ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಕನಸೆಂಬ ಮಾಯಾಲೋಕ’ ಕ್ಕೆ ಕರೆದೊಯ್ಯುತ್ತಾರೆ ಜೆ ಬಾಲಕೃಷ್ಣ

J Balakrishna

ಜೆ ಬಾಲಕೃಷ್ಣ

ಮಸುಕು ಸುಪ್ತ ಪ್ರಜ್ಞೆಯ ಆಳದಿಂದ ನಮ್ಮ ಬದುಕಿನ ಆದಿಮ

ಮತ್ತು ಪ್ರಾಚೀನ ವಾಂಛೆಗಳನ್ನು ಕನಸುಗಳು ಬಡಿದೆಬ್ಬಿಸುತ್ತವೆ

ನಮ್ಮ ಎಚ್ಚೆತ್ತ ಬದುಕಿನ ಸುಪ್ತ ಆಸೆಗಳನ್ನು ಈಡೇರಿಸಿಕೊಳ್ಳುವಂತೆ…

-ಜೇಮ್ಸ್ ಸುಲ್ಲಿ, 1893

ಕನಸುಗಳಿಲ್ಲದಿದ್ದಲ್ಲಿ ನಮ್ಮ ಬದುಕೇ ನೀರಸವಾಗಿರುತ್ತಿತ್ತು. ಒಂದು ರೀತಿಯಲ್ಲಿ ನಮ್ಮ ಕನಸುಗಳೇ ನಮ್ಮನ್ನು ಜೀವಂತವಾಗಿಟ್ಟಿವೆ. ಕನಸುಗಳಲ್ಲಿ ನಮ್ಮ ಆಸೆ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುತ್ತೇವೆ. ನಿಜ ಜೀವನದಲ್ಲಿ ಸಾಧ್ಯವಾಗದ ಕೆಲಸಗಳನ್ನು  ಮಾಡುವ ಹೀರೋಗಳಾಗುತ್ತೇವೆ. ಕನಸುಗಳು ನಮ್ಮೊಟ್ಟಿಗೇ ಹುಟ್ಟಿ ಬರುತ್ತವೆ. ಅವು ನಮ್ಮ ಭ್ರಮಾಲೋಕದ ಒಂದು ಭಾಗ ಮಾತ್ರ. ಎಚ್ಚೆತ್ತ ಬದುಕಿನಲ್ಲಿನ ಹಾಗೆ ಕನಸಿನಲ್ಲಿ ವಸ್ತುಗಳನ್ನು ನೋಡುತ್ತೇವೆ, ಶಬ್ದಗಳನ್ನು ಆಲಿಸುತ್ತೇವೆ, ಮನುಷ್ಯರನ್ನು ಪ್ರಾಣಿಗಳನ್ನು ಭೇಟಿಯಾಗುತ್ತೇವೆ. ಕೆಲವರು ನಮ್ಮೊಂದಿಗೆ ಸ್ನೇಹದಿಂದ ವರ್ತಿಸುತ್ತಾರೆ, ಇನ್ನು ಕೆಲವರು ನಮ್ಮನ್ನು ಹೆದರಿಸುವ, ಆಕ್ರಮಣ ಮಾಡುವ ದುಷ್ಟರಾಗಿರುತ್ತಾರೆ. ಪರಿಚಯವಿಲ್ಲದ, ನಾವು ಕಂಡೇ ಇಲ್ಲದ ಕೆಲವರು ನಮ್ಮ ಪ್ರೇಮಿಗಳಾಗಿಯೂ ಬರಬಹುದು.
ಕನಸುಗಳು ಮನುಷ್ಯನನ್ನು ಪ್ರಾಚೀನ ಕಾಲದಿಂದಲೂ ವಿಸ್ಮಯಗೊಳಿಸಿವೆ. ಅವು ಭವಿಷ್ಯದ ಸೂಚನೆಗಳೆಂದೂ, ಹಿಂದಿನ ಜನ್ಮದ ನೆನಪುಗಳೆಂದೂ ಆಥವಾ ಕನಸುಗಳಲ್ಲಿ ನಾವು ಮತ್ತೊಂದು ಮಾಯಾಲೋಕಕ್ಕೆ ಪ್ರವೇಸಿಸುತ್ತೇವೆಯೊ, ಇನ್ನೂ ಏನೇನೋ ಕಲ್ಪಿಸಿಕೊಂಡು ಕನಸುಗಳ ತಲೆಬುಡ ಅರಿಯಲಾಗದೆ ಅವುಗಳ ಬಗ್ಗೆ ಗಾಬರಿಯಾಗಿದ್ದೇವೆ. ನಿದ್ದೆಯನ್ನು ಸಾವಿನ ಸೋದರನೆಂದು ತಿಳಿದಿದ್ದ ಗ್ರೀಕರು, ನಿದ್ದೆಯ ಸಮಯದಲ್ಲಿ ನಮ್ಮ ಆತ್ಮ ದೇಹ ಬಿಟ್ಟು ಹೊರಗೆಲ್ಲಾ ಅಡ್ಡಾಡುತ್ತದೆ, ಅದೇ ಕನಸು ಎಂದು ತಿಳಿದಿದ್ದರು. ರೋಮನ್ ಚಕ್ರವರ್ತಿ ಜೂಲಿಯಸ್ ಸೀಸರ್ ತಾನು ಕೊಲೆಯಾದ ದಿನ ಹೊರ ಹೊರಟಾಗ ಆತನ ಪತ್ನಿ ತಾನು ಅಪಶಕುನದ ಕನಸು ಕಂಡದ್ದಾಗಿಯೂ, ಏನೋ ಕೇಡು ಕಾದಿರಬಹುದೆಂದು ತನ್ನ ಪತಿಯನ್ನು ಹೊರಗೆ ಹೋಗಬೇಡವೆಂದು ಕೇಳಿಕೊಳ್ಳುತ್ತಾಳೆ.
ಕನಸುಗಳೆಂದರೆ ಏನು? ಅವು ಏಕೆ ಬರುತ್ತವೆ? ಎಲ್ಲರೂ ಕನಸು ಕಾಣುತ್ತಾರೆಯೆ? ಕುರುಡರೂ ಕನಸು ಕಾಣುತ್ತಾರೆಯೆ? ಎಲ್ಲಾ ಕನಸುಗಳೂ ಏಕೆ ನೆನಪಿನಲ್ಲಿರುವುದಿಲ್ಲ? ನಿದ್ರಿಸುವಾಗ ಕೆಲಮಂದಿ ಮಾತನಾಡುವುದು ಮತ್ತು ಓಡಾಡುವುದು ಏಕೆ? ಕನಸೆಂಬ ಮಾಯಾಲೋಕದ ಬಗೆಗಿನ ಇನ್ನೂ ಹತ್ತು ಹಲವಾರು ಪ್ರಶ್ನೆಗಳಿಗೆ ವಿಜ್ಞಾನ ಸರಿಯಾದ ಉತ್ತರ ದೊರಕಿಸಿಕೊಡಲು ಪ್ರಯತ್ನಿಸುತ್ತಿದೆ.
ಕನಸುಗಳನ್ನು ತಿಳಿದುಕೊಳ್ಳಬೇಕಾದಲ್ಲಿ ನಿದ್ರೆಯ ಬಗೆಗೂ ತಿಳಿದುಕೊಳ್ಳುವುದು ಅವಶ್ಯಕ.
1
ನಮ್ಮ ದೇಹ ಒಂದು ಜೈವಿಕ ಗಡಿಯಾರ. ಹಗಲು – ರಾತ್ರಿಗೆ ನಮ್ಮ ದೇಹ ಮತ್ತು ಮನಸ್ಸು ಹೊಂದಿಕೊಂಡುಬಿಟ್ಟಿದೆ. ರಾತ್ರಿಯಾದಂತೆ ನಿದ್ದೆ ಬರುತ್ತದೆ, ಬೆಳಗಾದಂತೆ ಎಚ್ಚರವಾಗುತ್ತದೆ. ನಮ್ಮ ಬದುಕಿನ ಸುಮಾರು 1/3 ಭಾಗ ನಿದ್ದೆಯಲ್ಲೇ ಕಳೆಯುತ್ತೇವೆ. ನಿದ್ದೆ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಬಹಳ ಮುಖ್ಯವಾದುದು. ದೇಹಕ್ಕಾಗಲಿ, ಮಿದುಳಿಗಾಗಲಿ ಆಯಾಸವಾದಾಗ ನಿದ್ದೆ ಬರುತ್ತದೆ. ನಿದ್ದೆಯಿಂದ ಎಚ್ಚರವಾದಾಗ ಮೈಮನ ಹಗುರಾಗಿರುತ್ತದೆ. ನಮ್ಮ ದೇಹದ ಪ್ರತಿಯೊಂದು ಜೀವಕೋಶದ ರಿಪೇರಿ ಕೆಲಸ ಹಾಗೂ ದೇಹದ ಅಂಗಾಂಗಗಳ ಪುನಃಶ್ಚೇತನ ನಿದ್ದೆಯ ಸಮಯದಲ್ಲಿ ನಡೆಯುತ್ತದೆ. ಒಂದು ರಾತ್ರಿ ನಿದ್ದೆಯಿಲ್ಲದಿದ್ದಲ್ಲಿ ಮರುದಿನ ಚಡಪಡಿಸುತ್ತೇವೆ, ತೂಕಡಿಸ ತೊಡಗುತ್ತೇವೆ. ಆಲೋಚನಾ ಶಕ್ತಿಯೇ ಕುಂಠಿತವಾಗುತ್ತದೆ. ಸ್ವಾಸ್ಥ್ಯ ಹಾಳಾಗತೊಡಗುತ್ತದೆ. ಮೂರು ನಾಲ್ಕು ದಿನ ನಿದ್ದೆಯಿಲ್ಲದೆ ಕೆಲಸ ಮಾಡಬೇಕಾದಾಗ ವೈದ್ಯರು ಬಹು ಬೇಗ ಸೋಂಕಿಗೆ ಒಳಗಾಗುತ್ತಾರೆ. ಅಲ್ಲದೆ ಅವರಲ್ಲಿ ಸಿಡುಕಿನ ಪ್ರವೃತ್ತಿ ಬರುತ್ತದೆ. ತೀರಾ ನಿದ್ದೆಯಿಂದ ವಂಚಿತರಾದವರಲ್ಲಿ ಆಲೋಚನಾ ಶಕ್ತಿ ಕುಂಠಿತವಾಗಿ ಅವರ ನಡೆವಳಿಕೆ ಮಾನಸಿಕ ರೋಗಿಗಳ ಹಾಗಾಗುತ್ತದೆಂದು ವಿಜ್ಞಾನಿಗಳು ಹೇಳಿದ್ದಾರೆ.
ಜೀವಕೋಶಗಳಲ್ಲಿನ ರಾಸಾಯನಿಕಗಳು ಅತಿ ಸೂಕ್ಷ್ಮ ಪ್ರಮಾಣದಲ್ಲಿ ವಿದ್ಯುಚ್ಛಕ್ತಿಯನ್ನು ಉತ್ಪಾದಿಸುತ್ತವೆ. ನಮ್ಮ ಮಿದುಳೆಂದರೆ ಲೆಕ್ಕವಿಲ್ಲದಷ್ಟು ಜೀವಕೋಶಗಳ ಸಂಕೀರ್ಣ ಜಾಲ. ಮಿದುಳಿನಿಂದ ವಿದ್ಯುತ್ ತರಂಗಗಳ ಮೂಲಕ ಸಂದೇಶಗಳು ಹೊರಟು ನಮ್ಮ ಇಡೀ ದೇಹವನ್ನು ನಿಯಂತ್ರಿಸುತ್ತವೆ. ಆ ಸೂಕ್ಷ್ಮ ವಿದ್ಯುತ್ ಸಂದೇಶಗಳನ್ನು ಎಲೆಕ್ಟ್ರೋ ಎನ್ಸೆಫಲೋಗ್ರಾಮ್ ಉಪಕರಣ ಬಳಸಿ ಕಾಗದದ ಮೇಲೆ ಅಲೆಅಲೆಯಂತೆ ದಾಖಲಿಸಬಹುದು. ಈ ದಾಖಲೆಯನ್ನು ಎಲೆಕ್ಟ್ರೋ ಎನ್ಸೆಫಲೋಗ್ರಾಫ್ ಎನ್ನುತ್ತಾರೆ (ಚಿತ್ರ ನೋಡಿ).
ಎಲೆಕ್ಟ್ರೋ ಎನ್ಸೆಫಲೋಗ್ರಾಫ್ನ ರೇಖೆಗಳು ಮನುಷ್ಯನ ಮಿದುಳಿನ ಚಟುವಟಿಕೆಯನ್ನನುಸರಿಸಿ ಹತ್ತಿರ ಹತ್ತಿರ ಇಕ್ಕಟ್ಟಾಗಿ ಸೇರಿರುತ್ತವೆ ಅಥವಾ ನಿಧಾನದ ಅಲೆಯ ಹಾಗೆ ದೂರ ದೂರವಿರುತ್ತವೆ. ಮನುಷ್ಯ ಎಚ್ಚೆತ್ತಿರುವಾಗ ಆ ಅಲೆಗಳಲ್ಲಿನ ಉಬ್ಬು ತಗ್ಗುಗಳು ಒಂದು ಸೆಕೆಂಡಿಗೆ ಸುಮಾರು 10 ಇರುತ್ತವೆ. ಮನುಷ್ಯ ತೂಕಡಿಸತೊಡಗಿದರೆ ಅವುಗಳ ಸಂಖ್ಯೆ ಕಡಿಮೆಯಾಗುತ್ತಾ ಬರುತ್ತದೆ. ಅಂದರೆ ಮಿದುಳಿನ ಎಚ್ಚರ ಸಹ ಕಡಿಮೆಯಾಗುತ್ತಿದೆ ಎಂದರ್ಥ. ಮನುಷ್ಯ ಸಂಪೂರ್ಣ ನಿದ್ದೆ ಮಾಡತೊಡಗಿದಲ್ಲಿ ಆ ಅಲೆಗಳಲ್ಲಿನ ಉಬ್ಬು ತಗ್ಗುಗಳು ಒಂದು ಸೆಕೆಂಡಿಗೆ 1ರಿಂದ 3ರಷ್ಟಿರಬಹುದು. ಮನುಷ್ಯನ ಮಿದುಳಿನ ತಂತಿಗಳನ್ನು ಜೋಡಿಸಿ ರಾತ್ರಿಯೆಲ್ಲಾ ಮಿದುಳಿನ ವಿದ್ಯುತ್ ಬರವಣಿಗೆಯನ್ನು ಮಾಡಿದರೆ, ಬರೇ ಅದರಿಂದಲೇ ಆ ವ್ಯಕ್ತಿ ಎಷ್ಟು ಗಂಟೆ ಎಚ್ಚರವಿದ್ದ, ಎಷ್ಟು ಗಂಟೆ ತೂಕಡಿಸಿದ್ದ ಹಾಗೂ ಎಷ್ಟು ಗಂಟೆ ನಿದ್ದೆ ಮಾಡಿದ್ದ ಎನ್ನುವುದು ತಿಳಿಯುತ್ತದೆ.
1950ರ ದಶಕದ ಮೊದಲು ಚಿಕಾಗೋದಲ್ಲಿ ಡಾ.ಕ್ಲೀಟ್ಮನ್, ಡಾ.ಅಸೆರಿನ್ಸ್ಕಿ ಹಾಗೂ ಡಾ.ಬಿಲ್ ಡಿಮೆಂಟ್ ನಿದ್ದೆಯ ಬಗ್ಗೆ ಸಂಶೋಧನೆ ನಡೆಸುತ್ತಿದ್ದರು. ನಿದ್ರಿಸುವವರನ್ನು ಗಮನಿಸುತ್ತಿದ್ದಾಗ ಅವರು ನಿದ್ದೆಯಲ್ಲಿಯೇ ಇದ್ದಕ್ಕಿದ್ದಂತೆ ಚಡಪಡಿಸುವುದು ಮತ್ತು ಕಣ್ಣರೆಪ್ಪೆಗಳು ಮುಚ್ಚಿರುವಂತೆಯೇ ಕಣ್ಣುಗುಡ್ಡೆಗಳನ್ನು ಅತ್ತಿತ್ತ ನೋಡುವಂತೆ ಚಲಿಸುತ್ತಿದ್ದರು. ದೊಡ್ಡವರಲ್ಲಿ ಈ ರೀತಿಯ ಚಡಪಡಿಕೆ ಸುಮಾರು ಒಂದೂವರೆ ಗಂಟೆಯ ಕಾಲ ಇದ್ದರೆ ಸಣ್ಣ ಮಕ್ಕಳಲ್ಲಿ ಸುಮಾರು ಒಂದು ಗಂಟೆಯ ಕಾಲ ನಡೆಯುತ್ತಿತ್ತು. ನಂತರ ಒಂದು ಒಂದೂವರೆ ಗಂಟೆಯ ಕಾಲ ಪ್ರಶಾಂತವಾಗಿ ನಿದ್ರಿಸುತ್ತಿದ್ದರು. ಮತ್ತೆ ಅದೇ ರೀತಿಯ ಚಡಪಡಿಕೆ, ಕಣ್ಣುಗುಡ್ಡೆಗಳ ಚಲಿಸಾಟ ಶುರುವಾಗುತ್ತಿತ್ತು. ಈ ರೀತಿಯ ಚಡಪಡಿಕೆ ಪ್ರತಿ ರಾತ್ರಿ ನಾಲ್ಕರಿಂದ ಆರು ಬಾರಿ ಕಾಣಿಸಿಕೊಳ್ಳುತ್ತಿತ್ತು. ನಿದ್ದೆಯಲ್ಲಿ ಈ ರೀತಿಯ ಚಡಪಡಿಕೆಯ ಹಂತವನ್ನು ‘ತೀವ್ರ ಕಣ್ಣು ಚಲಿಸಾಟದ ನಿದ್ದೆ’ ಅಥವಾ ರೆಮ್ ನಿದ್ದೆ ಎಂದೂ, ಪ್ರಶಾಂತವಾಗಿ ನಿದ್ರಿಸುತ್ತಿದ್ದ ಹಂತವನ್ನು ‘ತೀವ್ರ ಕಣ್ಣು ಚಲಿಸಾಟವಿಲ್ಲದ ನಿದ್ದೆ’ ಅಥವಾ ರೆಮ್ ಇಲ್ಲದ ನಿದ್ದೆ ಎಂದೂ ಕರೆದರು. ನಿದ್ದೆಯ ಈ ಹಂತಗಳ ತಮಾಷೆ ಎಂದರೆ, ನಾವು ಚಡಪಡಿಸುವಾಗ, ಕಣ್ಣುಗುಡ್ಡೆಗಳನ್ನು ಅತ್ತಿತ್ತ ತಿರುಗಾಡಿಸುವಾಗ ನಾವು ಗಾಢ ನಿದ್ರೆಯಲ್ಲಿರುತ್ತೇವೆ ಹಾಗೂ ‘ಪ್ರಶಾಂತ’ವಾಗಿ ಮಲಗಿರುವಾಗ ಹಗುರ ನಿದ್ರೆಯಲ್ಲಿರುತ್ತೇವೆ.
ನಿದ್ದೆಯಲ್ಲಿ ಕಣ್ಣುಗಳನ್ನು ಅತ್ತಿತ್ತ ತಿರುಗಾಡಿಸುತ್ತಾರೆಂದರೆ ಅಂತಹ ವ್ಯಕ್ತಿ ಕನಸುಗಳನ್ನು ನೋಡುತ್ತಿರಬಹುದೆ ಎಂದು ವಿಜ್ಞಾನಿಗಳು ಆಲೋಚಿಸಿದರು. ಅದನ್ನು ಪರೀಕ್ಷಿಸಲು ಗಾಢ ನಿದ್ದೆಯಲ್ಲಿದ್ದವರನ್ನು (ರೆಮ್ ನಿದ್ದೆ) ಹಾಗೂ ಹಗುರ ನಿದ್ದೆಯಲ್ಲಿದ್ದವರನ್ನು (ರೆಮ್ ಇಲ್ಲದ ನಿದ್ದೆ) ಎಚ್ಚರಿಸಿ ಅವರು ಕನಸು ಕಾಣುತ್ತಿದ್ದಾರೆಯೇ ಎಂದು ವಿಚಾರಿಸಿದರು.
ಅವರ ಸಂಶೋಧನೆಯಲ್ಲಿ ಗಾಢ ನಿದ್ದೆಯಲ್ಲಿದ್ದವರಲ್ಲಿ ಶೇ.80ರಷ್ಟು ಮಂದಿ ಕನಸು ಕಾಣುತ್ತಿದ್ದರು ಹಾಗೂ ಹಗುರ ನಿದ್ದೆಯಲ್ಲಿದ್ದವರಲ್ಲಿ ಕೇವಲ ಶೇ.7ರಷ್ಟು ಮಂದಿ ಮಾತ್ರ ಕನಸು ಕಾಣುತ್ತಿದ್ದರು. ಅಲ್ಲದೆ ಅವರಿಗೆ ತಾವು ಕಾಣುತ್ತಿದ್ದ ಕನಸುಗಳ್ಯಾವುವೆಂದು ಸ್ಪಷ್ಟವಾಗಿ ತಿಳಿದಿರಲೂ ಇಲ್ಲ. ವಿಜ್ಞಾನಿಗಳ ಪ್ರಕಾರ ಹಗುರ ನಿದ್ದೆಯಲ್ಲಿ ಕನಸು ಕಂಡೆವೆಂದು ಹೇಳಿದವರು ಗಾಢ ನಿದ್ದೆಯಲ್ಲಿ ಕಂಡ ಕನಸುಗಳ ತುಣುಕುಗಳು ನೆನಪಿನಲ್ಲಿದ್ದು ಅವುಗಳನ್ನೇ ತಿಳಿಸಿದ್ದರು. ನಿದ್ರೆಯಲ್ಲಿ ಗಾಢ ನಿದ್ರೆಯ ಹಂತ ತಲುಪಿದ ಬಹಳ ಸಮಯದ ನಂತರ ಎಚ್ಚರಿಸಿ ಕನಸಿನ ವಿವರಣೆ ಪಡೆದಾಗ ಅದು ದೀರ್ಘವಾಗಿರುತ್ತಿತ್ತು. ಅದೇ ಗಾಢ ನಿದ್ರೆಯ ಹಂತ ತಲುಪಿದಾಗ ಐದು ಹತ್ತು ನಿಮಿಷಕ್ಕೆಲ್ಲ ಎಚ್ಚರಗೊಳಿಸಿ ಕನಸಿನ ವಿವರಣೆ ಪಡೆದಲ್ಲಿ ಅದು ಅಷ್ಟೇ ಚುಟುಕಾಗಿರುತ್ತಿತ್ತು.
ಗಾಢ ನಿದ್ರೆಯ ಸಮಯದಲ್ಲಿ ಕಣ್ಣುಗುಡ್ಡೆಗಳ ಚಲಿಸಾಟದ ಜೊತೆಗೆ ನಮ್ಮ ದೇಹದಲ್ಲಿ ಇನ್ನೂ ಹಲವಾರು ಬದಲಾವಣೆಗಳಾಗುತ್ತವೆ. ಮಿದುಳು ಮತ್ತು ಜನನಾಂಗಗಳಿಗೆ ರಕ್ತ ಪರಿಚಲನೆ ಹೆಚ್ಚಾಗುತ್ತದೆ, ಎದೆ ಬಡಿತ ಕೊಂಚ ಏರುಪೇರಾಗುತ್ತದೆ, ಗಂಟಲ ಸ್ನಾಯುಗಳು ತಮ್ಮ ಬಿಗಿ ಸಡಿಲಿಸಿ ಆರಾಮಾಗುತ್ತವೆ. ಅಲ್ಲದೆ ಕೈಕಾಲುಗಳು ಅತ್ತಿತ್ತ ಚಲಿಸಲಾಗದಂದೆ ಜಡಗಟ್ಟಿರುತ್ತವೆ. ಆ ಸಮಯದಲ್ಲಿ ನಮ್ಮ ಪ್ರಜ್ಞೆ ಎಚ್ಚರಗೊಳ್ಳುತ್ತದೆ. ಆದರೆ ಬಾಹ್ಯ ಪ್ರಪಂಚಕ್ಕಲ್ಲ, ನಮ್ಮ ಆಂತರಿಕ ಪ್ರಪಂಚಕ್ಕೆ, ನಮ್ಮಲ್ಲಿನ ಭ್ರಾಮದ ಲೋಕಕ್ಕೆ ಹಾಗೂ ತನ್ಮೂಲಕ ಕನಸೆಂಬ ಮಾಯಾಲೋಕಕ್ಕೆ.
ನಾವು ಗಾಢ ನಿದ್ದೆಯಲ್ಲಿರುವಾಗ ಅತ್ತಿತ್ತ ಕಣ್ಣುಗುಡ್ಡೆಗಳನ್ನು ಚಲಿಸುವುದು ಕನಸುಗಳನ್ನು ನೋಡುವುದಕ್ಕಲ್ಲ. ಕೆಲವು ಸಂದರ್ಭಗಳಲ್ಲಿ ಕನಸುಗಳನ್ನು ನೋಡುತ್ತಿರಬಹುದು. ಆದರೆ ಸಾಮಾನ್ಯವಾಗಿ ಅದು ಮಿದುಳು ಉದ್ರೇಕ ಸ್ಥಿತಿಯಲ್ಲಿರುವುದರ ಸೂಚಕ. ಕೆಲವೊಮ್ಮೆ ಉದ್ರೇಕದ ಕನಸುಗಳನ್ನು ಕಾಣುವಾಗಲೂ ಮಿದುಳು ಉದ್ರೇಕಗೊಳ್ಳುತ್ತದೆ.
2
ನಮ್ಮ ಹಗಲುಗನಸುಗಳೂ ಸಹ ಕನಸುಗಳೆ. ಆದರೆ ಅವುಗಳನ್ನು ಕಾಣುವಾಗ ರಾತ್ರಿ ಕನಸುಗಳ ಹಾಗೆ ಅವನ್ನು ವಾಸ್ತವವೆಂದು ನಾವು ತಿಳಿಯುವುದಿಲ್ಲ. ಹಿಂದೆ ನಡೆದಿರುವ ಘಟನೆಗಳ ಚಿತ್ರಗಳು ನಮ್ಮ ಕಣ್ಣ ಮುಂದೆ ಹಾದು ಹೋಗುತ್ತವೆ ಅಥವಾ ಯಾವುದಾದರೂ ಘಟನೆ ಮುಂದೆ ಹೇಗೆ ನಡೆಯಬಹುದೆಂದು ಊಹಿಸಿಕೊಳ್ಳುತ್ತೇವೆ. ಕೆಲವೊಮ್ಮೆ ನಮ್ಮ ಅಸಹಾಯಕತೆ ಮತ್ತು ಸೋಲುಗಳನ್ನು ಹಗಲುಗನಸುಗಳಲ್ಲಿ ‘ಹೀರೋ’ಗಳಾಗಿ ಗೆಲ್ಲುವುದಾಗಿ ಊಹಿಸಿಕೊಳ್ಳುತ್ತೇವೆ. ನಾವು ಪ್ರೀತಿಸುವ ವ್ಯಕ್ತಿಯನ್ನು ಅಪ್ಪಿ ಮುದ್ದಾಡಿದ ಹಾಗೆ, ದ್ವೇಷಿಸುವ ವ್ಯಕ್ತಿಯನ್ನು ಚಚ್ಚಿ ಹಾಕಿದ ಹಾಗೆ ಕನಸು ಕಾಣುತ್ತೇವೆ. ಹಗಲುಗನಸುಗಳಲ್ಲಿ ನಮಗೆ ಬೇಕಾದ್ದ ಕಾಣಬಹುದು. ಆದರೆ ಸಾಮಾನ್ಯವಾಗಿ ರಾತ್ರಿ ಕನಸಿನ ಕಲ್ಪನಾ ಪ್ರಪಂಚ ನಮ್ಮ ನಿಯಂತ್ರಣದಲ್ಲಿರುವುದಿಲ್ಲ. ಆದರೂ ಶೇ.5ರಿಂದ 10ರಷ್ಟು ಜನ ತಮ್ಮ ಕನಸುಗಳನ್ನು ನಿಯಂತ್ರಿಸಬಲ್ಲವರಾಗಿರುತ್ತಾರೆ. ತಮ್ಮ ಇಚ್ಛೆಗನುಗುಣವಾಗಿ ಕನಸುಗಳಲ್ಲಿನ ಘಟನೆಗಳನ್ನು ನಿಯಂತ್ರಿಸಬಲ್ಲವರಾಗಿರುತ್ತಾರೆ.
ಕನಸಿನಲ್ಲಿನ ಘಟನೆಗಳು ಅದೇ ಕ್ಷಣ ನಡೆಯುತ್ತಿರುವಂತೆ, ಅವು ವಾಸ್ತವವೆಂಬಂತೆ ನಾವು ಅವುಗಳಲ್ಲಿ ಭಾಗಿಗಳಾಗಿಯೋ, ಪ್ರೇಕ್ಷಕರಾಗಿಯೋ ಇರುತ್ತೇವೆ. ರೊಮ್ಯಾಂಟಿಕ್ ಸನ್ನಿವೇಶ ಬಂದಾಗ ಅದರಲ್ಲಿ ದೈಹಿಕವಾಗಿ ತೊಡಗಿಸಿಕೊಂಡಂತೆ ಮೈ ನವಿರೆಬ್ಬಿಸಿ ಉದ್ರೇಕದಿಂದ ಸ್ಖಲಿಸಿಯೂ ಬಿಡುತ್ತೇವೆ. ಬಣ್ಣದ ಜಗತ್ತಿನಲ್ಲಿ ಬದುಕುತ್ತಿರುವ ನಮಗೆ ಬೀಳುವ ಕನಸುಗಳೂ ಬಣ್ಣದವೇ. ಖಿನ್ನತೆ ನಮ್ಮನ್ನು ಆವರಿಸಿದಾಗ ಕನಸುಗಳು ಸಾಮಾನ್ಯವಾಗಿ ಬೂದು ಬಣ್ಣದಲ್ಲಿರುತ್ತವೆ.
ದಿನನಿತ್ಯದ ಬದುಕಿನಲ್ಲಿನ ನಮ್ಮ ಇಂದ್ರಿಯಗಳ ಎಲ್ಲಾ ಅನುಭವಗಳನ್ನೂ ಕನಸುಗಳಲ್ಲಿ ಅನುಭವಿಸಬಹುದು. ಹುಟ್ಟಿನಿಂದಲೇ ಯಾವುದಾದರೂ ಇಂದ್ರಿಯಗಳ ನ್ಯೂನತೆ ಇದ್ದು ಆಯಾ ಇಂದ್ರಿಯಗಳ ಅನುಭವ ಪಡೆಯಲಾಗಿರದಿದ್ದಲ್ಲಿ ಕನಸುಗಳಲ್ಲಿ ಆ ಇಂದ್ರಿಯದ ಅನುಭವಗಳು ಬರುವುದೇ ಇಲ್ಲ. ಹುಟ್ಟು ಕಿವುಡರ ಕನಸುಗಳಲ್ಲಿ ಶಬ್ದಗಳೇ ಇರುವುದಿಲ್ಲ. ಕುರುಡರೂ ಸಹ ಕನಸು ಕಾಣುತ್ತಾರೆ. ಆದರೆ ಅವರ ಕನಸುಗಳಲ್ಲಿ ದೃಶ್ಯಗಳೇ ಇರುವುದಿಲ್ಲ. ಅವರು ಕನಸುಗಳಲ್ಲಿ ತಮ್ಮ ದಿನನಿತ್ಯದ ಬದುಕಿನಲ್ಲಿರುವಂತೆಯೇ ಮನುಷ್ಯರನ್ನು ಭೇಟಿಯಾಗುತ್ತಾರೆ, ಶಬ್ದಗಳನ್ನು ಆಲಿಸುತ್ತಾರೆ, ವಸ್ತುಗಳನ್ನು ಸ್ಪಶರ್ಿಸುತ್ತಾರೆ ಮತ್ತು ವಾಸನೆ ಸಹ ನೋಡುತ್ತಾರೆ. ಆದರೆ ಸಾಮಾನ್ಯವಾಗಿ ಹುಟ್ಟಿದ ಏಳು ವರ್ಷಗಳ ನಂತರ ಕುರುಡರಾದಲ್ಲಿ ಅಂಥವರ ಕನಸುಗಳಲ್ಲಿ ದೃಶ್ಯಗಳಿರುತ್ತವೆ.
ನಮ್ಮ ಕನಸುಗಳಿಗೆ ಸರಕು ಒದಗಿಸುವುದು ನಮ್ಮ ಹಿಂದಿನ ಅಥವಾ ಇತ್ತೀಚಿನ ದಿನಗಳ ಘಟನೆ ಅಥವಾ ಅನುಭವಗಳೇ ಹೊರತು ಮುಂದಾಗಬಹುದಾದ ಘಟನೆ ಅಥವಾ ಅನುಭವಗಳಲ್ಲ. ತೀರಾ ಸಣ್ಣ ಮಕ್ಕಳ ಕನಸುಗಳಲ್ಲಿ ಕಾಗಕ್ಕ, ಗುಬ್ಬಕ್ಕ ಬಂದರೆ ಸ್ವಲ್ಪ ದೊಡ್ಡ ಮಕ್ಕಳಲ್ಲಿ ಶಾಲೆ, ಮಾಸ್ತರು, ಪರೀಕ್ಷೆಗಳು, ಆಟೋಟಗಳು ಬರಬಹುದು. ಹಸಿವೆಯಾಗುತ್ತಿರುವವರಲ್ಲಿ ವಿಧವಿಧದ ಭಕ್ಷ್ಯ ಭೋಜನಗಳು, ಯುದ್ಧಗಳಲ್ಲಿರುವ ಸೈನಿಕನಿಗೆ ತಮ್ಮ ಕುಟುಂಬ ಮತ್ತು ಊರು ಕನಸುಗಳಲ್ಲಿ ಬರಬಹುದು. ಒಟ್ಟಾರೆ, ನಮ್ಮ ಆಲೋಚನೆ ಹಾಗೂ ಕನಸುಗಳನ್ನು ರೂಪಿಸುವುದು ನಮ್ಮಲ್ಲಿನ ಆಸೆಗಳು. ತೀರಾ ಹೆದರಿಕೆ, ಯೋಚನೆ, ಒತ್ತಡಗಳೂ ಸಹ ಕನಸುಗಳ ಮೇಲೆ ಪ್ರಭಾಗ ಬೀರುತ್ತವೆ. ಪ್ರಯೋಗಗಳು ತೋರಿಸಿರುವಂತೆ ನಿದ್ದೆಯ ಆರಂಭದಲ್ಲಿ ಹಿಂದಿನ ಕೆಲದಿನಗಳ ಅನುಭವಗಳು ಕನಸುಗಳಲ್ಲಿ ಬಂದರೆ, ನಿದ್ದೆ ದೀರ್ಘವಾದ ಹಾಗೆ ಅವು ಹೆಚ್ಚು ಭಾವನಾತ್ಮಕವಾಗುತ್ತವೆ ಹಾಗೂ ನಮ್ಮ ಚಿಕ್ಕಂದಿನ, ಹಸುಗೂಸಿನ ದಿನಗಳಲ್ಲಿನ ಅನುಭವಗಳ ಪ್ರತಿಮೆಗಳು, ಸಂಕೇತಗಳು ಕನಸುಗಳಲ್ಲಿ ಬರತೊಡಗುತ್ತವೆ.
ಕನಸುಗಳನ್ನು ಬದಲಿಸಬಹುದೆ?
ನಿದ್ರೆಯ ಯಾವ ಸಮಯದಲ್ಲಿ ಕನಸುಗಳು ಬರುತ್ತವೆ ಎಂಬುದನ್ನು ಕಂಡುಕೊಂಡ ವಿಜ್ಞಾನಿಗಳು ಕನಸುಗಳನ್ನು ಬದಲಿಸುವುದಾಗಲಿ ಅಥವಾ ಕನಸುಗಳನ್ನು ಉಂಟು ಮಾಡುವುದಾಗಲಿ ಸಾಧ್ಯವೆ ಎಂಬುದನ್ನು ಪರೀಕ್ಷಿಸಿದರು. ನಿದ್ರೆಯ ಸಮಯದಲ್ಲಿ ನಮ್ಮ ಸುತ್ತಮುತ್ತಲೂ ನಡೆಯುವ ಹಲವಾರು ಘಟನೆಗಳಿಗೂ ನಮ್ಮ ಕನಸುಗಳಿಗೆ ಸಂಬಂಧವಿದೆಯೆಂದು ಕಂಡುಕೊಂಡರು. ನಿದ್ರೆಯಲ್ಲಿ ತೀವ್ರ ಕಣ್ಣು ಚಲಿಸಾಟದ ಹಂತದಲ್ಲಿರುವವನ (ರೆಮ್ ನಿದ್ರೆಯಲ್ಲಿ) ಮೇಲೆ ನೀರು ಚಿಮುಕಿಸಿ ನಂತರ ಅವನನ್ನು ಎಚ್ಚರಿಸಿದಾಗ ಅವನ ಕನಸಲ್ಲಿ ಮಳೆ ಸುರಿಯುತ್ತಿತ್ತೆಂದು ತಿಳಿಸಿದ. ಒಬ್ಬಾತ ಕನಸಲ್ಲಿ ತಾನು ಒಂದು ಹಿಮಾವೃತ ಪ್ರದೇಶದಲ್ಲಿ ಚಳಿ ತಡೆಯಲಾರದೆ ನಡುಗುತ್ತಿರುವುದಾಗಿ ಕನಸು ಕಂಡ. ಚಳಿ ಹೆಚ್ಚಾಗಿ ಅವನಿಗೆ ಎಚ್ಚರವಾಯಿತು. ತಾನು ಮಲಗಿದ್ದ ಕೋಣೆಯ ಕಿಟಕಿ ಮುಚ್ಚಿರಲಿಲ್ಲ ಹಾಗೂ ಆತ ಹೊದಿಕೆಯನ್ನೂ ಹೊದ್ದಿರಲಿಲ್ಲ. ಕಿಟಕಿಯಿಂದ ಬೀಸುತ್ತಿದ್ದ ಥಂಡಿ ಗಾಳಿ ಅವನಲ್ಲಿ ಚಳಿಯ ಕನಸು ಕಾಣಿಸಿತ್ತು. ಎಷ್ಟೋ ಬಾರಿ ನಾವು ಅಲಾರಂ ಗಡಿಯಾರ ಇಟ್ಟು ಮಲಗಿ ಅಲಾರಂ ಶಬ್ದ ಮಾಡುವಾಗ ನಮ್ಮ ಕನಸಲ್ಲಿ ಮನೆಯ ಕಾಲಿಂಗ್ ಬೆಲ್ ಸದ್ದು ಮಾಡಿದಂತೆಯೋ ಅಥವಾ ಫೋನ್ ಗುಣಗುಣಿಸಿದಂತೆಯೋ ಕನಸು ಕಂಡಿರುತ್ತೇವೆ. ನಿದ್ರೆಯಲ್ಲಿರುವವರಿಗೆ ಯಾವುದಾದರೂ ಪದ ಕೇಳಿಸಿದಲ್ಲಿ ಆ ಪದದ ಅರ್ಥಕ್ಕಿಂತಲೂ ಅದರ ಶಬ್ದ ಕನಸಿನ ಮೇಲೆ ಪರಿಣಾಮ ಬೀರುತ್ತದೆ. ನಿದ್ರೆ ಮಾಡುತ್ತಿದ್ದ ಹುಡುಗಿಯ ಬಳಿ ‘ರಾಬಟರ್್’ ಎಂದು ಕರೆದಾಗ ಆಕೆ ‘ರ್ಯಾಬಿಟ್’ನ (ಮೊಲ) ಸಿನೆಮಾ ನೋಡುವಂತೆ ಕನಸು ಕಂಡಳಂತೆ.
ರಾತ್ರಿ ಭಯಾನಕ ಸಿನೆಮಾಗಳನ್ನು ನೋಡಿ ಮಲಗಿ ನಿದ್ರೆಯಲ್ಲಿ ‘ಭಯಾನಕ’ ಕನಸುಗಳನ್ನು ಕಂಡು ಬೆಚ್ಚಿ ಎಚ್ಚೆತ್ತಿರುವ ಅನುಭವಗಳು ಬಹುಶ: ಎಲ್ಲರಿಗೂ ಆಗಿರುತ್ತವೆ. ಮಕ್ಕಳು ರಾತ್ರಿಯೆಲ್ಲಾ ಪ್ರಶಾಂತವಾಗಿ ನಿದ್ರಿಸಬೇಕಾದರೆ ಅವರು ಮಲಗುವ ಮುನ್ನ ಎಂಥ ಕತೆಗಳನ್ನು ಓದುತ್ತಾರೆ ಹಾಗೂ ಟಿ.ವಿ.ಯಲ್ಲಿ ಎಂಥ ಕಾರ್ಯಕ್ರಮಗಳನ್ನು ನೋಡುತ್ತಾರೆ ಎನ್ನವುದರ ಬಗ್ಗೆ ತಂದೆತಾಯಿಗಳು ನಿಗಾ ವಹಿಸಬೇಕು.
ಕನಸುಗಳ ಸೃಷ್ಟಿ ಹೇಗೆ?
ಕನಸುಗಳ ಸೃಷ್ಟಿಯಾಗುವುದರ ಬಗೆಗಿನ ಹಲವಾರು ವೈಜ್ಞಾನಿಕ ವಿವರಣೆಗಳು ಸಾಕಷ್ಟು ವಸ್ತುನಿಷ್ಠ ಆಧಾರಗಳಿಲ್ಲದಿದ್ದರೂ ನರವಿಜ್ಞಾನ, ಮನೋವಿಜ್ಞಾನ, ಮನೋವಿಶ್ಲೇಷಣೆ, ನರರಾಸಾಯನ ಶಾಸ್ತ್ರ, ಕಂಪ್ಯೂಟರ್ ವಿಜ್ಞಾನಗಳ ಆಧಾರದ ಮೂಲಕ ಕನಸುಗಳ ಕಾರಣವನ್ನು ಪತ್ತೆಹಚ್ಚುವ ಕಾರ್ಯದಲ್ಲಿ ವಿಜ್ಞಾನಿಗಳು ನಿರತರಾಗಿದ್ದಾರೆ.
ನಮಗೆ ಬೇಸರವಾದಾಗ ಸಿನೆಮಾ ನೋಡುವುದಿಲ್ಲವೆ ಹಾಗೆ ನಿದ್ರೆಯ ಸಮಯದಲ್ಲಿ ನಮಗೆ ಬೋರಾಗದಿರಲೆಂದು ಕನಸುಗಳು ಕಾಣುತ್ತೇವೆ ಎಂದರು ಕೆಲವು ವಿಜ್ಞಾನಿಗಳು.
ನಾವು ದಿನನಿತ್ಯ ಪಂಚೇಂದ್ರಿಯಗಳಿಂದ ಗ್ರಹಿಸುವ ಅನುಭವಗಳನ್ನು ಸಂಸ್ಕರಿಸಿ, ಪರಷ್ಕರಿಸಿ ಬೇಕಾದ್ದನ್ನೆಲ್ಲ ನೆನಪಿನ ಉಗ್ರಾಣಕ್ಕೆ ಸೇರಿಸುವ ಮತ್ತು ಬೇಡದ್ದನ್ನೆಲ್ಲಾ ಮರೆವಿನ ಕತ್ತಲ ಕೋಣೆಗೆ ತಳ್ಳುವ ಕೆಲಸ ನಿದ್ದೆ ಮಾಡುತ್ತದೆ. ಆ ಸಂಸ್ಕರಣೆ ಮತ್ತು ಪರಿಷ್ಕರಣೆಯ ಸಮಯದಲ್ಲಿ ಕನಸುಗಳು ಸೃಷ್ಟಿಯಾಗುತ್ತವೆ ಎಂದರು ಕ್ರಿಸ್ಟೋಫರ್ ಇವಾನ್ಸ್.
ಪೀಟರ್ ವ್ಯಾಟ್ಸನ್ ಎಂಬ ವಿಜ್ಞಾನಿಯ ಪ್ರಕಾರ ನಮ್ಮ ಆಲೋಚನಾ ಸಮಯಗಳಲ್ಲಿ ಮಿದುಳಿನಲ್ಲಿ ಸೂಕ್ಷ್ಮ ಪ್ರಮಾಣದ ವಿದ್ಯುಚ್ಛಕ್ತಿ ಉತ್ಪಾದಿಸಲ್ಪಟ್ಟು ಶೇಖರಗೊಳ್ಳುತ್ತದೆ. ಹಾಗೆಯೇ ಆಲೋಚನೆಗಳು ಮುಂದುವರಿಯಬೇಕಾದಲ್ಲಿ ಶೇಖರಗೊಂಡ ವಿದ್ಯುಚ್ಛಕ್ರಿಯೆಲ್ಲಾ ಖಾಲಿಯಾಗಬೇಕು ಹಾಗೂ ಹೊಸ ಆಲೋಚನೆಗಳು ಸೃಷ್ಟಿ ಮಾಡುವ ವಿದ್ಯುಚ್ಛಕ್ತಿಗೆ ಜಾಗ ತೆರವು ಮಾಡಿಕೊಡಬೇಕು. ಮಿದುಳಿನ ಕೋಶಗಳಲ್ಲಿ ಶೇಖರಗೊಂಡ ವಿದ್ಯುಚ್ಛಕ್ತಿ ನಿದ್ರೆಯ ಸಮಯದಲ್ಲಿ ಖಾಲಿಯಾಗುತ್ತದೆ. ಹೇಗೆ ಆಲೋಚನೆಗಳ ಮೂಲಕ ವಿದ್ಯುಚ್ಛಕ್ತಿ ಉತ್ಪಾದಿತವಾಗಿ ಶೇಖರಣಗೊಂಡಿತೋ ಹಾಗೆಯೇ ಅವು ಖಾಲಿಯಾಗುವಾಗ (ಬಂದ ಹಾದಿಯಲ್ಲೇ ಹಿಂದಿರುಗುವಾಗ) ಆಲೋಚನೆಗಳು ಹುಟ್ಟಿಕೊಳ್ಳಬಹುದು. ನಿದ್ರೆಯ ಸಮಯದಲ್ಲಿ ಈ ಆಲೋಚನೆಗಳು ಹುಟ್ಟಿಕೊಳ್ಳುವುದರಿಂದ ಅವು ಕನಸುಗಳಾಗುತ್ತವೆ ಎನ್ನುತ್ತಾರೆ ಪೀಟರ್ ವ್ಯಾಟ್ಸನ್.
ಕ್ಯಾಲಿಫೋರ್ನಿಯಾದ ಫ್ರಾನ್ಸಿಸ್ ಕ್ರಿಕ್ ಮತ್ತು ಕೇಂಬ್ರಿಜ್ನ ಮಿಚಿನ್ಸನ್ ಹೇಳುವಂತೆ, ನಮ್ಮ ಇಂದ್ರಿಯಗಳ ಮೂಲಕ ಏನಾದರೂ ಹೊಸತನ್ನು ಕಲಿತಾಗ ಮಿದುಳಿನ ಕೋಶಗಳಲ್ಲಿ ಹೊಸ ಹೊಸ ಸಂಬಂಧಗಳು ಏರ್ಪಡುತ್ತವೆ. ಹಲವಾರು ಆ ರೀತಿಯ ಸಂಬಂಧಗಳು ತಪ್ಪಾಗಿರಬಹುದು. ನಿದ್ರೆಯ ಸಮಯದಲ್ಲಿ ಮಿದುಳು ಅಂಥ ತಪ್ಪಾದ ಸಂಬಂಧಗಳನ್ನು ಹುಡುಕಿ ತನ್ಮೂಲಕ ಕಲಿತದ್ದನ್ನು ಮರೆಸುತ್ತವೆ ; ಆ ಸಮಯದಲ್ಲಿ ಕನಸುಗಳು ಸೃಷ್ಟಿಯಾಗುತ್ತವೆ ಎಂದರು.
ಥಾಮಸ್ ವೆರ್ ಎಂಬ ವಿಜ್ಞಾನಿಯ ಪ್ರಕಾರ ಕತ್ತಲಾದಾಗ ತಮ್ಮ ಶಕ್ತಿಯನ್ನು ವ್ಯಯ ಮಾಡದಿರಲು ನಿದ್ರಿಸುತ್ತವೆ. ನಿದ್ರಿಸುವಾಗ ಸಾಮಾನ್ಯವಾಗಿ ಇಡೀ ದೇಹ ತಣ್ಣಗಾಗುತ್ತದೆ. ಮತ್ತೆ ಪ್ರಾಣಿ ಎಚ್ಚರಾದಾಗ ತಣ್ಣಗಾದ ಮಿದುಳು ಎಚ್ಚರಾಗಬೇಕಾದಲ್ಲಿ ಸ್ವಲ್ಪ ತಡವಾಗುತ್ತದೆ. ಏನಾದರೂ ಅಪಾಯವಿದ್ದಲ್ಲಿ ನಿದ್ದೆಯಿಂದ ತಕ್ಷಣ ಎಚ್ಚರವಾಗಿ ತನ್ನನ್ನು ತಾನು ಕಾಪಾಡಿಕೊಳ್ಳಬೇಕಾದ ಅವಶ್ಯಕತೆ ಪ್ರಾಣಿಗಳಿಗಿದೆ. ಆದ್ದರಿಂದ ನಿದ್ರಿಸುವಾಗ ದೇಹ ತಣ್ಣಗಾದರೂ ಮಿದುಳನ್ನು ಬಿಸಿಯಾಗಿಡಲು ಕನಸು ಕಾಣುವುದನ್ನು ಪ್ರಕೃತಿಯೇ ಜೀವವಿಕಾಸದ ಹಾದಿಯಲ್ಲಿ ಸೃಷ್ಟಿಸಿದೆ ಎನ್ನುತ್ತಾರೆ ಥಾಮಸ್ ವೆರ್.
(ಇನ್ನೂ ಇದೆ…)

‍ಲೇಖಕರು avadhi-sandhyarani

30 August, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading