ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕನ್ನಡ ಸಾಹಿತ್ಯದಲ್ಲಿ ದಲಿತ ಸಂವೇದನೆ : 'ನನ್ನ ದರ್ಶನ ಭಾಗ್ಯ ನಂಜುಂಡೇಶ್ವರನಿಗೂ ಸಿಗಲಿಲ್ಲ'

ಸಮ್ಮೇಳನದಲ್ಲಿ ಇಂದು ಬೆಳಗ್ಗೆ ನಡೆದ ಗೋಷ್ಠಿ : ’ಕನ್ನಡ ಸಾಹಿತ್ಯದಲ್ಲಿ ದಲಿತ ಸಂವೇದನೆ’

 

ಅಧ್ಯಕ್ಷತೆ : ಡಾ ಸಿದ್ಧಲಿಂಗಯ್ಯ

ವಿಷಯ : ದಲಿತ ಸಾಹಿತ್ಯದ ಪ್ರಮುಖ ಆಶಯಗಳು

ಆಶಯ ನುಡಿ : ಡಾ ಮೂಡ್ನಾಕೂಡು ಚಿನ್ನಸ್ವಾಮಿ ಮತ್ತು ಡಾ ಎಚ್ ದಂಡಪ್ಪ

ವಿಷಯ : ದಲಿತ ಸಾಹಿತ್ಯ ಮತ್ತು ಚಳುವಳಿಗಳು

ಡಾ ಪ್ರಶಾಂತ್ ಜಿ ನಾಯಕ್

ವಿಷಯ : ದಲಿತ ಸಾಹಿತ್ಯ ಮತ್ತು ರಾಜಕೀಯ ದೃಷ್ಟಿಕೋನ

 
 
ಮಡಿಕೇರಿಯಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದ ಎರಡನೆಯ ದಿನ ಭಾರತಿಸುತ ವೇದಿಕೆಯಲ್ಲಿ ‘ಕನ್ನಡ ಸಾಹಿತ್ಯದಲ್ಲಿ ದಲಿತ ಸಂವೇದನೆ’ ವಿಚಾರ ವಿನಿಮಯ ಕಾರ್ಯಕ್ರಮವನ್ನು ಆಯೋಜಿಸಿ ಯಶಸ್ವಿಯಾಗಿ ನಡೆಸಿಕೊಡುವ ಮೂಲಕ ತನ್ನದೇ ಆದ ವಿಶಿಷ್ಟತೆಗೆಈ ಸಮ್ಮೇಳನ ಕಾರಣವಾಗಿದೆ. ಅಂತೆಯೇ ಇಂದಿನ ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷರನ್ನೊಳಗೊಂಡು ರಾಜಕೀಯ ನಾಯಕರುಗಳಾದ ಎಂ.ಸಿ.ನಾಣಯ್ಯ ಮತ್ತು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರನ್ನೊಳಗೊಂಡು ಹಲವು ಹಿರಿಯರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಡಾ. ಸಿದ್ದಲಿಂಗಯ್ಯ ನವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ತಮ್ಮ ಆಶಯ ನುಡಿಗಳಲ್ಲಿ ದಲಿತ ಸಾಹಿತ್ಯಕ್ಕೆ ಮೂಲ ಆಕರ ಅಂಬೇಡ್ಕರ್ ಸಾಹಿತ್ಯವೆಂದು ತಿಳಿಸುತ್ತಾ, ದಲಿತ ಸಾಹಿತ್ಯಕ್ಕೆ ವಿಮರ್ಶಕರ, ಉತ್ತಮ ವಿಮರ್ಶೆಯ ಕೊರತೆಯಿದ್ದು, ದಲಿತ ಸಾಹಿತಿ ನಿಲ್ಲಬೇಕಾದರೆ ಗುರುತ್ವಾಕರ್ಷಣೆ( ಜ್ಯುಪಿಟರ್ ಗ್ರಾವಿಟಿ ) ಇರಬೇಕೆಂದರು. ಭಾರತ ದೇಶದಲ್ಲಿ ಇಂದಿಗೂ ಜಾತಿ ಸಂವಿಧಾನದ ಮುಂದೆ ಅಂಬೇಡ್ಕರ್ ಸಂವಿಧಾನ ನಿಲ್ಲಬೇಕಿದೆ ಎಂದರು. ಜಾತಿ ಸಂವಿಧಾನ ಅಳಿಸದಷ್ಟು ಗಟ್ಟಿಯಾಗಿರುವ ಈ ದೇಶದಲ್ಲಿ ಇನ್ನೆಷ್ಟು ದಿನ ನಾವು ಹಸಿವು, ಜಾತಿ, ಅಸೃಶ್ಯತೆಗಳ ಕುರಿತು ಬರೆಯೋದು ? ಎಂದು ಪ್ರಶ್ನಿಸಿದರಲ್ಲದೆ ‘ಬಿಳಿಯರ ತೊಟ್ಟು ರಕ್ತವೂ ಬೀಳದಂತೆ ನಮ್ಮ ಹೋರಾಟ ಇರಬೇಕು’ ಎಂಬ ಮಂಡೇಲಾರ ಮಾತನ್ನು ಸ್ಮರಿಸಿದರು.
ಅತ್ಯಾಚಾರದ ವಿರುದ್ಧದ ಧ್ವನಿಯಷ್ಟೇ ಗಟ್ಟಿಯಾಗಿ ನಾವು ಮಲ ಹೊರುವ ಪದ್ಧತಿಯ ವಿರುದ್ಧವೂ ಧ್ವನಿ ಮೊಳಗಿಸಬೇಕೆಂದ ಮೂಡ್ನಾಕೂಡು ಚಿನ್ನಸ್ವಾಮಿ, ‘ 80 ಸಮ್ಮೇಳನಗಳು ನಡೆದರೂ ಇದುವರೆಗೂ ಒಬ್ಬೇ ಒಬ್ಬ ದಲಿತ ಸಾಹಿತಿ ಸಮ್ಮೇಳನಾಧ್ಯಕ್ಷರಾಗಿಲ್ಲ, ಇನ್ನು ಮುಂದಾದರೂ ಈ ಕೊರತೆ ನೀಗಲಿ, ಹಾಗೇನೇ ಮಹಿಳೆಯರಿಗೂ ಈ ಗೌರವ ದಕ್ಕಲಿ’ ಎಂಬ ಮನವಿ ಮಾಡಿಕೊಂಡರು. ನಂತರ ಮಾತನಾಡಿದ ಡಾ.ಎಚ್.ದಂಡಪ್ಪ ದಲಿತ ಸಾಹಿತ್ಯದ ಐತಿಹಾಸಿಕ ಹಿನ್ನೆಲೆ ಮತ್ತು ನಡೆದುಬಂದ ಹಾದಿಯನ್ನು ಮೆಲುಕುತ್ತಾ ದೇವನೂರ ಮಹದೇವರ ‘ದ್ಯಾವನೂರು’ ಮತ್ತು ಸಿದ್ದಲಿಂಗಯ್ಯನವರ ‘ಹೊಲೆಮಾದಿಗರ ಹಾಡು’ ಕವನ ಸಂಕಲನ ಬಿಡುಗಡೆಯಾದ ಸಂದರ್ಭವನ್ನು ನೆನೆದರು.
‘ದಲಿತ ಸಾಹಿತ್ಯ ಮತ್ತು ರಾಜಕೀಯ ದೃಷ್ಠಿಕೋನ’ ವಿಷಯವನ್ನು ಮಂಡಿಸಿದ ಡಾ.ಪ್ರಶಾಂತ್ ಜಿ.ನಾಯಕ್ ರವರು ದಲಿತರ ಕಷ್ಟ ನಷ್ಟ ,ದು:ಖ,ದುಗುಡ,ದುಮ್ಮಾನಗಳನ್ನು ಆಲಿಸದ ಸಂಕಟ, ನೋವಿನ ಪ್ರತಿಫಲವಾಗಿ ‘ದಲಿತರು ಬಂದರು ದಾರಿಬಿಡಿ, ದಲಿತರ ಕೈಗೆ ರಾಜ್ಯ ಕೊಡಿ’ ಅಥವಾ ‘ಇಕ್ಕರ್ಲಾ ಒದಿರ್ಲಾ ‘ ಎಂಬಂಥ ಸಾಲುಗಳು ಮೂಡಿಬಂದದ್ದೋ ಹೊರತು ಇದು ಯಾರ ಮೇಲಿನ ದ್ವೇಶದಿಂದಲೂ ಅಲ್ಲ ಎಂದರು. ಲೋಕಪಾಲ ಅಂದ್ರೇನು ಎಂದು ಗೊತ್ತಿಲ್ಲದವರೂ ರ್ಯಾಲಿಯಲ್ಲಿ ಭಾಗವಹಿಸಿದ್ದೇಕೆಂದರೆ ಕಾಲೇಜಿನ ಯುವ ಪೀಳಿಗೆ ಕೂಡಾ ನೋಡಿರಬಹುದಾದ ಸಣ್ಣ ಪುಣ್ಣ ಭ್ರಷ್ಠಾಚಾರದ ವಿರುದ್ಧದ ಪ್ರತಿಕಾರದ ಸ್ವರೂಪವದು ಎಂದ ಅವರು ‘ಭ್ರಷ್ಠತೆಯಿಂದ ನೊಂದಷ್ಟೇ ಈ ನೆಲ ಜಾತಿ ವ್ಯವಸ್ಥೆಯಿಂದ ನೊಂದಿದೆ’ ಎಂದು ಹೇಳಿ ಮುಖ್ಯ ವೇದಿಕೆಯಲ್ಲಿ ಇದೇ ಮೊದಲ ಬಾರಿಗೆ ದಲಿತ ಸಾಹಿತ್ಯಕ್ಕೆ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ ತಿಳಿಸಿದರು.
ನಂತರ ವೇದಿಕೆಗೆ ಬಂದ ಕಾರ್ಯಕ್ರಮದ ಅಧ್ಯಕ್ಷ ಡಾ. ಸಿದ್ದಲಿಂಗಯ್ಯ ಮಾತನಾಡುತ್ತಾ, ಕನ್ನಡ ಸಾಹಿತ್ಯದ ಕಷ್ಟ,ಕಾರ್ಪಣ್ಯ,ದುಃಖ,ದುಮ್ಮಾನ ನೋವುಗಳ ಭಾಗವೇ ದಲಿತ ಸಾಹಿತ್ಯ ಎಂದರು. ಎಲ್ಲಾ ಜಾತಿಯ ಪ್ರಗತಿಪರರೂ ದಲಿತ ಸಮಸ್ಯೆಗೆ ಕೈಜೋಡಿಸುವ ಅಗತ್ಯವಿದೆ ಎಂದ ಅವರು ದಲಿತರೆದೆಯಲ್ಲಿ ನೋವು ಮಡುಗಟ್ಟಿದೆ,ಹೊಟ್ಟೆಯಲ್ಲಿ ಸಂಕಟವಿದೆ, ತಲೆಬುರುಡೆ ಹೊಡೆದಿದೆ, ಆದರೆ ಮುಖದಲ್ಲಿ ಮಾತ್ರ ವಿಷಾದದ ನಗೆಯಿದೆ ಎಂದು ತಿಳಿಸಿದರು.
ಮೈಸೂರಿನ ನಂಜನಗೂಡಿನಲ್ಲಿ ಹಿಂದೊಮ್ಮೆ ನಂಜುಂಡೇಶ್ವರ ದೇವಸ್ಥಾನದೊಳಗೆ ಅಲ್ಲಿನ ದಲಿತ ಸಾಹಿತಿಯೊಬ್ಬರನ್ನು ಬಿಡಲಿಲ್ಲವಂತೆ ಆಗ ದೇವಸ್ಥಾನದ ಬೀದಿಯಲ್ಲಿ ನಿಂತ ಆ ಸಾಹಿತಿ ಅಲ್ಲಿನ ಎಲ್ಲರಿಗೂ ಕೇಳಿಸುವಂತೆ ‘ನಂಜುಂಡೇಶ್ವರನ ದರ್ಶನ ಭಾಗ್ಯ ಇಂದು ನನಗೆ ಸಿಗಲಿಲ್ಲ, ನನ್ನ ದರ್ಶನದ ಭಾಗ್ಯವೂ ನಂಜುಂಡೇಶ್ವರನಿಗೆ ಸಿಗಲಿಲ್ಲ’ ಎಂದು ಜೋರಾಗಿ ಕೂಗಿದ್ದರಂತೆ ಎಂಬ ಒಂದು ಘಟನೆಯನ್ನೂ ಈ ಸಂದರ್ಭದಲ್ಲಿ ನೆನೆದರು. ಈಗ ಬರುತ್ತಿರುವ ದಲಿತ ಸಾಹಿತ್ಯ ತಮಗೆ ತೃಪ್ತಿ ತಂದಿದೆ ಎಂದ ಅವರು ಈಗಿನ ದಲಿತ ಸಾಹಿತ್ಯ ಶಕ್ತವಾಗಿದೆ ಮತ್ತು ಶುದ್ಧ ಸಾಹಿತ್ಯದಿಂದ ಕೂಡಿದೆ ಎಂದು ತಿಳಿಸಿದರು. ಎಲ್ಲಾ ಜಾತಿ, ಕೋಮುಗಳಲ್ಲಿನ ನತದೃಷ್ಟರು, ಅಸಹಾಯಕರುಗಳ ವಿಮೋಚನೆಯಾಗಬೇಕಿದೆ’ ಎಂದು ತಿಳಿಸಿದ ಅವರು ಸಾಹಿತ್ಯ ಸಮ್ಮೇಳನಾಧ್ಯಕ್ಷರ ಭಾಷಣವನ್ನು ತುಂಬು ಹೃದಯದಿಂದ ಮೆಚ್ಚಿದರಲ್ಲದೆ ಅಧ್ಯಕ್ಷರ ಭಾಷಣದ ಕೆಲ ತುಣುಕುಗಳನ್ನು ಓದುತ್ತಾ ಸಮ್ಮೇಳನದ ಎಲ್ಲರಿಗೂ ವಂದಿಸಿದರು
 

‍ಲೇಖಕರು G

8 January, 2014

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading