ಮೌನ ನಿಶ್ಶಬ್ಧ ಒಂಟಿತನ
ತೆಲುಗು ಮೂಲ : ಅರುಣಾ ನಾರದಭಟ್ಲ
ಕನ್ನಡಕ್ಕೆ : ರೋಹಿಣಿಸತ್ಯ
ಸಂದರ್ಭವಿಲ್ಲದೇ ಸುರಿಯುವ ಕಣ್ಣೀರಿಗೆ ಅರ್ಥಗಳವೆಷ್ಟೋ
ಮೌನ ನಿಶ್ಶಬ್ಧ ಒಂಟಿತನ
ಒಂದೆಡೆ ಸೇರುತ್ತವೆ ಕೆಲವೊಮ್ಮೆ
ನೀರುಕ್ಕದ ಬಾವಿಯಲ್ಲಿ ಅಗೆತದಂತೆ…
ಸೂರ್ಯ ಉದುರಿಹೋಗುತ್ತಿರುವ ಸ್ವಪ್ನ
ಸಮುದ್ರ ಹಾರಿಹೋಗುತ್ತಿರುವ ದೃಶ್ಯ
ಬೆಟ್ಟಗಳು ಸಂಕುಚಿತವಾಗುವ ಸ್ಪರ್ಶ
ಹಿಮಾಲಯಗಳು ಮರಳುಗಾಡುಗಳಾಗಿ ಪಾಪಾಸುಕಳ್ಳಿಗಳನ್ನು
ಹೊರುತ್ತಿರುವ ನಿಟ್ಟುಸಿರು
ಬುನಾದಿಗಳು ಅಲುಗಾಡುತ್ತಿರುವ ಊಹೆ
ಭೂಗೋಳ ನಡುಗುತ್ತಿರುವ ಸದ್ದು
ಹಾರುತ್ತಿರುವ ಹಕ್ಕಿಗಳು ಒಂದು ಕ್ಷಣ ನಿಂತು
ಹೆಗಲಮೇಲೆ ಕುಳಿತು
ಕಳೆದುಕೊಳ್ಳುತ್ತಿರುವುದನ್ನೇನೋ
ನೆನಪಿಸುವಂತಹ ಭಾಷೆ
ವ್ಯಾಮೋಹ ನಿವೃತ್ತಿಯಲ್ಲಿದ್ದರೂ
ಕಾಲವು ತಾರುಣ್ಯ ಕಳೆದುಕೊಂಡಿಲ್ಲ
ಒಳಗಿನ ಆಕಾಶ ಹೊರಗಿನ ಭೂಗೋಳ
ನಡುವಿನಲ್ಲಿ ನೇತಾಡುವ ಬೆಳದಿಂಗಳ ಮನಸು!

ಚಂದ್ರನ ಮೇಲೆ ಕುಳಿತ ನೀಲಕಂಠ ಹಕ್ಕಿ
ಈ ಮರದ ಕೊಂಬೆಗಳ ಮೇಲೆ ಹಾರಿದಾಗಲೆಲ್ಲಾ
ಎಲ್ಲೊ ಒಂದಿಷ್ಟು ಚಿಗುರಿನ ಹಸಿ ಹಸಿ ವಾಸನೆ
ಎಲೆಗಳನ್ನು ಹೊದ್ದುಕೊಂಡ ಮರ
ಹೊರಗೆಲ್ಲಾ ಬೆಳದಿಂಗಳೇ!
ಜೀರುಂಡೆಗಳ ಸದ್ದು
ಗುಯ್ಗುಡುತಾ… ಗಾಯಗಳಮೇಲೆ ಕುಳಿತು
ಬಣ್ಣದ ಹಕ್ಕಿಯಂತೆ ಹಾಡು ಹೇಳುತ್ತದಾದರೂ
ಈ ಕತ್ತಲ ಕೊಂಬೆಗಳಲ್ಲಿ ಉಸಿರಾಡುವುದಿಲ್ಲ ಅದಕ್ಕೆ
ಅದಕ್ಕೆ ಅದು ಹಸಿರು ಹೊಲದ ಮೇಲೆ ವಿಶಾಲ ವಿಶ್ವದೆಡೆಗೆ ಹಾರಿ ಹೋಗುತ್ತೆ ಬೆಟ್ಟವೇರುವಂತೆ
ಈ ಹುಣ್ಣಿಮೆಯ ರಾತ್ರಿಗಳೇ
ಆ ಚಂದಿರನಿಗೆ
ಈ ತಂಗಾಳಿಗೆ ನಡುವೆ ಯುದ್ಧವನ್ನು ಸಾರುವುದು






0 Comments