ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕನಸುಗಳಿಗೆ ಅಂಟಿದ ಬಣ್ಣಗಳು..  

 

 

 

ಅವಧಿಯ ಹತ್ತು ವರ್ಷಗಳ ಪಯಣದಲ್ಲಿ ನಾವು ಪ್ರತಿದಿನ ಹಲವಾರು ಕವಿತೆ, ಲೇಖನ, ಫೋಟೊ, ಸಿನಿಮಾ  ಹೀಗೆ ಎಲ್ಲವುದರ ರಸದೌತಣ ನೀಡುತ್ತಿದ್ದೇವೆ.

ಈ ರಸದೌತಣದ ರುಚಿಯನ್ನು ಮತ್ತಷ್ಟು ಹೆಚ್ಚಿಸಲು ಹೊಸಬರ ಬರಹಗಳನ್ನು ನಿಮ್ಮ ಮುಂದೆ ಇಡಲ್ಲಿದ್ದೇವೆ.

ಅದರ ಮೊದಲ ಹೆಜ್ಜೆ ಇಲ್ಲಿದೆ.

 

 

 

ಶ್ರೀಧರ್. ಎಸ್ ಪತ್ತಾರ.

ಕೆಂಪು ಬಿಳಿ ಹಸಿರು ಹಳದಿ ನೀಲಿ
ಜತೆಗೆ ಕಪ್ಪು
ಎಷ್ಟೆಲ್ಲ ಬಣ್ಣಗಳು ಬದುಕಿನಲ್ಲಿ…
ನನ್ನ ಭಾವನೆಗಳಿಗೆ
ಬಣ್ಣಹಚ್ಚುತ್ತ ಮುನ್ನಡೆದೆ….

ಬದುಕಿನಲಿ
ಕಂಡದ್ದು
ಮಾತ್ರ
ಬರೀ ಕಪ್ಪು….
ರಾತ್ರಿಯಲಿ ನೋಡಿದ್ದು
ನನ್ನದೇ ತಪ್ಪು….

ಕಪ್ಪಾದರೇನಂತೆ
ಕಪ್ಪು ಬಣ್ಣದ ಮೇಲೆ
ಬಿಳಿಬಣ್ಣದ ಚಂದ್ರಮ
ಚುಕ್ಕಿಗಳ ಬರೆದು
ಸಂಭ್ರಮಿಸಬಹುದು…
ಆಗ ಚಂದ್ರಮನ ಹಾಲ್ಬೆಳಕು
ಮಿನುಗುವ ಚುಕ್ಕಿಗಳ
ಚಿತ್ತಾರ ಮೂಡುವುದು
ಬದುಕುಭಾವದ ತುಂಬ…

ಕಣ್ತುಂಬ ಕತ್ತಲೆಯ
ತುಂಬಿಕೊಂಡರು
ಹಾದಿ-ಬೀದಿಯ ತುಂಬೆಲ್ಲ
ಹೊಳೆವ ಹತ್ತಾರು
ಬೆಳಕಿನ ಬಣ್ಣಗಳು
ಈಗ ಕಂಡದ್ದು ಮಾತ್ರ
ಒಳಗಣ್ಣು….

ಬಣ್ಣದ ಒರತೆ
ಖಾಲಿಯಾಗುವ ಮುನ್ನ
ಬದುಕಿನ ಮಗ್ಗಲುಗಳಿಗೆ
ಬೇಕೆಂದಷ್ಟೂ
ಬಳಿಯಬಹುದು
ಮಾಸದ ಬಣ್ಣವನು
ಬಲು ಉಮ್ಮೇದಿನಿಂದ….

ಅಗೋ ಅಲ್ಲಿ
ಕಾಮನಬಿಲ್ಲು ,
ಬೆಳಗೋ ಕೆಂಪನೆ ಸೂರ್ಯ
ಬಣ್ಣಬಣ್ಣದ ಹಕ್ಕಿ
ಹಳದಿ ಪಾತರಗಿತ್ತಿ
ಹಸಿರು ಗಿಡಮರಬಳ್ಳಿ
ಇವಕ್ಕೂ ಯಾರೋ
ಬಣ್ಣ ಬಳದಿದ್ದಾರೆ…
ನಿಜಕ್ಕೂ ಬಣ್ಣ ಬಳಿದವನು
ರಂಗುರಂಗಿನ
ಭಾವದ ನುರಿತ
ಬಣ್ಣಗಾರನೇ ಇರಬೇಕು….

ಕಾರಿರುಳ ಕತ್ತಲಲಿ
ನಿದಿರೆಯ ಮಂಪರಿನ
ಕನಸುಗಳಿಗಂಟಿದ ಬಣ್ಣಗಳು
ಕನಸಿನ ಹಕ್ಕಿಯಾಗಿ
ರೆಕ್ಕೆಬಿಚ್ಚಿ ಹಾರಿಹೋದದ್ದು
ಕಂಡದ್ದು ಹಗಲು…
ಅದುವೇ ನನ್ನ
ಕನಸು ನನಸಾದ ಘಳಿಗೆ….

‍ಲೇಖಕರು avadhi

31 August, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading