ಒಗಟು..
-ಮಾಲತಿ ಗೋರೆಬೈಲ್
ಕಾಣದಿದ್ದರೂ ಕಾಡುತ್ತಾನೆ ಅವನು,
ಕರಿಯ ಕಂಬಳಿ, ಲಾಠಿ, ಹರಿದ ಗೋಣಿ ಚೀಲ
ಸೀಲುಗಳು, ಒಂದಷ್ಟು ಬಿಳಿ ಹಾಳೆ
ಅವನದೇ ಸ್ವತ್ತು…
ದೇಶಾವರಿ ನಗೆ,
ಹೊಗೆ ಹಾಯಿಸಿದಂತೆ ನೋಟ
ಒಂದು ರೂಪಾಯಿಗೆ ಶರತ್ತು,
ಶೌಚಾಲಯ ಶುಚಿಗೊಳಿಸುವ ಗಡಿಬಿಡಿ
ಮುಂಜಾನೆಯ ಕಸರತ್ತು….
ಅಸ್ವಸ್ಥತೆ ನೆತ್ತಿಗೇರಿತೋ…?
ನಲಿವ ಚಿಣ್ಣರಿಗೂ ಓತಪ್ರೋತ ಬೈಗುಳ
ತಲೆಬುಡವಿರದ ಉಪದೇಶ
ಕಾನೂನಿನ ಮಾತು..
ಅಪರೂಪಕ್ಕೊಮ್ಮೆ
ಬತ್ತಳಿಕೆಯಿಂದ ಹೊರಬರುವ
ವಚನ,ಕೀರ್ತನೆ
ಹೃದಯ ತುಂಬು ಗಾಯನ
ಅನ್ನಕ್ಕಾಗಿ ಬೊಗಸೆಯೊಡ್ಡಿ
ಕರೆಯುತ್ತಾನೆ “ಸು”
ಕೆಕ್ಕರಿಸುತ್ತಾನೊಮ್ಮೊಮ್ಮೆ
ನೋಟಕ್ಕೆ ಬೆದರಿ ಕಿರುಚುವಂತೆ!
ಇನ್ನೊಬ್ಬ ಬೆಳ್ಳಂಬೆಳಗ್ಗೆ ಹಾಜರು,
ಸೀಮೆಸುಣ್ಣಕ್ಕಾಗಿ ಕೈಚಾಚಿ
ಉಗಿಸಿಕೊಳ್ಳುತ್ತಾನೆ;
ಬೇಸೆತ್ತುಕೊಳ್ಳದೇ
ಮತ್ತೆ ಉದ್ದನೆಯ ಚಾಕ್- ಪೀಸ್ ಗಾಗಿ
ಮುಖ್ಯಸ್ಥರಲ್ಲಿ ಪ್ರಾರ್ಥನೆ.
ಏನಕ್ಕೋ ನಿನಗೆ?
ಪ್ರಶ್ನೆಗೆ ಉತ್ತರ ನೀಡದೇ
ನಡೆಯುತ್ತಾನೆ ದಡಬಡ….
ಮತ್ತೋರ್ವ ತಲೆತಗ್ಗಿಸಿ
ನಡೆಯುತ್ತಲೇ ಇರುತ್ತಾನೆ
ಭೂಮಿಯ ಅಳಲು ಆಲಿಸಿ
ಸೋಲಿಲ್ಲದ ಕಾಲುಗಳಿಗೆ
ರೆಕ್ಕೆ ತೊಡಿಸಿದಂತೆ…
ಹುಲ್ಲಪ್ಪ,ನಾಗಪ್ಪ,ರಾಜಪ್ಪ
ಇವರೆಲ್ಲ ಹುಚ್ಚರಲ್ಲ;
ಸ್ವಸ್ಥವಿರದ ಮನುಕುಲದ
ಮನುಷ್ಯರು,
ನಿತ್ಯ ಕಾಣದಿದ್ದರೂ
ಕಾಡುವ ಪಾತ್ರಗಳು
ಉತ್ತರವೇ ಹೊಳೆಯದ
ಒಗಟುಗಳು….






0 Comments