ್ನು ಕವಿತೆಯಲ್ಲಿ ಚಿತ್ರಿಸಲಾಗಿತ್ತು . ವ್ಯವಸ್ಥೆ ಮತ್ತು ಸರ್ಕಾರದ ವಿರುದ್ಧ ಕೂಡ ಧ್ವನಿಯಿತ್ತು . ಇವೊತ್ತಿನ ಬಲು ದೊಡ್ಡ ಹೆಸರು ಪಡೆದ ಬಂಡಾಯ ದಲಿತ ಕವಿಗಳೂ ಬಂದಿದ್ದರು . ಅವರ ಕವಿತೆಯಲ್ಲೂ ಸರ್ಕಾರದ ವಿರುದ್ಧ ಧ್ವನಿಯಿತ್ತು . ಆಕಾಶವಾಣಿಯವರು ಅಂಥ ಸಾಲುಗಳನ್ನು ತೆಗೆದು ಪುನಃ ಕವಿತೆ ಬರೆಯಲು ನನಗೆ ಮತ್ತು ಆ ಕವಿ ಮಹಾಶಯರಿಗೆ ಹೇಳಿದ್ದರು . ನನಗೆ ಸಾಧ್ಯವಾಗಲಿಲ್ಲ .ಆ ಕವಿಪುಂಗವರು ಶರಟಿನ ತೋಳು ಮಡಚುತ್ತಾ ‘ ರೆಡ್ಡಿಯವರೆ ಐವತ್ತು ರೂಪಾಯಿ ಬರ್ತದೆ ಯಾಕೆ ಬಿಡಬೇಕು.. ‘ ಎಂದು ಕವಿತೆಯ ಸಾಲುಗಳನ್ನು ಬದಲಾಯಿಸಿ ಆಕಾಶವಾಣಿಯಲ್ಲಿ ವಾಚಿಸಿ ಬಂದಿದ್ದರು . ನಾನು ಹಾಗೆ ಮಾಡದೆ ವಾಪಸ್ಸು ಬಂದಿದ್ದೆ . ಆ ಸಮಯದಲ್ಲಿ ಆ ಮಹಾ ಕವಿಗಳಿಗೆ ಸಂಬಳವೂ ಬರುತ್ತಿತ್ತು .! ಏಕೋ ನೆನಪಾಯಿತು , ಬರೆದೆ . ಇಂಥ ಅನೇಕ ಘಟನೆಗಳನ್ನು ಮೊದಲಿನಿಂದಲೂ ನೇರವಾಗಿ ಹೇಳುವುದರಿಂದ ಸಾಹಿತ್ಯ ಅಕಾಡೆಮಿಗಳು ,ಕವಿಗಳು , ಸಾಹಿತಿಗಳು ನನ್ನಿಂದ ಅಂತರ ಕಾಪಾಡಿಕೊಳ್ಳುತ್ತಾರೆ..ನನ್ನ ಪೂರ್ವ ಜನ್ಮದ ಪುಣ್ಯ ! ಬಂಡಾಯದ ಕಾವ್ಯ ಕನ್ನಿಕೆಯೂ ನನ್ನ ಹತ್ತಿರ ಸುಳಿಯುವುದಿಲ್ಲ !! ಈಗೀಗ ಪ್ರತಿನಿತ್ಯ ಸ್ನಾನ ಮಾಡಿ ಸೆಂಟೂ ಹಾಕಿಕೊಳ್ಳುತ್ತೇನೆ ಬಂಡಾಯದ ಕಾವ್ಯ ಕನ್ನಿಕೆಯನ್ನು ಸೆಳೆಯಲು !!!






ನಿಮ್ಮ ನಿಲುವು ನನಗೆ ಇಷ್ಟವಾಯಿತು ಸರ್.