ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಳೆದು ಹೋದ ಅಮ್ಮ..

ವಿಜಯಶ್ರೀ ಎಂ ಹಾಲಾಡಿ

**

ಅವಳಿಗೆ ಭಾಸವಾಗುತ್ತದೆ 

ತನ್ನ ನಗುವಲ್ಲಿ

ಮುತ್ತಜ್ಜಿ ಬೆರೆತಂತೆ

ದೊಡ್ಡಮ್ಮ ಚಿಕ್ಕಮ್ಮಂದಿರು

ಕಣ್ಣೊಳಗೆ ಅಡಗಿದಂತೆ

ಲೇಖನಿಯಲ್ಲಿ ಅಜ್ಜಿಯೇ

ಬೆರೆತು ಬರೆದಂತೆ

ಮುಂಗುರುಳ ಹಿಂದೆ ತಳ್ಳಿ

ಅಮ್ಮ ಗೆಲುವಾದಂತೆ

ಅಮ್ಮ ಇರುವ ತನಕ

ಹೇಳುತ್ತಲೇ ಇದ್ದಳು

ಎಳೆ ವಿಧವೆ ಅಜ್ಜಿಯ

ಹೊರೆಕೂದಲ ಹೆರೆದು ಹಾಕಿದ್ದು

ಮುತ್ತಜ್ಜಿಗೆ ಅವಳ ಗಂಡ 

ತುಳಿದು ಅಲ್ಲೇ ಗಡ್ಡೆಯೆದ್ದು

ಕ್ಯಾನ್ಸರಿಗೆ ತಿರುಗಿ ತೀರಿಹೋದದ್ದು

ದತ್ತುಮಗುವನ್ನು ಕಿತ್ತುಕೊಂಡರೆಂಬ

ಕೊರಗಿನಲ್ಲೇ ದೊಡ್ಡಮ್ಮ 

ಹುಚ್ಚಿಯಾದದ್ದು

ಪ್ರೀತಿ ಮಾಡಿ ಮೋಸ ಹೋಗಿ

ಚಿಕ್ಕಮ್ಮ ಕೆರೆಯಲ್ಲಿ ಹೆಣವಾದದ್ದು;

ಬಸುರಿ ಬಾಣಂತಿ ಅಥವಾ ಮುಟ್ಟು

ಇಷ್ಟರಲ್ಲೇ ಕಳೆದುಹೋದ ಅಮ್ಮನೂ

ಗೂರುಬ್ಬಸ ಹಿಡಿದು ಇನ್ನಿಲ್ಲವಾದವಳೇ

ಅಮ್ಮ ಎಚ್ಚರಿಸುತ್ತಿದ್ದಳು

ಮರೆಯಬೇಡ ಮಗಳೇ

ಅಜ್ಜಿಯದೇ ರೂಪ ನಿನಗೆ

ದೊಡ್ಡಮ್ಮನ ಜಾಣ್ಮೆ

ಮುತ್ತಜ್ಜಿಯಂತೆ ಕೆಲಸಗಾತಿ

ಕಥೆ ಕಾವ್ಯ ಚಿಕ್ಕಮ್ಮನ ಬಳುವಳಿ

ಈಗಿಲ್ಲದವರು ಇದ್ದಾರೆ ನಿನ್ನಲ್ಲೆ..

ಬರುತ್ತಾರೆ ಅವರೆಲ್ಲ

ಅವಳ ಕನಸಿಗೆ

ಅಮ್ಮನೊಂದಿಗೆ

ಹೆದರಬೇಡ ಮಗುವೇ

ಅಳಬೇಡ ನಮ್ಮಂತೆ

ನಗು

ಸಂಭ್ರಮಿಸು

ನಿನ್ನ ಪಾಡಿಗೆ ಹಾಡಿಕೋ

ನರ್ತಿಸು

ಬದುಕಿ ಬಾಳು

ಹರಸುತ್ತಾರೆ!

‍ಲೇಖಕರು Admin MM

16 May, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading