ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮದರಿಯವರಿಗೆ ಧನ್ಯವಾದ ಎಂದು ಹೇಳಿದರೆ ಏನೂ ಹೇಳಿದಂತಲ್ಲ

gangadharaa pattar

ಟಿ ಕೆ ಗಂಗಾಧರ ಪತ್ತಾರ 

ತಮ್ಮ ‘ಗೊಂದಲಿಗ್ಯಾ’ ಕೃತಿಯ ಕಾಂಪ್ಲಿಮೆಂಟರಿ ಪ್ರತಿಯನ್ನು ಶ್ರೀ ಎ.ಎಂ.ಮದರಿಯವರು ಭಾನಾಪುರದಲ್ಲಿ ನಮ್ಮ ಅಣ್ಣ ಶಂಕರ ಪತ್ತಾರರವರಿಗೆ ಕೊಟ್ಟು ಹೋಗಿದ್ದರು. 30 ವರುಷಗಳಿಂದ ಬಳ್ಳಾರಿ ನಿವಾಸಿಯಾಗಿರುವ ನಾನು ಭಾನಾಪುರಕ್ಕೆ ಹೋದಾಗ ಇದನ್ನು ಕಂಡ ನಾನು ಶೀರ್ಷಿಕೆ ನೋಡಿಯೇ ವಿಸ್ಮಿತನಾದೆ.

gondaligya coverಆಗ ಅಲ್ಲೇ ಇದ್ದ ನಮ್ಮ ಸೋದರ ಮಾವ ಬಿ.ಸುರೇಶಬಾಬು “ಗಂಗ..(ಅವರು ನನ್ನನ್ನು ಕರೆಯುವುದು ಹಾಗೆಯೇ) ಇದಕ್ಕಿಂತ ಸೂಕ್ತ ಶೀರ್ಷಿಕೆ ಇದಕ್ಕೆ ಸಾಧ್ಯವೇ ಇಲ್ಲ. ಪುಸ್ತಕ ಕೈಗೆತ್ತಿಕೊಂಡರೆ ಮುಗಿಸುವವರೆಗೆ ಕೆಳಗಿಡಲು ಮನಸ್ಸಾಗುವುದಿಲ್ಲ. ಅಂತಹ ಆಪ್ತತೆ, ಆತ್ಮೀಯತೆ, ಮಾಂತ್ರಿಕತೆ, ಮನಮೋಹಕತೆ ಮದರಿಯವರ ಬರಹಕ್ಕಿದೆ”ಎಂದು ಒಂದೇ ಉಸುರಿನಲ್ಲಿ ಇಡೀ ಪುಸ್ತಕದ ಪ್ರವರ ಬಿಚ್ಚಿಟ್ಟರು.

ಸರ್ವೇ ಇಲಾಖೆಯಲ್ಲಿದ್ದರೂ ಒಳ್ಳೆಯ ಪುಸ್ತಕಗಳ ಓದು ಅವರ ದೈನಂದಿನ ಜೀವನದ ಅವಿಭಾಜ್ಯ ಅಂಗ. ನನ್ನಲ್ಲಿ ವಾಚನಾಭಿರುಚಿ, ತನ್ಮೂಲಕ ಬರವಣಿಗೆಯ ಆಸಕ್ತಿ ಮೂಡಿಸಿದವರೂ ಅವರೇ. ಅವರೊಬ್ಬ ಕ್ಲಾಸಿಕ್ ಓದುಗಾರರು. ಹಾಗೇ ಸುಮ್ಮನೇ ಹೊಗಳುವ ಜಾಯಮಾನವೂ ಅವರದಲ್ಲ.

ಪ್ರಕಾಶಕರು ಯಾರೆಂದು ನೋಡಿದರೆ ಬಳ್ಳಾರಿಯ ಲೋಹಿಯಾ ಪ್ರಕಾಶನ ಖ್ಯಾತಿಯ ನನ್ನ ಆತ್ಮೀಯ ಸಿ.ಚೆನ್ನಬಸವಣ್ಣನವರು. ಭಾನಾಪುರದಿಂದಲೇ ಫೋನಾಯಿಸಿದೆ. ನೀವು ನಾಳೆ ಆಫೀಸಿಗೆ ಬರುವ ಮೊದಲೇ ಈ ಪುಸ್ತಕ ನಿಮ್ಮ ಟೇಬಲ್ ಮೇಲಿರುತ್ತದೆ ಎಂದರು.

ಅವರ ಏಕೈಕ ಪುತ್ರಿ ಡಾ//ಶೈಲಾ ನಮ್ಮ ವಿಮ್ಸ್ ವೈದ್ಯ ಕಾಲೇಜು ಆಸ್ಪತ್ರೆ ಹೆರಿಗೆ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿ. ಹೀಗಾಗಿ ಮರುದಿನ ಬೆಳಗ್ಗೆ ನಾನು ಹತ್ತು ಗಂಟೆಗೆ ಆಫೀಸಿಗೆ ಹೋದಾಗ “ಗೊಂದಲಿಗ್ಯಾ” ನನ್ನ ಟೇಬಲ್ ಮೇಲೆ ವಿರಾಜಿಸುತ್ತಿತ್ತು. ಡಾ//ಶೈಲಾ ಡ್ಯೂಟಿಗೆ ಬರುವುದು ಒಂಬತ್ತು ಗಂಟೆಗೆ. ಪುಸ್ತಕ ನನ್ನ ಟೇಬಲ್ ಮೇಲಿಟ್ಟು ಹೋಗಿದ್ದರು.

ನಮ್ಮ ಸೋದರ ಮಾವ ಹೇಳಿದಂತೆ ಓದಿಸಿಕೊಂಡು ಹೋಗುವ ಮಾಂತ್ರಿಕ ಶಕ್ತಿ ಅದಕ್ಕಿತ್ತು, ಕಚೇರಿ ಅಧೀಕ್ಷಕ ಕರ್ತವ್ಯದ ಫೈಲುಗಳ ನಡು-ನಡುವೆಯೇ ಸಂಜೆ ಐದೂವರೆಯೊಳಗೆ ಅರ್ಧ ಪುಸ್ತಕ ಓದಿದೆ. ಆಫೀಸ್ ಕೆಲಸ ಮುಗಿದರೂ ಮನೆಗೆ ಹೋಗದೇ ಸೆಕ್ಯೂರಿಟಿ ಆಗಾಗ ಬಂದು ಎಚ್ಚರಿಸುತ್ತಿದ್ದರೂ ಅವನಿಗೆ ತಿಂಡಿ-ಕಾಫಿಗೆ ಐವತ್ತು ರೂಪಾಯಿ ಕೊಟ್ಟು ನನಗೆ ಡಿಸ್ಟರ್ಬ್ ಮಾಡಬೇಡೆಂದು ಹೇಳಿ ಅಲ್ಲೇ ಕುಳಿತು ಇಡೀ ಪುಸ್ತಕ ಮುಗಿಸಿ ಎಂಟೂವರೆಗೆ ಮನೆಗೆ ಹೋದೆ.

ಗೊಂದಲಿಗರ ಅಲೆಮಾರೀ ಜೀವನದ ನೈಜ ಅಭಿವ್ಯಕ್ತಿ, ಸಿಹಿಯಿಲ್ಲದ ಕಹಿಯ ಒಳನೋಟದ ದೃಶ್ಯಾವಳಿ ಚಿತ್ತಭಿತ್ತಿಯಮೇಲೆ ಮೂಡಿಬಂದಂತಹ ಆಪ್ತತೆ ಅನುಭವಿಸಿದೆ. ಲಂಕೇಶರ ಹುಳಿಮಾವು, ಸಿದ್ಧಲಿಂಗಯ್ಯನವರ ಊರು-ಕೇರಿ ಓದಿದ ಬಹಳ ದಿನಗಳ ಮೇಲೆ ಅಂತಹದ್ದೇ ಕೃತಿ ಓದಿದ ಸಾರ್ಥಕ ಭಾವ ನನ್ನದಾಯ್ತು. ಎ.ಎಂ.ಮದರಿಯವರಿಗೆ “ಧನ್ಯವಾದಗಳು” ಎಂದು ಹೇಳಿದರೆ ಏನೂ ಹೇಳಿದಂತಲ್ಲ.

‍ಲೇಖಕರು Admin

4 May, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading