ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಲಬುರ್ಗಿ ಹತ್ಯೆ ವಿರೋಧಿಸಲು ’ಧಾರವಾಡ್ ಚಲೋ’

ಡಾ  ಎಂ ಎಂ  ಕಲಬುರ್ಗಿ ಹತ್ಯಾ ವಿರೋಧಿ ಹೋರಾಟ ವೇದಿಕೆ, ಕರ್ನಾಟಕ

2
ಮಾನ್ಯರೆ,
ಜನಪ್ರಿಯ ಪ್ರಾಧ್ಯಾಪಕರೂ ಹಿರಿಯ ಸಂಶೋಧಕರೂ ಬಸವತತ್ವದ ಪ್ರತಿಪಾದಕರೂ ಆಗಿದ್ದ ಪ್ರೊ. ಎಂ.ಎಂ.ಕಲಬುರ್ಗಿಯವರ ಅಮಾನುಷ ಹತ್ಯೆಯಾಗಿ 15 ದಿನಗಳಾದವು. ಇದರ ಆಘಾತದಿಂದ ಕರ್ನಾಟಕದ ಜನತೆಯಿನ್ನೂ ಹೊರಬಂದಿಲ್ಲ. ಈ ಹತ್ಯೆಯನ್ನು ಖಂಡಿಸಿ ನಾನಾಬಗೆಯಲ್ಲಿ ಅವರು ತಮ್ಮ ಆಕ್ರೋಶ ಮತ್ತು ದುಃಖವನ್ನು ದಾಖಲಿಸುತ್ತಿರುವುದು ವರದಿಯಾಗುತ್ತಿದೆ. ಕರ್ನಾಟಕದಲ್ಲಿ ಲೇಖಕರ ಚಿಂತಕರ ಹತ್ಯಾಪರಂಪರೆ ಇರಲಿಲ್ಲ. ಇದೀಗ ಅದು ಉದ್ಘಾಟನೆಯಾದಂತಾಗಿದೆ.
ಲೇಖಕರ ಸಾವು ಮತ್ತು ಕೊಲೆಗಳನ್ನು ಸಂಭ್ರಮಿಸುವ ವಿಕೃತ ಮನೋಭಾವವನ್ನು ಹೊಸ ಸಮಾಜ ಕಟ್ಟುವ ಹೊಣೆ ನಿಭಾಯಿಸಬೇಕಾದ ತರುಣರಲ್ಲಿ ನಂಜಿನಂತೆ ಸೇರಿಕೊಂಡಿದೆ. ಈ ಮನೋಧರ್ಮವು ಮುಂದಿನ ದಿನಗಳಲ್ಲಿ ಯಾವೆಲ್ಲ ಹೊಸ ದುರಂತಗಳಿಗೆ ಕಾರಣವಾಗುವುದೊ ತಿಳಿಯದು. ಈ ಮನೋಧರ್ಮದಿಂದ, ಯು.ಆರ್. ಅನಂತಮೂರ್ತಿಯವರು ತಮ್ಮ ಕೊನೆಯ ದಿನಗಳನ್ನು ನೋವಿನಿಂದ ಕಳೆಯಬೇಕಾಯಿತು. ಡಾ. ಕಲಬುರ್ಗಿಯವರೂ ಕಳೆದ ಕೆಲವು ವರ್ಷಗಳಿಂದ ಇಂತಹ ಬೆದರಿಕೆ ನಿಂದೆಗಳಿಂದ ನೊಂದಿದ್ದರು. ಇದಕ್ಕೆ ಈ ಲೇಖಕರನ್ನು ನೋಯಿಸಿದವರು ಎಷ್ಟು ಕಾರಣರೊ, ಅವರನ್ನು ಏಕಾಂಗಿಯಾಗಿ ಬಿಟ್ಟ ನಾವೂ ಪರೋಕ್ಷವಾಗಿ ಕಾರಣರು.
ಈಗಲಾದರೂ ನಮ್ಮ ಲೇಖಕರ ಚಿಂತಕರ ಮೇಲೆ ಆರಂಭವಾಗಿರುವ ಅಸಭ್ಯ ಭಾಷೆಯ ನಿಂದೆ ಹಾಗೂ ಕೊಲೆಬೆದರಿಕೆಗಳನ್ನು ಪ್ರತಿರೋಧಿಸಬೇಕಿದೆ. ವೈಚಾರಿಕ ಭಿನ್ನಮತವನ್ನು ವಿಚಾರದ ಮೂಲಕವೇ ಎದುರಿಸುವ ಆರೋಗ್ಯಕರ ಪರಂಪರೆಯನ್ನು ನೆಲೆಗೊಳಿಸಬೇಕಿದೆ. ಕಲಬುರ್ಗಿಯವರ ಅಮಾನುಷವಾದ ಹತ್ಯೆಯನ್ನು ಖಂಡಿಸುವುದಕ್ಕಾಗಿ, ಲೇಖಕರ ಮೇಲೆ ಆರಂಭವಾಗಿರುವ ಹಲ್ಲೆಯನ್ನು ವಿರೋಧಿಸುವುದಕ್ಕಾಗಿ ನಾಡು ಒಗ್ಗೂಡಬೇಕಿದೆ. ಈ ದಿಸೆಯಲ್ಲಿ ನಾಡಿನ ಪ್ರಮುಖ ಚಿಂತಕರು ಲೇಖಕರು ಸಂಘಟನೆಗಳು ಸೇರುವ, ಬೃಹತ್ ಪ್ರತಿಭಟನಾ ರ‍್ಯಾಲಿ ಯನ್ನು ದಿನಾಂಕ 14-9-2014 ರಂದು ಬೆಳಿಗ್ಗೆ 10 ಕ್ಕೆ ಕಲಬುರ್ಗಿಯವರ ನೆತ್ತರು ಹರಿದ ಧಾರವಾಡದಲ್ಲೇ ಹಮ್ಮಿಕೊಳ್ಳಲಾಗಿದೆ.
ಬೇರೆ ಬೇರೆ ಜಿಲ್ಲೆಗಳಿಂದ ಸಾಹಿತಿಗಳು, ಚಿಂತಕರು, ಪ್ರಗತಿಪರ ಸಂಘಟನೆಯ ಪ್ರತಿನಿಧಿಗಳು `ಧಾರವಾಡ ಚಲೋ’ ಎಂಬ ಘೋಷಣೆಯೊಂದಿಗೆ ಪ್ರತಿಭಟನಾ ರ‍್ಯಾಲಿಯಲ್ಲಿ ಭಾಗವಹಿಸುತ್ತಿದ್ದಾರೆ. ಇದಕ್ಕೆ ನಾಡಿನ ಎಲ್ಲ ಮೂಲೆಗಳಿಂದ ಹಿಂಸಾತ್ಮಕ ಕರ್ನಾಟಕದ ಕಲ್ಪನೆಯನ್ನು ಒಲ್ಲದ ಸಹನಶೀಲ ಕರ್ನಾಟಕದ ಕನಸು ಹೊತ್ತ ಸಮಸ್ತರೂ `ಹೋರಾಟದ ಸಾಗರಕ್ಕೆ ಸಾವಿರಾರು ನದಿ’ಗಳಂತೆ ಬರಬೇಕೆಂದು ವಿನಂತಿಸುತ್ತೇವೆ.
 

‍ಲೇಖಕರು G

12 September, 2015

1 Comment

  1. lakshmikanth itnal

    ನಿಜಕ್ಕೂ ಆಗವೇಕಾದ ಕೆಲಸ. ವ್ಯಕ್ತಿ ಸ್ವಾತ್ಂತ್ರ್ಯ, ಅಭಿವ್ಯಕ್ತಿ ಸಾವ್ತಂತ್ರ್ಯಗಳ ಹರಣ ಸಲ್ಲದು. ಇಂತಹ ಜನಜಾಗೃತಿಗಳಿಂದ ಇಂತಹ ಕೊಲೆಗಡುಕ ಮನಸ್ಸುಗಳು ಈಗಲಾದರೂ ಪರಿವರ್ತನೆ ಹೊಂದಲೆಂಬ ಆಶಾಭಾವ ನನ್ನದು. ಕಲಬುರ್ಗಿಯವರ ಆತ್ಮಕ್ಕೆ ಈ ಮೂಲಕ ನನ್ನಕಂಬನಿಗಳ ಶೃದ್ಧಾಂಜಲಿಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading