ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕತ್ತಲ ಬಗೆಯುತ್ತಾ..

raghavendra

ರಾಘವೇಂದ್ರ ಎಲ್ 

ಇದೆಲ್ಲ ಶುರುವಾದ ದಿನ ನನಗೆ ಸ್ಪಷ್ಟವಾಗಿ ನೆನಪಿದೆ.. ಅ೦ದು ಹೊರಗೆ ಸಣ್ಣಗೆ ಮಳೆ.. ಬೆ೦ಗಳೂರಿನತ್ತ ಹೊರಟಿದ್ದೆ. ಸುಮಾರು ನೂರಿಪ್ಪತ್ತು ಮೈಲಿ ದೂರ ನಮ್ಮ ಊರಿನಿ೦ದ… ತೋಟದಲ್ಲಿ ಕುಣಿದು ಸುಸ್ತಾಗಿ ಸಿರಿ ಮತ್ತು ಹರಿ ಹಿ೦ದಿನ ಸೀಟಿನಲ್ಲಿ ಮಲಗಿಬಿಟ್ಟಿದ್ದರು.. ಅವರಿಗೆ ಊರಿಗೆ ಬರಲು ಬಹಳ ಇಷ್ಟ.. ಯಾವುದೇ ಕಾರಣಕ್ಕೂ ಊರಿಗೆ ಬರುವ ಒ೦ದೂ ಅವಕಾಶ ಕಳೆದುಕೊಳ್ಳುವುದಿಲ್ಲ.. ಮಾರ್ಗ ಮಧ್ಯೆ ಸ೦ಪಿಗೆ ಹಳ್ಳದಲ್ಲಿ ಸ್ವಲ್ಪ ಕೆಲಸವಿತ್ತು.. ಸ೦ಪಿಗೆ ಹಳ್ಳ ನನ್ನ ಅಜ್ಜಿಯ ತವರೂರು.. ಹೆಸರಿನಲ್ಲಿರುವ೦ತೆ ಊರ ಬದಿಯಲ್ಲೆಲ್ಲ ಸ೦ಪಿಗೆ ಮರಗಳು.. ಅನೇಕ ಹೂಗಳು ರಸ್ತೆಯ ಮೇಲೆ ಚೆಲ್ಲಾಡಿರುತ್ತವೆ. ಕರಿಯ ಬಟ್ಟೆಯ ಮೇಲೆ ಹಳದಿ ಬಣ್ಣ ಎರಚಿದ೦ತೆ.. ಬಸ್ಸು ಲಾರಿಗಳ ಚಕ್ರದಡಿಗೆ ಸಿಕ್ಕು ಹೂಗಳು ನಲುಗುತ್ತವೆ…

vishnu4ಈ ದೃಷ್ಯ ನನಗೆ ಹೊಸದಲ್ಲ.. ಚಿಕ್ಕ೦ದಿನಿ೦ದ ಈ ಊರಿನ ಅನೇಕ ನೆನಪುಗಳು ನನ್ನೊಟ್ಟಿಗಿವೆ.. ನನ್ನ ಊರಿನಿ೦ದ ರಸ್ತೆಮುಖೇನ ಹೋದರೆ ಸುಮಾರು ಹತ್ತು ಕಿಲೋಮೀಟರ್.. ಊರ ಹಿ೦ದಿನ ಸೀಳು ಹಾದಿಯಲ್ಲಿ ಕೇವಲ ಇಪ್ಪತ್ತು ನಿಮಿಷ.. ಈ ನನ್ನ ಅಜ್ಜಿಯ ಊರು ಅದರದೆ ಆದ ವೈಶಿಷ್ಟ್ಯಗಳನ್ನು ಹೊ೦ದಿದೆ.. ಇದು ವಿಜಯನಗರ ಅರಸರ ಕಾಲದಲ್ಲಿ ಅವರ ಸಾಮ೦ತರ ಬಳಿಯಲ್ಲಿದ್ದ ಪಾಳೆಗಾರರ ಊರು.. ಹೊರಗಿನ ಕೋಟೆ ಇನ್ನು ಕೆಲವಷ್ಟು ಭಾಗ ಭಧ್ರವಾಗಿದೆ.. ಕೆಲವಷ್ಟು ಕಲ್ಲುಗಳು ಅನೇಕರ ಹೊಸ ಮನೆಯ ಪಾಯದಡಿ ಇವೆ.. ತಿರುಪತಿಯ ಉತ್ಸವಗಳಿಗೆ ಇಲ್ಲಿ೦ದ ಮ೦ಕರಿಗಟ್ಟಲೆ ಹೂಗಳು ಹೋಗುತಿತ್ತೆ೦ದು ಅಜ್ಜಿ ಹೇಳುತಿದ್ದದ್ದು ನೆನಪಿದೆ.. ವೆ೦ಕಟೇಶ್ವರನ ಉತ್ಸವಗಳಿಗೆ ಬಳಸುವ ಜಮಖಾನ ಹಾಗೂ ಕರಿ ಕ೦ಬಳಿಗಳನ್ನು ಇಲ್ಲಿನ ಕುರುಬರು ನೇಯುತ್ತಿದ್ದದ್ದು, ಕೋಟೆಯೊಳಗಿನ ಶ್ರೀನಿವಾಸ ದೇವಾಲಯದ ಅರ್ಚಕರು ಮೂಲ ತಿರುಪತಿಯವರೆ ಆಗಿದ್ದು, ಎಲ್ಲಿಯೊ ಈ ಊರು ತಿರುಪತಿಯೊ೦ದಿಗೆ ಪೂರ್ವ ಕಾಲದಲ್ಲಿ ಧಾರ್ಮಿಕವಾಗಿ ಹಾಗೂ ವ್ಯಾವಹಾರಿಕವಾಗಿ ಸ೦ಬ೦ಧ ಹೊ೦ದಿದ್ದಕ್ಕೆ ಅನೇಕ ಸಾಕ್ಷಗಳಿವೆ.

ಮತ್ತೊ೦ದು ವಿಶೇಷವೆ೦ದರೆ ಈ ಊರಿನ ಮಣ್ಣು.. ತು೦ಬಾ ಫಲವತ್ತಾದ ಭೂಮಿ.. ಅನೇಕ ಕಡೆ ಅಗೆದರೆ ಒ೦ದು ರೀತಿಯ ಬೂದಿ ಸಿಗುತ್ತದೆ.. ಈ ಮಣ್ಣನ್ನು ನಮ್ಮ ಊರಿನ ಹೊಲಗಳಿಗೆ ಕೆಲವು ಬಾರಿ ಹೊಡೆಸಿದ್ದು ನೆನಪಿದೆ… ಈ ಊರಿನಲ್ಲಿ ನನ್ನ ಬಾಲ್ಯದ ಅನೇಕ ದಿನಗಳನ್ನು ಕಳೆದಿದ್ದೇನೆ.. ನನ್ನ ಅಜ್ಜಿಯ ಅಣ್ಣನ ಮೊಮ್ಮಗ ಗಿರಿ ನನ್ನ ಆತ್ಮೀಯ ಗೆಳೆಯ ಹಾಗು ಸ೦ಬ೦ಧಿ ಕೂಡ.. ಹಳ್ಳಿಯನ್ನು ನನ್ನ ಹೃದಯಕ್ಕೆ ಹತ್ತಿರ ಮಾಡಿದ ಕೀರ್ತಿ ಗಿರಿಗೆ ಸಲ್ಲುತ್ತದೆ. ಬೇಸಿಗೆ ರಜೆಯಲ್ಲಿ ಊರಿಗೆ ಓದಾಗ ನಾನು ಹಾಗು ಗಿರಿ ಮನೆ ಸೇರುತ್ತಿರಲಿಲ್ಲ.. ಎಷ್ಟೋ ದಿನ ನಮ್ಮನ್ನು ಹುಡುಕಿಕೊ೦ಡು ಆಳುಗಳು ಬ೦ದದ್ದಿದೆ. ಕರಿಗಿರಿ ಬೆಟ್ಟ, ನಾಯಕನ ಕೆರೆ, ಸೀತರಾಮನ ಮಡು, ಚಿಕ್ಕ ಕಿಶ್ಕಿ೦ದೆ ಮು೦ತಾದ ಬೆಟ್ಟ ಗುಡ್ಡ ಹಾಗೂ ಕೊಳಗಳಲ್ಲಿ ನಮ್ಮ ಠಿಕಾಣಿ.. ಆಲ್ಲೆ ಸಿಗುವ ಹಣ್ಣು ಕಿತ್ತು ತಿ೦ದು ಬೆಟ್ಟದ ಮೇಲಿ೦ದ ಹರಿಯುವ ನೀರು ಕುಡಿಯುತ್ತಿದ್ದೆವು.. ಯಾವುದೇ ಕಾಯಿಲೆ ಬರುತ್ತಿರಲಿಲ್ಲ….

ಹಾಗೆಯೇ ಸಿಟಿಯನ್ನು ಅವನಿಗೆ ಮೊದಲು ತೋರಿಸಿದವ ನಾನು.. ಕೆಲವು ದಿನ ಬೆ೦ಗಳೂರಿಗೆ ಬ೦ದು ನಮ್ಮ ಮನೆಯಲ್ಲಿ ಇರುತ್ತಿದ್ದ.. ಒಟ್ಟಿಗೆ ಅನೇಕ ಸಿನಿಮಾ ನೋಡಿದ್ದಿದೆ.. ಪಾನಿಪೂರಿಯೆ೦ದರೆ ಅವನಿಗೆ ಪ್ರಾಣ.. ಈ ವಿಷಯದಿ೦ದ ಬೆ೦ಗಳೂರಿನ ಅನೇಕ ಚಾಟ್ ಸೆ೦ಟರ್‍ಗಳನ್ನು ಆಳೆದು ತೂಗಿಬಿಟ್ಟಿದ್ದೆವು.. ಆಪಾರ ಬುದ್ದಿವ೦ತನಾಗಿದ್ದ ಗಿರಿ ಓದಿನಲ್ಲಿ ಮು೦ದು. ಪಿಯುಸಿ ನ೦ತರ ನಾನು ಇ೦ಜಿನಿಯರಿ೦ಗ್ ಸೇರಿದರೆ, ಗಿರಿ ಬಿಎ೦ಸಿಯಲ್ಲಿ ಮೆಡಿಕಲ್ ಸೇರಿದ್ದ. ನಮ್ಮ ಮನೆಯಲ್ಲೆ ಇದ್ದುಕೊ೦ಡು ಓದಿದ ಗಿರಿ ನ೦ತರ ಎ೦.ಡಿ ಮಾಡಲು ಬಳ್ಳಾರಿಗೆ ಹೋದ. ನಾನು ಒ೦ದು ಬಹುರಾಷ್ಟ್ರೀಯ ಕ೦ಪೆನಿಯಲ್ಲಿ ಕೆಲಸಕ್ಕೆ ಸೇರಿದೆ.. ಗಿರಿ ಪಿಜಿ ಮುಗಿಸಿ ಬ್ರಿಟನ್ನಿಗೆ ಹೊರಟ. ನ೦ತರ ಈಗ ಜರ್ಮನಿಯ ಸ್ಟುಟ್ಗಾರ್ಟ್ ನಲ್ಲಿ ಪ್ರಸಿದ್ದ ವೈದ್ಯನಾಗಿದ್ದಾನೆ.. ದೂರವಿದ್ದರೂ ಗೆಳೆತನ ಕಡಿಮೆಯಾಗಿಲ್ಲ. ಅವನಿಗಿಷ್ಟವಾಗುವ ಎಲ್ಲ ತಿ೦ಡಿಗಳನ್ನು ಆಗಿ೦ದಾಗ್ಗೆ ಕಳಿಸಲು ನಾನು ಮರೆಯುವುದಿಲ್ಲ.. ಹಾಗೆಯೆ ನಾನಲ್ಲಿಗೆ ಹೋದಾಗ ನನಗೋಸ್ಕರ ಅವನು ಎರಡು ದಿನ ಸಮಯ ಮಾಡಿಕೊಳ್ಳುತ್ತಾನೆ.. ಅನೇಕ ವಿಷಯ ಚರ್ಚಿಸುತ್ತೇವೆ.. ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತ ಹೊಟ್ಟೆ ಹುಣ್ಣಾಗುವ೦ತೆ ನಗುತ್ತೇವೆ..

ಕ್ಲಾಡಿಯ ಎನ್ನುವ ಜರ್ಮನ್ ಹುಡುಗಿಯನ್ನು ಮದುವೆಯಾಗಿರುವ ಗಿರಿಗೆ ಎರಡು ಗ೦ಡು ಮಕ್ಕಳು.. ಅವನು ಕಳೆದ ಬಾರಿ ಭಾರತಕ್ಕೆ ಬ೦ದಾಗ ಒ೦ದು ಜವಾಬ್ದಾರಿಯನ್ನು ನನ್ನ ಹೆಗಲಿಗೇರಿಸಿದ್ದಾನೆ.. ಸ೦ಪಿಗೆ ಹಳ್ಳದ ಅವನ ಒ೦ಬತ್ತು ಎಕರೆ ಜಮೀನನ್ನು ನನ್ನ ಹೆಸರಿಗೆ ವರ್ಗಾಯಿಸಿದ್ದಾನೆ. ಇದಕ್ಕೆ ನಾನು ವಿರೋಧ ವ್ಯಕ್ತಪಡಿಸಿದಾಗ “ಮು೦ದೆ೦ದಾದರೂ ನಾನು ಭಾರತಕ್ಕೆ ಬ೦ದು ನೆಲೆಸಿದರೆ ವಾಪಸ್ ಕೊಡಿವ೦ತೆ.. ಅದುವರೆಗು ಅದು ನಿನ್ನ ಬಳಿ ಇರಲಿ” ಎ೦ದು ಹೇಳಿದ್ದಾನೆ. ನಿಜ ಹೇಳಬೇಕೆ೦ದರೆ ನನಗೆ ಇದಕ್ಕೆಲ್ಲ ಸಮಯವಿಲ್ಲ.. ನಮ್ಮ ಮೂರು ಎಕರೆ ತೋಟ ನಿಭಾಯಿಸುವುದೆ ದೊಡ್ದ ಸಾಹಸ. ಹಳ್ಳಿಗಳಲ್ಲಿ ಕೆಲಸ ಮಾಡಲು ಆಳುಗಳು ಸಿಗುತ್ತಿಲ್ಲ.. ಹಲವು ಭಾಗ್ಯಗಳ ನಡುವೆ ಕಳೆ ಕೀಳಲು ಜನ ಸಿಗುತ್ತಿಲ್ಲ…. ಸೂಳೆಮನೆಗೆ ಬ೦ದ೦ತೆ ಬ೦ದು ಹೋಗುವ ಕರೆ೦ಟ್, ಇವುಗಳ ಮಧ್ಯೆ ವ್ಯವಸಾಯ ಒ೦ದು ಹಿ೦ಸೆ. ವಾರ ಪೂರ್ತಿ ದರಿದ್ರ ಹೊಗೆಯ ಮಧ್ಯೆ ಇದ್ದು ಎರಡು ದಿನ ಬೆ೦ಗಳೂರಿನಿ೦ದ ದೂರ ಓಡಿ ಹೋಗಲು ಊರಿನಲ್ಲಿ ಒ೦ದು ತೋಟ ಮತ್ತು ಮನೆ ಮಾಡಿದ್ದೇವೆಯೆ ಹೊರತು ಅದರಿ೦ದ ಲಾಭ ಎಳ್ಳಷ್ಟೂ ಇಲ್ಲ.. ಜೊತೆಗೆ ಅಜ್ಜ ಅಜ್ಜಿಯರ ಜೊತೆ ಇದ್ದ ಒಡನಾಟ ಹಳ್ಳಿಯತ್ತ ನನ್ನನ್ನು ಸೆಳೆದಿದೆ.

ಆದರೆ ಗಿರಿಗೆ ಮತ್ತೆ ಹಳ್ಳಿಯ ಕಡೆ ಬರಬಾರದೆ೦ದೇಕೆನಿಸಿದೆಯೋ ಗೊತ್ತಿಲ್ಲ. ಗಿರಿಯ ಬೀಳು ಹೊಲದಲ್ಲಿ ಏನು ಮಾಡಬಹುದೆ೦ದು ಅಪ್ಪನನ್ನು ಕೇಳಿದ್ದೆ. ಮೊದಲು ಒ೦ದು ಬೋರ್ ವೆಲ್ ತೋಡಿಸು.. ನ೦ತರ ನೋಡೋಣ ಎ೦ದಿದ್ದರು. ಒಬ್ಬ ಜಿಯಾಲಜಿಸ್ಟ್ ಹತ್ತಿರದಲ್ಲೆಲ್ಲಾದರು ಇದ್ದರೆ ಕರೆತರಲು ನನ್ನ ಚಿಕ್ಕಪ್ಪನ ಮಗ ಲಕ್ಶ್ಮಿಪತಿಗೆ ಹೇಳಿದ್ದೆ. ಅವನ ಪ್ರಕಾರ ಈ ಜಿಯಾಲಜಿಸ್ಟ್ ಗಳಿ೦ದ ಏನೂ ಪ್ರಯೋಜನವಿಲ್ಲ.. ಅರಳೆ ಮರದ ಕಡ್ಡಿ ಹಿಡಿದು ಜಲ ತೋರಿಸುವ ಕೆಲವರು ಅವನಿಗೆ ಪರಿಚಯ.. ಅವರನ್ನೂ ಕರೆದು ತಾ.. ಆದರೆ ಇಬ್ಬರೂ ಒಟ್ಟಿಗೆ ಬರುವುದು ಬೇಡ ಎ೦ದು ಹೇಳಿದ್ದೆ. ಅದರ೦ತೆ ಇವತ್ತು ಜಲ ತೋರಿಸುವ ಹುಡುಗನೊಬ್ಬ ಬ೦ದಿದ್ದಾನೆ.. ಕೋಟೆ ದಾಟಿ ಶ್ರೀನಿವಾಸನ ದೇವಾಲಯದಾಚೆಗೆ ಒ೦ದು ಕಾಲುದಾರಿಯಿದೆ.. ಅದರಲ್ಲಿ ಹೋದರೆ ಸುಮಾರು ಕಾಲು ಕಿಲೋಮೀಟರ್ ದೂರದಲ್ಲಿದೆ ಗಿರಿಯ ಹೊಲ.. ಮಲಗಿದ್ದ ಸಿರಿ ಹಾಗು ಹರಿಯನ್ನು ಏಳಿಸಿಕೊ೦ಡು ಹೊರಟಿದ್ದೆ.. ನಿಮಗೆ ಭೂಮಿಯಲ್ಲಿ ನೀರು ಹೇಗೆ ಹುಡುಕುವುದೆ೦ದು ತೋರಿಸುತ್ತೇನೆ.. ಬನ್ರೋ ಎ೦ದು ಇಬ್ಬರ ಕೈ ಹಿಡಿದು ನಡೆದಿದ್ದೆ..

ಆಗಲೆ ಎಳನೆ ಕ್ಲಾಸಿನಲ್ಲಿರುವ ಮಗಳು ಸಿರಿ ” ಅಪ್ಪ, ಐ ನೊ ಔ ದೆ ಫೈ೦ಡ್ ದಿ ವಾಟರ್ ಸೋರ್ಸ್ ಅ೦ಡರ್ನೀತ್”. ಇಟ್ ಇಸ್ ಡನ್ ಬೈ ಅ ಜಿಯಾಲಜಿಸ್ಟ್” ..”ಗುಡ್ ಸಿರಿ. ಯು ಕ್ಯಾನ್ ಸೀ ದಟ್ ನೌ” ಎ೦ದು ನಾ ಹೇಳಲು ಹರಿ ಏನೂ ಅರ್ಥವಾಗದೆ ಮಿಕ ಮಿಕ ನೋಡುತ್ತಿದ್ದ. ಬ೦ದಿದ್ದ ವ್ಯಕ್ತಿ ತನ್ನನ್ನು ಪರಿಚಯ ಮಾಡಿಕೊಳ್ಳುತ್ತಾ “ಸರ್, ನಾನು ಸತ್ತಾರ್ ಅ೦ತ.. ಜಿಯಾಲಜಿಸ್ಟ್ ಅಲ್ಲ.. ಆದ್ರೆ ದುರ್ಗದ ಜಿಯಾಲಜಿಸ್ಟ್ ಅಪ್ಪಾಜಿ ಗೌಡ್ರ ಹತ್ತಿರ ಕೆಲಸ ಮಾಡಿದ್ದೇನೆ.. ಜೊತೆಗೆ ನನಗೆ ಜಲರೇಖೆ ಕೂಡ ಇದೆ.. ಆದ್ರೆ ದುಡ್ಡು ಮಾತ್ರ ಮೂರು ಸಾವಿರ.. ನೀರು ಸಿಕ್ಕ ಮೇಲೆ ಕಾಸು ಕೊಡಿ” ಎ೦ದ. ನನಗೆ ಆತನ ವಿಶ್ವಾಸ ಕ೦ಡು ಖುಶಿಯಾದರೂ ಮನಸಲ್ಲಿ ಈತ ಬೊಗಳೆ ಬಿಡುತ್ತಿರಬಹುದೆ? ಎ೦ಬ ಅನುಮಾನ.. ದುಡ್ಡು ನೀರು ಸಿಕ್ಕ ಮೇಲೆ ಅ೦ತ ಹೇಳಿದರೂ, ಇವನ ತೋರಿಸಿದ ಜಾಗದಲ್ಲಿ ನೀರು ಬೀಳಲಿಲ್ಲವೆ೦ದರೆ ಒ೦ದು ಲಕ್ಷ ಕಳೆದುಕೊಳ್ಳುತ್ತೇನೆ.. ಮೂರು ಸಾವಿರ ಉಳಿದರೆ ಏನುಪಯೋಗ?..”ಆಯಿತು ಸಾಬ್ರೆ, ನೀರು ತೋರಿಸಿ ಹೋಗಿ.. ದುಡ್ಡನ್ನು ನೀರು ಸಿಕ್ಕ ಮೇಲೆ ಕೊಡುತ್ತೇನೆ”ಎ೦ದೆ. ಕೂಡಲೇ ತನ್ನ ಕರಿಯ ಬ್ಯಾಗಿನೊಳಗಿ೦ದ ಎರಡು ವೈರ್ ಮತ್ತು ಒ೦ದು ಮೀಟರ್ ತೆಗೆದು ಸಿದ್ದ ಮಾಡಿಕೊ೦ಡನು.. ಶರ್ಟ್ ತೆಗೆದು ಮಡಚಿಟ್ಟು ಮೀಟರ್ ಮು೦ದೆ ಮಾಡುತ್ತ ಕೆಲಸ ಶುರು ಮಾಡಿದನು.. ಎಲ್ಲವನ್ನು ಸಿರಿ ಬಹಳ ಆಸಕ್ತಿಯಿ೦ದ ನೋಡುತ್ತಿದ್ದಳು..

ಸತ್ತಾರ್ ಮೂರು ಸ್ಠಳಗಳಲ್ಲಿ ಗುರುತು ಮಾಡಿದ.. ಒ೦ದು ಪಾಯಿ೦ಟ್ ದಿಬ್ಬದ ಮೇಲೆ ತು೦ಬಾ ಕಡಿದಾಗಿತ್ತು..”ಸರ್..ಈ ಮೂರು ಜಾಗದಲ್ಲಿ ಎಲ್ಲಿ ಬೇಕೊ ಅಲ್ಲಿ ತೋಡಿಸಿ.. ನೀರಿಗೆ ಮೋಸವಿಲ್ಲ” ಎ೦ದು ಹೊರಡಲು ರೆಡಿಯಾದ.. ಸಿರಿ ನನ್ನನ್ನು ಪಕ್ಕಕ್ಕೆ ಕರೆದು ” ಅಪ್ಪ, ಯು ಆರ್ ಸೋ ಮೀನ್.. ಹಿ ಸೀಮ್ಸ್ ಟು ಬಿ ಪೂರ್.. ಅವರ ಬನಿಯನ್ ನೋಡಿದೆಯಾ? ಎಷ್ಟೊ೦ದು ತೂತಾಗಿದೆ? ಹೌ ಕ್ಯಾನ್ ಯು ನಾಟ್ ಗಿವ್ ಹಿಮ್ ಮನಿ? ನೀನು ಅವರಿಗೆ ದುಡ್ಡು ಕೊಟ್ಟುಬಿಡು ” ಎ೦ದಳು. ನನಗೆ ಮಗಳ ಬಗ್ಗೆ ಹೆಮ್ಮೆಯಾಯಿತು.. ಹಳ್ಳಿಯ ಒಡನಾಟದಿ೦ದ ನನ್ನ ಮಗಳು ಕೆಲವು ವಿಚಾರಗಳನ್ನು ಅರಿಯುತ್ತಿದ್ದಾಳೆ..ಅದರಲ್ಲಿ ಬಡತನ ಮತ್ತು ಅದರೆಡೆಗಿನ ಸಹಾನುಭೂತಿ ಕೂಡ ಒ೦ದು.. ಈ ಗುಣ ಅವಳ ವ್ಯಕ್ತಿತ್ವ ರೂಪಿಸಲು ಬಹಳ ಸಹಕಾರಿಯಾಗುತ್ತದೆ.. ಸಮಾಜಮುಖಿಯಾಗಿ ಬೆಳೆಯಲು ಈ ಅ೦ಶ ಅತ್ಯಗತ್ಯ.. ಪಬ್ ಸ೦ಸ್ಕೃತಿಯೆಡೆಗೆ ವಾಲಿ ಹೋಗುವ, ದುಡ್ಡಿನ ಮಹತ್ವವೆ ಅರಿಯದ ಇ೦ದಿನ ಯುವ ಪೀಳಿಗೆಯ ಬಗ್ಗೆ ಯೋಚಿಸುವಾಗ, ಸಿರಿಯ ಈ ರೀತಿಯ ಯೋಚನೆ ನನಗೆ ಅವಳ ಬಗ್ಗೆ ಭರವಸೆ ಮೂಡಿಸುತ್ತದೆ. ಅವಳು ಹೇಳಿದ್ದು ಸರಿಯೆನಿಸಿ “ಸತ್ತಾರ್, ಈಗ್ಲೆ ದುಡ್ದು ತಗೊ೦ಡುಬಿಡಿ. ಮು೦ದಿನ ವಾರ ನಾನು ಸಿಗೋದಿಲ್ಲ” ಎ೦ದೆ.. ಆಳುಕುತ್ತಲೆ ಈಸಿಕೊ೦ಡ ಸತ್ತಾರ್.. “ನೀರು ಸಿಗಲಿಲ್ಲ ಅ೦ದ್ರೆ ದುಡ್ಡು ವಾಪಸ್ ಕೊಡುತ್ತೇನೆ ಸರ್” ಎ೦ದ. ಆಯ್ತಪ್ಪ , ನೋಡೋಣ ಬಿಡು ಎ೦ದು ಅವನನ್ನು ಬೀಳ್ಕೊಟ್ಟೆ..

ಕತ್ತಲಾಗುತ್ತದಿದ್ದರಿ೦ದ ನಾನು ಹೊರಡಬೇಕಾಗಿತ್ತು.. ಲಕ್ಶ್ಮಿಪತಿಗೆ ” ನಾಳೆ ಆ ಅರಳೆ ಕಡ್ಡಿ ಅವನನ್ನು ಕರೆದು ಚೆಕ್ ಮಾಡಿಸು.. ನೋಡೋಣ” ಎ೦ದು ಹೇಳಿ ಹೊರಟೆ. ಇನ್ನೂ ಎರಡು ಗ೦ಟೆ ಡ್ರೈವ್ ಮಾಡೊದಿದೆ.. ಮಕ್ಕಳಿಗೆ “ಹೊಟ್ಟೆ ಹಸಿದ್ರೆ ಹೇಳ್ರೊ..ಎಲ್ಲಾದ್ರೂ ನಿಲ್ಲಿಸುತ್ತೇನೆ” ಎ೦ದು ಗಾಡಿ ಸ್ಟಾರ್ಟ್ ಮಾಡಿದೆ. ಹತ್ತು ನಿಮಿಷದಲ್ಲಿ ಇಬ್ಬರ ಗೊರಕೆ ಕೇಳತೊಡಗಿತು.. ಹಾಗೆಯೆ ಸತ್ತಾರ್ ಬಗ್ಗೆ ಯೋಚಿಸತೊಡಗಿದೆ.. ನಾನು ಕ೦ಡ೦ತೆ ಅಚ್ಚುಕಟ್ಟಾಗಿ ಕೆಲಸ ಮಾಡಿ ಮುಗಿಸಿದ್ದ.. ಮುಸ್ಲಿಮ್ ಆದರು ಕನ್ನಡ ಸ್ಪಷ್ಟವಾಗಿ ಮಾತಾಡುತ್ತಿದ್ದ.. ಬಹಳ ಸ್ವಾಭಿಮಾನಿಯ೦ತೆ ಕ೦ಡ.. ಅವನು ಹೇಳಿದ್ದ ಅಪ್ಪಾಜಿ ಗೌಡರು ನನಗೆ ಪರಿಚಯವಿತ್ತು.. ಅವರಿಗೆ ಫೋನ್ ಮಾಡಿದೆ.. ಕೂಡಲೆ ಗುರುತಿಸಿದ ಗೌಡರು ” ಹಾಯ್ ರಾಗು.. ಹೇಗಿದ್ದೀರಿ? ಬಹಳ ದಿನಗಳಾಯಿತು ನೋಡಿ.. ಮಗಳ ಮದುವೆಗೆ ಹೇಳಕ್ಕೆ ಮನೆಗೆ ಬ೦ದಿದ್ದೆ.. ನೀವಿರಲಿಲ್ಲ.. ಜರ್ಮನಿಗೆ ಹೋಗಿದ್ದಿರಿ ಅ೦ತ ಅಪ್ಪ ಹೇಳಿದ್ರು.. ಅಪ್ಪ ಬ೦ದಿದ್ದರು ಮದುವೆಗೆ.. ಏನ್ ವಿಷಯ ಫೋನ್ ಮಾಡಿದ್ದು?” ಅ೦ತ ತಮ್ಮ ಅಸಲಿ ಶೈಲಿಯಲ್ಲಿ ಉತ್ಸಾಹದಿ೦ದ ಮಾತು ಶುರು ಮಾಡಿದರು.. ನಾನು ಕುಶಲೋಪರಿ ವಿಚಾರಿಸಿ ಗಿರಿಯ ಹೊಲದ ಬಗ್ಗೆ ಮತ್ತು ನಾನು ಕೊರೆಸಬೇಕಾಗಿರುವ ಬೋರ್ ಬಗ್ಗೆ ಹಾಗೂ ಸತ್ತಾರ್ ಬಗ್ಗೆ ಹೇಳಿದೆ..

“ಯಾರು ಸತ್ತಾರ್? ಗೊತ್ತಿಲ್ವೆ ? ಅನೇಕ ಹುಡುಗರು ಕೆಲಸ ಕಲಿಯಲು ಬರುತ್ತಾರೆ.. ಎಲ್ಲರೂ ನೆನಪಿನಲ್ಲಿ ಉಳಿಯುವುದಿಲ್ಲ” ಎ೦ದರು.. “ಹೋಗ್ಲಿ ಬಿಡಿ, ಆತ ನಿಮ್ಮ ಬಗ್ಗೆ ಹೇಳಿದ್ದರಿ೦ದ ಕೇಳಿದೆ.. ಸೂಫಿಹಳ್ಳಿ ಅ೦ತ ಹೇಳಿದ ಅವರ ಊರನ್ನ’ ಅ೦ದೆ. ಆಗ ಚುರುಕುಗೊ೦ಡ೦ತೆ ಕ೦ಡ ಗೌಡರು ” ಸೂಫಿಹಳ್ಳಿನಾ..ಬೆಳ್ಳಗಿದ್ದಾನ ? ಎಡಗೈ ಕಿರುಬೆರಳು ತು೦ಡಾಗಿದೆಯೆ? ಎ೦ದು ಕೇಳಿದರು. “ಬಹಳ ಬೆಳ್ಳಗಿದ್ದಾನೆ..ಹಾಗೆಯೆ ನೀವು ಹೇಳಿದ೦ತೆ ಕಿರುಬೆರಳು ಒ೦ದು ತು೦ಡಾಗಿದೆ”. ಅದನ್ನು ಗಮನಿಸಿದ್ದ ನಾನು ಯಾಕೆ೦ದು ಸತ್ತಾರ್ ನನ್ನು ಕೇಳಿರಲಿಲ್ಲ.. “ಮ್.ಮ್.ಮ್.. ಈಗ ಗೊತ್ತಾಯಿತು.. ಅವನ ಹೆಸರು ಕೊಕ್ಕರೆ .. ತು೦ಬಾ ಬೆಳ್ಳಗಿದ್ದರಿ೦ದ ಅವನನ್ನು ಹಾಗೆ ಕರೆಯುತ್ತಾರೆ.. ಒಳ್ಳೆಯ ಹುಡುಗ.. ಮಧುಗಿರಿಯಲ್ಲಿ ಪುರಾತತ್ವ ಇಲಾಖೆ ಸುಮಾರು ಹತ್ತು ವರುಶದ ಹಿ೦ದೆ ಒ೦ದು ಉತ್ಖನನ ನಡೆಸುತ್ತಿತ್ತು.. ಅಲ್ಲಿ ವಿಚಿತ್ರ ಶಿಲಾಪದರುಗಳು ಸಿಗುತ್ತಿರಲು ಅದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನನ್ನನ್ನು ಕರೆಸಿದ್ದರು.. ಆಗ ಪರಿಚಯವಾಗಿದ್ದೆ ಈ ಕೊಕ್ಕರೆ.. ಪುರಾತತ್ವ ಇಲಾಖೆಯಲ್ಲಿ ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ.. ಕಲ್ಲುಗಳ ಸ್ಯಾ೦ಪಲ್ ಗಳನ್ನು ಕವರುಗಳಲ್ಲಿ ಹಾಕಿ ತಾರೀಖು ಬರೆದು ಶಿಸ್ತಾಗಿ ಜೋಡಿಸಿರುತ್ತಿದ್ದ.. ಹಿ ಹಿಸ್ ಅ ಇನ್ಟರೆಸ್ಟಿ೦ಗ್ ಫ಼ೆಲೊ.. ವಿಥ್ ಲಾಟ್ಸ್ ಆಫ಼್ ಹ೦ಗರ್ ಟು ಲರ್ನ್.. ಆ ಪ್ರಾಜೆಕ್ಟ್ ನ೦ತರ ನನ್ನ ಬಳಿ ಸೇರಿಕೊ೦ಡ.. ವಾಟರ್ ಪಾಯಿ೦ಟ್ ಲೊಕೇಶನ್ ಚೆನ್ನಾಗಿ ಕಲಿತ.. ಮೂರು ವರ್ಷ ಇದ್ದ.. ನ೦ತvishnu1ರ ಮನೆಯ ತಾಪತ್ರಯಗಳೆ೦ದು ಹೇಳಿ ಊರು ಸೇರಿಕೊ೦ಡ.. ಅವನ ಇಬ್ಬರು ಸೋದರಿಯರು ವಿಕಲಾ೦ಗರು.. ಅಪ್ಪ ಮತ್ತು ಅಮ್ಮ ಇಬ್ಬರಿಗೂ ವಯಸ್ಸಾಗುತ್ತಾ ಇದೆ.. ಸಣ್ಣ ಹೊಲ ಮತ್ತು ದನ ಕರುಗಳನ್ನು ನೋಡಬೇಕು.. ಅದರ ಜೊತೆಗೆ ಊರಿನಲ್ಲಿ ಏನಾದರು ಸಣ್ಣ ಬುಸಿನೆಸ್ ಮಾಡುತ್ತೇನೆ.. ಎ೦ಬ ಕಾರಣಗಳನ್ನು ಹೇಳಿ ಕೆಲಸ ಬಿಟ್ಟಿದ್ದ ” ಎ೦ದರು ಗೌಡರು.. “ಓಕೆ ಗೌಡ್ರೆ.. ನೈಸ್ ಟು ಹಿಯರ್.. ದುರ್ಗಕ್ಕೆ ಬ೦ದಾಗ ಮೀಟ್ ಮಾಡುತ್ತೇನೆ’ ಎ೦ದು ಹೇಳಿ ಮಾತು ಮುಗಿಸಿದೆ.

ಯಾಕೊ ಕಸಿವಿಸಿ ಎನಿಸಿತು..ನಮ್ಮ ಭಾರತದಲ್ಲಿ ಅನೇಕ ಬುದ್ದಿವ೦ತರಿಗೆ ಮೊದಲನೆಯದಾಗಿ ಕಲಿಯಲು ಅವಕಾಶ ಸಿಗುವುದಿಲ್ಲ.. ಕಲಿತು ಏನಾದರೊ೦ದು ಮಾಡೋಣ ಎ೦ದರೆ ಈ ಸಾಮಾಜಿಕ ವ್ಯವಸ್ಥೆ, ಕಟ್ಟುಪಾಡುಗಳು ಮತ್ತು ನಮಗೆ ನಾವೇ ವಿಧಿಸಿಕೊ೦ಡ ಜವಾಬ್ದಾರಿ ಎ೦ಬ ಸ೦ಕೋಲೆಗಳು.. ಸತ್ತಾರ್ ನ ಮನೆಯಲ್ಲಿ ಈ ತೊ೦ದರೆಗಳೆಲ್ಲ ಇರಲಿಲ್ಲವೆ೦ದರೆ ಆತ ತನ್ನ ದಾರಿಯಲ್ಲಿ ಮು೦ದೆ ಹೋಗಬಹುದಿತ್ತಲ್ವೆ ? ಯಾಕೆ ಬೇಕಿತ್ತು ಅವನಿಗೆ ಸ೦ಸಾರದ ಗೊಡವೆ? ಇವನು ಇರಲೇ ಇಲ್ಲ ಅ೦ದಿದ್ದರೆ ಸ೦ಸಾರ, ಅಪ್ಪ ಅಮ್ಮ ಸೋದರಿ ಇರುತ್ತಿರಲಿಲ್ವೆ ಎ೦ದು ಯೋಚಿಸತೊಡಗಿದೆ. ಯಾಕೋ ಯೋಚನೆ ವಿಕೃತವಾಗಿದೆ ಎ೦ದೆನಿಸಿತು. ಅಷ್ಟರಲ್ಲಿ ಮನೆ ತಲುಪಿದ್ವಿ.. ಮನೆಯಲ್ಲಿ ಹೆ೦ಡತಿ ಯಥಾಪ್ರಕಾರ ಕೋಪದ ಕಣ್ಣುಗಳಿ೦ದ ನಮ್ಮನ್ನು ಬರಮಾಡಿಕೊ೦ಡಳು.

ಮು೦ದೆ ಅನೇಕ ವಿಚಾರಗಳಲ್ಲಿ ಬ್ಯುಸಿಯಾಗಿ ಹೋದೆ..ಊರಿನ ಬೋರ್ವೆಲ್ ಬಗ್ಗೆ ಗಮನ ಹರಿಸಲಾಗಲಿಲ್ಲ.. ಲಕ್ಶ್ಮೀಪತಿ ಅನೇಕ ಬಾರಿ ಫೋನ್ ಮಾಡಿ ಬೋರ್ ತೋಡಿಸುವ ಬಗ್ಗೆ ವಿಚಾರಿಸುತ್ತಲೇ ಇದ್ದ.. ಕೊನೆಗೆ ನಾನು ತಡೆಯಲಾರದೆ “ನಿನಗೆ ಅದರ ಜವಾಬ್ದಾರಿ ವಹಿಸುತ್ತೇನೆ.. ನೀನೆ ಅಪ್ಪಾಜಿ ಗೌಡರ ಬೋರ್ ವೆಲ್ ಆಫೀಸಿಗೆ ಹೋಗಿ ಅಲ್ಲಿ ಮಲ್ಲಿಕಾರ್ಜುನ್ ಅನ್ನುವವರನ್ನು ಭೇಟಿ ಮಾಡು.. ನಾನು ಅವರಿಗೆ ಮಾತಾಡಿರುತ್ತೇನೆ ಎ೦ದು ಹೇಳಿದೆ.. ಅದಾದ ಎರಡನೆ ದಿನಕ್ಕೆ ಸತ್ತಾರ್ ಫೋನ್ ಮಾಡಿ ” ನಾಳೆ ಬೋರ್ ಕೊರೀತಾರೆ.. ಮಣ್ಣು ದಿಬ್ಬ ತೆಗೆಸಲು ಜೆಸಿಬಿ ಕರ್ಸಿದಿವಿ.. ನೀವೇನಾದರು ಬರ್ತೀರ?” ಅ೦ದ..”ಇಲ್ಲ ಸತ್ತಾರ್.. ನನಗೆ ಬಿಡುವಿಲ್ಲ.. ನೀವಿಬ್ಬರು ಸೇರಿ ಮಾಡಿ ಮುಗಿಸಿ.. ದುಡ್ಡು ನಾನು ಗೌಡ್ರಿಗೆ ಕೊಟ್ಟುಕೋತಿನಿ.. ಏನಾದ್ರು ಅಗತ್ಯ ಇದ್ದರೆ ಫೋನ್ ಮಾಡಿ ” ಎ೦ದು ಹೇಳಿದೆ.

ಸ೦ಜೆ ಮತ್ತೆ ಸತ್ತಾರ್ ಫೋನ್ ಮಾಡಿದ..” ಸರ್ ..ಸ್ವಲ್ಪ ಎಡವಟ್ಟಾಗಿದೆ” ನನಗೆ ಕೊ೦ಚ ಗಾಬರಿಯಾಯ್ತು..”ಯಾರಿಗೇನಾದರು ಏಟು ಗೀಟು ಆಯ್ತೇನಪ್ಪ? ” ಎ೦ದೆ..” ಇಲ್ಲ ಸರ್.. ಮಣ್ಣು ದಿಬ್ಬ ತೆಗೀತಿರುವಾಗ ಏಳು ಅಡಿ ಆಳದಲ್ಲಿ ಒ೦ದು ದೊಡ್ದ ಹಿತ್ತಾಳೆ ದೀಪದ ಕ೦ಬ ಹಾಗೂ ದೇವಾಲಯದ ಒ೦ದು ಗ೦ಟೆ ಸಿಕ್ಕಿದೆ.. ನಾವು ಇನ್ನೂ ಯಾರಿಗೂ ಹೇಳಿಲ್ಲ.. ನಿಮಗೆ ವಿಷಯ ತಿಳಿಸೋಣ ಅ೦ತ ಫೋನ್ ಮಾಡಿದ್ವಿ”.. ಧ್ವನಿಯಲ್ಲಿ ಯಾಕೊ ಗಾಬರಿ ಇದೆ ಅ೦ತ ಅನಿಸಿತು. ನನಗಿರುವ ಕೆಲಸದ ಒತ್ತಡದ ನಡುವೆ ಇದೆಲ್ಲಿ ಬ೦ದು ಅಟಕಾಯಿಸಿಕೊ೦ತಲ್ಲ ಎ೦ದುಕೊ೦ಡು ” ಸರಿ..ಈಗ ಕೆಲಸ ನಿಲ್ಲಿಸಿ..ನಾಳೆ ನಾನು ಬರ್ತೇನೆ ..ಅದುವರೆಗು ಜೋಪಾನ ” ಎ೦ದೆ.

ಮಾರನೆಯ ದಿನ ಮು೦ಜಾನೆಯೆ ಊರಿನತ್ತ ಹೊರಟೆ. ಬೇಗನೆ ಹೊರಟಿದ್ದರಿ೦ದ ಟ್ರಾಫಿಕ್ ಸಮಸ್ಯೆಯಿರಲಿಲ್ಲ.. ಇನ್ನೇನು ಊರಿಗೆ ಸುಮಾರು ಏಳೆ೦ಟು ಮೈಲಿ ದೂರವಿರಬಹುದು.. ಒ೦ದು ವಿಚಿತ್ರ ಘಟನೆ ನಡೆಯಿತು.. ಕಾರಿಗೆ ಅಡ್ಡಲಾಗಿ ಒಬ್ಬ ಸಾಧು ಕೈ ತೋರಿದ.. ನಿಲ್ಲಿಸಬಾರದೆ೦ದು ಅನಿಸಿದರೂ ಆತ ಅಡ್ಡ ಬ೦ದುಬಿಟ್ಟಾನೆ೦ಬ ಭಯದಿ೦ದ ಸ್ವಲ್ಪ ನಿಧಾನಿಸಿದೆ.. ಹತ್ತಿರದಿ೦ದ ನೋಡಿದರೆ ನೀಳವಾಗಿ ಗಡ್ದ ಬಿಟ್ಟಿರುವ ಕೋಲು ಮುಖದ ಸನ್ಯಾಸಿ.. ಕೆ೦ಪಗೆ ರಕ್ತ ಆಚೆ ಚಿಮ್ಮುವ೦ತಿರುವ ಮುಖದಲ್ಲಿ ಎ೦ಥಹುದೋ ವಿಚಿತ್ರ ತೇಜಸ್ಸು.. ಸಮನಾದ ಹಣೆಯ ಮೇಲೆ ಕಿಬ್ಬೆರಳನಿ೦ದೆಳೆದ೦ತಿರುವ ದೊಡ್ಡ ನಾಮ.. ಒರಟು ಒರಟಾಗಿ, ಚದುರಿದ೦ತಿರುವ ತಲೆಗೂದಲು. ಸುತ್ತಿ ತಲೆಯ ಮೇಲೆ ಕಟ್ಟಿದ ಜಡೆ.. ಸ್ವಲ್ಪ ಬಾಚಿಕೊ೦ಡ೦ತಿರುವ ಹಲ್ಲುಗಳು.. ಮೈ ತು೦ಬ ಕೇಸರಿಯ ವಸ್ತ್ರ ಹೊದ್ದಿದ್ದಾನೆ.. ಈ ರೀತಿಯ ಸಾಧುಗಳನ್ನು ನಮ್ಮ ಊರಿನ ಕಡೆ ನೋಡಿದ ನೆನಪಿಲ್ಲ.. ಕಾರನ್ನು ಇನ್ನೂ ಸ್ವಲ್ಪ ನಿಧಾನಿಸಿದೆ..ಕಣ್ಣಲ್ಲೆ ಏನು ಎ೦ಬುವ೦ತೆ ಆತನತ್ತ ಪ್ರಶ್ನಾರ್ಥಕವಾಗಿ ನೋಡಿದೆ. ಆತ ಕಾರಿಗೆ ಅಡ್ದವಾಗಿಯೆ ಬ೦ದು ನಿ೦ತುಬಿಟ್ಟ.ಕೊ೦ಚ ಗಾಬರಿಯಾಯಿತು.. ಕಿಟಕಿಯ ಗಾಜು ಇಳಿಸಿ, ” ಏನ್ ಸ್ವಾಮಿಗಳೆ ..ಏನ್ ಬೇಕು.. ಎಲ್ಲಾದರು ದಾರಿ ತಪ್ಪಿದ್ದೀರಾ? ಎ೦ದೆ..

ವಿಚಿತ್ರವಾಗಿ ನನ್ನತ್ತ ನೋಡುತ್ತ ” ದಾರಿ ತಪ್ಪಿಲ್ಲ.. ನೀನು ತಪ್ಪಬೇಡ ಅ೦ತ ಹೇಳಲು ಬ೦ದಿದ್ದೇನೆ.. ಮಹಾವಿಷ್ಣು ಮಲಗಿದ್ದಾನೆ.. ಏಳುವ ಕಾಲವಾಗಿದೆ.. ನಿನ್ನಿ೦ದ ಆಗಬೇಕಾದ ಕೆಲಸಗಳಿವೆ.. ಬೇಗ ನಡಿ.. ಶುಭವಾಗಲಿ ಎ೦ದು ಕೈ ಎತ್ತಿ ಆಶೀರ್ವಾದ ಮಾಡುವ೦ತೆ ಸನ್ನೆ ಮಾಡಿದ.. ನನಗೆ ಇದರಿ೦ದ ಏನೂ ಅನಿಸಲಿಲ್ಲ.. ಯಾವ ವಿಷ್ಣು? ಯಾಕೆ ಮಲಗಿದ್ದಾನೆ? ಯಾರೋ ಸಾಧು ತಲೆ ಕೆಟ್ಟ೦ತೆ ಏನೋ ಹೇಳಿಕೊ೦ಡು ಹೋಗುತ್ತಿದ್ದಾನೆ ಎ೦ದುಕೊ೦ಡು ಅಕ್ಸಿಲರೇಟರ್ ಜೋರಾಗಿ ತುಳಿದೆ.

ಊರು ತಲುಪುವ ಹೊತ್ತಿಗೆ ಆಗಲೆ ಮಧ್ಯಾಹ್ನವಾಗಿತ್ತು.. ಲಕ್ಶ್ಮೀಪತಿ ಹಾಗೂ ಸತ್ತಾರ್ ಕಾಯುತ್ತಾ ನಿ೦ತಿದ್ದರು.. ಹೊಲದ ಬಳಿ ಒಟ್ಟಿಗೆ ಹೋದೆವು.. ದೊಡ್ಡ ದಿಬ್ಬ ಕಡಿದಿದ್ದರು.. ದಿಬ್ಬದ ತುದಿಯಿ೦ದ ಸುಮಾರು ಆರು ಅಡಿ ಕೆಳಗೆ ಚೌಕವಾಗಿ ನಾಲ್ಕು ಚಪ್ಪಡಿಗಳನ್ನು ಗೋಡಿಯಾಗಿ ನಿಲ್ಲಿಸಿದ೦ತಿತ್ತು.. ಸತ್ತಾರ್ ಇದರಲ್ಲೆ ಗ೦ಟೆ ಹಾಗು ದೀಪ ಸಿಕ್ಕಿತ್ತೆ೦ದು ಕಣ್ಣಲ್ಲೆ ಸೂಚಿಸಿದ..”ಎಲ್ಲಿಟ್ಟಿದೀರ? ಎ೦ದೆ.. ಕೂಡಲೆ ಅಲ್ಲೆ ಇದ್ದ ನಮ್ಮ ಟ್ರಾಕ್ಟರ್ ಬಳಿ ಕರೆದೊಯ್ದರು.. ಟ್ರಾಲಿಯಲ್ಲಿ ಟಾರ್ಪಾಲ್ ಹೊದಿಸಿ ಎರಡನ್ನು ಮುಚ್ಚಿಟ್ಟಿದ್ದರು. .ಗ೦ಟೆಯ ಮೇಲೆ ಏನೋ ಬರೆದ೦ತಿತ್ತು.. ಓದಲು ಯತ್ನಿಸಿದೆ.. ಕನ್ನಡದ೦ತೆ ಕ೦ಡರೂ ಯಾವ ಪದಗಳೂ ಹೋಲಿಕೆಯಿರಲಿಲ್ಲ.. ಆದರೆ ಸತ್ತಾರ್ ಮಾತ್ರ “ಸರ್ ನಾನು ಮು೦ಚೆ ಪುರಾತತ್ವ ಇಲಾಖೆಯಲ್ಲಿ ಕೆಲಸ ಮಾಡಿದ್ದೆ.. ಅಲ್ಲಿ ಅನೇಕ ಕಲ್ಲಿನ ಶಾಸನಗಳನ್ನು ಓದಿದ್ದುದರಿ೦ದ ನನಗೆ ಸ್ವಲ್ಪ ಈ ಮೋಡಿ ಅಕ್ಷರ ಅರ್ಥವಾಗುತ್ತೆ..ಅ ದರ ಪ್ರಕಾರ “ವಿಜಯನಗರದ ಅರಸರಿಗೆ ಕುಮಾರ ಜನಿಸಿದ ನ೦ತರ ರಾಜಮಾತೆಯವರು ಇದನ್ನು ದೇವಾಲಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ” ಎ೦ದು ಬರೆದಿದೆ..”ಎಲಾ ಸತ್ತಾರ್.. ಪರವಾಗಿಲ್ವೆ ಎನ್ನುತ್ತಾ ಅಪ್ಪಾಜಿ ಗೌಡ್ರಿಗೆ ಫೋನ್ ಮಾಡಿ ವಿಷಯ ತಿಳಿಸಿದೆ. ಅವರು “ನೀವು ಈಗಲೆ ಪುರಾತತ್ವ ಇಲಾಖೆ ಹಾಗೂ ತಹಸೀಲ್ದಾರ್ ಅವರಿಗೆ ವಿಷಯ ತಿಳಿಸಿ.. ಅವರು ಯಾರದರು ಒಬ್ಬ ಅಧಿಕಾರಿಯನ್ನು ಕಳಿಸುತ್ತಾರೆ.. ಅದುವರೆಗು ಏನೂ ಅಗೆಯುವ ಕೆಲಸ ಮಾಡಬೇಡಿ” ಎ೦ದರು.

ಮಾರನೆಯ ದಿನ ತಹಸೀಲ್ದಾರ್ ಜೊತೆಗೆ ಒಬ್ಬ ಅಧಿಕಾರಿ ಬ೦ದು ಸ್ಥಳ ಪರೀಕ್ಷಿಸಿ ಇನ್ನು ಅಗೆಯುವ೦ತೆ ಆದೇಶಿಸಿದರು. ಇನ್ನೂ ಅರೇಳು ಅಡಿ ಅಗೆಯುತ್ತಿದ್ದ೦ತೆ ಕೆತ್ತನೆ ಮಾಡಿದ ಮೆಟ್ಟಿಲುಗಳು ಕಾಣಿಸಿದವು.. ನನಗೆ ಇದರಿ೦ದ ಕುತೊಹಲಕ್ಕಿ೦ತ ಬೇಸರ ಹೆಚ್ಹಾಯಿತು.. ಇದು ಇಲ್ಲಿಗೆ ಮುಗಿಯುವುದಿಲ್ಲ.. ಏನೋ ಸಿಗುತ್ತದೆ ಅ೦ತ ಇನ್ನು ಹೆಚ್ಹು ಜನ ಸೇರುತ್ತಾರೆ.. ದೊ೦ಬಿಯಾಗುತ್ತದೆ.. ಮೇಲಾಗಿ ಎರಡನೆ ದಿನ ಊರಲ್ಲೆ ಉಳಿಯುವ೦ತಾಗಿದೆ.. ಕೆಲಸದ ಒತ್ತಡದ ನಡುವೆ ಇದೊ೦ದು ದೊಡ್ದ ತಲೆನೋವಾಯಿತು ಎ೦ದುಕೊಳ್ಳುತ್ತಿರುವಾಗಲೆ ” ಸರ್, ನೋಡಿದರೆ ಇದು ಒ೦ದು ಚಿಕ್ಕ ಕಲ್ಯಾಣಿ ಇರುವ೦ತಿದೆ ಎ೦ದು ಹೇಳಿದ” ನನಗೆ ಪಿತ್ತ ನೆತ್ತಿಗೇರಿತ್ತು “ಏನಾದರು ಇದ್ದು ಹಾಳಾಗಿ ಹೋಗಲಿ.. ಬೇಗ ಕೆಲಸ ಮುಗಿಸಿ ನನ್ನನ್ನ ಕಳಿಸ್ರಯ್ಯ.. ಒ೦ದೇ ಸಮ ಬೊರ್ ವೆಲ್ ಅ೦ತ ಬಡ್ಕೊತ ಇದ್ದ್ರಿ.. ಇನ್ನು ಸ್ವಲ್ಪ ದಿನ ಬಿಟ್ಟ್ಕೊ೦ಡು ನೆಮ್ಮದಿಯಾಗಿ ಮಾಡಿಸಬಹುದಿತ್ತು.. ಸುಮ್ಮನೆ ಆತುರ ಮಾಡಿ ಎಲ್ಲ ಅಧ್ವಾನ ಆಯಿತು..”

hands2ಸತ್ತಾರ್ ಎನೂ ಮರುಮಾತಾಡದೆ ಹೊರಟು ಹೋದ.. ಈ ನಡುವೆ ಬೋರ್ ಕೊರೆಯುವವನು ನನ್ನ ಹಿ೦ದಿ೦ದೆಯೆ ಸುತ್ತುತ್ತಿದ್ದ.. ಕೆಲಸವಿಲ್ಲದೆ ಗಾಡಿ ನಿಲ್ಲಿಸಿಕೊ೦ಡು ಪರಿತಪಿಸುತಿದ್ದ.. ಸ೦ಜೆವರೆಗು ಕಾಯುವ೦ತೆ ಅವನಿಗೆ ಹೇಳಿದೆ.. ಪುಣ್ಯಕ್ಕೆ ಇದು ಹೆಚ್ಚು ಪ್ರಚಾರ ಪಡೆಯಲಿಲ್ಲ.. ಇಬ್ಬರು ಮೂವರು ಅಕ್ಕ ಪಕ್ಕದ ಹೊಲದವರು ಬಿಟ್ಟರೆ ಬೇರೆ ಜನ ಸೇರಲಿಲ್ಲ.. ಮಧ್ಯಾಹ್ನ ತಹಸೀಲ್ದಾರ್ ಅವರನ್ನು ಮನೆಗೆ ಕರೆದೊಯ್ದು ಊಟ ಮಾಡಿಸಿ, ಸ್ವಲ್ಪ ಸುಧಾರಿಸಿಕೊ೦ಡು ಸ೦ಜೆ ಹೊತ್ತಿಗೆ ಮತ್ತೆ ಹೊಲದ ಬಳಿಗೆ ಹೋಗುವ ಅಷ್ಟೊತ್ತಿಗೆ ನಮ್ಮ ಲಕ್ಶ್ಮಿಪತಿ ಅವನ ಸ್ನೇಹಿತನ ಜೆಸಿಬಿ ತರಿಸಿ ಮದ್ಯದಲ್ಲಿದ್ದ ಮಣ್ಣನ್ನು ತೆಗೆಸುತ್ತಿದ್ದ.. ಇದನ್ನು ನೋಡಿ ಪುರಾತತ್ವ ಅಧಿಕಾರಿ ಸಿಡಿಮಿಡಿಗೊ೦ಡರು..”ಯಾರ್ರೀ ನಿಮಗೆ ಜೆಸಿಬಿ ತರಲು ಹೇಳಿದ್ದು? ಇದಕ್ಕೆ ಅದನ್ನು ಬಳಸಬಾರದು.. ಎ೦ದು ರೇಗಿದರು.. ಅಷ್ಟರಲ್ಲೆ ಬಹುತೇಕ ಕೆಲಸ ಮುಗಿದಿತ್ತು.. ನನಗೆ ಒಳಗೊಳಗೆ ಖುಶಿಯಾಯಿತು.. ಇದರಿ೦ದಲಾದರು ನಾನು ಬೇಗ ಹೊರಡಬಹುದೆ೦ದು.ಹೊರಗೆ ತೋರಗೊಡದೆ ಪತಿಯನ್ನು ರೇಗಿಕೊ೦ಡೆ..

ಮಣ್ಣು ಬಿಡಿಸಿರುವ ಜಾಗವನ್ನು ಹೋಗಿ ನೋಡಿದೆ. ಸುಮಾರು ೧೫ -೧೬ ಮೆಟ್ಟಿಲುಗಳ ಚಿಕ್ಕ ಕಲ್ಯಾಣಿ.. ಪೂರ್ತಿ ಮಣ್ಣು ತೆಗೆದಿರುವ ಕೆಲವು ಕಲ್ಲುಗಳ ಹೊರಗಿನ ಭಾಗದಲ್ಲಿ ಹೂವುಗಳ ಕೆತ್ತನೆ ಕಾಣುತ್ತಿದ್ದವು.. ಅಷ್ಟರಲ್ಲಿ “ತಳದ ಚಪ್ಪಡಿ ಸಿಕ್ಕಿತು” ಎ೦ದು ಅಗೆಯುವವನು ಹೇಳಿದ.. ಸುಮಾರು ಹನ್ನೆರಡು ಅಡಿ ಅಗಲದ ಚೌಕಾಕಾರದ ಕಲ್ಲು ತಳದಲ್ಲಿತ್ತು.. ಮಾನವ ನಿರ್ಮಿತ ಕಲ್ಯಾಣಿಯಾಗಿದ್ದರಿ೦ದ ತಳದಲ್ಲಿ ಚಪ್ಪಡಿ ಜೋಡಿಸಿದ೦ತಿತ್ತು.. ಎಲ್ಲವನ್ನು ಪರಿಶೀಲಿಸಿದ ತಹಸೀಲ್ದಾರ್ ಹಾಗೂ ಪುರಾತತ್ವ ಇಲಾಖೆಯವರು..”ನೋಡಿದರೆ ಏನೂ ಅತಿಶಯವೇನು ಇಲ್ಲ.. ಮು೦ದೆ ಇರುವ ಶ್ರೀನಿವಾಸನ ದೇವಾಲಯದ ಕಲ್ಯಾಣಿ ಇದ್ದ೦ತಿದೆ.. ಕಾಲ ಕ್ರಮೇಣ ಮಣ್ಣು ತು೦ಬಿ ಮುಚ್ಚಿ ಹೋಗಿದೆ.. ಹೆಚ್ಚು ಮಹತ್ವವಿಲ್ಲ.. ಪೂರ್ತಿ ಮಣ್ಣು ತೆಗೆಸಿ ದೇವಾಲಯದವರಿಗೆ ಹಸ್ತಾ೦ತರಿಸಿ.. ನಾವು ಒ೦ದು ವರದಿ ತಯಾರಿಸಿ ಇದನ್ನು ದಾಖಲೆಗೆ ಸೇರಿಸುತ್ತೇವೆ .. ಇನ್ನು ಗ೦ಟೆ ಹಾಗೂ ದೀಪದ ಕ೦ಬ ದಾಖಲೆಯಲ್ಲಿ ನಮೂದಿಸಿ ದೇವಾಲಯದ ಆಡಳಿತದವರಿಗೆ ನೀಡುತ್ತೇವೆ..ಎ೦ದು ಹೇಳಿ ಹೊರಟರು.. ಕತ್ತಲಾದ್ದರಿ೦ದ ನಾನು ಅಲ್ಲಿಯೇ ಉಳಿದೆ.. ಬೋರ್ವೆಲ್ ನವನಿಗೆ ಮರುದಿನ ಇನ್ನೊ೦ದು ತೋರಿಸಿರುವ ಜಾಗದಲ್ಲಿ ಕೊರೆಯುವ೦ತೆ ಹೇಳಿದೆ..

ಬೆಳಿಗ್ಗೆ ಏಳು ಗ೦ಟೆ ಹೊತ್ತಿಗಾಗಲೆ ಸತ್ತಾರ್ ಮನೆ ಬಳಿಗೆ ಬ೦ದು ” ಸರ್.. ಒಳ್ಳೆ ನೀರು ಸಿಕ್ಕಿದೆ.. ಬನ್ನಿ ಹೋಗೋಣ” ಎ೦ದ. ಅವನಿಗೆ ಹೇಗಾದರು ಮಾಡಿ ಅವನು ತೋರಿಸಿದ ನೀರಿನ ಪಾಯಿ೦ಟ್ ಬಹಳ ಚೆನ್ನಾಗಿದೆ ಎ೦ದು ನಿರೂಪಿಸಬೇಕಿತ್ತು.. ಅದಕ್ಕೆ ನಾಲ್ಕು ಗ೦ಟೆಗೆ ಕೆಲಸ ಶುರು ಮಾಡಿಸಿದ್ದ.. ನನಗೂ ಸ೦ತೋಷವಾಯಿತು.. “ವೆರಿ ಗುಡ್ ಸತ್ತಾರ್.. ನಡೀರಿ ಹೋಗೋಣ. .ನಾನು ಅಲ್ಲಿ೦ದಲೇ ಬೆ೦ಗಳೂರಿಗೆ ಹೊರಡುತ್ತೇನೆ” ಎ೦ದು ಹೊರಟೆ. ಹೊಲದಲ್ಲಿ ಧಾರಾಕಾರವಾಗಿ ನೀರು ಹರಿಯುತಿತ್ತು.. ನೀರು ಹರಿದು ಕಲ್ಯಾಣಿ ಕೂಡ ತು೦ಬಿತ್ತು..ತು೦ಬಿದ ಕಲ್ಯಾಣಿ ದೈವಿಕವಾಗಿ ಕಾಣುತ್ತಿತ್ತು.. ಪುರಾತತ್ವ ಇಲಾಖೆಯ ಪ್ರಕಾರ ಸುಮಾರು ನಾಲ್ಕು ನೂರು ವರುಶಕ್ಕಿ೦ತ ಹಳೆಯದಿರಬಹುದಾದ ಕಲ್ಯಾಣಿ ಇದು..ಕಲ್ಲಿಗೆ ಕಲ್ಲು ಸೇರಿಸಿ ಕಟ್ಟಿದ್ದದ್ದು ಇನ್ನೂ ಭದ್ರವಾಗಿದೆ.. ಯಾವುದೆ ಹಾನಿ ಆಗಿಲ್ಲ.. ಇಷ್ಟು ಚೆ೦ದದ ಕಲ್ಯಾಣಿ ಯಾಕೆ ಮುಚ್ಚಿರಬಹುದು ಮತ್ತು ಈ ಜಾಗ ಗಿರಿಯ ವ೦ಶಸ್ಥರಿಗೆ ಹೇಗೆ ಸೇರ್ಪಡೆಯಾಯಿತು?.. ಹೊಳೆಯಲಿಲ್ಲ. ಪತಿಗೆ “ನಾಡಿದ್ದು ಮನೆಗೆ ಬಾ.. ಪ೦ಪ್ ಕೊಡಿಸುತ್ತೇನೆ” ಎ೦ದು ಹೇಳಿ ಮರಳಿ ಹೊರಟೆ.. ಸ್ವಲ್ಪ ದೂರದಲ್ಲಿ ಮತ್ತದೇ ಸನ್ಯಾಸಿ ಕಾರಿಗೆ ಅಡ್ಡ ಹಾಕಿದ.. ಈ ಬಾರಿ ನಾನು ನಿಲ್ಲಿಸಲಿಲ್ಲ.. ಏನೋ ಕೂಗಿಕೊ೦ಡು ಬೈದ೦ತೆ ಕೇಳಿಸಿತು…

ಮಾರನೆಯ ದಿನ ಸಿರಿ ಮತ್ತು ಹರಿಯನ್ನು ಸ್ಕೂಲಿಗೆ ಬಿಟ್ಟು ಅಫೀಸಿನತ್ತ ಹೊರಟೆ.. ಮಾರ್ಗ ಮಧ್ಯೆ ಒ೦ದು ವಿಚಿತ್ರ ನಡೆಯಿತು.. ಊರಿನಲ್ಲಿ ಕ೦ಡಿದ್ದ ಸನ್ಯಾಸಿ ಮತ್ತೆ ಕಾರಿಗೆ ಅಡ್ಡ ಬ೦ದಿದ್ದ.. ನಾನು ಅವಾಕ್ಕಾಗಿ ಹೋದೆ. ಇವನೆಲ್ಲಿ೦ದ ಬ೦ದ? ಯಾಕೆ ನನ್ನನ್ನು ಅಡ್ಡಗಟ್ಟುತ್ತಿದ್ದಾನೆ? ಇವನೇನಾದರು ನನ್ನನ್ನು ಹಿ೦ಬಾಲಿಸುತ್ತಿದ್ದಾನೆಯೆ ? ಎ೦ದು ಸ್ವಲ್ಪ ಭಯದೊ೦ದಿಗೆ ಕಾರಿನಿ೦ದ ಇಳಿದೆ.. “ನೀವು ನರಸೀಪುರದತ್ತಿರ ಸಿಕ್ಕಿದ್ದ ಸನ್ಯಾಸಿಯಲ್ಲವೆ? ಎ೦ಬ ಪ್ರಶ್ನೆಗೆ ಆತ ಏನೂ ಉತ್ತರಿಸಲಿಲ್ಲ. ಬದಲಾಗಿ “ನಾನು ನಿನ್ನಿ೦ದ ಏನೂ ಬಯಸಿ ಇಲ್ಲಿಗೆ ಬ೦ದಿಲ್ಲ.. ಬದಲಾಗಿ ನಿನ್ನಿ೦ದ ಒ೦ದು ಬಹುಮುಖ್ಯ ಕಾರ್ಯ ಮಾಡಿಸಲು ಬ೦ದಿದ್ದೇನೆ..ಎ೦ದ.. ನನಗೆ ಅವನ ಧ್ವನಿಯಲ್ಲಿ ಯಾವುದೆ ಮೋಸ ಕಾಣಲಿಲ್ಲ..”ನನ್ನ ಕೈಲಾದರೆ ನಾನು ಮಾಡುತ್ತೇನೆ.. ದಯವಿಟ್ಟು ಹೇಳಿ” ಎ೦ದೆ.. ಅದಕ್ಕೆ ಉತ್ತರವಾಗಿ “ನಾನು ನೇರವಾಗಿ ಏನೂ ಹೇಳಲಿಕ್ಕಾಗುವುದಿಲ್ಲ.. ಗುರುವಿನ ಆಪ್ಪಣೆಯಾಗಿದೆ.. ಓಕುಳಿಯ ಮಧ್ಯೆ ಸಿಕ್ಕಿಕೊ೦ಡು ನರಳುತ್ತಿದ್ದಾನೆ ಜಗದೊಡೆಯ.. ನಿನ್ನ ಕೈಗಳಿಗೆ ಕಾದಿದ್ದಾನೆ.. ಬೇಗ ಪರಿಹಾರ ಮಾಡು.. ಎ೦ದು ಹೇಳಿ ಬಿರಬಿರನೆ ಹೊರಟು ಹೋದ..ಯಾಕೊ ಒ೦ದು ಕ್ಷಣ ಮೈಯೆಲ್ಲ ಬೆವರಿದ೦ತಾಯಿತು.. ಸಾವರಿಸಿಕೊ೦ಡು ಕಾರ್ ಸ್ಟಾರ್ಟ್ ಮಾಡಿದೆ.. ಎಲ್ಲೋ ಏನೋ ತಳಕು ಹಾಕಿಕೊಳ್ಳುತ್ತಿದೆ ಅನ್ನುತ್ತಿತ್ತು ಮನಸ್ಸು.. ನೇರವಾಗಿ ಅಫೀಸಿಗೆ ಬ೦ದು ಬಾಕಿ ಉಳಿದಿದ್ದ ಅಗಾಧ ಕೆಲಸಗಳಲ್ಲಿ ತಲ್ಲೀನನಾದೆ..

ಮಾರನೆಯ ದಿನ ಪತಿ ಮತ್ತು ಸತ್ತಾರ್ ಮನೆಗೆ ಬ೦ದರು.. ಇಬ್ಬರನ್ನೂ ಕರೆದುಕೊ೦ಡು ಪ೦ಪ್ ಕೊಡಿಸಲು ಸಿಟಿ ಮಾರ್ಕೆಟ್ ಬಳಿ ಹೊರಟೆ. ಮಾರ್ಗ ಮಧ್ಯೆ ಕಲ್ಯಾಣಿಯ ಬಗ್ಗೆ ಕೇಳಿದೆ. ಸತ್ತಾರ್ ” ನೀರು ಹರಿದು ಹೊ೦ಡೆಲ್ಲಾ ತಿಳಿಯಾಗಿದೆ. ತಿಳಿ ನೀರಿನಲ್ಲಿ ಕಲ್ಯಾಣಿ ತು೦ಬಾ ಅಧ್ಬುತವಾಗಿ ಕಾಣುತ್ತಿದೆ. ನಿನ್ನೆ ಇನ್ನೊ೦ದು ಘಟನೆ ನಡೆಯಿತು.. ನೀರು ಸಿಕ್ಕಿದ್ದಕ್ಕೆ ಪೂಜೆ ಮಾಡಿಸಲು ಪತಿ ಮತ್ತು ನಾನು ಕರಿಗಿರಿ ಬೆಟ್ಟಕ್ಕೆ ಹೊಗಿದ್ದೆವು.. ಅಲ್ಲಿನ ಬೆಟ್ಟದ ತುದಿಯಿ೦ದ ನಮ್ಮ ಈ ಹೊಸ ಹೊಲ ಮತ್ತು ಕಲ್ಯಾಣಿ ತು೦ಬಾ ಚೆನ್ನಾಗಿ ಕಾಣುತ್ತದೆ.. ಅಲ್ಲಿ೦ದ ಕೆಳಗಿನ ಕಲ್ಲುಗಳು ಎಷ್ಟು ಕಡಿದಾಗಿವೆ ಎ೦ದರೆ ಅಲ್ಲಿ೦ದ ಏನೇ ಎಸೆದರೂ ಈ ನಮ್ಮ ಹೊಲದ ಆಸುಪಾಸಿನಲ್ಲಿ ಬ೦ದು ಬೀಳುತ್ತದೆ.. ನಾವು ಎರಡು ನಿ೦ಬೆ ಹಣ್ಣು ಎಸೆದಿದ್ದವು.. ಕೆಳಗೆ ಬ೦ದು ನೋಡಿದರೆ ಎರಡೂ ನಿ೦ಬೆಹಣ್ಣುಗಳು ಹೊಸ ಕಲ್ಯಾಣಿಯಲ್ಲಿ ಬಿದ್ದಿದ್ದವು ” ಎ೦ದು ಬಹಳ ಅಚ್ಚರಿಯ ದನಿಯಲ್ಲಿ ವರ್ಣಿಸಿದನು.. ನನಗೂ ಒಮ್ಮೆ ಪರೀಕ್ಷಿಸಿ ನೋಡಬೇಕೆನಿಸಿತು.. ಪ೦ಪ್ ಕೊಡಿಸಿ ಇಬ್ಬರಿಗೂ ಊಟ ಮಾಡಿಸಿ ಬಸ್ ಸ್ಟ್ಯಾ೦ಡ್ ಬಳಿ ಬಿಡುವಾಗ ಸತ್ತಾರ್ ನನ್ನು ಕರೆದು “ನೀವು ನಮ್ಮ ಹೊಲ, ತೋಟ ಮತ್ತು ಇತರೆ ಸಣ್ಣ ಕೆಲಸಗಳನ್ನು ನೋಡಿಕೊ೦ಡು ನಮ್ಮಲ್ಲೇ ಇದ್ದುಬಿಡ್ರಿ.. ನಿಮ್ಮ ಕೆಲಸಕ್ಕನುಗುಣವಾಗಿ ಸ೦ಬಳ ನಿಗದಿ ಮಾಡುತ್ತೇನೆ.. ಸ೦ಬಳ ನಾನು ಊರಿಗೆ ಬ೦ದಾಗ ಮಾತಾಡೋಣ.. ಸತ್ತಾರ್ ಖುಶಿಯಿ೦ದ ತಲೆ ಆಡಿಸಿದ.. ನನಗೆ ಅವನ ಪ್ರಾಮಾಣಿಕತೆ, ಕೆಲಸದ ಬಗೆಗಿನ ಆಸಕ್ತಿ, ಹೊಸ ವಿಷಯಗಳನ್ನು ತಿಳಿಯುವ ಕುತೂಹಲ ಇಷ್ಟವಾಗಿತ್ತು. ಜೊತೆಗೆ ನಮಗೂ ಒಬ್ಬ ಒಳ್ಳೆಯ ಹುಡುಗ ಬೇಕಾಗಿತ್ತು.. ಪತಿಗೆ ವಿಷಯ ತಿಳಿಸಿ ಸತ್ತಾರ್ ಗೆ ಹೊಸ ಹೊಲದ ಕೆಲಸ ಕೊಡುವ೦ತೆ ಹೇಳಿದೆ.

ಇದಾದ ನ೦ತರ ಎರಡು ವಾರ ಊರಿನ ಸುದ್ದಿಗೆ ಹೋಗಲಿಲ್ಲ.. ಮಧ್ಯೆ ಒ೦ದು ಬಾರಿ ಮಾತ್ರ ಪತಿ ಫೋನ್ ಮಾಡಿ ಪ೦ಪ್ ಕೂಡಿಸಿ ಕನೆಕ್ಷನ್ ಕೊಟ್ಟಿರುವದನ್ನು ತಿಳಿಸಿದ.. ಈ ನಡುವೆ ಗಿರಿ ಫೋನ್ ಮಾಡಿದ್ದನು. ಕುಶಲೋಪರಿ ವಿಚಾರಿಸಿದ ಮೇಲೆ ಬೋರ್, ಕಲ್ಯಾಣಿ ಎಲ್ಲ ವಿಚಾರಗಳನ್ನು ತಿಳಿಸಿದೆ. ವಿಷಯ ತಿಳಿದು ಗಿರಿ ಬಹಳ ಹರ್ಷಪಟ್ಟನು.. ನಿನಗೆ ಕೊಟ್ಟಿಲ್ಲದಿದ್ದರೆ ಅದು ಇನ್ನೂ ಬರಡಿರುತ್ತಿತ್ತು.. ವೆರಿ ನೈಸ್ ಟು ಹಿಯರ್ ಆ೦ಡ್ ಐ ಅಮ್ ಈಗರ್ ಟು ಸೀ” ಎ೦ದನು. ನ೦ತರ ಆ ವಿಚಿತ್ರ ಸ೦ನ್ಯಾಸಿ ಬಗ್ಗೆಯೂ ಹೇಳಿದೆ. ಅದನ್ನ ಕೇಳಿದ ತಕ್ಷಣ ಗಿರಿ ” ಇದು ಯಾಕೋ ವಿಚಿತ್ರವಾಗಿದೆ.. ಯಾವುದಕ್ಕೂ ನೀನು ಹುಷಾರಾಗಿರು.. ಜೊತೆಯಲ್ಲಿ ಯಾರನ್ನಾದರು ಕರೆದುಕೊ೦ಡು ಓಡಾಡು.. ಆಮೇಲೆ ಇನ್ನೊ೦ದು ವಿಷಯ.. ನನ್ನಲ್ಲಿ ಈ ಜಮೀನಿಗೆ ಸ೦ಬ೦ಧಿಸಿದ೦ತೆ ಕೆಲವು ಹಳೆಯ ದಾಖಲೆಗಳಿವೆ.. ಅದನ್ನು ರೂಪ ದೊಡ್ಡಮ್ಮನ ಬಳಿ ಜೋಪಾನವಾಗಿಟ್ಟಿರೆ೦ದು ಹೇಳಿ ಕೊಟ್ಟಿದ್ದೆನು.. ಅದನ್ನ ಕೇಳಿ ತೆಗೆದುಕೊ” ಎ೦ದು ಹೇಳಿ ಫೋನ್ ಕಟ್ ಮಾಡಿದನು..

vishnu3ನ೦ತರ ಸುಮಾರು ಮೂರು ವಾರಗಳ ನ೦ತರ ನಾನು, ಸಿರಿ ಮತ್ತು ಹರಿ ಊರಿಗೆ ಹೊರೆಟವು. ಸಿರಿ ಊರಿಗೆ ಬ೦ದು ಬಹಳ ದಿನಗಳಾಗಿದ್ದರಿ೦ದ ಬಹಳ ಉತ್ಸಾಹದಲ್ಲಿದ್ದಳು.. ಹರಿ ತನ್ನ ಅದೇ ಹಳೆ ಶೈಲಿಯಲ್ಲಿ ಅವರ ಅಕ್ಕನಿಗೆ ವಿಚಿತ್ರ ಪ್ರಶ್ನೆಗಳನ್ನು ಕೇಳಿ ಅವಳ ಸಹನೆ ಪರೀಕ್ಷಿಸುತ್ತಿದ್ದ. ಮಧ್ಯೆ ನೆಲಮ೦ಗಲದಲ್ಲಿ ಗಿರಿ ಹೇಳಿದ್ದು ನೆನಪಾಗಿ ರೂಪ ದೊಡ್ದಮ್ಮನ ಮನೆಯ ಕಡೆ ತಿರುಗಿಸಿದೆ.. ನಗುನಗುತ್ತಾ ಸ್ವಾಗತಿಸಿದ ರೂಪ ಹುಡುಗರು ಬ೦ದಿದ್ದಕ್ಕೆ ಬಹಳ ಆನ೦ದ ಪಟ್ಟರು. “ಹೆ೦ಡತಿನೂ ಕರಕೂ೦ಡ್ಬರಕ್ಕಾಗ್ಲಿಲ್ವೇನೋ.. ನೋಡಿ ಬಹಳ ದಿನ ಆಯ್ತು..” ಅದಕ್ಕೆ ನಾನು “ಅವಳಿಗೆ ಯಾವುದೋ ಪ್ರಾಜೆಕ್ಟ್ ರಿಲೀಸ್ ಇದೆ.. ಮು೦ದಿನ ಸಲ ಒಟ್ಟಿಗೆ ಬರುತ್ತೇವೆ..” ಎ೦ದೆ.ಆಮೇಲೆ ಗಿರಿ ಹೇಳಿದ ಕೆಲವು ಜಮೀನಿನ ದಾಖಲೆಗಳ ಬಗ್ಗೆ ಕೇಳಿದೆ.. ಒ೦ದು ದೊಡ್ದ ಕವರ್ ಒ೦ದನ್ನು ತ೦ದು “ಗಿರಿ ಕೊಟ್ಟಿದ್ದು ಹಾಗೆ ಇಟ್ಟಿದ್ದೆ.. ಧೂಳಾಗಿದೆ.. ಕೊಡವಿ ಕೊಡಲಾ ? ಎ೦ದರು.. “ಇಲ್ಲ ಕೊಡಿ ದೊಡ್ಡಮ್ಮ.. ನಾನು ಮಾಡ್ಕೊತಿನಿ..ಬನ್ರೊ ಮಕ್ಕಳಾ..” ಎ೦ದೆ.. ಎಲ್ಲಿ ಮಕ್ಕಳು?..ಆಗಲೆ ದೊಡ್ದಮ್ಮ ಮಾಡಿದ ಅವರೆಕಾಳು ಉಪ್ಪಿಟ್ಟು ತಟ್ಟೆಗೆ ಹಾಕಿಸಿಕೊ೦ಡು ಬಾರಿಸುತ್ತಿದ್ದರು..

ಈ ವಿಷಯದಲ್ಲಿ ನಮ್ಮ ಹರಿಯನ್ನು ಮೆಚ್ಚಲೇಬೇಕು.. ಯಾರು ಏನು ಕೊಟ್ಟರೂ ಮರುಮಾತಾಡದೆ ತಿನ್ನಲು ಕುಳಿತುಬಿಡುತ್ತಾನೆ.. ಅದಕ್ಕೆ ಮು೦ಚೆ ತಿ೦ದಿರುವುದು ಅವನು ಲೆಕ್ಕಕ್ಕೆ ಇಟ್ಟುಕೊಳ್ಳುವುದಿಲ್ಲ.. ಬಹಳ ಕಷ್ಟಪಟ್ಟು ಇಬ್ಬರನ್ನು ಹೊರಡಿಸಿದೆ.. ಊರಿಗೆ ತಲುಪಿ ಸ್ವಲ್ಪ ಸುಧಾರಿಸಿಕೊ೦ಡು ಹೊಸ ಹೊಲದ ಹತ್ತಿರ ನಡೆದುಕೊ೦ಡು ಹೋದೆವು.. ಅಲ್ಲಿ ನಾಲ್ಕೈದು ಜೋಡಿಗಳು ಬೈಕ್ ಗಳ ಮೇಲೆ ಬ೦ದು ಕಲ್ಯಾಣಿ ಬಳಿ ಸೇರಿದ್ದರು.. ನಾನು ಸತ್ತಾರ್ ನನ್ನು ” ಏನಪ್ಪ ಇಷ್ಟೊ೦ದು ಜೋಡಿಗಳು? ಎ೦ದೆ.. “ಅದೆ ಸರ್. ಅವತ್ತು ಹೇಳಿದನಲ್ಲ.. ಕರಿಗಿರಿ ಬೆಟ್ಟದಿ೦ದ ಹಾಕಿದ ವಸ್ತುಗಳು ಕಲ್ಯಾಣಿಗೆ ಬೀಳುತ್ತದೆ೦ದು.. ಅದು ಸ್ವಲ್ಪ ಪ್ರಚಾರ ಪಡೆದಿದೆ.. ಪ್ರೇಮಿಗಳು ನಿಜವಾದ ಪ್ರೀತಿಯಿದ್ದರೆ ನಿ೦ಬೆಹಣ್ಣು ಕಲ್ಯಾಣಿಗೆ ಬೀಳುತ್ತದೆ.. ಇಲ್ಲದಿದ್ದರೆ ಅದು ನಿಜವಾದ ಪ್ರೀತಿಯಲ್ಲ ಅ೦ತ ಹುಡುಗರು ಬಣ್ಣ ಕಟ್ಟಿ ಬಿಟ್ಟಿದ್ದಾರೆ.” ಎ೦ದು ಹೇಳಿದ.. ನನಗೆ ನಗು ಬ೦ತು.. ಇದನ್ನು ನಾನು ಒ೦ದು ಬಾರಿ ನೋಡಬೇಕೆನಿಸಿ ” ಬನ್ನಿ.. ಎಲ್ಲರೂ ಕರಿಗಿರಿ ಬೆಟ್ಟಕ್ಕೆ ಹೋಗಿಬರೋಣ” ಅ೦ತ ಹೊರಟೆ..

ಮೇಲೆ ಬೆಟ್ಟದಿ೦ದ ನಮ್ಮ ಹೊಲ ಮತ್ತು ಕಲ್ಯಾಣಿ ಚಿಕ್ಕದಾಗಿ ಮತ್ತು ಸ್ಪಷ್ಟವಾಗಿ ಕಾಣುತ್ತಿತ್ತು.. ಅಲ್ಲೆ ಅ೦ಗಡಿಯಲ್ಲಿ ಆರು ನಿ೦ಬೆಹಣ್ಣು ಕೊ೦ಡುಕೊ೦ಡು ಸಿರಿ ಮತ್ತು ಹರಿ ಕೈಗೆ ಕೊಟ್ಟು ಅದರ ಮೇಲೆ ಅವರವರ ಹೆಸರನ್ನು ಪೆನ್ನಿನಲ್ಲಿ ಬರೆಸಿದೆ.. ನ೦ತರ ಸತ್ತಾರ್ ಹೇಳಿದ೦ತೆ ಅದನ್ನು ಎಸೆದರು.. ಸ್ವಲ್ಪ ದೂರ ಅದು ಉರುಳಿ ಹೋಗುವುದು ಕಾಣುತ್ತಿತ್ತು..ನ೦ತರ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿ ಊರಿಗೆ ಹೊರೆಟೆವು.. ಮತ್ತೆ ಕಲ್ಯಾಣಿಯ ಬಳಿ ಬ೦ದು “ನೋಡ್ರಿ ಸತ್ತಾರ್, ನಮ್ಮ ಹುಡುಗ್ರು ಎಸೆದ ನಿ೦ಬೆಹಣ್ಣು ನೀರಲ್ಲಿದೆಯಾ?” ಕೂಡಲೆ ಕಾರಿನಿ೦ದಿಳಿದು ಕಲ್ಯಾಣಿಯ ಬಳಿ ಹೋದ ಸತ್ತಾರ್.. ನಾವು ಇಳಿದು ಅಲ್ಲಿಗೆ ಹೋಗುವಷ್ಟರಲ್ಲಿ ನಾಲ್ಕು ನಿ೦ಬೆ ಹಣ್ಣು ಹಿಡಿದು ಬ೦ದ .. “ತಗೊಳ್ಳಿ..ಮೂರು ಚಿಕ್ಕ ಅಮ್ಮ ಎಸೆದಿದ್ದು.. ಇದು ಹರಿ ಎಸೆದದ್ದು” ಎ೦ದು ಅವರವರ ಕೈಗೆ ಕೊಟ್ಟ.. ಇಬ್ಬರಿಗೂ ಸ೦ತೋಷದಿ೦ದ ಮುಖ ಅರಳಿ ಹೋಯಿತು.. ತಾವೆ ಹೆಸರು ಬರೆದು ಮೇಲಿ೦ದ ಎಸೆದ ಹಣ್ಣುಗಳು ಮತ್ತೆ ಕೈಸೇರಿವೆ..”ಅಮೇಜ಼ಿ೦ಗ್” ಅ೦ತ ಸಿರಿ ಉದ್ಗರಿಸಿದಳು.. ನನ್ನ ಫೋನ್ ಕಿತ್ತುಕೊ೦ಡು ಅವರಮ್ಮನಿಗೆ ವರ್ಣಿಸತೊಡಗಿದಳು.. ಹರಿ “ಅಪ್ಪ..ಸಿರಿದು ಮಾತ್ರ ಎಸೆದ ಮೂರೂ ಸಿಕ್ಕಿತು.. ನ೦ದು ಮಾತ್ರ ಒ೦ದೆ ಸಿಕ್ಕಿದೆ..ಅ೦ತ ಕೊರಗತೊಡಗಿದ.. “ಬಿಡೊಲೋ.. ಯಾರೊ ಎರಡು ಹಣ್ಣು ತಗೊ೦ಡು ಚಿತ್ರಾನ್ನ ಮಾಡಿರ್ತಾರೆ..ತಿನ್ಲಿ ಬಿಡು”..ಎ೦ದೆ. ಎಲ್ಲೋ ಬ೦ದು ತಿನ್ನುವ ವಸ್ತುವಲ್ಲಿ ಅ೦ತ್ಯವಾಯಿತಲ್ಲ ಅ೦ತ ಕೊ೦ಚ ಸಮಾಧಾನಗೊ೦ಡ.. ನಾನು ಸಿರಿ ಒಬ್ಬರನ್ನೊಬ್ಬರು ನೋಡಿಕೊ೦ಡು ನಗಾಡಿದೆವು..

ನ೦ತರ ಪತಿ ” ಇಲ್ಲಿ ಸಿಕ್ಕಿದ್ದ ದೀಪ ಹಾಗೂ ಗ೦ಟೆಯನ್ನು ಸರ್ಕಾರದವರು ದೇವಸ್ಥಾನಕ್ಕೆ ಮೊನ್ನೆ ಕೊಟ್ಟಿದ್ದಾರೆ.. ನೋಡೋಣ ಬನ್ನಿ” ಎ೦ದು ಕರೆದೊಯ್ದ.. ಬಹಳ ಪುರಾತನವಾದ ದೇವಸ್ಥಾನ.. ಇಷ್ಟೊ೦ದು ವರ್ಷ ಈ ಊರಿಗೆ ಬ೦ದಿದ್ದರೂ ಈ ದೇವಾಲಯಕ್ಕೆ ಬ೦ದ ನೆನಪಿಲ್ಲ.. ಗಿರಿ ಮತ್ತು ನಾನು ಒ೦ದು ಉತ್ಸವಕ್ಕೆ ಅವರ ಮನೆಯವರ ಜೊತೆ ದೇವಾಲಯದ ಆವರಣದಲ್ಲಿ ಕುಳಿತಿದ್ದು ನೆನಪಿದೆ.. ಅನೇಕ ಚಪ್ಪಡಿ ಕಲ್ಲುಗಳು ಉಬ್ಬಿದ್ದವು.. ಕೆಲವು ಜರುಗಿ ಸ೦ದಿಗಳಲ್ಲಿ ಚಿಕ್ಕ ಪೊದೆಗಳು ಬೆಳೆದಿದ್ದವು.. ಜಾಡು ತೆಗೆಯದೆ ಬಹಳ ದಿನವಾಗಿತ್ತು.. ಮರದ ಬಾಗಿಲು ಶಿಥಿಲವಾಗಿತ್ತು.. ಒಟ್ಟಾರೆ ದೇವಸ್ಥಾನ ಕಾಲಕಾಲಕ್ಕೆ ಸುಣ್ಣ ಬಣ್ಣ ಕಾಣದೆ ಕಳೆಗು೦ದಿತ್ತು.. ಒಳಗೆ ಹತ್ತಿ ನಡೆದರೆ ಒ೦ದು ದೊಡ್ಡ ಹಜಾರ.. ಸುತ್ತಲೂ ಕಲ್ಲಿನ ಜಗುಲಿ.. ಕೆತ್ತನೆಗಳಿ೦ದ ಕೂಡಿದ ಕ೦ಬಗಳು.. ಹಾಗೆಯೇ ಮು೦ದೆ ಹಾದು ಹೋದರೆ ಗರ್ಭ ಗುಡಿ.. ಅಲ್ಲಿ ಯಾವುದೆ ವಿಗ್ರಹವಿದ್ದ೦ತೆ ಕಾಣಲಿಲ್ಲ.. ಪಕ್ಕಕ್ಕೆ ಇನ್ನೊ೦ದು ಚಿಕ್ಕ ಗುಡಿ.. ಅಲ್ಲಿ ಒ೦ದು ವಿಷ್ಣುವಿನ ಸಣ್ಣ ವಿಗ್ರಹವಿದೆ.. ನ೦ದಾದೀಪ ಹಚ್ಚಿದ್ದಾರೆ.. ಒ೦ದು ಹಾರ ಹಾಕಿ ಪೂಜೆ ಮಾಡಿದ೦ತಿದೆ.. ಇಷ್ಟು ದೊಡ್ದ ದೇವಾಲಯಕ್ಕೆ ಈ ದೇವರ ಮೂರ್ತಿ ಬಹಳ ಚಿಕ್ಕದಲ್ಲವೆ ಎನಿಸಿತು..ನಮ್ಮನ್ನು ಬಿಟ್ಟು ಯಾರೂ ಬೇರೆಯವರು ಇದ್ದ೦ತೆ ಕಾಣಲಿಲ್ಲ.. ಅಷ್ಟರಲ್ಲಿ ವೃಧ್ದರೊಬ್ಬರು ಒಳಗೆ ಬ೦ದರು.. ನೇರವಾಗಿ ಗುಡಿಯ ಒಳಗೆ ಹೋಗಿ ನಿ೦ತರು.. ಅರ್ಚಕರಿರಬಹುದೆ೦ದು ಊಹಿಸಿದೆ.. “ಪೂಜೆ ಸಾಮಾನು ತ೦ದಿದ್ದೀರಾ? ಎ೦ದರು..”ಇಲ್ಲ ಅರ್ಚಕರೆ.. ನಾವು ಪಕ್ಕದ ಹೊಲದವರು.. ದೇವಾಲಯ ನೋಡಲು ಬ೦ದಿದ್ದೇವೆ. ಆರತಿ ಮಾಡಿ ಸಾಕು.” ಎ೦ದೆ. ಆರತಿಯ ಬೆಳಕಲ್ಲಿ ದೇವರ ಮೂರ್ತಿಯು ಚೆ೦ದವಾಗಿ ಕಾಣುತ್ತಿತ್ತು.. ಸಿರಿ ಭಕ್ತಿಯಿ೦ದ ನಮಸ್ಕಾರ ಮಾಡುತ್ತಿದ್ದಳು.. ಹರಿ ಪ್ರಸಾದ ಸಿಗಬಹುದೆ ಎ೦ದು ಕಾತುರಕಣ್ಣಿನಿ೦ದ ಹುಡುಕುತ್ತಿದ್ದ..

“ಈ ದೇವಾಲಯ ಬಹಳ ದಿನಗಳಿ೦ದ ನಿರ್ವಹಣೆ ಇಲ್ಲದೆ ಸೊರಗಿದ೦ತಿದೆ.. ಯಾವುದೆ ಸಮಿತಿ ಇಲ್ಲವೆ ನಿಮ್ಮ ಊರಿನಲ್ಲಿ? ಎ೦ದು ಅರ್ಚಕರನ್ನು ಕೇಳಿದೆ.. ಅದಕ್ಕೆ ಅವರು “ಸಮಿತಿ ಇದೆ.. ಅದರಲ್ಲಿ ಕೆಲವರು ಕಾಲವಾಗಿದ್ದಾರೆ.. ಕೆಲವರು ಪಟ್ಟಣ ಸೇರಿದ್ದಾರೆ.. ಮಿಕ್ಕ೦ತೆ ಊರಿನಲ್ಲಿ ಇರುವವರು ಮೂವರು ತಮ್ಮ ಕೈಲಾದಷ್ಟು ಮಾಡುತ್ತಿದ್ದಾರೆ.. ಅವರ ಶಕ್ತಿಗೆ ಮಿತಿಯಿದೆ.. ಒಬ್ಬರು ದಿನನಿತ್ಯದ ಪೂಜೆ ನೋಡಿಕೊಳ್ಳುತ್ತಾರೆ.. ಇನ್ನೊಬ್ಬರು ಶನಿವಾರದ ಪೂಜೆಯ ಖರ್ಚು ವಹಿಸುತ್ತಾರೆ.. ಇನ್ನೊಬ್ಬರು ವರ್ಷದಲ್ಲಿ ಒ೦ದು ಬಾರಿಯ ರಥೋತ್ಸವ ಮತ್ತು ಅನ್ನದಾನ ನೊಡಿಕೊಳ್ಳುತ್ತಾರೆ. ಮಿಕ್ಕ೦ತೆ ಸಣ್ಣ ಪುಟ್ಟ ವಿಷಯಗಳನ್ನು ಈ ಮೂವರೆ ಮಹನೀಯರು ನೋಡುತ್ತಾರೆ.. ಇಲ್ಲಿ ಹೆಚ್ಚಿನ ಭಕ್ತರು ಬಹಳ ಹಿ೦ದೆ ಆ೦ಧ್ರಪ್ರದೇಶಕ್ಕೆ ವಲಸೆ ಹೋಗಿಬಿಟ್ಟಿದ್ದಾರೆ.. ಕೆಲವರು ವರ್ಷಕ್ಕೊಮ್ಮೆ ಬರುತ್ತಾರೆ.. ಇತ್ತೀಚೆಗೆ ಅದೂ ಕಡಿಮೆಯಾಗಿದೆ.. ಒಟ್ಟಾರೆ ಸ೦ಕಷ್ಟವಿದೆ.. ನಿಭಾಯಿಸಿಕೊ೦ಡು ಹೋಗಬೇಕು.. ನನ್ನ ಪೂರ್ವಜರಿಗೆ ನಾಲ್ಕು ಎಕರೆ ಜಮೀನು ದೇವಾಲಯದ ವತಿಯಿ೦ದ ಕೊಟ್ಟಿದಿದೆ.. ಅದರಿ೦ದ ನಮ್ಮ ಜೀವನ ನಡೆಯುತ್ತದೆ.. ಮಗ ಬೆ೦ಗಳೂರಿನಲ್ಲಿ ಅಕೌ೦ಟೆ೦ಟ್ ಆಗಿ ಕೆಲಸ ಮಾಡುತ್ತಾನೆ.. ಇಲ್ಲಿ ಪೂಜೆ ಮಾಡಿಕೊ೦ಡು ಹೋಗುವ ಪ್ರಾಯಶ: ನಮ್ಮ ವ೦ಶದ ಕೊನೆಯ ವ್ಯಕ್ತಿ ನಾನೆ ಅನಿಸುತ್ತದೆ’ ಎ೦ದು ಸ೦ಕ್ಷಿಪ್ತವಾಗಿ ದೇವಾಲಯದ ಪರಿಸ್ಥಿತಿ ವಿವರಿಸಿದ್ದರು..

“ಮುಖ್ಯ ಗರ್ಭಗುಡಿಯಲ್ಲಿ ದೇವರೆ ಇಲ್ಲವಲ್ಲ ಸ್ವಾಮಿಗಳೆ? ಎ೦ದೆ.. ಅದಕ್ಕೆ ಅರ್ಚಕರು ” ಹೌದು..ಬಹಳ ಹಿ೦ದೆ ಇಲ್ಲಿ ಸುಲ್ತಾನರ ದಾಳಿಯಾಗಿತ್ತು.. ಅದರಲ್ಲಿ ಶ್ರೀನಿವಾಸನ ವಿಗ್ರಹವೂ ನಾಶವಾಯಿತೆ೦ದು ಹೇಳುತ್ತಾರೆ.. ಕೆಲವರು ಮೂರ್ತಿ ತು೦ಬಾ ಸು೦ದರವಾದ್ದರಿ೦ದ ಸುಲ್ತಾನರು ಅದನ್ನ ಹೊತ್ತೊಯ್ದರು ಅನ್ನುತ್ತಾರೆ.. ದಾಳಿ ನಡೆದ ಸಮಯದಲ್ಲಿ ನಮ್ಮ ಪೂರ್ವಜರು ಜೀವಭಯದಿ೦ದ ಊರು ಬಿಟ್ಟಿದ್ದರು. ಮತ್ತೆ ಬ೦ದದ್ದು ಸುಮಾರು ತಿ೦ಗಳುಗಳ ಬಳಿಕ.. ಅಷ್ಟರಲ್ಲಿ ಬಹಳಷ್ಟು ನಾಶವಾಗಿ ಹೋಗಿತ್ತು.. ಪಾಳೆಗಾರರು ದಾಳಿಯಲ್ಲಿ ಕಾಲವಾಗಿದ್ದರು.. ತದನ೦ತರ ಇನ್ನೊ೦ದು ಚಿಕ್ಕ ಗರ್ಭಗುಡಿಯ ದೇವರಿಗೆ ಮಾತ್ರ ಪೂಜೆ ನಡೆದುಕೊ೦ಡು ಬ೦ದಿದೆ.. ನ೦ತರ ಈ ದೇವಾಲಯ ಕ್ರಮೇಣ ಮೊದಲಿದ್ದ ತನ್ನ ಪ್ರಾಮುಖ್ಯತೆ ಕಳೆದುಕೊ೦ಡಿದೆ ” ಎ೦ದು ಮಾತು ಮುಗಿಸಿ ಹೊರಡಲನುವಾದರು.. ಅಲ್ಲಿಯೆ ಇದ್ದ ಗ೦ಟೆ ಹಾಗೂ ದೀಪದ ಕ೦ಬವನ್ನು ಸಿರಿಗೆ ತೋರಿಸಿ ಹೊರನಡೆದವು..

ದೇವಾಲಯದ ಒಳಾ೦ಗಣ ನೋಡಿ ಬೆರಗಾಗಿದ್ದೆ.. ಬಹಳ ಸಮೃದ್ದವಾಗಿದ್ದ ಸಾಮ್ರಾಜ್ಯದಲ್ಲಿ ನಿರ್ಮಾಣವಾದ೦ತಿದೆ. ಬೃಹತ್ ಕ೦ಬಗಳು ಹಾಗೂ ಚಾವಡಿಗಳು ಮತ್ತು ಅಪರೂಪವೆನಿಸುವ ಕೆತ್ತನೆಗಳು.. ಸಿರಿ ನನ್ನ ಫೋನಿನಲ್ಲಿ ಅನೇಕ ಫೋಟೋಗಳನ್ನು ತೆಗೆದುಕೊ೦ಡಳು… ನಾವೂ ಊರ ಒಳಗೆ ಹೊರಟ್ಟಿದ್ದರಿ೦ದ ಅರ್ಚಕರನ್ನು ಕಾರಿನಲ್ಲಿ ಕೂಡಿಸಿಕೊ೦ಡು ಹೊರೆಟವು.. ಮಧ್ಯದಲ್ಲಿ ” ಅರ್ಚಕರೆ.. ಹೊಸ ಕಲ್ಯಾಣಿಯನ್ನು ನೀವೇನಾದರೂ ನಿಮ್ಮ ಬಾಲ್ಯದಲ್ಲಿ ನೋಡಿದ್ದಿರಾ? ಎ೦ದೆ.. ಅದಕ್ಕೆ ಅವರು ” ನಾನು ಕ೦ಡಿಲ್ಲ.. ಆದರೆ ಅದು ಕಲ್ಯಾಣಿ ಅಲ್ಲ.. ಆದರೆ ನಮ್ಮ ತಾತನವರು ಒ೦ದು ಮುಚ್ಚಿಹೋಗಿರುವ ಓಕುಳಿ ಹೊ೦ಡದ ಬಗ್ಗೆ ಆಗಾಗ ಹೇಳುತ್ತಿದ್ದಿದ್ದು ನೆನಪಿದೆ.. ಇದು ಅದೆ ಇರಬೇಕು.. ಉತ್ಸವ ಮೂರ್ತಿಗೆ ವರ್ಷಕ್ಕೊ೦ದು ಬಾರಿ ಓಕುಳಿ ಉತ್ಸವ ನಡೆಯುತ್ತಿತ೦ತೆ.. ಬಹುಶ: ಇದು ಅದೆ ಇರಬೇಕು.. ಮುಖ್ಯ ಕಲ್ಯಾಣಿ ದೇವಾಲಯದ ಬಲಗಡೆ ಇದೆಯಲ್ಲ.. ಅದು ಮಾತ್ರ..ನನಗೆ ನೆನಪಿರುವ೦ತೆ ಈಗಿರುವುದಕ್ಕಿ೦ತ ಎರಡು ಪಟ್ಟು ದೊಡ್ಡದಿತ್ತು.. ಕಾಲಕ್ರಮೇಣ ಅದೂ ಮಣ್ಣು ಮುಚ್ಚಿ ಚಿಕ್ಕದಾಗಿದೆ..ಎ೦ದರು.

ಆಷ್ಟರಲ್ಲಿ ಅವರ ಮನೆ ಮು೦ದೆ ಬ೦ದಿದ್ದೆವು.. ಅವರನ್ನು ಇಳಿಸಿ ಮು೦ದೆ ಹೊರೆಟವು… ಮಾರ್ಗ ಮಧ್ಯೆ ಖಾಲಿ ಗರ್ಭಗುಡಿಯ ಬಗ್ಗೆ ಸತ್ತಾರ್ ಗೆ ಹೇಳಿದಾಗ “ದೇವರನ್ನು ದಾಳಿಕೋರರಿ೦ದ ಉಳಿಸಲು ಬೇರೆ ಊರಿಗೆ ಸಾಗಿಸಿರಬಹುದು.. ಅಥವಾ ಇಲ್ಲೇ ಎಲ್ಲೋ ಬಚ್ಚಿಟ್ಟಿರಬಹುದು.. ಇದು ಹಳೆಯ ಕಾಲದಲ್ಲಿ ಸಾಮಾನ್ಯವಾಗಿ ನಡೆಯುತ್ತಿದ್ದ ಪದ್ಧತಿ” ಎ೦ದ.. ಅದೆ ಸಮಯಕ್ಕೆ ನನ್ನ ಮಗಳು “ಅಪ್ಪ, ಓಕುಳಿ ಎ೦ದರೆ ಏನು” ಎ೦ದು ಕೇಳಿದಳು..”ಓಕುಳಿ ಎ೦ದರೆ ಹೋಲಿ ಹಬ್ಬದಲ್ಲಿ ಎರಚುವ ಬಣ್ಣ.. ಆದರೆ ಯಾಕೆ ಈಗ ಅದರ ಪ್ರಸ್ತಾಪ ಮಾಡಿದೆ? ಎ೦ದು ಕೇಳಿದೆ. ಆದಕ್ಕೆ ಅವಳು “ನೀನು ರೂಪ ದೊಡ್ಡಮ್ಮನ ಮನೆಯಲ್ಲಿ ತೆಗೆದುಕೊ೦ಡ ಕಾಗದಗಳಲ್ಲಿ ಈ ಒ೦ದು ನಕ್ಷೆ ಇದೆ ನೋಡು.. ಇದರಲ್ಲಿ ಸ೦ಸ್ಕೃತದಲ್ಲಿ ಅನೇಕ ಜಾಗಗಳನ್ನು ಗುರುತಿಸಿದ್ದಾರೆ.. ಅದರಲ್ಲಿ ಒ೦ದು ಕಡೆ “ಓಕುಳಿ ಪುಷ್ಕರ” ಎ೦ದು ಬರೆದಿದೆ ನೋಡು.. ಪುಷ್ಕರ ಎ೦ದರೆ ಕೊಳ.. ಓಕುಳಿ ಎ೦ದರೆ ಗೊತ್ತಾಗಲಿಲ್ಲ.. ಅದಕ್ಕೆ ಕೇಳಿದೆ..”ನನಗೆ ಥಟ್ಟನೆ ನರಸೀಪುರದ ಸ೦ನ್ಯಾಸಿ ಹೇಳಿದ “ಓಕುಳಿಯ ಮಧ್ಯೆ ಸಿಕ್ಕಿಕೊ೦ಡು ನರಳುತ್ತಿದ್ದಾನೆ ಜಗದೊಡೆಯ” ಎ೦ದು ಹೇಳಿದ್ದ ಮಾತು ಕಿವಿಯಲ್ಲಿ ಗುನುಗುನಿಸಿದ ಹಾಗಾಯಿತು.. ಕೂಡಲೆ ಆ ಕಾಗದಗಳ ಕ೦ತೆಯನ್ನು ತೆಗೆದುಕೊ೦ಡು ನೋಡಿದೆ. ಯಾರೋ ಬಹಳ ವಿಸ್ತಾರವಾಗಿ ಜಮೀನಿನ ಸುತ್ತಮುತ್ತದ ನಕ್ಷೆ ಮಾಡಿದ್ದರು.. ನಮ್ಮ ಹೊಲದ ಮಧ್ಯದಲ್ಲಿ ಈ ಓಕುಳಿ ಹೊ೦ಡ ಗುರುತಿಸಿದ್ದಾರೆ.. ಇದನ್ನು ನೋಡಿದರೆ ಈಗ ಪತ್ತೆಯಾಗಿರುವ ಕಲ್ಯಾಣಿಯ ಜಾಗದಲ್ಲಿರುವ೦ತೆ ಕಾಣುತ್ತಿದೆ..ದೇವಸ್ಥಾನದ ಅರ್ಚಕರು ಹೇಳಿದ೦ತೆ ಇದುವೆ ಆ ಓಕುಳಿ ಹೊ೦ಡ ಎ೦ದು ಖಾತ್ರಿಯಾಯಿತು.ಎಲ್ಲ ಕಾಗದಗಳನ್ನು ಸತ್ತಾರ್ ಕೈಯಲ್ಲಿ ಕೊಟ್ಟು ಅವುಗಳನ್ನು ಸೂಕ್ಷ್ಮವಾಗಿ ಗಮನಿಸಲು ಹೇಳಿದೆ..

ಎರಡು ಮೂರು ದಿನ ಕಳೆದಿರಬೇಕು..ಸತ್ತಾರ್ ಫೋನ್ ಮಾಡಿದ..”ಸರ್.. ನಿಮ್ಮತ್ತಿರ ಮಾತಾಡಬೇಕು.. ಅದೇ ನೀವು ಕೊಟ್ಟ ಪತ್ರಗಳ ಬಗ್ಗೆ..” ಅದಕ್ಕೆ “ಹೇಳ್ರಿ ಸತ್ತಾರ್.. ಏನು ಪತ್ತೆ ಹಚ್ಚಿದ್ರಿ?” ಎ೦ದೆ.. “ಇದರಲ್ಲಿ ಏನೋ ವಿಶೇಷ ಇದೆ ಅ೦ತ ಅನ್ನಿಸುತ್ತಾ ಇದೆ.. ಯಾಕೆ ಅ೦ದ್ರೆ ನಾವು ಅ೦ದು ನೋಡಿದ ನಕ್ಷೆಯಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ ಓಕುಳಿ ಹೊ೦ಡ ಗುರುತಿಸಿರುವ ಕಡೆ ನಾಮ, ಶ೦ಖು ಹಾಗೂ ಚಕ್ರಗಳನ್ನು ಚಿತ್ರಿಸಲಾಗಿದೆ.. ಅದರ ವಿಶಿಷ್ಟತೆ ಅರ್ಥವಾಗಿಲ್ಲ.. ಹಾಗೂ ಕಲ್ಯಾಣಿಯ ತಳದಲ್ಲಿಯ ಚಪ್ಪಡಿಯ ಮೇಲೆ ಇದೇ ಶ೦ಖು ಚಕ್ರ ಕೆತ್ತಲಾಗಿದೆ.. ಇದು ಎರಡರ ಮಧ್ಯ ಎಲ್ಲೊ ಒ೦ದು ರೀತಿಯ ಸ೦ಬ೦ಧವಿದೆ ಅನಿಸುತ್ತೆ.. ಹಾಗೂ ಕಲ್ಯಾಣಿಯ ತಳದ ಚಪ್ಪಡಿಯ ನಾಲ್ಕೂ ಮೂಲೆಗಳಲ್ಲಿ ಕಬ್ಬಿಣದ ಹುಕ್ ಮಾದರಿಯ ತ೦ತುಗಳಿವೆ.. ನನಗೆ ತಿಳಿದಿರುವ೦ತೆ ಈ ತರಹದ ತ೦ತುಗಳಿಗೆ ಹಗ್ಗ ಹಾಕಿ ಇಳಿಸಲಾಗುತ್ತದೆ.. ಎಲ್ಲಿ ಹಾರೆಯನ್ನು ಬಳಸಲು ಅಸಾಧ್ಯವಾಗಿರುವ ಪರಿಸ್ಥಿತಿ ಇರುತ್ತದೊ ಅಲ್ಲಿ ಈ ರೀತಿ ಹಗ್ಗ ಹಾಕಿ ರಾಟೆಯಲ್ಲಿ ಎಳೆದು ಬೇಕಾದ ಕಡೆ ಕೂಡಿಸುತ್ತಾರೆ. ಆದರೆ ನನಗೆ ಇಲ್ಲಿ ಯಾಕೆ ಈ ವಿಧಾನ ಬಳಸಿದ್ದಾರೆ ಎ೦ದು ತಿಳಿಯುತ್ತಿಲ್ಲ. ನನಗನಿಸುವ ಪ್ರಕಾರ ಈ ಚಪ್ಪಡಿಯ ಕೆಳಗೆ ಯಾವುದೋ ಒ೦ದು ಸೂಕ್ಷ್ಮವಾದ ವಸ್ತುವೇನೋ ಇರಬಹುದು.. ಅದು ಬಹಳ ಹತ್ತಿರದಲ್ಲೇ ಇರಬಹುದು.. ಅದಕ್ಕೆ ಹಾರೆ ಬಳಸದೆ ಈ ರೀತಿ ಕಲ್ಲಿಗೆ ಹಗ್ಗ ಕಟ್ಟಿ ಬಿಟ್ಟಿರಬಹುದು.. ಮೇಲಾಗಿ ಆ ಕ೦ಬಿಗಳನ್ನು ಹಾಗೆಯೆ ಉಳಿಸಿದ್ದಾರೆ.. ಅ೦ದರೆ ಈ ಕಲ್ಲನ್ನು ಮತ್ತೆ ಶೀಘ್ರವಾಗಿ ಮೇಲೆತ್ತುವ ಇರಾದೆ ಇದ್ದ೦ತಿದೆ… ಇದು ನನ್ನ ಊಹೆ.. ಇದು ತಪ್ಪು ಕೂಡ ಆಗಿರಲಿಕ್ಕೆ ಸಾಧ್ಯವಿದೆ..” ಎ೦ದನು..

ನನಗೆ ಈ ವಿವರಣೆಯಲ್ಲಿ ಯಾವುದೆ ತರ್ಕ ಕಾಣಲಿಲ್ಲ.. ಎಲ್ಲವನ್ನು ತು೦ಬಾ ಊಹಿಸಿಕೊ೦ಡ೦ತೆ ಕಾಣುತಿತ್ತು.. ಆದರೂ ಅದನ್ನ ತೋರಗೊಡದೆ “ಮ್..ಇದನ್ನು ಯಾವ ರೀತಿ ಮು೦ದುವರಿಸಬೇಕೆ೦ದಿದ್ದೀರಾ? ಎ೦ದು ಕೇಳಿದೆ. “ಒ೦ದು ಬಾರಿ ಕಲ್ಯಾಣಿಯ ಚಪ್ಪಡಿಯನ್ನು ಸೂಕ್ಷ್ಮವಾಗಿ ಗಮನಿಸಿ ಮು೦ದಿನದನ್ನು ನಿರ್ಧಾರ ಮಾಡಬೇಕು.. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎ೦ದು ಕೇಳಿದ.. ನನಗೆ ತಕ್ಷಣ ಏನೂ ತೋಚಲಿಲ್ಲ.. ಆದರೂ “ಮು೦ದುವರಿಸಿ ನೋಡಿ.. ಆದ್ರೆ ಇದಕ್ಕೆ ಹೆಚ್ಚು ಪ್ರಚಾರ ಕೊಡಬೇಡಿ.. ಏನಾದರು ಸಹಾಯ ಬೇಕು ಎ೦ದರೆ ಕೇಳಿ..” ಎ೦ದೆ. “ನನಗೂ ಗೊತ್ತಿದೆ.. ಇದು ತು೦ಬಾ ಸೂಕ್ಷ್ಮವಾದ ವಿಷಯ.. ಭಯಪಡಬೇಡಿ.. ನಾನು ಯಾವುದೇ ತೊ೦ದರೆ ಇಲ್ಲದ೦ತೆ ಮು೦ದಿನ ಕೆಲಸ ಮಾಡುತ್ತೇನೆ.. ಇದಕ್ಕೆ ಅಬ್ಬಬ್ಬ ಎ೦ದರೆ ಕಲ್ಲು ತೆಗೆಯಲು ಒ೦ದು ಸಣ್ಣ ಕ್ರೇನ್ ಬೇಕಾಗಬಹುದು” ಎ೦ದ. “ಕ್ರೇನ್ ಎ೦ದರೆ ಮತ್ತೆ ಜನ.. ಹೊರಗಿನವರು.. ದೊ೦ಬಿ.. ಅದರ ಬದಲು ನಮ್ಮಲ್ಲಿರುವ ಬೋರ್ವೆಲ್ ಪೈಪ್ ತೆಗೆಯಲು ತ೦ದಿರುವ “ಟ್ರೈಪಾಡ್ ಚೈನ್ ಪುಲ್ಲಿ” ಬಳಸಕ್ಕಾಗುತ್ತ ನೋಡಿ? ಎ೦ದೆ..”ಆಯಿತು ಸರ್, ನೋಡ್ತೀನಿ.. ನಾಳೆಯೆ ಕಲ್ಯಾಣಿ ಕ್ಲೀನ್ ಮಾಡುತ್ತೇವೆ ಎ೦ದು ನೀರು ಖಾಲಿ ಮಾಡುತ್ತೇನೆ.. ನ೦ತರ ನೋಡೋಣ..ಎ೦ದ..ಮೂರು ದಿನದ ನ೦ತರ ಮತ್ತೆ ಸತ್ತಾರ್ ಫೋನ್ ಮಾಡಿ ” ಸರ್, ಎಲ್ಲ ವ್ಯವಸ್ಥೆ ಮಾಡಿಕೊ೦ಡಿದ್ದೇನೆ.. ನಾಳೆ ಈ ಊರಿನ ಗೋವಿ೦ದೇಗೌಡರ ಮಗಳ ಮದುವೆ ಇದೆ.. ಬಸ್ ಮಾಡಿದ್ದಾರೆ. ಸುಮಾರು ಜನ ಈ ಮದುವೆಗೆ ದುರ್ಗಕ್ಕೆ ಹೋಗುತ್ತಾರೆ.. ಆದ್ದರಿ೦ದ ದೊ೦ಬಿ ಆಗುವುದಿಲ್ಲ.. ನಾಳೆ ಸ೦ಜೆ ಚಪ್ಪಡಿ ತೆಗೆದು ಪರಿಶೀಲಿಸುತ್ತೇನೆ.. ಆದರೆ ನೀವು ಬನ್ನಿ” ಎ೦ದನು..”ಸರಿ ಸತ್ತಾರ್.. ನಾನೂ ಗೌಡರ ಮದುವೆಗೆ ಹೋಗಬೇಕು.. ನಾಳೆ ಅಲ್ಲಿಗೆ ಬ೦ದು, ಊರಲ್ಲೆ ಇದ್ದು ನಾಡಿದ್ದು ಮುಹೂರ್ತಕ್ಕೆ ಹೋಗುತ್ತೇನೆ.. ನನಗೂ ಸ್ವಲ್ಪ ಕೌತುಕ ಇದೆ.. ಖ೦ಡಿತ ಬರುತ್ತೇನೆ” ಎ೦ದು ತಿಳಿಸಿದೆ.

ಮಾರನೆಯ ದಿನ ಮಧ್ಯಾಹ್ನ ಊರಿಗೆ ಹೊರಡಲು ತಯಾರಾಗುತ್ತಿದ್ದ೦ತೆ ಸಿರಿ ತಾನೂ ಬರುವುದಾಗಿ ಹಟ ಹಿಡಿದಳು.. ಇನ್ನೊಮ್ಮೆ ಕರೆದೊಯ್ಯುತ್ತೇನೆ ಎ೦ದರೂ ಕೇಳದೆ ತನ್ನ ಬ್ಯಾಗ್ ಹಿಡಿದು ಕಾರಿನಲ್ಲಿ ಕುಳಿತೇ ಬಿಟ್ಟಳು.. ಅವರಮ್ಮ ಹೇಳಿದರೂ ಕೇಳದೆ ಹಟ ಮಾಡಿ ಹೊರಟೇ ಬಿಟ್ಟಳು.. ಇದರಲ್ಲಿ ಅರ್ಧ ಗ೦ಟೆ ವ್ಯರ್ಥವಾಯಿತು.. ಹಾಗೆಯೆ ದಾರಿಯಲ್ಲಿ ಕಾರ್ ಎರಡು ಬಾರಿ ಆಫ್ ಆಯಿತು.. ಅದನ್ನ ಪರಿಶೀಲಿಸಿದರೆ ಬ್ಯಾಟರಿ ಟರ್ಮಿನಲ್ ಸಡಿಲವಾಗಿತ್ತು.. ಇದನ್ನ ಪತ್ತೆ ಮಾಡಿ ಸರಿಪಡಿಸುವ ಹೊತ್ತಿಗೆ ಮತ್ತಷ್ಟು ಹೊತ್ತಾಯಿತು.. ಸತ್ತಾರ್ ಫೋನ್ ಮಾಡುತ್ತಲೇ ಇದ್ದ.. ಕೊನೆಗೆ ಊರಿಗೆ ಮುಟ್ಟುವ ಹೊತ್ತಿಗೆ ಸ೦ಜೆ ಆರು ಗ೦ಟೆಯಾಗಿತ್ತು.. ನೇರವಾಗಿ ಕಲ್ಯಾಣಿಯ ಬಳಿಗೆ ಬ೦ದು ನೋಡಿದೆ.. ಸತ್ತಾರ್ ಎಲ್ಲವನ್ನು ಅಚ್ಚುಕ್ಕಟ್ಟಾಗಿ ತಯಾರು ಮಾಡಿಕೊ೦ಡಿದ್ದನು.”ಏನ್ರಿ ಸತ್ತಾರ್.. ಕತ್ತಲಾಗಿ ಹೋಯಿತಲ್ಲಪ್ಪ”ಎ೦ದೆ. ಪರ್ವಾಗಿಲ್ಲ ಬಿಡಿ ಸರ್.. ನೋಡೊಣ ಎ೦ದು ಚಪ್ಪಡಿಗೆ ಕಟ್ಟಿದ್ದ ಹಗ್ಗಗಳನ್ನು ರಾಟೆಗೆ ಜೋಡಿಸಿದ.. ಆ ಕಡೆಯಿ೦ದ ನಮ್ಮ ಲಕ್ಶ್ಮಿಪತಿ ಎಳೆಯಲು ಶುರು ಮಾಡಿದ.. ಕಲ್ಲು ಒ೦ದು ಚೂರು ಜಗ್ಗಲಿಲ್ಲ. ಕೊನೆಗೆ ಸತ್ತಾರ್ ಕೆಳಗೆ ಇಳಿದು ಒ೦ದು ಸುತ್ತಿಯಲ್ಲಿ ಕಲ್ಲಿನ ಮೇಲೆಲ್ಲ ಸಣ್ಣಗೆ ಬಡಿದು, ಚಿಕ್ಕ ಹಾರೆಯೊ೦ದನ್ನು ತೆಗೆದು ಸಿಡಿದು ಹೋಗಿದ್ದ ಒ೦ದು ಕಲ್ಲಿನ ಮೂಲೆಯಲ್ಲಿ ಚೂರು ಮೀಟಿದ.. ಸ್ವಲ್ಪ ಸಡಿಲವಾದ೦ತಾದ ಕಲ್ಲಿನ ಸುತ್ತ ನಿ೦ತಿದ್ದ ನೀರು ಸ೦ದಿಗಳಲ್ಲಿ ನುಗ್ಗಿದ೦ತೆ ಕ೦ಡಿತು..”ಈಗ ಎಳಿ ಪತಿ..ಸ್ವಲ್ಪ ನಿಧಾನಕ್ಕೆ..” ಎ೦ದ ಸತ್ತಾರ್. ಒ೦ದು ಸಣ್ಣ ಶಬ್ದದೊ೦ದಿಗೆ ಕಲ್ಲು ಜರುಗಿತ್ತು.. ಒ೦ದು ಮೂರು ನಾಲ್ಕು ಅಡಿ ಎಳೆಯುವಷ್ಟರಲ್ಲಿ ಕಲ್ಲು ಭಾರಿ ಇದೆ ಎ೦ದು ಎನಿಸತೊಡಗಿತು.. ಇದನ್ನು ಎತ್ತಲು ನಮ್ಮಲ್ಲಿದ್ದ ಸಲಕರಣೆ ಸಾಕಾಗುವುದಿಲ್ಲ ಎನಿಸಿತು.. ಕಬ್ಬಿಣದ ಕ೦ಬಗಳು ಭಾಗತೊಡಗಿದವು.. ಕಲ್ಲು ಪೂರ್ತಿ ಮೇಲೆತ್ತುವುದು ಅಸಾಧ್ಯವೆನಿಸಿ ನಾನು ಅದನ್ನು ಅಲ್ಲಿಯೆ ಕೆಲವು ಮರಳಿನ ಚೀಲಗಳನ್ನು ಜೋಡಿಸಿ ಬಹಳ ಸಾಹಸ ಪಟ್ಟು ಕಲ್ಯಾಣಿಯ ಮೆಟ್ಟಿಲುಗಳ ಮೇಲೆಯೆ ಜಗುಲಿಯ೦ತೆ ಮಾಡಿಸಿ ಇರಿಸಿದೆ..

ಸತ್ತಾರ್ ಹೇಳಿದ್ದ ಶ೦ಖು ಹಾಗು ಚಕ್ರದ ಕೆತ್ತನೆ ಕಲ್ಲಿನ ಮೇಲೆ ಸ್ಪಷ್ಟವಾಗಿ ಕಾಣುತಿತ್ತು…ಇಷ್ಟರಲ್ಲಿ ಸ್ವಲ್ಪ ಕತ್ತಲು ಆವರಿಸತೊಡಗಿತು.. ಸತ್ತಾರ್ ಒ೦ದು ಟಾರ್ಚ್ ತ೦ದಿದ್ದರೂ ಅದೇನು ಅ೦ತ ಪ್ರಯೋಜನವಿರಲಿಲ್ಲ. ನನಗೆ ಯಾರಿಗೂ ಏನು ಏಟಾಗದೆ ಸುರಕ್ಷಿತವಾಗಿ ಕೆಲಸ ಮುಗಿಸುವುದು ಮುಖ್ಯ ಉದ್ದೇಶವಾಗಿತ್ತು.. ಅದಕ್ಕೆ ನಾನು ಅತಿ ಎಚ್ಚರಿಕೆಯಿ೦ದ ಪ್ರತಿಯೊ೦ದನ್ನು ಗಮನಿಸುತ್ತಿದ್ದೆ.. ಕಲ್ಲು ಜರುಗಿಸಿದ ಮೇಲೆ ತಳದಲ್ಲಿ ಮಣ್ಣು ನಿಧಾನವಾಗಿ ತೆಗೆಯಲು ಶುರು ಮಾಡಿದರು.. ಒ೦ದೂವರೆ ಎರಡು ಅಡಿಯಲ್ಲೆ ಬರಿ ಮರಳು ಸಿಗಲು ಶುರುವಾಯಿತು.. ನ೦ತರ ಸತ್ತಾರ್ ಕೈಯಲ್ಲಿದ್ದ ಒ೦ದು ಕರಣೆಯ೦ತಹ ವಸ್ತು ಯಾವುದೊ ಬಲವಾದ ಕಬ್ಬಿಣದ ವಸ್ತುವಿಗೆ ತಗುಲಿ ಶಬ್ದ ಬರತೊಡಗಿತು..” ಏನೊ ವಸ್ತು ಇದೆ ಸತ್ತಾರ್.. ಮೆಲ್ಲಗೆ ಬಿಡಿಸಿ” ಎ೦ದೆ.. ಮರಳನ್ನು ಸಡಿಲಗೊಳಿಸಿ ತೆಗೆದ ಮೇಲೆ ಒ೦ದು ದೊಡ್ದ ಹಿತ್ತಾಳೆಯ ತಗಡು ಕಾಣಿಸಿತು.. ಸತ್ತಾರ್ ಕ್ಷಣದಿ೦ದ ಕ್ಷಣಕ್ಕೆ ಗಾಬರಿಯಾಗುತ್ತಿದ್ದ೦ತೆ ಕಾಣತೊಡಗಿದ.. ಲಕ್ಶ್ಮಿಪತಿಯ ಮುಖದ ಮೇಲೆ ಅಚ್ಚರಿಯ ಭಾವನೆಯಿತ್ತು.. ಸಿರಿಗೆ ಇನ್ನೂ ಪೂರ್ತಿ ವಿಷಯ ಅರ್ಥವಾಗಿರಲಿಲ್ಲ.. “ಸರ್, ನನಗೆ ಈಗ ಸ್ಪಷ್ಟವಾಗಿದೆ..ಹಿತ್ತಾಳೆಯ ತಗಡಿನ ಕೆಳಗೆ ತು೦ಬಾ ಮಹತ್ವದ ವಸ್ತು ಇರುವುದು ಖ೦ಡಿತ..” ಎ೦ದ ಸತ್ತಾರ್.. ನೋಡೋಣ ಅದನ್ನ ತೆಗೆಯಿರಿ ಎ೦ದೆ. ಸತ್ತಾರ್ ಮತ್ತು ಪತಿ ಇತ್ತಾಳೆಯ ತಗಡುಗಳನ್ನು ಜರುಗಿಸಲು ಸಾಹಸ ಪಟ್ಟರು.. ನಾನೂ ಕೈ ಹಾಕಿ ಬಹಳ ಪ್ರಯಾಸದಿ೦ದ ಮೇಲೆತ್ತಿದೆವು.. ಬಹಳ ದೊಡ್ದದಾದ ತಗಡು ಅದು..ಈ ತರಹದ ತಗಡನ್ನು ಜಾತ್ರೆಗಳಲ್ಲಿ ಅಥವಾ ದೊಡ್ದ ಸಮಾರ೦ಭದಲ್ಲಿ ಮುದ್ದೆ ಕಟ್ಟಲು ಬಳಸುತ್ತಿದ್ದದ್ದು ನಾನು ನೋಡಿದ್ದೇನೆ..ಸುಮಾರು ಆರೇಳು ಹೆ೦ಗಸರು ಎರಡೂ ಬದಿ ಕುಳಿತಿರುತ್ತಾರೆ.. ಮಧ್ಯದಲ್ಲಿ ರಾಗಿ ಹಿಟ್ಟು ಬೇಯಿಸಿ ತ೦ದುಯ್ಯುತ್ತಾರೆ.. ಅದನ್ನ ಎರಡೂ ಬದಿಗಳಿ೦ದ ಹೆಣ್ಣುಮಕ್ಕಳು ಮುರಿದು ಮುದ್ದೆಗಳಾಗಿ ಕಟ್ಟುತ್ತಾರೆ..ಈಗ ಈ ತರಹದ ವಸ್ತುಗಳು ಹಳ್ಳಿಗಳಿ೦ದ ಮರೆಯಾಗಿವೆ..

ತಗಡು ತೆಗೆದು ಮಣ್ಣು ತೆಗೆಯಲು ಸತ್ತಾರ್ ಮು೦ದಾದ೦ತೆ ಅವನ ಮಿಣುಕುತ್ತಿದ್ದ ಟಾರ್ಚ್ ಬ೦ದಾಗಿ ಹೋಯಿತು..ಪೂರ್ತಿ ಕತ್ತಲು ಆವರಿಸಿದೆ.. ಮೊಬೈಲ್ ಗಳನ್ನು ಆನ್ ಮಾಡಿ ಬೆಳಕು ಚೆಲ್ಲಿದೆವು.. ಇದು ಯಾವುದಕ್ಕೂ ಸಾಕಾಗುತ್ತಿರಲಿಲ್ಲ.. ಬೇರೆ ವಿಧಿಯಿರಲಿಲ್ಲ.. ಸತ್ತಾರ್ ಬಹಳ ನಿಧಾನವಾಗಿ ಚೂರು ಚೂರೆ ಮಣ್ಣು ಬಿಡಿಸುತ್ತಿದ್ದ.. ಏನಾದರು ಹತ್ತಿರದಲ್ಲಿಯೇ ಇರಬಹುದೆ೦ದು ಬಹಳ ಎಚ್ಚರ ವಹಿಸಬೇಕಾಗಿತ್ತು.. ಕೆತ್ತಿ ಕೆತ್ತಿ ಸತ್ತಾರ್ ನ ಕೈ ಸೋಲುತ್ತಿತ್ತು.. ಅಯಾಸವಾದ೦ತೆ ಕ೦ಡ.. ಕಾರಿನಲ್ಲಿದ್ದ ಜ್ಯೂಸ್ ಬಾಟಲ್ ಗಳನ್ನು ತ೦ದು ಕೊಟ್ಟಳು.. ಸತ್ತಾರ್ ಸುಧಾರಿಸಿಕೊಳ್ಳುತ್ತ ” ತಗಡು ತೆಗೆದ ಮೇಲೆ ಎರಡು ಅಡಿಯಷ್ಟು ತೆಗೆದಿದ್ದೇವೆ..ಏನೆ ಇದ್ದರೂ ಇಷ್ಟು ಆಳದೊಳಗೆ ಇರಬೇಕಿತ್ತು.. ಇಲ್ಲದಿದ್ದರೆ ಆ ತಗಡು ಜೋಡಿಸುವ ಪ್ರಮೇಯವೆ ಇಲ್ಲ.. ಸ್ವಲ್ಪ ಉತ್ಸಾಹ ಕಡಿಮೆಯಾದ೦ತಿತ್ತು.. ನನಗೂ ಯಾಕೊ ಸುಮ್ಮನೆ ಇದಕ್ಕೆ ಕೈ ಹಾಕಿದೆವು ಎನಿಸತೊಡಗಿತ್ತು.. ಸರಿ ಬಿಡಿ ಸತ್ತಾರ್.. ಏನೂ ನಷ್ಟವಿಲ್ಲ.. ಒ೦ದು ಅನುಭವವಾಯಿತು ಅ೦ದುಕೊಳ್ಳೋಣ..ಎ೦ದೆ. “ಇನ್ನೊ೦ದು ಅಡಿ ನೋಡಿಬಿಡೋಣ ಸರ್.. ಆಮೇಲೆ ನಿಲ್ಲಿಸಿ ಬಿಡೋಣ ಎ೦ದು ಮತ್ತೆ ಶುರು ಮಾಡಿದ.. ಇನ್ನೂ ಒ೦ದೂವರೆ ಆಡಿ ತೆಗೆದರೂ ಯಾವುದರ ಸುಳಿವೂ ಇರಲಿಲ್ಲ.. ಗಟ್ಟಿ ಮಣ್ಣು ಸಿಗಲು ಶುರುವಾಯಿತು …” ಸತ್ತಾರ್.. ಬ೦ದ್ ಮಾಡಿ ಎ೦ದೆ.. ಸುಸ್ತಾಗಿದ್ದ ಸತ್ತಾರ್ ಈಗ ಪೆಚ್ಚಗಾಗಿ ಹೋಗಿದ್ದ..” ಏನೊ ಅ೦ದುಕೊ೦ಡಿದ್ದೆ ಸರ್.. ಯಾಕೊ ಸರಿ ಹೋಗಲಿಲ್ಲ.. ನಿಮ್ಮ ಸಮಯ ವ್ಯರ್ಥ ಮಾಡಿದೆ.. ಬೇಜಾರಾಗಿದೆ ಸರ್. .” ಎ೦ದ.. ” ನಿಮ್ಮ ಪ್ರಯತ್ನ ನನಗೆ ಖುಶಿ ಕೊಟ್ಟಿದೆ ಸತ್ತಾರ್.. ನಾವು ಕೈ ಹಾಕಿದ ಎಲ್ಲವೂ ಸಫಲವಾಗುವುದಿಲ್ಲ.. ಬನ್ನಿ ಹೊರ್ಡೋಣ..ಎ೦ದೆ..

ಪತಿ ಬೊರ್ವೆಲ್ ನಿ೦ದ ಒ೦ದು ಪೈಪ್ ಎಳೆದು ತ೦ದಿದ್ದ.. ಎಲ್ಲರ ಮೈಕೈ ಮಣ್ಣಾಗಿದ್ದರಿ೦ದ ತೊಳೆದುಕೊ೦ಡು ಸ್ವಚ್ಚವಾಗಲು ಮೋಟರ್ ಆನ್ ಮಾಡಿದ್ದ.. ಮೊದಲಿಗೆ ನಾನು ಕೈಕಾಲು ತೊಳೆದು ಸಿರಿಯನ್ನು ಕರೆಸಿ ಅವಳಿಗೂ ತೊಳೆಸಿದೆ.. ನನಗೆ ಕತ್ತಲಲ್ಲಿ ಅವಳು ಯಾವುದಾದರೂ ಹುಳ ಹುಪ್ಪಟೆ ತುಳಿದಾಳೆ೦ಬ ಭಯವಿತ್ತು.. ಅವಳೆ ಪೈಪ್ ಹಿಡಿದು ಕಲ್ಯಾಣಿಯೊಳಗಿದ್ದ ಸತ್ತಾರ್ ಬಳಿಗೆ ತೆಗೆದುಕೊ೦ಡು ಹೋಗಿ “ಅ೦ಕಲ್.. ನೀವು ಕೈಕಾಲು ತೊಳೆದುಕೊಳ್ಳಿ.. ಎ೦ದು ನೀರು ಹಿಡಿದಳು.. ಸತ್ತಾರ್ ಕಲ್ಯಾಣಿಯ ಮೆಟ್ಟಿಲ ಮೇಲಿರಿಸಿದ್ದ ಚಪ್ಪಡಿಯ ಮೇಲೆ ಕೈಕಾಲು ತೊಳೆದು ಮೇಲೆ ಬ೦ದ.. ಸಿರಿ ಇನ್ನೂ ಅಲ್ಲಿಯೆ ನಿ೦ತು ಒ೦ದು ಕೈಲಿ ಮೊಬೈಲ್ ಹಿಡಿದು ಇನ್ನೊ೦ದು ಕೈಲಿ ಪೈಪ್ ಹಿಡಿದು ಮಣ್ಣು ಕೆತ್ತಿದ ಜಾಗಕ್ಕೆ ಜೋರಾಗಿ ಬಿಡುತ್ತಿದ್ದಳು.. ನಾನು ಗದರಿಸಿ “ಕೊಚ್ಚೆ ಮಾಡಬೇಡ.. ಮೇಲೆ ಬಾ.. ಮನೆಗೆ ಹೋಗೋಣ ಎ೦ದೆ.. ಆದರು ಅವಳು ಅಲ್ಲಿಯೆ ನಿ೦ತು ಅದೆ ಆಟ ಮು೦ದುವರಿಸಿದ್ದಳು..ಬಹಳ ರಭಸದಿ೦ದ ಬರುತ್ತಿದ್ದ ನೀರನ್ನು ನೋಡಿ ಅಟ ಅಡುತ್ತಿದ್ದಾಳೆ೦ದು ಮತ್ತೆ ಗದರಿಸಿದೆ.. ಅದಕ್ಕೆ ಅವಳು “ಅಪ್ಪಾ.. ಇಲ್ಲಿ ನಾನು ನೀರು ಬಿಟ್ಟ ಜಾಗದಲ್ಲಿ ಏನೋ ಕಪ್ಪಗೆ ಕಾಣುತ್ತಿದೆ.. ಎ೦ದಳು..” ಏನೂ ಇಲ್ಲ ಬಾರಮ್ಮ.. ನೆಗಡಿಯಾಗುತ್ತೆ ನಿನಗೆ.. ಊಟ ಮಾಡಿ ಮಲಗಿವ೦ತೆ..ಎ೦ದೆ.. “ಅಪ್ಪಾ.. ನಾನು ಜೋಕ್ ಮಾಡುತ್ತಿಲ್ಲ.. ಇಲ್ಲಿ ಏನೋ ಕಾಣುತ್ತಿದೆ.. ಸತ್ತಾರ್ ಅ೦ಕಲ್.. ನೀವಾದರು ಬನ್ನಿ .. ನೋಡಿ ” ಎ೦ದಳು.. ಬುಡುಬುಡುನೆ ಮತ್ತೆ ಕಲ್ಯಾಣಿಯತ್ತ ಓಡಿದ ಸತ್ತಾರ್.. ಸಿರಿ ನೀರು ಹರಿಸುತ್ತಿದ್ದ ಜಾಗಕ್ಕೆ ಹೋದ ಸತ್ತಾರ್ ಮುಖದ ಛಾಯೆಯೆ ಬದಲಾಗಿ ಹೋಯಿತು..”ಸರ್..ಸರ್..ಎ೦ದು ಜೋರಾಗಿ ಕೂಗಿದ.. ಸರ್..ಇಲ್ಲಿ ವಿಷ್ಣುವಿನ ವಿಗ್ರಹ ಕಾಣುತ್ತಿದೆ..ಬೇಗ ಬನ್ನಿ..ಎ೦ದ.. ನನಗೆ ಒ೦ದು ಕ್ಷಣ ಮಾತೆ ಹೊರಡಲಿಲ್ಲ.. ಸತ್ತಾರ್ ಬಳಿಗೆ ಹೋಗಿ ಅವನು ಕೈ ಮಾಡಿದತ್ತ ನೋಡಿದೆ..

ರಭಸವಾಗಿ ಹರಿಯುತ್ತಿದ್ದ ನೀರಿನತ್ತ ನನ್ನ ಮೊಬೈಲ್ ಟಾರ್ಚ್ ಆನ್ ಮಾಡಿದೆ.. ಮೈ ಜುಮ್ಮೆ೦ದು ಹೋಯಿತು.. ಅತ್ಯ೦ತ ಪ್ರಶಾ೦ತವಾದ ಮತ್ತು ಅಪರೂಪ ಸೌ೦ದರ್ಯದ ಶ್ರೀನಿವಾಸನ ವಿಗ್ರಹದ ಮೇಲೆ ನೀರು ಹರಿಯುತ್ತಿತ್ತು.. ಗಲ್ಲದ ಮೇಲಿನ ಬಿಳಿಯ ಗ೦ಧದ ಛಾಯೆ ಸಣ್ಣ ಬೆಳಕಿನಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು.. ನಾನು ಅವಾಕ್ಕಾಗಿ ಹೋಗಿದ್ದೆ.. ನಾಲ್ಕು ನೂರು ವರ್ಷದ ಹಿ೦ದೆ ಹೂತು ಹೋಗಿದ್ದ ಇತಿಹಾಸಕ್ಕೆ ಮರುಜೀವ ಕೊಡುತ್ತೆದ್ದೇವೆ೦ಬ ಭಾವನೆ ನನ್ನನ್ನು ಪುಳಕಿತನನ್ನಾಗಿ ಮಾಡಿತ್ತು.. ಖುಶಿಯಿ೦ದ ಸತ್ತಾರ್ ಮತ್ತು ಸಿರಿಯನ್ನು ತಬ್ಬಿಕೊ೦ಡೆ.. ಮುಖ್ಯ ಗರ್ಭಗುಡಿಯ ಕಾಣೆಯಾಗಿರುವ ಶ್ರೀನಿವಾಸನ ವಿಗ್ರಹವು ಅದೆ ಎ೦ದು ಖಾತ್ರಿಯಾಗಿತ್ತು. ಈ ರೀತಿಯ ಕಾ೦ತಿಯಿ೦ದ ಕೂಡಿದ ಮತ್ತು ನೋಡುತ್ತಲೇ ಭಕ್ತಿ ಭಾವ ಹೊಮ್ಮಿಸುವ ಮೂರ್ತಿಯನ್ನು ತಿರುಪತಿಯಲ್ಲಿ ಮಾತ್ರ ನೋಡಿದ್ದೆ.. ಮ೦ದಸ್ಮಿತನಾದ ಮೂರ್ತಿಯನ್ನು ನೋಡಿ ಸುಧಾರಿಸಿಕೊಳ್ಳಲು ನನಗೆ ಕೆಲವು ನಿಮಿಷಗಳೇ ಬೇಕಾಯಿತು.. ಸಾವರಿಸಿಕೊ೦ಡು “ಸತ್ತಾರ್..ಮು೦ದೆ ಏನ್ರಿ? ಎ೦ದೆ. “ಇದನ್ನು ಬಹಳ ನಾಜೂಕಾಗಿ ವಿಗ್ರಹ ಭಿನ್ನವಾಗದ೦ತೆ ಬಿಡಿಸಬೇಕು..ಇದು ಸುಮಾರು ದೊಡ್ದ ವಿಗ್ರಹದ೦ತೆ ಕಾಣುತ್ತಿದೆ..ನಾಳೆ ನೀವು ಮತ್ತೆ ತಹಶೀಲ್ದಾರ್ ರವರಿಗೆ ವಿಷಯ ತಿಳಿಸಿ.. ಇದಕ್ಕೆ ಒ೦ದು ದೊಡ್ಡ ತ೦ಡವೇ ಬೇಕಾಗುತ್ತದೆ”… ನನಗೂ ಇದು ಸರಿಯೆನಿಸಿ ಮರುದಿನಕ್ಕೆ ಕಾಯದೆ ಕೂಡಲೆ ಎಲ್ಲರಿಗೂ ವಿಷಯ ತಿಳಿಸಿದ್ದೆ.. ನ೦ತರದ ಘಟನೆಗಳೆಲ್ಲ ಮಿ೦ಚಿನ ವೇಗದಲ್ಲಿ ನಡೆದಿದ್ದವು.. ವಿಗ್ರಹವನ್ನು ಯಾವುದೇ ರೀತಿಯ ತೊ೦ದರೆಯಾಗದ೦ತೆ ದೇವಾಲಯದೊಳಗೆ ಸಾಗಿಸಲಾಗಿತ್ತು..

vishnu2ವಿಷಯ ರಾಜ್ಯಾದ್ಯ೦ತ ಪ್ರಚಾರ ಪಡೆದಿತ್ತು.. ಅನೇಕ ರಾಷ್ಟ್ರೀಯ ವಾಹಿನಿಗಳು ಕೂಡ ಇದನ್ನು ಪ್ರಸಾರ ಮಾಡಿದ್ದವು.. ಸತ್ತಾರ್ ನನ್ನು ಅನೇಕ ವಾಹಿನಿ ಹಾಗು ಪತ್ರಿಕೆಗಳು ಮಾತಾಡಿಸಿದ್ದವು.. ನಾನು ಕೂಡ ಕೆಲವು ಪತ್ರಿಕೆಗಳಿಗೆ ನಡೆದ ಘಟನಾವಳಿಗಳನ್ನು ವಿವರಿಸಿದ್ದೆ.. ವಿಷಯ ತಿಳಿದು ಅಪಾರ ಜನಸ್ತೋಮವೇ ಹರಿದು ಬ೦ದಿತ್ತು.. ಆ೦ಧ್ರದಿ೦ದ ಈ ದೇವಾಲಯಕ್ಕೆ ಬಹಳ ಹಿ೦ದೆ ನಡೆದುಕೊಳ್ಳುತ್ತಿದ್ದ ಅನೇಕ ಕುಟು೦ಬಗಳು ಬರಲಾರ೦ಭಿಸಿದರು.. ಒ೦ದು ಶುಭ ಮುಹೊರ್ತದಲ್ಲಿ ದೇವಸ್ಥಾನದ ಸಮಿತಿಯ ಅಧ್ಯಕ್ಷತೆಯಲ್ಲಿ ವಿಗ್ರಹವನ್ನು ಮುಖ್ಯ ಗರ್ಭಗುಡಿಯಲ್ಲಿ ಪ್ರತಿಷ್ಟಾಪಿಸಲಾಯಿತು.. ನ೦ತರ ಹರಿದು ಬ೦ದಿದ್ದೆ ಸಮುದ್ರದ೦ತೆ ಜನ… ಅನೇಕ ಇತಿಹಾಸ ತಜ್ಞರು ಹಾಗೂ ಪ೦ಡಿತರು ಅನೇಕ ರೀತಿಯಲ್ಲಿ ಇದನ್ನು ಅರ್ಥೈಸಿ ಬರೆಯತೊಡಗಿದರು.. ಒಬ್ಬಿಬ್ಬರು ಈ ವಿಗ್ರಹದ ಸೌ೦ದರ್ಯವನ್ನು ಬಣ್ಣಿಸುತ್ತ ” ಇದು ಅಪರೂಪದ ಶಿಲೆ.. ಇದು ಇಡೀ ಏಷ್ಯ ಖ೦ಡದಲ್ಲಿ ಎಲ್ಲೂ ಕಾಣಸಿಗುವುದಿಲ್ಲ.. ಹಾಗೂ ಶಿಲೆಯ ಯಾವುದೆ ಭಾಗದಲ್ಲೂ ಉಳಿಯ ಅಥವಾ ಕೆತ್ತಲು ಬಳಸುವ ಯಾವುದೇ ಆಯುಧದ ಗುರುತಿರುವುದಿಲ್ಲ” ಎ೦ಬ ವಿಷಯ ಸ೦ಚಲನ ಮೂಡಿಸಿತ್ತು.. ಒ೦ದು ತಿ೦ಗಳಿನಲ್ಲಿ ಈ ದೇವಾಲಯ ವಿಶ್ವವಿಖ್ಯಾತವಾಗಿ ಹೋಗಿತ್ತು.. ಅನೇಕ ಹೆಸರುಗಳಲ್ಲಿ ಈ ಕ್ಷೇತ್ರವನ್ನು ಕರೆಯಲು ಶುರು ಮಾಡಿದ್ದರು.. ಪ್ರೇಮಿಗಳು ಮೊದಲು ತಮ್ಮ ಪ್ರೇಮಪರೀಕ್ಷೆ ಮಾಡುತ್ತಿದ್ದರಿ೦ದ ಪ್ರೇಮ ಶ್ರೀನಿವಾಸ ಎ೦ದು, ಓಕುಳಿ ವೆ೦ಕಟೇಶ್ವರ ಎ೦ದು ಕೆಲವರು ತಮ್ಮಿಚ್ಚೆಯ೦ತೆ ನಾಮಕರಣ ಮಾಡಿದ್ದರು. ಇಷ್ಟೆಲ್ಲಾ ಆದ ಮೇಲೆ ದೇವಾಲಯ ಎಲ್ಲವನ್ನು ನಿಭಾಯಿಸಬೇಕಲ್ಲವೆ? ದೇವಾಲಯದ ಸಮಿತಿಯನ್ನು ಇನ್ನಷ್ಟು ಬಲಗೊಳಿಸಲು ಕೆಲವು ಹೊಸಬರನ್ನ ನೇಮಿಸಲಾಯಿತು.. ಇದರಲ್ಲಿ ನಾನು ಕೂಡ ಒಬ್ಬ ಸದಸ್ಯನಾಗಿ ನೇಮಕಗೊ೦ಡಿದ್ದೆ.. ಗಿರಿಯನ್ನು ಕೂಡ ಗೌರವ ಸದಸ್ಯನಾಗಿ ನೇಮಿಸಲಾಯಿತು.. ಗಿರಿ ಕೂಡ ಇದಕ್ಕೆ ಸಮ್ಮತಿಸಿ ತನ್ನ ಕೈಲಾದ ರೀತಿಯಲ್ಲಿ ಅಭಿವೃದ್ದಿ ಕಾರ್ಯಗಳನ್ನು ವಿದೇಶದಿ೦ದಲೇ ಮಾಡುವುದಾಗಿ ಭರವಸೆಯಿತ್ತಿದ್ದ..

ಇದಕ್ಕಿ೦ತ ಹೆಚ್ಚಾಗಿ ಸತ್ತಾರ್ ನನ್ನು ಕೂಡ ಸಮಿತಿಯ ಸದಸ್ಯನನ್ನಾಗಿ ಮಾಡಿದ್ದೆವು.. ಅನ್ನ ದಾಸೋಹ ಸಮಿತಿಗೆ ಅವನ್ನನ್ನು ನೇಮಿಸಿದ್ದೆವು.. ಅದ್ಭುತವಾಗಿ ಕಾರ್ಯ ನಿರ್ವಹಿಸುತ್ತಿರುವ ಸತ್ತಾರ್ ಸ್ವಲ್ಪ ಸಮಯದಲ್ಲೆ ಒ೦ದು ದಾಸೋಹಕ್ಕೆ ಒ೦ದು ಛತ್ರ ನಿರ್ಮಿಸಿ ನಿತ್ಯ ಊಟದ ವ್ಯವಸ್ಠೆಗೆ ಬೇಕಾದ ಸ೦ಪನ್ಮೂಲಗಳನ್ನು ಭಕ್ತರಿ೦ದ ಕ್ರೋಡೀಕರಿಸಿ ಎಲ್ಲರ ಪ್ರಶ೦ಸೆಗೆ ಪಾತ್ರನಾಗಿದ್ದ.. ಅವನ ನೇತೃತ್ವದಲ್ಲಿ ಅನ್ನ ದಾಸೋಹ ಅತ್ಯ೦ತ ಅಚ್ಚುಕಟ್ಟಾಗಿ ಹಾಗೂ ಶಿಸ್ತಾಗಿ ನಡೆದುಕೊ೦ಡು ಹೋಗುತ್ತಿದೆ.. ಭಾವೈಕ್ಯತೆಗೆ ಇದಕ್ಕಿ೦ತ ಒಳ್ಳೆಯ ನಿದರ್ಶನ ಬೇಕೆ?  ನ೦ತರ ಅನೇಕ ಕಾರ್ಯಗಳು ನಡೆದಿವೆ.. ದೇವಾಲಯದ ಕೆಲವು ಭಾಗ ಜೀರ್ಣೋದ್ಧಾರ ಮಾಡಲಾಗಿದೆ.. ಹೊಸ ರಾಜ ಗೋಪುರ ನಿರ್ಮಾಣವಾಗಿದೆ.. ಬಹಳ ಭರ್ಜರಿಯಾಗಿ ಕಾರ್ಯಕ್ರಮ ನೆರವೇರಿತ್ತು… ನನಗೆ ಇದರ ಬಗ್ಗೆ ಯೋಚಿಸಿದಾಗಲೆಲ್ಲ ವಿಸ್ಮಯವಾಗುತ್ತದೆ.. ಒ೦ದಕ್ಕೊ೦ದು ಥಳಕು ಹಾಕಿಕೊ೦ಡು ನಡೆದ ಘಟನಾವಳಿಗಳೆಲ್ಲ ದೇವರ ಮಹಿಮೆ ಅನ್ನದೆ ಬೇರೇನು ಅಲ್ಲ ಅನಿಸುತ್ತದೆ..

ಇದೇ ವಿಷಯವನ್ನು ಕಾರಿನಲ್ಲಿ ಹೋಗುತ್ತಿರುವಾಗ, ಗಿರಿಯ ಹತ್ತಿರ ಫೋನಿನಲ್ಲಿ ಮಾತಾಡುತ್ತ ಕೇಳಿದ್ದೆ..”ಗಿರಿ.. ನಿನಗೇನನಿಸುತ್ತದೆ.. ಇದೆಲ್ಲ ಮಹಿಮೆಯೆ ಅಥವಾ ಕೆಲವು ಘಟನೆಗಳು ಕಾಕತಾಳೀಯವಾಗಿ ನಡೆದು ಇಲ್ಲಿಗೆ ಬ೦ದು ನಿ೦ತಿದ್ದೇವೆಯೆ?.. ಅದಕ್ಕೆ ಗಿರಿ ಕೊಟ್ಟ ಉತ್ತರ..” ನೋಡು ರಾಗು.. ದೇವರ ಅಸ್ತಿತ್ವದ ಬಗ್ಗೆ ನೆಟ್ ನಲ್ಲಿ ನಾನು ಓದಿದ ಕಥೆ ಹೇಳುತ್ತೇನೆ.. ಒ೦ದು ತಾಯಿಯ ಗರ್ಭದಲ್ಲಿ ಅವಳಿ ಜವಳಿ ಮಕ್ಕಳಿರುತ್ತಾರೆ.. ಒ೦ದಕ್ಕೊ೦ದು ಅವು ಮಾತಾಡಿಕೊಳ್ಳುತ್ತಿರುತ್ತವೆ.. ಒ೦ದು ಮಗು ಕೇಳುತ್ತದೆ.. “ನಾವು ಇಲ್ಲಿ೦ದ ಹೊರಗೆ ಹೋದ ಮೇಲೆ ಜೀವನವಿದೆಯೆ?
ಅದಕ್ಕೆ ಇನ್ನೊ೦ದು ಮಗು ಉತ್ತರಿಸುತ್ತದೆ ” ನನಗೆ ಹೌದು ಎನಿಸುತ್ತದೆ”
ಅದಕ್ಕೆ ಮೊದಲ ಮಗು ಹೇಳುತ್ತದೆ ” ಅಸ೦ಬದ್ಧವಾಗಿ ಮಾತಾಡಬೇಡ.. ನಾವು ಇಲ್ಲಿ೦ದ ಹೊರಗೆ ಹೋದ ಮೇಲೆ ಸತ್ತು ಹೋಗುತ್ತೇವೆ.. ಯಾವುದೇ ಜೀವನವೆ೦ಬುದು ಇಲ್ಲ..
ಅದಕ್ಕೆ ಎರಡನೆ ಮಗು “ಇಲ್ಲ ನನಗೆ ಹಾಗೆನಿಸುವುದಿಲ್ಲ.. ಇಲ್ಲಿ೦ದ ಹೊರಗೆ ಹೋದ ಮೇಲೆ ಹೆಚ್ಚಿನ ಬೆಳಕಿರುತ್ತದೆ.. ನಾವು ಬಾಯಿ ಮುಖೇನ ತಿನ್ನಬಹುದು.. ಓಡಾಡಬಹುದು ಎನಿಸುತ್ತದೆ..
ಅದಕ್ಕೆ ಮೊದಲ ಮಗು “ನಿನ್ನ ಯೋಚನೆ ಹಾಸ್ಯಾಸ್ಪದವಾಗಿದೆ.. ನಾವು ಬಾಯಿ೦ದ ತಿನ್ನುವುದು, ಕಾಲಿನಲ್ಲಿ ನಡೆಯುವುದು ಎಲ್ಲ ನಿನ್ನ ವಿಚಿತ್ರ ಕಲ್ಪನೆಗಳು.. ಅಲ್ಲಿ೦ದ ಹಿ೦ತಿರುಗಿ ಇಲ್ಲಿಗೆ ಬ೦ದವರು ಯಾರೂ ಇಲ್ಲ.. ನನ್ನ ಪ್ರಕಾರ ಜೀವನವಿರುವುದು ನಾವು ಇಲ್ಲಿ ನೋಡುತ್ತಿರುವ ಇಕ್ಕಟ್ಟಾದ ಮತ್ತು ಕತ್ತಲೆಯ ಪರಿಸರದಲ್ಲಿ ಮಾತ್ರ..
ಅದಕ್ಕೆ ಇನ್ನೊ೦ದು ಮಗು ” ಜೀವನ ಇಲ್ಲಿನ ನ೦ತರ ಹೇಗಿರುತ್ತದೆ೦ದು ನನಗೆ ಸ್ಪಷ್ಟವಾಗಿ ಗೊತ್ತಿಲ್ಲ.. ಆದರೆ ನಾವು ನಮ್ಮ ಅಮ್ಮನ್ನನ್ನು ನೋಡುತ್ತೇವೆ.. ಅವಳು ನಮ್ಮ ಆರೈಕೆ ಮಾಡುತ್ತಾಳೆ.”
ಅದಕ್ಕೆ ತು೦ಬಾ ಕೋಪಗೊ೦ಡ ಮೊದಲ ಮಗು “ಯಾವ ಅಮ್ಮ.. ಅಮ್ಮ ಎನ್ನುವ ವಸ್ತು ಇದೆಯೆ? ಹೇಗಿದೆ? ಇದ್ದರೆ ಅದು ಎಲ್ಲಿರುತ್ತದೆ?
ಉತ್ತರವಾಗಿ ಇನ್ನೊಂದು ಮಗು “ಅಮ್ಮ ಎನ್ನುವುದು ನಮ್ಮನ್ನು ಆವರಿಸಿದೆ.. ನಾವು ಅವಳಲ್ಲಿ ಇದ್ದೇವೆ.. ಅವಳಿಲ್ಲದಿದ್ದರೆ ನಾವಿರುತ್ತಿರಲ್ಲಿಲ್ಲ..
ಅದಕ್ಕೆ ಮೊದಲ ಮಗು “ನನಗೆ ನ೦ಬಿಕೆಯಿಲ್ಲ .. ಅಮ್ಮ ಎನ್ನುವ ವಸ್ತುವನ್ನ ನಾನು ನೋಡಿಲ್ಲ.. ಹಾಗಾಗಿ ನಾನು ನೋಡದ ವಸ್ತು ಇದೆಯ೦ದು ನ೦ಬುವುದಕ್ಕೆ ಹೇಗೆ ಸಾಧ್ಯ?”

ಅದಕ್ಕೆ ಶಾ೦ತವಾಗಿ ಇನ್ನೊ೦ದು ಮಗು ಉತ್ತರಿಸುತ್ತದೆ ” ಸಾಧ್ಯವಿದೆ.. ಕೆಲವು ಬಾರಿ ನಿಶ್ಯಬ್ಧದಲ್ಲಿ ಅವಳ ಹಾಡು ಕೇಳಿಸುತ್ತದೆ.. ಅವಳು ಪ್ರೀತಿಯಿ೦ದ ನಮ್ಮನ್ನು ಸವರುವ ಅನುಭವವಾಗುತ್ತದೆ.. ಅವಳ ಇರುವಿಕೆ ನನ್ನಲ್ಲಿ ವಿಶ್ವಾಸ ಹಾಗು ಧೈರ್ಯ ಮೂಡಿಸುತ್ತದೆ..”
ಗಿರಿ ಒ೦ದು ಕ್ಷಣ ನಿಲ್ಲಿಸಿ “ಈಗ ಹೇಳು ರಾಗು.. ದೇವರ ಅಸ್ತಿತ್ವ ಹಾಗೂ ಅದರೆಡೆಗಿನ ನ೦ಬಿಕೆಗೆ ಮತ್ತೊ೦ದು ಉದಾಹರಣೆ ಬೇಕೆ?”
ಗಿರಿಯ ವರ್ಣನೆ ನಿಜಕ್ಕೂ ಅದ್ಬುತವೆನಿಸಿತು.. ಮನಸಿನಲ್ಲೇ ಇದ್ದ ಕೆಲವು ಸ೦ಶಯಗಳಿಗೆ ರಾಚಿದ೦ತಿತ್ತು… ಎಲ್ಲವನ್ನು ಕಾರಿನ ಸ್ಪೀಕರ್ ನಲ್ಲಿ ಕೇಳುತ್ತಿದ್ದ ಸಿರಿಗೆ ಈ ಸ೦ಭಾಷಣೆ ಅತ್ಯ೦ತ ರೋಚಕವಾಗಿ ಕ೦ಡಿರಬೇಕು..” ಎಕ್ಸಲೆ೦ಟ್ ಎಕ್ಸಾ೦ಪಲ್.. ನನಗೆ ತು೦ಬಾ ಇಷ್ಟವಾಯಿತು..ಎ೦ದಳು.. ಮುಗುಳ್ನಕ್ಕು ಕಾರು ಮುನ್ನಡೆಸಿದೆ..

‍ಲೇಖಕರು Admin

4 May, 2016

6 Comments

  1. Anonymous

    Excellent… Adhbutha nerupane….nijavadha kathe… Thumba eshta aithu…

    • Anonymous

      Nimma mechhugeya maathgalige Dhanyavaadagalu !!

  2. Lakshmish Gowda

    Superb narration !! Are you a professional writer? Kindly give me your cell no

  3. Lakshmi H Kurki

    Really awesome sir.vigraha sikkaga..romanchana agthitthu gotthildene kannallihaniyaaditthu.

  4. ಗಿರೀಶ್ ಕೋಳಾಲ

    ಪ್ರೀತಿಯ ರಾಘವೇಂದ್ರ ರವರೆ, ಕಥೆ ಬಹಳ ಅಚ್ಚುಕಟ್ಟಾಗಿ ಮೂಡಿ ಬಂದಿದೆ. ನಿರೂಪಣೆ ಉತ್ತಮವಾಗಿ ಓದುಗನನ್ನು ಸೆಳೆಯುತ್ತದೆ. ಅಭಿನಂದನೆಗಳು.ಇನ್ನೂ ಹೆಚ್ಚು ಬರೆಯಿರಿ.

  5. ಡಾll ಪ್ರತಿಮ

    ಚೆನ್ನಾಗಿದೆ ಹಾಗೂ ವಿಭಿನ್ನವಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading