
ಎಸ್ ಪಿ ವಿಜಯಲಕ್ಷ್ಮಿ
ನಿಲ್ಲು ಸಖಿ ಇಂದಾದರೂ ನನ್ನ ಬಳಿಯೇ ತುಸುಕಾಲ
ಮಾತನಾಡೋಣ ಮನಬಿಚ್ಚಿ ಮುಗಿಯಬಹುದು ನಮ್ಮ ಈ ಕಾಲ…
ಯಾವ ಮಿಡಿತಕೆ ಬಂಧ ಬೆಸೆದಿತ್ತು ಅರಿತವರಾರೆ ಸಖಿ
ಬೆಸೆದ ರಾಗದ ಗುನುಗಿಷ್ಟ ಉಳಿಸಿಹುದು ಇನ್ನೂ ಈ ಕಾಲ….
ಮೊಗೆಮೊಗೆದು ಕುಡಿದ ಮಧು ಮರೆತಿಲ್ಲ ನಾನೀನು
ಆದರೂ ಸಖಿ, ಸಾಗರದಾಳ ನಿಲುಕಿಲ್ಲ, ಚಾಟಿ ಬೀಸಿಹುದು ಈ ಕಾಲ…
ನಾ ಹಿಡಿದ ಮಧುಪಾತ್ರೆ , ಅದ ತುಂಬಿದಾ ಬೆರಳ ನಾ ಮರೆತಿಲ್ಲ ಸಖಿ
ಇಂದು ನನ್ನೆದುರು ಬಟ್ಟಲೂ ಬರಿದಾಗಿ ಅಣಕಿಸಿದೆ ನನ್ನ ಈ ಕಾಲ…

ನಾ ಹೂವ ಹಿಡಿದು ಬಂದೆ ಎನಿತೊಂದು ಬಾರಿ ಓ ನನ್ನ ಸಖಿ
ಭವಸಾಗರದ ಕುದಿಯಲ್ಲಿ ನೀ ಬೇಯುತಿದ್ದೆ, ಸರಿದಿತ್ತು ಸದ್ದಿಲ್ಲದಂತೆ ಈ ಕಾಲ…
ಮರಳದಂಡೆಯಲಂದು ಸೂರ್ಯಾಸ್ತ ಸಮಯ ಸಖಿ
ಆ ಕೆಂಪು ನಿನ್ನ ಕದಪಿನಲಿತ್ತು ಉಳಿಸಿಲ್ಲ ಇಂದು ನಿರ್ದಯಿ ಈ ಕಾಲ…
ಬಂಧ ಬೇರಾಗಿಸುವುದು ಅಂತದಾಂತರ್ಯ ಓ ನನ್ನ ಸಖಿ
ಮಿಡಿದ ಗುನುಗ ಎದೆಗೈದು ನುಡಿದುಬಿಡು ಮತ್ತೆ ಮರಳದು ಈ ಕಾಲ…..
ಬಾರೆನ್ನ ಪ್ರೇಮನಿಧಿ ಅರೆಘಳಿಗೆ ಎನ್ನೊಳಗೆ ಭವವ ಮರೆತಂತೆ
ಮುಳ್ಳುಗಳ ತರಿದು ಹುವ್ವೆಸಳ ಹಿಡಿದು ಹಗುರಾಗಿ ಕನಸೋಣ ಈ ಕಾಲ…






ಧನ್ಯವಾದಗಳು ಅವಧಿ ನನ್ನ ಗಜಲ್ ಪ್ರಕಟಿಸಿದ್ದಕ್ಕೆ…..