ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಳೆದದ್ದು…

ರೇಖಾ ಹೆಗಡೆ

ಎಲ್ಲಿ ಹೋಯಿತು ಅದು
ಸಣ್ಣ ಸುಳಿವೂ ಕೊಡದೆ…
ಇಲ್ಲೇ ಎಲ್ಲೋ ಇತ್ತು…
ನಾನೂ ಮರೆತುಬಿಟ್ಟಿದ್ದೆ…
ಹುಡುಕಿದರೀಗ ಪತ್ತೆಯೇ ಇಲ್ಲ,
ಮಾಯ!

ಹರಕಂಗಿ, ತರಕಾರಿ ಸಿಪ್ಪೆ ಜೊತೆ
ಕಸವಾಗಿ ಕೊಳೆಯಿತೆ
ಸಿಂಕಿಗೆ ಹಾಕಿ ತಿಕ್ಕಿ ತಿಕ್ಕಿ ತೊಳೆದ
ಕಟು ದ್ರಾವಣದಲ್ಲಿ ಕರಗಿತೆ
ಬಿಸಿಲಿಗೆ ಬಾಡಿ ಒಣಗಿತೆ
ಹನಿ ನೀರಿಲ್ಲದೇ ಬರಡಾಯ್ತೆ

ಕಾಲಿಗೆ ಚಕ್ರ ಕಟ್ಟಿ
ಮನೆ ಊರು ದೇಶ ಬದಲಿಸುತ್ತ
ತಿರುತಿರುಗುವಾಗ ತಪ್ಪಿಸಿಕೊಂಡಿತೆ
ಲಗೇಜು ಜಾಸ್ತಿ ರ‍್ಕೌಟ್ ಆಗಲ್ಲ
ಎಂದು ಅವರಿವರಿಗೆ
ಹಂಚಿದುದರಲ್ಲಿ ಸೇರಿಹೋಯ್ತೆ

ಇಲ್ಲಾ
ಮಕ್ಕಳ ಹೊಕ್ಕಳಬಳ್ಳಿ ಹುಗಿಯುವಾಗ
ಹೂ ಗಂಧ ಅಕ್ಷತೆ ಜೊತೆ
ಹೂತು ಮರೆತಿರಬಹುದೆ
ಕತ್ತಿಗೆ ತಾಳಿ ಬೀಳುವ ಮುನ್ನಾದಿನ
ಅಪ್ಪನ ಮನೆ ಮಹಡಿಯಲಿ ಎತ್ತಿಟ್ಟ
ಹಳೆ ಟ್ರಂಕಿನಲಿ ಮುಗ್ಗುತ್ತಿರಬಹುದೆ

ಹೊಳೆ ದಾಟುವಾಗ ಕೈಜಾರಿತೆನಲು
ದುಷ್ಯಂತ ಕೊಟ್ಟ ಉಂಗುರವೇನಲ್ಲ
ಕೊಳಕು ದೃಷ್ಟಿ ಹುಳುಕು ನಾಲಿಗೆಗೆ ಹೆದರಿ
ಗುಟ್ಟಾಗಿ ತೇಲಿಬಿಟ್ಟ ಕೂಸಲ್ಲ
ಅಕ್ಕರೆಯಿಂದ ಕಟ್ಟಿ ಮಟ್ಟು ಹಾಕಿದ
ನನ್ನೆದೆಯ ಹಾಡು ಅದು

ಯಾಕೋ ನೆನಪು ಮಸುಕಾಗುತ್ತಿದೆ
ಯಾವಾಗ ಎಲ್ಲಿ ಹೇಗೆ
ಕಳಕೊಂಡೆ ತಿಳಿಯುತ್ತಿಲ್ಲ…
ಕೈತಪ್ಪಿದ್ದು ಮಾತ್ರ ಖರೆ,
ನನಗಾಗಿ ನಾನು ಕಟ್ಟಿದ್ದ
ಸುಂದರ ಕನಸು

‍ಲೇಖಕರು Avadhi

29 May, 2021

1 Comment

  1. ಬದರಿನಾಥ ಪಳವಳ್ಳಿ

    ಕಳೆದದ್ದು… (ಅವಧಿಯಲ್ಲಿ)
    ಕವಿತೆ ಎಂಬುದು ಲಯ ತಪ್ಪದ ಮತ್ತು ಬೆಳಕ ತಾಕಿಗೆ ಹೊಳೆವ ವಜ್ರದ ಅಂಚು.
    ಈ ಕವಿತೆಯು ತನ್ನ ಹರಹು ವೈಶಾಲ್ಯದಿಂದ ನೆಚ್ಚಿಗೆಯಾಯಿತು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading