ಕರಾವಳಿಗೆ “ಮನಿ ಆರ್ಡರ್” ಆಗಿ ತಲುಪುವ ಕೋಮು ವೈಷಮ್ಯ

ಕರಾವಳಿಯು ಕೋಮು ಹಿಂಸೆಗೆ ತಾಣ ಆದದ್ದು ಹೇಗೆ ಎಂಬುದನ್ನು ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ಅದನ್ನು ಹೀಗೆ ಹೇಳಬಹುದು:

“ವ್ಯಾವಹಾರಿಕ ದ್ವೇಷ ಬರಬರುತ್ತಾ ದ್ವೇಷದ್ದೇ ವ್ಯವಹಾರ ಆಗಿ ಬದಲಾದ ಕಥೆ ಇದು.”

 

ಕ್ರೈಸ್ತ ಮಿಷನರಿಗಳು, ಬಪ್ಪಬ್ಯಾರಿ, ಹಾಜಿ ಅಬ್ದುಲ್ಲಾ ಸಾಹೇಬರು, ಕುದ್ಮಲ್ ರಂಗರಾಯರು ಬದುಕಿ ಹೋದ ಕರಾವಳಿ ಇದು. ಕೇವಲ 30 ವರ್ಷ ಕೆಳಗೆ ಈ ಎರಡೂ ಜಿಲ್ಲೆಗಳಲ್ಲಿ ಬದುಕು ಹೇಗಿತ್ತು ಎಂದು ಕರಾವಳಿಯ ಯಾರನ್ನೇ ಕೇಳಿದರೂ ಅವರು ಕೊಡುತ್ತಿದ್ದ ಕ್ಲಾಸಿಕಲ್ ಉದಾಹರಣೆ ಮಂಗಳೂರಿನ ಹಳೆಬಂದರು ಮಾರುಕಟ್ಟೆಯ ಸಾಮರಸ್ಯದ್ದು. ಅಲ್ಲಿ  ”ವ್ಯವಹಾರ ಧರ್ಮ” ಬೇರೆಲ್ಲ ಧರ್ಮಗಳನ್ನು ಗೌಣಗೊಳಿಸಿತ್ತು.

‘ದ್ವೇಷವೇ ವ್ಯವಹಾರ’ ಆಗಿರುವ ಈವತ್ತಿನ ಸ್ಥಿತಿಗೆ ಕರಾವಳಿ ತಲುಪಿದ್ದನ್ನು ಎರಡು ಹಂತಗಳಲ್ಲಿ ಗುರುತಿಸಬಹುದು.

ಮೊದಲ ಹಂತ:

70 ರ ದಶಕ ಆರಂಭವಾಗುತ್ತಲೇ ಮಂಗಳೂರು “ಅಭಿವ್ರದ್ಧಿ”ಆಗತೊಡಗಿತು. ಅಂದಿನ ಸಂಸದರಾಗಿದ್ದ ಉಳ್ಳಾಲ ಶ್ರೀನಿವಾಸ ಮಲ್ಯರು (1957-67) ಮಂಗಳೂರಿಗೆ “ಬಂದರು, ವಿಮಾನ ನಿಲ್ದಾಣ, ಇಂಜಿನಿಯರಿಂಗ್ ಕಾಲೇಜು” ತಂದರು. ಈ ಅಭಿವ್ರದ್ಧಿ  ಮತ್ತು ಅದರೊಂದಿಗೆ ಬಂದ ಸಾಮಾಜಿಕ ಪಲ್ಲಟಗಳು ಕರಾವಳಿಯಲ್ಲಿ ಧಾರ್ಮಿಕ ದ್ರುವೀಕರಣಕ್ಕೆ ಕಾರಣ ಆದವು. ಈ ಅಭಿವ್ರದ್ಧಿ ಕೆಲಸಗಳಿಗೆ ಜಾಗ ಸ್ವಾಧೀನ ಮಾಡಿಕೊಂಡಾಗ ಅಲ್ಲಿ ನೆಲೆ ಕಳೆದುಕೊಂಡವರನ್ನು  ಸುರತ್ಕಲ್ ಬಳಿ ಕಾಟಿಪಳ್ಳ, ಕ್ರಷ್ಣಾಪುರ, ಬಾಳ, ಕುತ್ತೆತ್ತೂರು, ಕೈಕಂಬ, ಮಂಗಳಪೇಟೆ ಪರಿಸರದಲ್ಲಿ ಪುನರ್ವಸತಿ ನೀಡಿ ನೆಲೆಗೊಳಿಸಲಾಯಿತು. ಹೀಗೆ ನೆಲೆಗೊಳಿಸುವಾಗ ದುರದ್ರಷ್ಟವಶಾತ್ ಧಾರ್ಮಿಕ ಹಿನ್ನೆಲೆಯಲ್ಲೇ ವರ್ಗೀಕರಿಸಿ ಹಿಂದೂಗಳು ಒಂದೆಡೆ, ಮುಸ್ಲಿಮರು ಒಂದೆಡೆ, ಕ್ರಿಷ್ಚಿಯನ್ನರು ಒಂದೆಡೆ ಎಂದು ಅನಧಿಕ್ರತವಾಗಿ ವಿಂಗಡಿಸಿ ನೆಲೆಗೊಳಿಸಲಾಯಿತು. ಗೊತ್ತಿದ್ದೋ ಗೊತ್ತಿಲ್ಲದೆಯೋ ನಡೆದುಹೋದ ಈ ಒಂದು ಸಾಮಾಜಿಕ/ರಾಜಕೀಯ ಪ್ರಮಾದದ ಫಲವನ್ನು ನಾವೀಗ ಉಣ್ಣುತ್ತಿದ್ದೇವೆ.  ಅಕ್ಕಪಕ್ಕದಲ್ಲಿ ಎಲ್ಲ ಧರ್ಮೀಯರನ್ನೂ ಹೊಂದಿದ್ದ ಪ್ರತೀ ಬೀದಿ, ಪ್ರತೀ ಕೇರಿಯ ಬದುಕು, ಹೊಸ ಪರಿಸರದಲ್ಲಿ ಕ್ರಮೇಣ ghetto ಆಗಿ ಬದಲಾಗುತ್ತಾ ಹೋಯಿತು.

ಕ್ರಷಿ, ಮೀನುಗಾರಿಕೆ, ವ್ಯವಹಾರಗಳನ್ನು ನಂಬಿದ್ದ ಕರಾವಳಿಯಲ್ಲಿ ಶಿಕ್ಷಣ ಕ್ರಾಂತಿಯ ಫಲವಾಗಿ ಹೊಸ ತಲೆಮಾರು ಉದ್ಯೋಗವನ್ನು ಅರಸಿಕೊಂಡು ಮುಂಬಯಿಗೆ, ಅರಬ್ ದೇಶಗಳಿಗೆ ಹೋಗುತ್ತಿತ್ತು. ಅಭಿವ್ರದ್ಧಿಯ ಹೆಸರಲ್ಲಿ ದುಡಿಯುವ ನೆಲ ಕೈತಪ್ಪಿದವರು ಸಹಜವಾಗಿಯೇ ದೂರದ ಊರುಗಳಲ್ಲಿ ಭವಿಷ್ಯ ಕಂಡುಕೊಳ್ಳಲು ಹೊರಟರು.

ಎರಡನೇ ಹಂತ: 

ಭೂಮಸೂದೆಯ ಕಟ್ಟುನಿಟ್ಟಿನ ಅನುಷ್ಠಾನ ಸೇರಿದಂತೆ ಹಲವು ಕಾರಣಗಳಿಂದಾಗಿ 70ರ ದಶಕದಲ್ಲಿ ಕ್ರಷಿ ಪ್ರಧಾನವಾಗಿದ್ದ ಕರಾವಳಿಯಲ್ಲಿ 80ರ ದಶಕದ ಮಧ್ಯಭಾಗದ ವೇಳೆಗೆ “ ಮನಿ ಆರ್ಡರ್ ಆರ್ಥಿಕತೆ” ಆರಂಭವಾಗಿತ್ತು. ಅಂದರೆ, ಉದ್ಯೋಗ ಅರಸಿ ಪರವೂರುಗಳಿಗೆ ತೆರಳಿದ್ದ ಹೊಸ ತಲೆಮಾರು, ಅಲ್ಲಿ ಚೆನ್ನಾಗಿ ದುಡಿದು, ಹಣ ಉಳಿಸಿ, ಆ ಹಣವನ್ನು ಊರಲ್ಲಿರುವ ತಮ್ಮ ಕುಟುಂಬಗಳಿಗೆ ಕಳುಹಿಸಲಾರಂಭಿಸಿದ್ದರು. ಆ ಹಣವನ್ನು ಇಲ್ಲಿ ಕ್ರಷಿ-ವಾಣಿಜ್ಯ ಬೆಳೆಗಳಿಗೆ ಅಥವಾ ಸೇವಾಕ್ಷೇತ್ರದ (ಫೈನಾನ್ಸ್, ಅಂಗಡಿ ಇತ್ಯಾದಿ) ವ್ಯವಹಾರಗಳಲ್ಲಿ ತೊಡಗಿಸಿ ಬದುಕು ಸಾಗುತ್ತಿತ್ತು.

1988ರಲ್ಲಿ ಸುರತ್ಕಲ್ ಸಮೀಪ ಹಸಿರು ಕ್ರಷಿ ಭೂಮಿಯಿಂದ ನಳನಳಿಸುತ್ತಿದ್ದ ಕುತ್ತೆತ್ತೂರು, ಬಾಳ, ಕಾಟಿಪಳ್ಳ, ಕಳುವಾರು ಪರಿಸರದಲ್ಲಿ MRPL ತೈಲ ರಿಫೈನರಿ ಆರಂಭಗೊಳ್ಳವುದರೊಂದಿಗೆ ಕರಾವಳಿಯಲ್ಲಿ ದೊಡ್ಡ ಕೈಗಾರಿಕೆಗಳ ಯುಗ ಆರಂಭಗೊಂಡಿತು. ಈ ಕೈಗಾರಿಕೆಗೆ ಭೂಸ್ವಾಧೀನ ಮಾಡುವಾಗ 70ರ ದಶಕದಲ್ಲಿ ಬಂದರಿಗೆಂದು ತಮ್ಮ ಜಾಗ ಬಿಟ್ಟು ಬಂದವರೂ ಹಲವು ಮಂದಿ ಮತ್ತೊಮ್ಮೆ ಸ್ಥಳಾಂತರಗೊಳ್ಳಬೇಕಾಯಿತು.

ಊರಲ್ಲಿ ಉಳಿದು ಕ್ರತ ಮಾಡಿಕೊಂಡಿದ್ದವರಿಗೆ  MRPL ಭೂಸ್ವಾಧೀನ ಕೊಟ್ಟ ಸಾಮಾಜಿಕ-ಸಾಂಸ್ಕ್ರತಿಕ ಮತ್ತು ಆರ್ಥಿಕ ಆಘಾತ ಬಲುದೊಡ್ಡದು ಮತ್ತು ಈ ಆಘಾತವೇ ಈವತ್ತು ಸುರತ್ಕಲ್ ಪರಿಸರ ಕೋಮುದ್ವೇಷದ ಎಪಿಸೆಂಟರ್ ಆಗಿರುವುದರ ಹಿಂದಿನ ಬಲುದೊಡ್ಡ ಕಾರಣ ಎಂಬುದು ಈ ಲೇಖಕನ ಅಭಿಪ್ರಾಯ.

ಎಕರೆ ಗಾತ್ರದ ಭೂಮಾಲಕರಾಗಿ, ಸ್ವತಃ ತಮ್ಮ ಕ್ರಷಿ ಭೂಮಿಗಳಲ್ಲಿ ದುಡಿದು ಬದುಕುತ್ತಿದ್ದ ಕುಟುಂಬಗಳಿಗೆ MRPL ಪುನರ್ವಸತಿ ಕಾಲನಿಗಳಲ್ಲಿ ಕೆಲವೇ ಸೆಂಟ್ಸು ಗಾತ್ರದ ಪುಟ್ಟಜಾಗ ಮತ್ತು ಒಂದಿಷ್ಟು ದುಡ್ಡು ಸಿಕ್ಕಿತ್ತು. ಈ ಪುನರ್ವಸತಿಯ ವೇಳೆ ಮತ್ತಷ್ಟು ಧರ್ಮವಾರು ವಿಂಗಡಣೆಯೂ ಆಯಿತು. ಹಾಗೆ ಸಿಕ್ಕಿದ ಪುಟ್ಟ ಜಾಗದಲ್ಲಿ ಸಿಕ್ಕ ದುಡ್ಡು ಹಾಕಿ ಮನೆ ಕಟ್ಟಿಕೊಂಡ ಬಳಿಕ ಈ ಕುಟುಂಬಗಳ ಕೈ ಖಾಲಿ ಆಗಿತ್ತು. ಕ್ರಷಿ ಬಿಟ್ಟರೆ ಬೇರೆ ಕೌಶಲಗಳಿಲ್ಲದ ಬಹುತೇಕ ಕುಟುಂಬಗಳಲ್ಲಿ ಆತಂಕ ಮಡುಗಟ್ಟಿತ್ತು.  ಕೌಶಲ, ಶಿಕ್ಷಣಗಳಿರುವ ಜನಗಳು ಮತ್ತೊಮ್ಮೆ ಗಲ್ಫ್-ಮುಂಬಯಿಯತ್ತ ಮುಖ ಮಾಡಿದರು; ಅಲ್ಲಿ ದುಡಿದು ಊರಿಗೆ ಮನಿ ಆರ್ಡರ್ ಕಳಿಸತೊಡಗಿದರು. ಕೌಶಲ-ಶಿಕ್ಷಣ ಎರಡೂ ಹೆಚ್ಚಿಲ್ಲದವರು ಊರಲ್ಲಿ ನಿರುದ್ಯೋಗಿಗಳಾಗಿ ಉಳಿದುಕೊಂಡರು. MRPL ಮಾತು ಕೊಟ್ಟಂತೆ ಸ್ಥಳೀಯರಿಗೆ ಉದ್ಯೋಗಾವಕಾಶವನ್ನು ನಿರೀಕ್ಷಿತ ಪ್ರಮಾಣದಲ್ಲಿ ಒದಗಿಸಲಿಲ್ಲ.

ಎರಡು ಬೆಳವಣಿಗೆಗಳು

ಇದೇ ಹಂತದಲ್ಲಿ ಎರಡು ಬೆಳವಣಿಗೆಗಳು ನಡೆದವು. 1990ರಲ್ಲಿ ಗಲ್ಫ್ ಯುದ್ಧ ಆರಂಭವಾಗಿ, ಬಹಳ ಮಂದಿ ಉದ್ಯೋಗ ಕಳೆದುಕೊಂಡು ಊರಿಗೆ ಮರಳಬೇಕಾಯಿತು ಮತ್ತು ಅದೇ ಸಮಯಕ್ಕೆ ಭಾರತದಲ್ಲಿ ರಾಜಕೀಯ ಹೊಸ ಮಜಲು ತಲುಪಿ, ಲಾಲ್ ಕ್ರಷ್ಣ ಆಡ್ವಾಣಿಯವರು ರಾಮಮಂದಿರಕ್ಕಾಗಿ ದೇಶಾದ್ಯಂತ ರಥಯಾತ್ರೆ ಹೊರಟಿದ್ದರು.

ಕರಾವಳಿಯಲ್ಲಿ ಉದ್ಯೋಗ ಇಲ್ಲದೆ/ಉದ್ಯೋಗ ಕಳೆದುಕೊಂಡು ಊರಲ್ಲಿದ್ದ ಪ್ರೊಡಕ್ಟಿವ್ ವಯಸ್ಸಿನ ಯುವಕರಿಗೆ ರಾಜಕೀಯ-ಸಾಮಾಜಿಕ ಸ್ಥಾನಮಾನ ಗಳಿಸಿಕೊಳ್ಳಲು ಸುಲಭ ಹಾದಿಯೊಂದು ತೆರೆದುಕೊಂಡಿತು. ಕುಟುಂಬದ ದುಡಿಯುವ ಕೈಯೊಂದು ದೂರದ ಊರಿನಲ್ಲಿ ದುಡಿದು ಹಣ ಕಳುಹಿಸುತ್ತಿದ್ದುದರಿಂದ, ಮೂಲಭೂತ ಆವಶ್ಯಕತೆಗಳಿಗೆ ತೊಂದರೆ ಇಲ್ಲದಿದ್ದ ಎಳೆಯರು ಸಹಜವಾಗಿಯೇ ಧರ್ಮ ಆಧರಿತ ರಾಜಕಾರಣದ ಹೊಸ ತಳಿಯತ್ತ ಆಕರ್ಷಿತರಾದರು. ಇದು ಸುರತ್ಕಲ್ ಪರಿಸರ ಕೋಮುಸೂಕ್ಷ್ಮ ಪ್ರದೇಶ ಆಗಲು ಮೊದಲ ಟ್ರಿಗರಿಂಗ್ ಪಾಯಿಂಟ್. ಅಲ್ಲಿಯ ತನಕ ಮೇಲುಜಾತಿಯ, ವರ್ತಕರ ಹಿಡಿತದಲ್ಲಿದ್ದ ಧರ್ಮ ಆಧರಿತ ರಾಜಕೀಯ ಮೊದಲ ಬಾರಿಗೆ ಬೇರೆ ಹಿಂದುಳಿದ ಜಾತಿಗಳ-ಸಮುದಾಯಗಳ ತೆಕ್ಕೆಗೂ ಬಿತ್ತು.

ಈ ಪ್ರಯೋಗ ಕರಾವಳಿಯಲ್ಲಿ ಚುನಾವಣಾ ಯಶಸ್ಸು ಕಂಡ ಬಳಿಕ ಕರಾವಳಿಯ ಉದ್ದಗಲಕ್ಕೂ ಇಂತಹ ಪ್ರಯೋಗಗಳು ಯಶಸ್ಸು ಕಾಣತೊಡಗಿದವು. ಭೂಮಸೂದೆ ಕಾರಣದಿಂದಾಗಿ ಕಾಂಗ್ರೆಸ್ಸಿನ ಸಾಂಪ್ರದಾಯಿಕ ಭದ್ರಕೋಟೆ ಆಗಿದ್ದ ಕರಾವಳಿಯಲ್ಲಿ ಬಹುತೇಕ ಪ್ರತೀಮನೆ ರಾಜಕೀಯ ಒಡಕು ಕಂಡಿತು. ಅಪ್ಪ “ಭೂಮಸೂದೆಯ” ಫಲಾನುಭವಿ ಆಗಿ ಕಾಂಗ್ರೆಸ್ ಪರ ನಿಂತರೆ, ಮಗ “ಮನಿ ಆರ್ಡರ್ ಆರ್ಥಿಕತೆ”ಯ ಫಲಾನುಭವಿ ಆಗಿ ಬಿಜೆಪಿ ಪರ ನಿಂತ ಉದಾಹರಣೆಗಳು ಸಾವಿರಾರು.

ಜೊತೆಗೆ, ಇಲ್ಲಿನ ಸರ್ವೀಸ್ ಸೆಕ್ಟರ್ ಎಂಬುದು ಫೈನಾನ್ಸ್-ಬ್ಯಾಂಕಿಂಗ್, ಲ್ಯಾಂಡ್ ಡೀಲಿಂಗ್, ಕೇಬಲ್ ನೆಟ್ವರ್ಕ್, ಟ್ರಾನ್ಸ್ ಪೋರ್ಟೇಷನ್, ಬ್ರೋಕರಿಂಗ್, ಕಾಂಟ್ರಾಕ್ಟ್ ಎಂದೆಲ್ಲ ವಿಸ್ತರಿಸಿಕೊಳ್ಳತೊಡಗಿದಾಗ, ಸಹಜವಾಗಿಯೇ ವ್ಯವಹಾರದ ದ್ವೇಷಗಳೂ ಆರಂಭಗೊಂಡವು ಮತ್ತು ಅವು ಕ್ರಿಮಿನಲ್ ಸ್ವರೂಪ ತಳೆದಾಗ ರಾಜಕೀಯ ಹಗೆತನದ – ಕೋಮುದ್ವೇಷದ ರೂಪ ಪಡೆಯತೊಡಗಿದವು.

ಆಹಾರ, ಪ್ರೀತಿ, ದುಡ್ಡು, ರಕ್ತ… ಹೀಗೆ ಎಲ್ಲದರಲ್ಲೂ ದುಡ್ಡು-ಓಟು ಕಾಣಿಸಿದ್ದೇ ತಡ, ಈ ರೀತಿಯ ದ್ವೇಷಸಾಧನೆ ಲಾಭದಾಯಕ ಎಂಬ ಅರಿವು ಮೂಡಿ, ವ್ಯಾವಹಾರಿಕ ದ್ವೇಷಗಳು ದ್ವೇಷದ್ದೇ ವ್ಯವಹಾರ ಆಗಿ ಬದಲಾದವು.

ಇದು ಈವತ್ತಿನ ಕರಾವಳಿ.

‍ಲೇಖಕರು avadhi

January 15, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

 1. G.N.Nagaraj

  ವಸ್ತು ಸ್ಥಿತಿಯ ವಸ್ತು ನಿಷ್ಟ ವಿಶ್ಲೇಷಣೆ. ನಿರುದ್ಯೋಗವೇ ಕೋಮುವಾದದ ಬೆಳವಣಿಗೆಯ ಮೂಲ. ಅದೇ ಸಮಯದಲ್ಲಿ ಮನಿ ಆರ್ಡರ್ ಆರ್ಥಿಕತೆ ಕೇರಳದಲ್ಲಿಯೂ ಇದ್ದರೂ ಕೋಮುವಾದದ ಪ್ರವೇಶಕ್ಕೆ ಅವಕಾಶ ನೀಡಿಲ್ಲ .

  ಪ್ರತಿಕ್ರಿಯೆ
 2. Sathyakama Sharma K

  ಹಿಂದು ಯುವಕರು ಬಿ ಜೆ ಪಿ ಸೇರಿದರು. ಸರಿ. ಅನ್ಯ ಕೋಮಿನವರು ಪಿ ಎಫ್ ಐ ನಂತಾ ಸಂಘಟನೆಯನ್ನು ಸೇರಿ ‘ಕೋಮು ಸಾಮರಸ್ಯ’ ಕಾಪಾಡಲು ಮುಂದಾದರು ಎಂಬುದು
  ಲೇಖಕರ ಅಭಿಪ್ರಾಯವೇ?

  ಪ್ರತಿಕ್ರಿಯೆ
 3. D S PRAKASH

  ನುಣ್ಣನ್ನ ಬೆಟ್ಟ ಅಂಕಣದಲ್ಲಿ ಪ್ರಕಟವಾಗಿರುವ ‘ ಕರಾವಳಿಗೆ ” ಮನಿ ಆರ್ಡರ್ ” ….ಲೇಖನ ಅಚ್ಚುಕಟ್ಟಾಗಿದೆ, ಚೆನ್ನಾಗಿದೆ.ಆದರೆ ಎಂದಿನಂತೆ ನಾಣ್ಯದ ಒಂದೇ ಮುಖವನ್ನು ಗಮನದಲ್ಲಿಟ್ಟು ಕೊಂಡು ಲೇಖನ ಸಿದ್ಧಪಡಿಸಲಾಗಿದೆ ಎನ್ನದೇ ವಿಧಿಯಿಲ್ಲ. ಪ್ರತಿ ಹಂತದಲ್ಲೂ ಬಿಜೆಪಿ ಯನ್ನು ಅಲ್ಲಗಳೆಯುವುದಕ್ಕೆ ಹಾಗೆ ತೆಗಳುವುದಕ್ಕೆ ಉಪಯೋಗಿಸಿಕೊಳ್ಳಲಾಗಿದೆ. ಮಂಗಳೂರು/ ಕರಾವಳಿಯಲ್ಲಿನ ಸಧ್ಯದ ವಾತಾವರಣಕ್ಕೆ ಬಹುಮಟ್ಟಿಗೆ ಕಾರಣವಾದ ,ಈಗಿನ ಸರ್ಕಾರದ ರಾಜಕೀಯದ, ರಾಜಕಾರಣಿಗಳ ಬಗ್ಗೆ ಒಂದು ಮಾತನ್ನು ಹೇಳದಿರುವುದು, ಲೇಖನ ನಾಣ್ಯದ ಒಂದೇ ಮುಖದ ಒಕ್ಕಣೆಯಾಗಿದೆ ಎಂಬುದಕ್ಕೆ ಪುಷ್ಠಿ ಕೊಡುತ್ತದೆ.

  ಶ್ರೀಯುತ ಸತ್ಯಕಾಮ ಶರ್ಮ ಕೆ. ರವರು ಕೇವಲ ಎರಡು ವಾಕ್ಯಗಳಲ್ಲಿ ನಿಮ್ಮ ಲೇಖನದ ಬಗ್ಗೆ ಕನ್ನಡಿ ಹಿಡಿದು ಸತ್ಯ ದರ್ಶನ ಮಾಡಿಸಿದ್ದಾರೆ.
  ಲೇಖನಗಳು ಸತ್ಯ ನಿಷ್ಠವಾಗಿರಬೇಕು, ಆದರೆ ಯಾವಾಗಲೂ ಒಮ್ಮುಖವಾಗಿರುವುದು ಲೇಖಕರ ಮನೋಧರ್ಮವನ್ನು ತೋರಿಸುತ್ತದೆ.
  ಇನ್ನು ಮುಂದಾದರೂ ಲೇಖಕರಿಂದ ತಾರತಮ್ಯವಿಲ್ಲದ ಲೇಖನಗಳನ್ನು ನಿರೀಕ್ಷಿಸಬಹುದೇ ?

  ವಂದನೆಗಳು.

  ಬೇಲೂರು ದ ಶಂ ಪ್ರಕಾಶ್

  ಪ್ರತಿಕ್ರಿಯೆ
 4. Shabir

  ಸತ್ಯಕಾಮರವರ ಅಭಿಪ್ರಾಯವು ಸರಿಯಲ್ಲ. ಲೇಖನವು ಅಚ್ಚುಕಟ್ಟಾಗಿ ಕರಾವಳಿಯ ನೈಜ ಚಿತ್ರಣವನ್ನು ನೀಡಿದೆ. ಪಿ ಎಫ್ ಐ-ಯಂತಹ ಸಂಘಟನೆಯು ಇತ್ತೀಚೆಗಿನ ಬೆಳವಣಿಗೆಯಷ್ಟೆ! ಕರಾವಳಿಯಲ್ಲಿ ಬೀಜೆಪಿಯ ಆರಂಭದಲ್ಲಿ ಯಾವುದೇ ಮುಸ್ಲಿಮ್ ಸಂಘಟನೆಯು ಇರಲಿಲ್ಲ. ನಾನೂ ಕರಾವಳಿಯ ನಾಗರಿಕ!

  ಪ್ರತಿಕ್ರಿಯೆ
 5. ಅನಿಲ್

  ವಸ್ತುನಿಷ್ಠ ಬರವಣಿಗೆ…ಲೇಖಕರ ಅಭಿಪ್ರಾಯ ಇದೆ ಭಾಗದಲ್ಲಿ ಪ್ರಸ್ತುತ ವಾಸಿಸುತಿರುವ ನನಗೆ ಸತ್ಯ ಅಂತ ಅನಿಸ್ತಿದೆ.mrpl ಪ್ರಾಕೃತಿಕವಾಗಿ ..ಸಾಮಾಜಿಕವಾಗಿ ಮತ್ತೆ ಸಂತಸ್ತರ ಆರ್ಥಿಕ ಬದುಕಲ್ಲಿ ಮಾಡಿರುವ ಹಾನಿ…ಕೋಮುವಾದವಾಗಿ ದಕ್ಷಿಣ ಕನ್ನಡದಲ್ಲಿ ವಿಜೃಂಭಿಸುತಿದೆ ಎಂಬುದು ಸತ್ಯ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: