ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಲ್ಲು ಕರಗುವ ಸಮಯ

ಸರಯೂ

ಕಾದಿರುವೆ ನಿನಗಾಗಿ ಓ ನನ್ನ ಒಲವೆ

ಚಡಪಡಿಸುತಿದೆ ಮನವು ಈ ಮುನಿಸು ತರವೇ

 

ಕಳೆದ ದಿನಗಳ ನೆನಪು ಇಹವು ನೂರಾರು

ಒಂದಷ್ಟು ಕಹಿಯುಂಟು ಸಿಹಿ ಪಾಲೆ ಜೋರು

ಮನ ಬಯಸುತಿದೆ ನಿನ್ನ ಸಾನಿಧ್ಯವನ್ನೆ

ಮುನಿಸು ತೋರದೆ ನೀ ಬಳಿಗೆ ಬಾರೊಮ್ಮೆ .

click-kavite-shilabalike

ಜಡೆ ಬಿಲ್ಲೆ ನಾಗರವು ಮುತ್ತುಗಳ ಜೊತೆಗೆ

ನೆನಪುಗಳ ಜಡೆಯೊಂದ ಹೆಣೆದಿರುವೆ ವ್ಯಥೆಗೆ

ನಿನಗಾಗಿ ಕಾದಿರುವೆ ಶಿಲೆಯಾಗಿ ನಿಂದು

ಕಲ್ಲರಳಿ ಹೂವಾಗೋ ಸಮಯ ಬರುವುದೇ ಎಂದು.

 

ಕಹಿ ನೆನಪುಗಳನೆಲ್ಲ ಹಿಂದಕ್ಕೆ ಸರಿಸಿ

ಹೆರಳೊOದ ಹೆಣೆದಿರುವೆ ಸವಿ ನೆನಪ ಸ್ಮರಿಸಿ

ಸಿಂಗರಿಸಿ ಕಾದಿರುವೆ ಶಿಲೆಯಾಗಿ ನಿಂದು

ಕಲ್ಲರಳಿ ಹೂವಾಗೋ ಸಮಯ ಬಾರದೇ ಎಂದು.

 

ಪವಿತ್ರ

ಅರಳಿದ ಯೌವ್ವನವೊಂದು
ಗೆಜ್ಜೆಕಟ್ಟದೆ ನಿಂತಲ್ಲೆ ಕುಣಿಯುತ್ತಿದೆ
ಹೃನ್ಮನಗಳು ತಣಿಯುವಂತೆ

ಕೆತ್ತಿದ ಶಿಲ್ಪಿಯ ಕಣ್ಣುಗಳಲ್ಲಿನ
ಯಾವ ರಾಗದೊಳಗೆ
ಹಿಡಿತಗೊಂಡಿತ್ತೊ ಹೆಣಿಕೆಗಳು??

ಆ ಹೆಣಿಕೆಗಳ ಮಧ್ಯೆ ಈಗಲೂ
ಹಾದುಹೋಗುವ ಬೆರಳುಗಳು
ಸಂಮ್ಮೊಹನ ರಾಗದೊಂದಿಗೆ
ಮಿಳಿತಗೊಂಡಂತೆ ರೋಮಾಂಚನಗೊಳ್ಳುತ್ತವೆ

ಸಣ್ಣ ನಡುವಿನ ಕಡಲೀಗ ಸೆಳೆಯುತ್ತಿದೆ
ಜಲಪಾತಗಳಾಗಿ ಧುಮ್ಮಿಕ್ಕಿ ಹರಿಯುವ
ಎಲ್ಲ ನದಿಗಳನ್ನು ಜೀವಂತವಾಗಿಯೆ…

ಎಂದೂ ಮಾಸದ ಲಾವಣ್ಯದ ಗುರುತಾಗಿ
ಬಣ್ಣವಿಲ್ಲದ ಭಾವಶಿಲೆಯ ಆತ್ಮದೊಳಗೆ
ದಿನವೂ ಚಿಗುರುವುದೇನೋ
ಹೂವಿನಂತಹ ವಿಶ್ವಾಸ??

 

ನಂದಿನಿ ಎನ್

ಹುಡುಕುತ್ತಿದ್ದೇನೆ ಪೂರ್ತಿ ಪ್ರಜ್ಞೆಯಲಿ
ಜಡ ಕಟ್ಟದ ಸ್ಥಿರ ಚಿತ್ತ ಒಂದನ್ನ
ಸೂಕ್ಷ್ಮತೆಯಲ್ಲಿ ಸಾವಿರಾರು ಸಲ ಮಿಂದೆದ್ದ
ಅಜ್ಞಾತ ಗುಪ್ತ ಆ ಮನ

ಆಳದಲೆಲ್ಲೋ ಹೊಮ್ಮುವ ನಾದಸ್ವರ
ಏಕಾಗ್ರ ಅಜರ ಹಿರಿ ಬೇಲಿಯ ಸಾಂತ್ವನ
ನಾನು ನೀನೆನ್ನದ ನಿತ್ಯ ಮಿತಿ ಲಯದ
ಸೃಷ್ಟಿಯಾಗಾಧತೆಯಲ್ಲಿ ನನ್ನದೇ ಚೇತನ

‍ಲೇಖಕರು Admin

11 September, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading