
ಸುಧಾ ಆಡುಕಳ
ಬಂಜರಾದ ಭೂಮಿಯಲ್ಲಿ
ದಿಕ್ಕೆಟ್ಟು ನಿಂತಿದ್ದೆ
ನೀನೊಂದು ಮಾಯಕದ ಬೀಜವ
ತಂದು ನನ್ನ ಕೈಗಿಟ್ಟೆ
ಹೂ ಬಿಟ್ಟಾಗಲೇ ತಿಳಿದದ್ದು
ಅದು ಕವಿತೆಯ ಗಿಡವೆಂದು
ಎಂಥ ಗವ್ವೆನ್ನುವ ಏಕಾಂತ!
ನನ್ನ ಬಿಸಿಯುಸಿರೇ ನನ್ನ ಸುಡುತ್ತಿತ್ತು
ತಂಗಾಳಿಯಂತೆ ಬಂದಳು ಕವಿತೆ
ಮತ್ತೀಗ ನಿತ್ಯ
ಅವಳ ದಿವ್ಯ ಸಂಗಾತ
ಒಂದಿಷ್ಟು ಬಹಿಷ್ಕತ ಕನಸುಗಳಿದ್ದವು
ಬಯಲಾದರೆ ಬೆತ್ತಲಾಗುವ ಭಯ
ನಾನದನ್ನು ಕವಿತೆಯೊಳಗೆ ಹುದುಗಿಟ್ಟೆ
ಕವಿತೆಯೀಗ ನನ್ನ ತವನಿಧಿಯ
ಕಾಯುವ ದಿಟ್ಟೆ!
ಎಂಥ ಸಂಗಾತಿ ಈ ಕವಿತೆ!
ನಾನು ನೊಂದರೆ ಪದವಾಗುತ್ತಾಳೆ
ನಾನು ನಕ್ಕರೆ ಸಾಲುಗಳಾಗುತ್ತಾಳೆ
ಸುತ್ತೆಲ್ಲ ಸುಖದ ಪರದೆಯ ಕಟ್ಟಿ
ನನ್ನ ಪಹರೆ ಕಾಯುತ್ತಾಳೆ
ಮಾಯಗಾತಿ ಈ ಕವಿತೆ
ಯಾರ ಜಪ್ತಿಗೂ ಸಿಗಳು
ಪ್ರೀತಿಯಿಂದ ಕರೆದರೆ ಎದೆಯ
ದನಿಯಾಗಿ ಬರುವಳು





ಆಹಾ ಕವಿತೆ…
ಮನದ ಮಾತುಗಳ ಕಾದು ಕೂತೆ
ನಿಷಿದ್ಧಗಳ ಜಪ್ಪಿಸಿಕೊಳುವ ಪರಮಾಪ್ತೆ..
ಒಬ್ಬ ಸುಧಾಳ ಮಾತು ದಾಖಲಿಸಿದ್ದಾರೆ ಇನ್ನೊಬ್ಬ ಸುಧಾ…
ಥ್ಯಾಂಕ್ಯೂ ಸುಧಾ…
ಚೆಂದ ಕವಿತೆ. ಉಡಿಯಲ್ಲಿ ಮುಚ್ಚಿಟ್ಟ ಕನಸುಗಳು ಅರಳುವುದೇ ಕವಿತೆಯಾಗಿ….
ತುಂಬಾ ಚೆನ್ನಾಗಿದೆ ಕವಿತೆ