ಕರ್ನಾಟಕ ಸಂಗೀತದ ಮೂರ್ತಿಭಂಜಕ ಟಿ ಎಂ ಕೃಷ್ಣ

ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ಪ್ರತಿಷ್ಟಿತ ‘ಸಂಗೀತ ಕಲಾ ನಿಧಿ ಪುರಸ್ಕಾರ’ಕ್ಕೆ ಟಿ ಎಂ ಕೃಷ್ಣ ಅವರನ್ನು ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಅವಧಿಯಲ್ಲಿ ನಾ ದಿವಾಕರ್ ಹಾಗೂ ಬಿ ಕೆ ಸುಮತಿ ಅವರ ಭಿನ್ನ ಅಭಿಪ್ರಾಯಗಳನ್ನು ಪ್ರಕಟಿಸಿದ್ದೇವೆ.

ಇದೀಗ ಚಿಂತಕ ಮ ಶ್ರೀ ಮುರಳಿ ಕೃಷ್ಣ ಅವರ ಅಭಿಪ್ರಾಯ ಇಲ್ಲಿದೆ.

ನೀವೂ ನಿಮ್ಮ ಅಭಿಪ್ರಾಯವನ್ನು ಕಳಿಸಿಕೊಡಿ. [email protected]

ಮ ಶ್ರೀ ಮುರಳಿ ಕೃಷ್ಣ

**

ಕರ್ನಾಟಕ, ಹಿಂದೂಸ್ತಾನಿ, ಪಾಪ್‌, ಜಾಸ್‌, ರೆಗೆ(Reggae), ಫಂಕ್‌, ಮೆಟಲ್‌, ಬ್ಲೂಸ್‌, ಹಿಪ್-ಹಾಪ್‌, ಅರೆ-ಶಾಸ್ತ್ರೀಯ, ಸುಗಮ, ಜಾನಪದ, ಗಾನ(ತಮಿಳು, ಚೆನೈನ ಸ್ಲಂಗಳಲ್ಲಿ ಉದಯ) ಸಿನಿಮಾ ಅಥವಾ ಇನ್ಯಾವುದೇ ಸಂಗೀತವಿರಲಿ, ಅವು ಕೇಳುಗರ ಮೇಲೆ ಸಂಮೋಹನವನ್ನು ಬೀರುತ್ತಿರುತ್ತವೆ.  ಸಂಗೀತ ಲೋಕದಲ್ಲಿ ಭಾವಪರವಶರಾಗಿ ರಸಾಸ್ವಾದನೆಯಲ್ಲಿ ಮೀಯುತ್ತ ಸಾಗುವ ರಸಿಕರು ಮತ್ತೊಂದು ಲೋಕದಲ್ಲಿ ತಾತ್ಕಾಲಿಕವಾದರೂ ವಿಹಾರಿಗಳಾಗುತ್ತಾರೆ.  ನಂತರ ಮೆಲುಕು ಹಾಕುತ್ತಿರುತ್ತಾರೆ.  ರಾಗ, ತಾಳ, ನೋಟೇಶನ್ಸ್‌ ಅಥವಾ ಇನ್ಯಾವುದೇ ತೆರನಾದ ಜ್ಞಾನವಿರದಿದ್ದರೂ ಸಂಗೀತವನ್ನು ಆಸ್ವಾದಿಸಬಹುದು ; ಆಸ್ವಾದಿಸುತ್ತಾರೆ ಕೂಡ.

ಆದರೆ ಸಂಗೀತಗಾರರ ವಿಷಯಕ್ಕೆ ಬಂದರೇ, ಅವರ ನಡುವೆ ನಾನಾ ಬಗೆಯ ಕಂದರಗಳು ಇರುತ್ತವೆ.  ಜಾತಿ, ಮತ, ಪಂಥ, ಘರಾನ, ಮುಂತಾದವುಗಳ ನಡುವೆ ಭೇದಗಳು ಢಾಳಾಗಿ ಅಥವಾ ಮುಸುಕಿನಡಿಯಲ್ಲಿ ಜನ್ಮತಾಳಿ ತಮ್ಮ ಛಾಯೆಯನ್ನು ಬೀರುತ್ತಿರುತ್ತವೆ.  ಶಾಸ್ತ್ರೀಯ ಸಂಗೀತದಲ್ಲಿ ಸಂಪ್ರದಾಯಶರಣತೆಗೆ ಮಣೆಯನ್ನು ಹಾಕಲಾಗುತ್ತದೆ.  ಸಂಪ್ರದಾಯದಿಂದ ಆಚೀಚೆ ಸರಿದರೇ ಶುರುವಾಗುತ್ತದೆ ಕವಣೆಯ ಕಲ್ಲು, ಬಾಣ, ಈಟಿ, ಕತ್ತಿಗಳ ಹೊಡೆತಗಳು. ಇವು ದಕ್ಷಿಣಾದಿ ಸಂಗೀತದಲ್ಲಿ ಹಿಂದೆಯೂ ಇತ್ತು.  ಆದರೆ ಇತ್ತೀಚಿನ ವರ್ಷಗಳಲ್ಲಿ, ಅದೂ ತೋಡೂರು ಮದಬುಸಿ ಕೃಷ್ಣರ ವಿಷಯದಲ್ಲಿ ಅನೇಕ ಪ್ರಹಾರಗಳಾಗಿವೆ!

ಪ್ರಸ್ತುತ ಟಿ ಎಂ ಕೃಷ್ಣ ಅವರಿಗೆ ಮದ್ರಾಸ್‌ ಸಂಗೀತ ಅಕಾಡೆಮಿ ಸಂಗೀತ ಕಲಾನಿಧಿ ಪ್ರಶಸ್ತಿಯನ್ನು ನೀಡಿದೆ.  ಇದು ಅನೇಕ ವಿವಾದಗಳಿಗೆ ಗುರಿಯಾಗಿದೆ.  ಈ ಅಕಾಡೆಮಿ ಮತ್ತು ತಮಿಳುನಾಡು ಸಂಗೀತ ಚರಿತ್ರೆಯ ಪುಟಗಳನ್ನು ತಿರುಗಿಸಿದರೇ, ಅವು ನಡೆದ ಬಂದ ಹಾದಿಯ ಬಗೆಗೆ ಬೆಳಕನ್ನು ಚೆಲ್ಲುತ್ತದೆ.  1928ರಲ್ಲಿ ನಮ್ಮ ಸ್ವಾತಂತ್ರ್ಯ ಸಂಗ್ರಾಮ ತನ್ನ ಕಾವನ್ನು ಪಡೆಯುತ್ತಿದ್ದ ಸಂದರ್ಭದಲ್ಲಿ ಅಕಾಡೆಮಿಯ ಸ್ಥಾಪನೆಯಾಯಿತು.  ಅದರ ಹಿಂದಿನ ವರ್ಷದಲ್ಲಿ ಕಾಂಗ್ರೆಸ್‌ ಪಕ್ಷ ಮದ್ರಾಸಿನಲ್ಲಿ ನಡೆಸಿದ ಅಧಿವೇಶನದಲ್ಲಿ ಸಂಜೆಯ ಸಮಯ ಪ್ರತಿನಿಧಿಗಳಿಗಾಗಿ ಕರ್ನಾಟಕ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿತ್ತು.  ಇದು ಗಾಂಧೀಜಿಯವರ ದೇಶಿ ಕಲೆಗಳನ್ನು ಬೆಂಬಲಿಸಿ, ಅವುಗಳನ್ನು ಬೆಳೆಸುವ ಆಲೋಚನೆಯ ವಿಸ್ತರಣೆಯಾಗಿತ್ತು.  ಅಂದಿನಿಂದ ಇಂದಿನವರೆಗೂ ಈ ಅಕಾಡೆಮಿಯ ಪ್ರಮುಖ ಸ್ಥಾನಗಳನ್ನು ಬ್ರಾಹ್ಮಣರೇ ಹೊಂದಿದ್ದಾರೆ. ಅಲ್ಲದೆ, ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಮುಂಚಿನಿಂದಲೂ ಬ್ರಾಹ್ಮಣರೇ ಮುಂಚೂಣಿಯಲ್ಲಿದ್ದಾರೆ!

ಆ ಕಾಲದಲ್ಲಿ ನಾದಸ್ವರ ವಿದ್ವಾಂಸರಿಗೆ ಕಚೇರಿಗಳಲ್ಲಿ ಭಾಗವಹಿಸಲು ಅವಕಾಶವಿರಲಿಲ್ಲ.  ಅವರಲ್ಲಿ ಅನೇಕರು ನಮ್ಮ ಶ್ರೇಣೀಕೃತ ಸಮಾಜದ ಕೆಳಸ್ತರದ ಜಾತಿಯವರಾಗಿದ್ದರು ಹಾಗೂ ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿ ನೆಲೆಸಿದ್ದರು.  ಸಂಗೀತ ಅಕಾಡೆಮಿಯಲ್ಲೂ ಅದೇ ಪರಿಸ್ಥಿತಿಯಿತ್ತು. ಇದೇ ರೀತಿ ಸುಬ್ರಹ್ಮಣ್ಯ ಭಾರತಿ, ಪಾಪನಾಸಂ ಶಿವಂ ಮುಂತಾದವರು ಬರೆದ ತಮಿಳು ಹಾಡುಗಳು, ಅಷ್ಟೇಕೇ ಕರ್ನಾಟಕ ಸಂಗೀತದ ತಮಿಳು ಹಾಡುಗಳು ಕೂಡ ಕಚೇರಿಗಳ ಕೊನೆಯಲ್ಲಿ ಹಾಡಲಾಗುತ್ತಿತ್ತು.  ಅಂತಹ ಹಾಡುಗಳನ್ನು ʼ ತುಕ್ಕಡ ʼ ಎಂದು ಕರೆಯಲಾಗುತ್ತಿತ್ತು.  ತುಂಬ ಮಡಿವಂತ ಶೋತೃಗಳು ʼ ತುಕ್ಕಡ ʼ ಹಂತ ತಲುಪಿದಾಗ ಸಭಾದಿಂದ ಹೊರನಡೆಯುತ್ತಿದ್ದರು. ಇವೆಲ್ಲ ಕರ್ನಾಟಕ ಸಂಗೀತ ವಲಯದಲ್ಲಿದ್ದ ಕರ್ಮಠ ಎಂದು ಕರೆಯಬಹುದಾದ ಕೆಲವು ಸಂಗತಿಗಳಾಗಿದ್ದವು.  ಆದರೆ ಕಾಲಕ್ರಮೇಣ ಅ ಅಕಾಡೆಮಿ ಮತ್ತು ಇತರ ಸಭಾಗಳಲ್ಲಿ ನೂತನ ಪ್ರಯತ್ನಗಳಿಗೆ ಅವಕಾಶವನ್ನು ಕಲ್ಪಿಸಲಾಯಿತು.

ಅಮೆರಿಕಾ ಮೂಲದವರಾಗಿದ್ದ ಜಾನ್‌ ಹಿಗ್ಗಿನ್ಸ್‌ ಒಬ್ಬ ಗಾಯಕ, ವಿದ್ವಾಂಸ ಮತ್ತು ಶಿಕ್ಷಕರಾಗಿದ್ದರು.  ಕರ್ನಾಟಕ ಸಂಗೀತದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡು ಸಾಧನೆಯನ್ನು ಮಾಡಿದ್ದರು.  ಅವರನ್ನು “ ಹಿಗ್ಗಿನ್ಸ್‌ ಭಾಗವತರ್‌ “ ಎಂದೇ ಕರೆಯಲಾಗುತ್ತಿತ್ತು.  ಅವರು ಉಡುಪಿಯ ಶ್ರೀಕೃಷ್ನ ದೇಗುಲದ ಮುಂದೆ ನಿಂತು ʼ ಕೃಷ್ಣ ನೀ ಬೇಗನೆ ಬಾರೊ ʼ ಹಾಡನ್ನು ಹಾಡಿದ್ದರು! ಚೊಂಗ್‌ ಚ್ಯೂ ಸೆನ್‌ ಎಂಬ ಚೀನಾ ಮೂಲದ ಮಲೇಷ್ಯದ ಕರ್ನಾಟಕ ಸಂಗೀತಗಾರರಿದ್ದಾರೆ. ಅವರು ಇತರ ಕೆಲವು ಶಿಕ್ಷಕರ ಜೊತೆ ಪ್ರಸಿದ್ಧ ವಿದ್ವಾಂಸೆ ಡಿ ಕೆ ಪಟ್ಟಮ್ಮಾಳ್‌ ಅವರ ಬಳಿ ಕೂಡ ಸಂಗೀತವನ್ನು ಕಲಿತಿದ್ದಾರೆ. ಪಟ್ಟಮ್ಮಾಳ್‌ ಅವರು ಚೊಂಗ್‌ ಅವರನ್ನು ʼ ದೈವ ಮೊಮ್ಮಗ ʼ ಎಂದು ಬಾವಿಸಿ , ಅವರಿಗೆ ʼ ಸಾಯಿ ಮದನ ಮೋಹನ ಕುಮಾರ್‌ ʼ ಎಂದು ಹೆಸರಿಸಿದ್ದರು ಕೂಡ.  ಅವರು ಹಾರ್ಮೋನಯಂ ಕೂಡ ನುಡಿಸಬಲ್ಲರು.  ಅವರು ಹಾಡುವ ʼ ಮಹಾ ಗಣಪತಿಂʼ ಜನಪ್ರಿಯವಾಗಿದೆ.

ನಮ್ಮಲ್ಲಿ ಅನೇಕ ರಸಿಕರು, ನಮ್ಮ ಯಾವುದೇ ಕಲಾಪ್ರಕಾರವನ್ನು ವಿದೇಶಿಯರು ಕಲಿತು ತಮ್ಮ ಪ್ರತಿಭೆ, ಸಾಮರ್ಥ್ಯಗಳನ್ನು ಪ್ರದರ್ಶಿಸಿದರೇ ಕೊಂಡಾಡುತ್ತಾರೆ.  ಅದೇ ಟಿ ಎಂ ಕೃಷ್ಣರಂತಹ ಪ್ರತಿಭಾವಂತ ವಿದ್ವಾಂಸರು ಮೀನುಗಾರರ ಕಾಲೋನಿಗಳಲ್ಲಿ ಹಾಡಿದರೇ, ಪೆರುಮಾಳ್‌ ಮುರುಗನ್‌ ಜೊತೆ ಕೆಲಸ ಮಾಡಿದರೇ, ʼ ತಖಿಯಾʼ(ಮುಸಲ್ಮಾನರು ಧರಿಸುವ ಸ್ಕಲ್‌ ಕ್ಯಾಪ್) ಧರಿಸಿ  ʼ ಸಲಾತುಲ್ಹ ಸಲಾಮುಲ್ಹ ʼ ಹಾಡನ್ನು ಹಾಡಿದರೇ, ಮುಂಬೈನ ಅಫ್ಗಾನ್‌ ಚರ್ಚ್ನಲ್ಲಿ ತಾಳವಾದ್ಯ ಕಚೇರಿ ನಡೆಸಿದರೇ, ʼ ಸಿಂದಿಕ್ಕ ಸೊನ್ನವರ್‌ ಪೆರಿಯಾರ್‌ ʼ(ಚಿಂತನೆ ಮಾಡಿ ಎಂದವರು ಪೆರಿಯಾರ್)‌ ಎಂಬ ಗೀತೆಯನ್ನು ಹಾಡಿದರೇ, ಟ್ರಾನ್ಸ್‌ಜೆಂಡರ್(ತೃತೀಯ ಲಿಂಗಿ) ಸಮುದಾಯದವರ ಸಂಗೀತ ಯಾನದಲ್ಲಿ ಜೊತೆಯಾದರೇ ಕರ್ನಾಟಕ ಸಂಗೀತ ವಲಯದಲ್ಲಿ ಹುಬ್ಬುಗಳು ಮೇಲೇರುತ್ತವೆ!

ಇತ್ತೀಚೆಗೆ ಅಯೋಧ್ಯೆಯಲ್ಲಿ ರಾಮಲಲ್ಲನ ಪ್ರಾಣಪ್ರತಿಷ್ಠಾಪನೆಯ ಸಂದರ್ಭದಲ್ಲಿ ಟಿ ಎಂ ಕೃಷ್ಣ ತ್ಯಾಗರಾಜರ ಕೃತಿ ʼ ನಡಚಿ ನಡಚಿ ʼಯನ್ನು ಹಾಡಿದರು! ಈ ಹಾಡಿನಲ್ಲಿ ತ್ಯಾಗರಾಜರು “ ಅಯೋಧ್ಯೆಗೆ ಜನರು ನಡೆದರು ; ನಡದೇ ನಡೆದರು, ಆದರೆ ರಾಮನನ್ನು ಕಾಣಲಿಲ್ಲ ಏಕೆಂದರೆ ರಾಮ ಅವರ ಹೃದಯಗಳಲ್ಲಿ ನೆಲೆಸಿದ್ದ “ ಎಂಬರ್ಥದ ಸಾಲುಗಳಿವೆ!

ಇವುಗಳೆಲ್ಲದರ ನಡುವೆ ಟಿ ಎಂ ಕೃಷ್ಣ ಒಬ್ಬ ಸೃಜನಶೀಲ ಹಾಡುಗಾರರಾಗಿ ಅನೇಕ ಪ್ರಯೋಗಗಳನ್ನು ಮಾಡುತ್ತ ಕರ್ನಾಟಕ ಸಂಗೀತದ ರಸಿಕರ ಮತ್ತು ವಿಮರ್ಶಕರ ಗಮನವನ್ನು ಸೆಳೆದಿದ್ದಾರೆ.  ʼ  ವಾಯ್ಸಸ್‌ ವಿತಿನ್‌ ಕರ್ನಾಟಿಕ್‌ ಮ್ಯೂಸಿಕ್ : ಪಾಸಿಂಗ್‌ ಆನ್‌ ಯಾನ್‌ ಇನ್ಹೆರಿಟೆಂಸ್ ʼ, ʼ ಎ ಸದರನ್‌ ಮ್ಯೂಸಿಕ್‌ : ಎಕ್ಸ್‌ಪ್ಲೋರಿಂಗ್ ಕರ್ನಾಟಿಕ್‌ ಟ್ರೆಡಿಷನ್‌ ʼ, ʼ ರೀಸೇಪಿಂಗ್‌ ಆರ್ಟ್‌ʼ, ʼ ಸೆಬಾಸ್ಚಿಯನ್‌ ಅಂಡ್‌ ಸನ್ಸ್‌ ʼ, ʼ ದಿ ಸ್ಪಿರಿಟ್‌ ಆಫ್‌ ಎಂಕ್ವೈರಿ : ನೋಟ್ಸ್‌ ಆಫ್‌ ಡಿಸ್ಸೆಂಟ್‌ ʼ ಎಂಬ ಪುಸ್ತಕಗಳನ್ನು ಬರೆದಿದ್ದಾರೆ. ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಎಲ್ಲ ಬಗೆಯ ಅಸಮಾನತೆಗಳನ್ನು ಗುರುತಿಸಿ, ಅವುಗಳ ವಿರುದ್ಧ ದನಿಯನ್ನು ಎತ್ತುತ್ತ ಬಂದಿದ್ದಾರೆ.

ಟಿ ಎಂ ಕೃಷ್ಣ ಅವರು ಸಂಗೀತಗಾರರಲ್ಲದೇ, ಒಬ್ಬ ಸಾಮಾಜಿಕ ಕಾರ್ಯಕರ್ತ, ಬರಹಗಾರ ಮತ್ತು ಸಾರ್ವಜನಿಕ, ಸಾವಯವ ಬುದ್ಧಿಜೀವಿ( Organic Intellectual ಎಂಬ ಪದವನ್ನು ಇಟಾಲಿಯ ಎಡಪಂಥೀಯ ಚಿಂತಕ ಆಂಟೋನಿಯೊ ಗ್ರಾಮ್ಷಿ  ತನ್ನ ʼಪ್ರಿಸನ್‌ ಡೈರಿ ʼ ಎಂಬ ಠಿಪ್ಪಣಿಯ ಪುಸ್ತಕದಲ್ಲಿ ಬರದಿದ್ದ)ಯಾಗಿ ತಮ್ಮ ಕೊಡುಗೆಗಳನ್ನು ನೀಡುತ್ತ ಬಂದಿದ್ದಾರೆ.  ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಅವರು ʼ ಸಾಮಾಜಿಕ ಪ್ರಜಾಪ್ರಭುತ್ವೀಕರಣʼ (Social Democratisation) ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ ಎನ್ನಬಹುದು.  ಇವೆಲ್ಲ ಸಂಗತಿಗಳ ಕಾರಣದಿಂದ ಅವರನ್ನು” ಕರ್ನಾಟಕ ಸಂಗೀತದ ಮೂರ್ತಿಭಂಜಕ “ ಎಂದು ಕರೆಯಬಹುದು !

‍ಲೇಖಕರು avadhi

April 2, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ramesh patil pattan

    ದೇವಾಲಯಗಳ ಮೂರ್ತಿಭಂಜಕ ಔರಂಗಜೇಬ್ ನೆನಪಾಗುತ್ತಿದೆ.
    ರಮೇಶ ಪಟ್ಟಣ ಕಲಬುರಗಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: