ಮೋಹನ, ಕಲ್ಯಾಣಿ , ಆನಂದಭೈರವಿ , ತೋಡಿ , ರೇವತಿಗಳ ಜಾತಿ ಹೇಳುವಿರಾ?

ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ಪ್ರತಿಷ್ಟಿತ ‘ಸಂಗೀತ ಕಲಾ ನಿಧಿ ಪುರಸ್ಕಾರ’ಕ್ಕೆ ಟಿ ಎಂ ಕೃಷ್ಣ ಅವರನ್ನು ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಅವಧಿಯಲ್ಲಿ ನಾ ದಿವಾಕರ್ ಹಾಗೂ ಬಿ ಕೆ ಸುಮತಿ ಅವರ ಭಿನ್ನ ಅಭಿಪ್ರಾಯಗಳನ್ನು ಪ್ರಕಟಿಸಿದ್ದೇವೆ.

ನೀವೂ ನಿಮ್ಮ ಅಭಿಪ್ರಾಯವನ್ನು ಕಳಿಸಿಕೊಡಿ. [email protected]

**

ಬಿ ಕೆ ಸುಮತಿ

**

ಮಾರ್ಚ್ ಹದಿನೆಂಟನೇ ತಾರೀಖು ಮದ್ರಾಸ್ ಮ್ಯೂಸಿಕ್ ಅಕಾಡೆಮಿ ಸಂಗೀತ ಕಲಾ ನಿಧಿ ಪುರಸ್ಕಾರಕ್ಕೆ ಕಲಾವಿದರಾದ ಟಿ ಎಂ ಕೃಷ್ಣ ಅವರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಿಸಿತು. ಕರ್ನಾಟಕ ಶಾಸ್ತ್ರೀಯ ಸಂಗೀತ ಲೋಕದಲ್ಲಿ ಒಂದು ಸಣ್ಣ ತರಂಗ ಎದ್ದಿತು. ಈ ತರಂಗದ ಪ್ರತಿನಿಧಿಗಳಾಗಿ ಗಾಯಕಿಯರಾದ ರಂಜನಿ ಮತ್ತು ಗಾಯತ್ರಿ ಅವರು ಈ ಪುರಸ್ಕಾರಕ್ಕೆ ಟಿಎಂ ಕೃಷ್ಣ ಅವರ ಆಯ್ಕೆ ಸರಿಯಾದುದಲ್ಲವೆಂದೂ, ಅದನ್ನು ತಾವು ಖಂಡಿಸುತ್ತೇವೆ ಎಂದೂ ಮದ್ರಾಸ್ ಸಂಗೀತ ಅಕಾಡೆಮಿಗೆ ಪತ್ರ ಬರೆದರು. ಅಷ್ಟೇ ಅಲ್ಲದೆ ತಾವು ಈ ಸಲ ಸಂಗೀತದ ಉತ್ಸವದಲ್ಲಿ ಹಾಡುವುದಿಲ್ಲ ಎಂದು ತಿಳಿಸಿದರು. ಮತ್ತು ತಾವು ಬರೆದ ಪತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು.

ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ಅಧ್ಯಕ್ಷರಾದ ಮುರಳಿ ಅವರು ಆಯ್ಕೆ ಸಮಂಜಸವಾಗಿದೆ ಎಂದು ತಿಳಿಸಿ ಟಿ ಎಮ್ ಕೃಷ್ಣ ಅವರು ಸಂಗೀತದ ಬಹುದೊಡ್ಡ ಸಾಧಕರು. ಬರಹಗಾರರು, ನೂತನ ಸಂಗೀತ ವಿಧಾನದ ಅವಿಷಾರ ಮಾಡಿದ್ದಾರೆ, ಸಾಮಾಜಿಕ ಸುಧಾರಣೆಯಲ್ಲಿ ಸಂಗೀತವನ್ನು ಅವರು ಬಳಸಿರುವುದು , ಸಂಗೀತಕ್ಕೆ ಯಾವುದೇ ಜಾತಿ ಮತ ಧರ್ಮಗಳ ಕಟ್ಟಳೆ ಇಲ್ಲವೆಂದೂ ಪ್ರತಿಪಾದಿಸಿದ್ದಾರೆ. ಈ ಎಲ್ಲ ಕಾರಣಗಳಿಂದ ಅವರನ್ನು ಈ ಬಾರಿಯ ಸಂಗೀತ ಕಲಾ ನಿಧಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ, ಇದರಲ್ಲಿ ಯಾವುದೇ ರೀತಿಯ ಅನುಮಾನಗಳಿಗೆ, ಆಕ್ಷೇಪಗಳಿಗೆ ಆಸ್ಪದವೇ ಇಲ್ಲ, ಕೆಲವು ಕಲಾವಿದರು ಈ ಬಗ್ಗೆ ಮಾತನಾಡುತ್ತಿರುವುದು ಅವರಲ್ಲಿ ಇರುವ ಅಸೂಯಾ ಮನೋಭಾವದಿಂದ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪತ್ರದ ಒಕ್ಕಣೆಯನ್ನು ಹಂಚಿಕೊಂಡ ರಂಜನಿ ಮತ್ತು ಗಾಯತ್ರಿ ಅವರಿಗೆ ನೇರವಾಗಿ ಪತ್ರ ಬರೆದು ಆ ಪತ್ರದಲ್ಲಿ ಈ ಆಕ್ಷೇಪಣೆಯು ದುರುದ್ದೇಶದಿಂದ ಕೂಡಿದೆ ಎಂದೂ ಒಬ್ಬರ ಏಳಿಗೆಯನ್ನು ಮತ್ತೊಬ್ಬರು ಸಹಿಸದ ಅಸೂಯಾ ಮನೋಭಾವವನ್ನು ಇದು ಒಳಗೊಂಡಿದೆ ಎಂದೂ ಹೇಳಿ, ರಂಜನಿ ಮತ್ತು ಗಾಯತ್ರಿ ಅವರು ಈ ಬಾರಿಯ ಉತ್ಸವದಲ್ಲಿ ಹಾಡದೆ ಇದ್ದರೂ ಅದು ಸ್ವಾಗತಾರ್ಹವೇ ಮತ್ತು ಅದು ಅವರ ಇಷ್ಟ ಎಂಬ ರೀತಿಯಲ್ಲಿ ಉತ್ತರವನ್ನು ನೀಡಿ ಆ ಉತ್ತರದ ಪ್ರತಿಯನ್ನು ಜಾಲತಾಣಗಳಿಗೆ ಬಿಡುಗಡೆ ಮಾಡಿದ್ದಾರೆ. ಸಮಿತಿಯ ನಿರ್ಧಾರವನ್ನು ಗೌರವಿಸಿದೆ ಇರುವುದು ಸರಿಯಲ್ಲ ಎಂದು ಟೀಕಿಸಿದ್ದಾರೆ. ಕೆಲವು ಇಂಗ್ಲಿಷ್ ಪತ್ರಿಕೆಗಳು ಈ ಸುದ್ದಿಗಳನ್ನು ತುಂಡು ತುಂಡಾಗಿ ಇಲ್ಲೊಂದು ಅಲ್ಲೊಂದು ಎಂಬಂತೆ ಪ್ರಕಟಿಸಿವೆ. ಕನ್ನಡ ಪತ್ರಿಕೆಗಳು ಸುದ್ದಿ ವಾಹಿನಿಗಳು ಅಥವಾ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯೇ ಇಲ್ಲ. ಇದು ಒಂದು ಪ್ರತಿಕ್ರಿಯೆ ನೀಡಬೇಕಾದ ಮತ್ತು ವಿವರಣೆ ಬಯಸಬಹುದಾದ ಅತ್ಯಂತ ಮುಖ್ಯವಾದ ಸುದ್ದಿ ವಿಚಾರ ಎಂದು ಯಾರಿಗೂ ಅನ್ನಿಸದೇ ಇರುವುದು ಶೋಚನೀಯ ಸಂಗತಿ.

ರಂಜನಿ ಮತ್ತು ಗಾಯತ್ರಿ ಕಳೆದ 30 ವರ್ಷಗಳಿಂದ ವಿಶ್ವ ಸಂಗೀತ ಲೋಕದಲ್ಲಿ ಅತ್ಯಂತ ಆಪ್ತ ಹೆಸರು. ಭಾರತೀಯ ಶಾಸ್ತ್ರೀಯ ಸಂಗೀತ ಪರಂಪರೆಯನ್ನು ಶ್ರೀಮಂತ ಗೊಳಿಸಿದ್ದಾರೆ. ವಯಲಿನ್ ಮತ್ತು ಹಾಡುಗಾರಿಕೆಯಲ್ಲಿ ಅವರ ಪರಿಣತಿ ಇದೆ .ಸಂಗೀತ ಸಂಯೋಜಕರು, ಅಪಾರ ಸಂಗೀತ ಅಭಿಮಾನಿಗಳನ್ನು ಮತ್ತು ಶಿಷ್ಯ ವೃಂದವನ್ನು ಹೊಂದಿದ್ದಾರೆ. ಟಿ ಎಮ್ ಕೃಷ್ಣ ಅವರಂತೂ ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಅವರ ಗರಡಿಯಲ್ಲಿ ಪಳಗಿದವರು.ಅವರು ಕೂಡ ಸಂಗೀತ ಲೋಕದಲ್ಲಿ ಮನೆಮಾತು. ಬರಹಗಾರರು. ಚಿಂತಕರು. ಮ್ಯಾಗ್ ಸೇಸೇ ಪ್ರಶಸ್ತಿ ಪುರಸ್ಕೃತರು.

ಇಂತಹ ಅಪ್ರತಿಮ ಹಿನ್ನೆಲೆ ಇರುವ ಸಂಗೀತಗಾರರು ಈ ರೀತಿಯಾದ ವಾಗ್ವಿಲಾಸಗಳಿಗೆ ತೊಡಗಿರುವುದು ಏತಕ್ಕಾಗಿ ?
ಸಂಗೀತ ಕಲಾನಿಧಿ ಪುರಸ್ಕಾರಕ್ಕೆ ಟಿಎಂ ಕೃಷ್ಣ ಅವರನ್ನು ಆಯ್ಕೆ ಮಾಡಿರುವುದು ಸಮಂಜಸ ಅಲ್ಲ ಎಂದು ರಂಜನಿ ಮತ್ತು ಗಾಯತ್ರಿ ತಿಳಿಸಿರುವುದು ಏತಕ್ಕಾಗಿ ? ಅವರು ತಾವು ಸಂಗೀತ ಉತ್ಸವದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪ್ರತಿಭಟಿಸಿರುವುದು ಯಾವ ಕಾರಣಕ್ಕಾಗಿ ?

ಟಿ ಎಮ್ ಕೃಷ್ಣ ಅವರು ಸಂಗೀತದ ನೂತನ ಆವಿಷ್ಕಾರ ಎಂದು ಹೇಳಿ “ಸ್ವಾನುಭವ ” ಎಂಬ ತಮ್ಮದೇ ವಿಧಾನವನ್ನು ಆರಂಭಿಸಿದರು.
ಕೃಷ್ಣ ಅವರು ಕಳೆದ ನೂರು ವರ್ಷಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಪರಂಪರೆಯಲ್ಲಿ ಜಾತಿ ಪದ್ಧತಿಗಳು ಬಹಳವಾಗಿ ಪ್ರಾಮುಖ್ಯತೆ ವಹಿಸುತ್ತಿವೆ ಎಂದೂ, ಮೇಲ್ವರ್ಗದ ಕಲಾವಿದರು ಇತರ ಕಲಾವಿದರನ್ನು ಬೆಳೆಯಲು ಅವಕಾಶ ಕೊಡುತ್ತಿಲ್ಲವೆಂದೂ ಪ್ರತಿಪಾದಿಸಿದರು.
ಒಮ್ಮೆ ಇವರು ಕೂಡ ಒಂದು ಉತ್ಸವದಲ್ಲಿ ಹಾಡುವುದಿಲ್ಲ ಎಂದು ಪ್ರತಿಭಟಿಸಿದ್ದರು. ಕರ್ನಾಟಕ ಸಂಗೀತ ಪರಂಪರೆಯ ಮಹೋನ್ನತ ತಾರೆ ಎಂದೇ ಗುರುತಿಸಲ್ಪಟ್ಟಿರುವ ವಿವಾದಾತೀತ ಎಂ ಎಸ್ ಸುಬ್ಬುಲಕ್ಷ್ಮಿ ಅವರ ಬಗ್ಗೆ ಹಗುರವಾಗಿ ಮಾತನಾಡಿದರು.( 2017 ರಲ್ಲಿ)

“ಸುಬ್ಬುಲಕ್ಷ್ಮಿ ಅವರು ದೇವದಾಸಿ ಜನಾಂಗದಲ್ಲಿ ಹುಟ್ಟಿದರು. ಆದರೆ ಮೇಲ್ವರ್ಗದವರನ್ನು ಅನುಸರಿಸುತ್ತ, ದೇವಸ್ಥಾನಗಳಿಗೆ ಭೇಟಿ ನೀಡುತ್ತಾ ಭಕ್ತಿ ಪರಂಪರೆಯ ಪ್ರತಿಪಾದಕಿ ತಾನೆಂದು ತೋರಿಸಿದರು. ತಮ್ಮ ಹುಟ್ಟನ್ನು ಮರೆಮಾಚಿದರು.” ಎಂಬ ಹೇಳಿಕೆಗಳನ್ನು ನೀಡಿದರು.
2018ರಲ್ಲಿ ಓ ಎಸ್ ಅರುಣ್ ಅವರ ಸಂಗೀತ ಕಚೇರಿ ಸಂಬಂಧಿತ ವಿವಾದಗಳು ಎದ್ದವು. ಆಗಲೂ ಸಾಕಷ್ಟು ವಿವಾದಾತ್ಮಕ ಹೇಳಿಕೆಗಳನ್ನು ಕೃಷ್ಣ ಅವರು ನೀಡಿದರು. ತ್ಯಾಗರಾಜರ ಕೃತಿಗಳ ಬಗ್ಗೆ ,ಭಕ್ತಿ ಪರಂಪರೆಯ ಬಗ್ಗೆ ಅವರ ವಿರೋಧಗಳಿದ್ದವು. ಪರಂಪರೆ, ರಾಮಾನುಜರು, ತ್ಯಾಗರಾಜರು ಮತ್ತು ಸಂಗೀತ ಪಿತಾಮಹರು ಎಂದೇ ಸಂಗೀತ ಲೋಕ ಗುರುತಿಸುವ ಸಂಗೀತ ತ್ರಿಮೂರ್ತಿಗಳ ಬಗ್ಗೆ ಕೂಡ ಅವರ ನಿಲುವುಗಳು ಬೇರೆಯೇ ಇದ್ದವು. ರಾಮ, ಕೃಷ್ಣರ ಬಗ್ಗೆಯೇ ಏಕೆ ಕೃತಿಗಳು ಇರಬೇಕು ? ಎಂದು ಪ್ರಶ್ನಿಸುತ್ತಿದ್ದ ಕೃಷ್ಣ ಅವರು ಪ್ರತಿ ತಿಂಗಳು ಯೇಸು ಮತ್ತು ಅಲ್ಲ ಬಗ್ಗೆ ಕೂಡ ನಾನು ಹೊಸ ಹೊಸ ಕೃತಿಗಳನ್ನು ಬರೆದು ಪ್ರಸ್ತುತಪಡಿಸುತ್ತೇನೆ ಎಂಬ ಹೇಳಿಕೆಗಳನ್ನು ನೀಡಿದರು.
ಈ ಕಾರಣಗಳಿಂದಾಗಿ ಕೃಷ್ಣ ಅವರು ಒಂದಷ್ಟು ವಿರೋಧಿಗಳನ್ನು ಕಟ್ಟಿಕೊಂಡರು. ಕೃಷ್ಣ ಅವರು ಕಟ್ಟಾ ಪೆರಿಯಾರ್ ಅವರ ಅನುಯಾಯಿ.
ಪೆರಿಯಾರ್ ಅವರ ಬಗ್ಗೆ ಕೂಡ ಕೃತಿ ರಚನೆಗಳನ್ನು ಮಾಡಿ ಹಾಡಿದರು .

ಮದ್ರಾಸ್ ಸಂಗೀತ ಅಕಾಡೆಮಿಯ ಸಂಗೀತ ಕಲಾ ನಿಧಿ ಪುರಸ್ಕಾರ ಸಂಗೀತ ಕಲೆಯನ್ನು ಗೌರವಿಸುವವರಿಗಾಗಿಯೇ ಮೀಸಲಾಗಿರಬೇಕೇ ಹೊರತು ಸಂಗೀತ ದಿಗ್ಗಜರನ್ನೇ ಟೀಕಿಸಿದ ,ಪರಂಪರೆಯನ್ನೇ ನಿಂದಿಸಿದ ಕೃಷ್ಣ ಅವರಿಗೆ ಸಲ್ಲುವುದು ಹೇಗೆ ? ಇದು ಸರಿಯೇ ಎಂಬುದು ರಂಜನಿ ಗಾಯತ್ರಿ ಮತ್ತು ಹಲವರ ಪ್ರಶ್ನೆ. ಹೊಸಕಾಲ ಮತ್ತು ಆವಿಷ್ಕಾರಗಳಿಗೆ ಹೊಂದಿಕೊಳ್ಳಬೇಕು ಎಲ್ಲರೂ ವಿದ್ಯೆ ಕಲಿಯಲು ಮುಕ್ತವಾಗಿರಬೇಕು ಎಂದು ಪ್ರಯತ್ನ ಪಡುತ್ತಾ ಸಂಗೀತದ ಮೂಲಕ ಸಮಾಜ ಸುಧಾರಣೆಯತ್ತ ಸಾಗುತ್ತಿರುವ ಕೃಷ್ಣ ಅವರಿಗೆ ಈ ಪುರಸ್ಕಾರ ಸಂದದ್ದು ಬಹಳ ಸಮಂಜಸವಾಗಿದೆ ಎಂಬುದು ಮತ್ತೊಂದು ವಾದ. ಇದು ವಿಚಾರ. ಪರ ವಿರೋಧ ನಿಲುವುಗಳು ಏನೇ ಇರಲಿ, ಕಳೆದ ಒಂದು ವಾರದಿಂದ
ಇಷ್ಟೆಲ್ಲಾ ನಡೆಯುತ್ತಿದ್ದರೂ ಇದು ಒಂದು ಸುದ್ದಿಯೇ ಅಲ್ಲ ಎಂಬಂತೆ ನಮ್ಮ ಮಾಧ್ಯಮಗಳು ವರ್ತಿಸುತ್ತಿರುವುದು ಇದರ ಸತ್ಯಾಸತ್ಯತೆ ಗಳ ಬಗ್ಗೆ ಎಲ್ಲೂ ಏನೂ ಪ್ರಕಟವೇ ಆಗದಿರುವುದು ಆಶ್ಚರ್ಯದ ಸಂಗತಿ. ದೊಡ್ಡ ದೊಡ್ಡ ಸಂಗೀತ ವಿದ್ವಾಂಸರು, ಅಪಾರ ಸಾಧನೆ ಮಾಡಿದವರು, ಹಿರಿಯರು, ಸಂಗೀತ ವಿಮರ್ಶಕರು, ಈ ಬಗ್ಗೆ ಮೌನ ವಹಿಸಿರುವುದು ಅದಕ್ಕಿಂತ ಹೆಚ್ಚಿನ ಆಶ್ಚರ್ಯಕರ ಸಂಗತಿ.
ನಿಜವಾದ ಸಂಗೀತ ಅಭಿಮಾನಿಗಳಿಗೆ ಈ ಸಂಗತಿಗಳ ಅರಿವೇ ಇಲ್ಲ.

ಟಿ ಎಮ್ ಕೃಷ್ಣ ಹಾಡಿದರೂ, ರಂಜನಿ ಗಾಯತ್ರಿ ಹಾಡಿದರೂ, ಆನಂದವಾಗಿ ಸವಿಯುವ ಶೋತೃವಿಗೆ ಯಾವ ಜಾತಿಯ ಸ್ಪರ್ಶವಿಲ್ಲ .
ಇಂಪಾದ ಹಾಡು ಕಿವಿಗೆ ಬಿದ್ದರೆ ಹಾಡು ಕೇಳುತ್ತಿರುವ ಹಾಡುವವನ ಜಾತಿ ನೋಡುತ್ತೀರೋ? ಯಾವುದೇ ಕಲೆಯಿರಲಿ, ಅದೊಂದು ಸಾಧನಾ ಮಾರ್ಗ. ಆಧ್ಯಾತ್ಮಿಕ ಅನುಸಂಧಾನ. ಕಲೆಯ ಉದ್ದೇಶವೇ ತನ್ನ ನೆಲೆಯ ಶೋಧನೆ, ಅಂತರಂಗ ತೃಪ್ತಿ. ಅದರಲ್ಲೂ ಸಂಗೀತ ಕಲೆ ಪ್ರತಿಯೊಬ್ಬರನ್ನೂ ಒಂದಾಗಿಸಿಕೊಳ್ಳುವ, ತನ್ನ ತೆಕ್ಕೆಗೆ ತೆಗೆದುಕೊಳ್ಳುವ, ರಸಭಾವಗಳನ್ನು ಸ್ಫುರಿಸುತ್ತ, ಜೀವನದ ಕಷ್ಟ ಸುಖಗಳನ್ನು ಮರೆಸುವ ಒಂದು ದಿವ್ಯ ಶಕ್ತಿ. ಕಲಾವಿದರು ದೇವರು ಎಂದು ಭಾವಿಸುವರು ಇದ್ದಾರೆ. ಗಂಧರ್ವರು ಎಂದು ಗೌರವಿಸುತ್ತಾರೆ. ಆದರೆ ಕಲಾವಿದರು “ಪುರಸ್ಕಾರ” ಗಳಿಗೆ ರಾಜಕೀಯ ಮಾಡುತ್ತಿದ್ದಾರೆಯೇ? “ಸಂಗೀತ” ಎಂಬ ಅಲೌಕಿಕಕ್ಕೆ ಲೌಕಿಕ , ತಾರ್ಕಿಕ ಲೇಪ ತರುತ್ತಿದ್ದಾರೆಯೇ?

ತ್ಯಾಗರಾಜರು, ,ಪುರಂದರದಾಸರು, ಯಾವ ಪ್ರಶಸ್ತಿ ಪುರಸ್ಕಾರಗಳನ್ನು ಪಡೆಯಲಿಲ್ಲ. ಕುಲ ಕುಲ ಕುಲವೆಂದು ಹೊಡೆದಾಡದಿರಿ ಕುಲದ ನೆಲೆಯ ನೀನಾದರೂ ಬಲ್ಲಿರಾ ಎಂಬ ಗೀತೆಯನ್ನು ಅಂದೇ ಹಾಡಿದ ಕನಕದಾಸರು ವ್ಯಾಸರಾಜರ ಪರಮಶಿಷ್ಯರಾಗಿದ್ದರು. ಮಲ್ಲಿಕಾರ್ಜುನ ಮನ್ಸೂರರ ವಚನಗಳಿಗೆ ಜಾತಿ ಇದೆಯೇ ? ಬಿಸ್ಮಿಲ್ಲಾ ಖಾನ್ ಅವರ ಷಹನಾಯಿ ವಾದನ ಯಾವ ಧರ್ಮದ್ದು? ಕಲಾ ಲೋಕದಲ್ಲಿ ಇಂತಹ ಒಂದು ಅಲೆ ಎದ್ದಾಗ, ಅದನ್ನು ಎಲ್ಲಾ ಕಲಾವಿದ ಬಳಗ ಮತ್ತು ಅಭಿಮಾನಿಗಳು ಒಟ್ಟಾಗಿ ಪರಿಹರಿಸುವ ಕಾರ್ಯದಲ್ಲಿ ತೊಡಗಬೇಕಲ್ಲವೇ?
ಬದಲಾಗಿ, ಮೌನವಾಗಿ ಎಲ್ಲಾ ಅಗ್ನಿಗೆ ತುಪ್ಪ ಸುರಿಯುವ ಕಾರ್ಯ ಮಾಡುತ್ತಿದ್ದಾರೆಯೇ? ಶಾಸ್ತ್ರೀಯ ಸಂಗೀತದ ಗಂಧ ಗಾಳಿಯೇ ಇಲ್ಲದವರು,ಈ ಸಂಗತಿಯನ್ನು ಒಂದು ಜಾತಿಯ ಅಸ್ತ್ರವನ್ನಾಗಿ ಬಳಸಲು ಹೊರಟಿರುವುದಂತೂ ಅತ್ಯಂತ ಶೋಷಣೆಯ ಸಂಗತಿ.
ಸಂಗೀತ ಯಾವ ಜಾತಿ ಧರ್ಮದ ಮೇಲೆ ನಿಂತಿಲ್ಲ. ಈ ಕಲಾವಿದರು ಪ್ರಶಸ್ತಿಗಳನ್ನು ಪಡೆಯುವ ಮುನ್ನವೂ ಇತ್ತು.
ಮುಂದೂ ಇರುತ್ತದೆ.

ಮೋಹನ, ಕಲ್ಯಾಣಿ , ಆನಂದಭೈರವಿ , ತೋಡಿ , ರೇವತಿಗಳ ಜಾತಿ ಹೇಳುವಿರಾ?

‍ಲೇಖಕರು avadhi

March 26, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಗಣಪತಿ ಅಗ್ನಿಹೋತ್ರಿ

    ಬಿ ಕೆ ಸುಮತಿ ಅವರ ಅಭಿಪ್ರಾಯ ಬರಹ ಗಮನಿಸಿದೆ. ನಾವು ವಿಶಾಲ ಮನೋಭಾವದಿಂದ ಈ ಎಲ್ಲಾ ಕಲಾವಿದರನ್ನು ಕಾಣುತ್ತೇವೆ. ಆದರೆ ಕಲಾವಿದರಾದವರು ಕೆಲವೊಂದು ಸೂಕ್ಷ್ಮಗಳ ವಿಚಾರಗಳ ಬಗ್ಗೆ ಮಾತನಾಡದೇ ಇರುವುದು ಒಳ್ಳೆಯದು. ಟಿ. ಎಂ. ಕೃಷ್ಣ ಅವರ ಬಗ್ಗೆಯೂ ಹಿಂದೊಮ್ಮೆ ಹೀಗೆ ಅನ್ನಿಸಿತ್ತು. ಉದ್ದಟತನದ ಮಾತುಗಳನ್ನೇ ಆಡಿದ್ದಾರೆ. ಅವರ ಅದೇ ಅಭಿಪ್ರಾಯವನ್ನು ಸೌಜನ್ಯವಾಗಿಯೇ ಮಂಡಿಸಬಹುದಿತ್ತು. ಆದರೆ ಅವರ ಆಯ್ಕೆ ಹಾಗಿರುವುದಿಲ್ಲ. ಅವರನ್ನು ಒಳ್ಳೆಯ ಹಾಡುಗಾರರಾಗಿ, ವಿದ್ವಾಂಸರಾಗಿ ನೋಡುವುದೇ ನಮಗೆ ಆಪ್ತವಾದುದು. ಬದಲಾಗಿ ವಿವಾದ ಅಸಹನೀಯ. ಇದೀಗ ಸಂಗೀತ ಕ್ಷೇತ್ರಕ್ಕೆ ಬೇಡವಾದ ಬದಲಾವಣೆ ಈಗ ಆಗಿದೆ. ಅಷ್ಟೇ ಅಲ್ಲ ಮುಂದುವರಿದಿದೆ.ಇನ್ನಾವ ಹಂತಕ್ಕೆ ಹೋಗಲಿದೆಯೋ ಗೊತ್ತಿಲ್ಲ. ವಿವಾದ ಅತಿರೇಕಕ್ಕೆ ಹೋಗದಿರಲಿ ಅನ್ನೋದು ನಮ್ಮ ಆಶಯ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: