ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಬ್ಬಿಣದ ತಂತಿಯ ಮೇಲೆ ಕೂತು..

ತಂತಿ

ದಾದಾಪೀರ್ ಜೈಮನ್ 

ಹಿತ್ತಿಲ ಬಯಲ ಬಿಡಾರದ
ಗೂಟಗಳಿಗೆ ಗಟ್ಟಿಬಿಗಿದು
ಕಟ್ಟಿದ ತಂತಿ
ಕೂತು ಕಥೆ ಹೇಳುವವರಿಗೆ
ಸುಮ್ಮನೆ ಕಿವಿಯಾಗುತ್ತದೆ
ನದಿ ತೀರದ ಒಂಟಿತನವ ಕಳೆಯಲು
ಬಂದವರಂತೆ
ಬಟ್ಟೆಗಳು ಜಳಕ  ಮಾಡಿ
ತಂತಿ ಕಟ್ಟೆಯ ಮೇಲೆ
ಮಧ್ಯಾಹ್ನ ಒಣಗಿಸಿಕೊಳ್ಳುತ್ತಾ
ಹಾಗೆ ಸುಮ್ಮನೆ ಅಡ್ಡಾಗಿ
ಗುಟ್ಟು ಬಿಟ್ಟುಕೊಳ್ಳುತ್ತವೆ…

ಇಸ್ತ್ರಿಯೊಳಗೆ ಮುದುಡಿಗಳ ಮರೆಮಾಚಿ
ಪರ್ಫ್ಯೂಮುಗಳ ಪೂಸಿಕೊಂಡು
ಲೋಕ ಸುತ್ತಿ ಬರುವ ಬಟ್ಟೆಗಳು
ದಾರಿಯಲ್ಲಿ ಕಂಡ ಉಟ್ಟು ತೊಟ್ಟ
ಬೆತ್ತಲೆಯ ಅಸಲಿಯತ್ತುಗಳ
ಎದೆಯಲಿ ಅಡಗಿಸಿಟ್ಟುಕೊಂಡು
ವಾಷಿಂಗ್ ಮಶೀನಿನೊಳಗೆ
ನೆನೆದು
ಪ್ರೇಮದ ಹಾಡುಗಳ ಹಾಡುವ
ಸೂಫಿ ಸಂತರಂತೆ  ಗಿರಗಿರ ತಿರುಗಿ
ಕಲೆಯ ಒಳಬಿಟ್ಟುಕೊಂಡು
ಹೊಸತಾಗುತ್ತವೆ…
ಕಲೆ ಒಳ್ಳೆಯದೆಂಬ ಮಾರುಕಟ್ಟೆ
ಹೇಳಿಕೊಟ್ಟ ಮಾತಿನ ಪುರಾವೆ
ಕೇಳುವಷ್ಟು  ಪುರುಸೊತ್ತಿಲ್ಲ ಬಟ್ಟೆಗೆ!!!

ಬಿಸಿಲಿಗೆ ಬೀಸುವ ಗಾಳಿಗೆ ತೆರೆದುಕೊಳ್ಳುತ್ತಾ
ಕಬ್ಬಿಣದ ತಂತಿಯ ಮೇಲೆ ಕೂತು
ಕಥೆಗಳ ಕುಟ್ಟುತ್ತ
ಎಲೆಯಡಿಕೆ ಮೆಲ್ಲುತ್ತ
ಆಗಾಗ ಮರುಗಿ ಕಣ್ಣಂಚಲ್ಲಿ ಕಂಬನಿ
ತುಳುಕಿಸುವಾಗಲೇ
ವಯಸ್ಸಾಗಿಸಿಕೊಂಡು ಮೂಲೆಗುಂಪಾಗುವ
ಹೊತ್ತಿಗೆ ತಂತಿಗೆ ಮಾತು ಬಂದು
ಕೆಂಪು ಕಂದು ಬಣ್ಣಗಳ ಗೆರೆ ಅಂಟಿಸಲು
ಶುರುವಿಕ್ಕುತ್ತದೆ…
ಮಾಲೀಕನಿಗೆ ಬಹುಷಃ ಯಾಕೋ ಸರಿಬರುವುದಿಲ್ಲ
ತಂತಿಗೆ ವಯಸ್ಸಾಯಿತೆಂದು ಕಿತ್ತೆಸೆದು
ಹೊಸತೊಂದನ್ನು ಗೂಟಗಳಿಗೆ ಬಿಗಿದಿದ್ದಾನೆ
ಬಟ್ಟೆಗಳು ಮಾತ್ರ ಬಡಬಡಿಸುವುದನ್ನು ಬಿಟ್ಟಿಲ್ಲ
ತಂತಿ ಮತ್ತು ಕವಿತೆಗೆ ಅದಷ್ಟೆ  ಸಮಾಧಾನ…

‍ಲೇಖಕರು avadhi

13 August, 2019

2 Comments

  1. Anand h

    Keeps you thinking. Thankyou for the wonderful thought

  2. ನೂತನ ದೋಶೆಟ್ಟಿ

    ಬಟ್ಟೆಗಳ ಮಾತು..ಹೊಸ ಆಲೋಚನೆ. ಬಹಳ ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading