ಪ್ರಜ್ಞಾ ಮತ್ತಿಹಳ್ಳಿ
ಪೂರ್ತಿ ಕೇಳಲಾಗಲೇ ಇಲ್ಲ
ಒಮ್ಮೆಯೂ ಪುಣ್ಯಕೋಟಿ ಕತೆ
ಸಣ್ಣಕಿರುವಾಗ ಅಮ್ಮ ಹೇಳಹೊರಟರೆ
ಬ್ಯಾಡ ಇದು ಅಂತ
ನುಗ್ಗುವ ಅಳುವಿನೊಟ್ಟಿಗೆ ಬೇರೆ
ಅರಳಿಸುವ ಕತೆಗೆ ತೆರೆದುಕೊಳ್ಳುತ್ತಿದ್ದೆ.
ಪಾಠ ಮಾಡುವ ಅಕ್ಕೋರು ಕೈ
ತಿರುಗಿಸುತ್ತ ರಾಗವಾಗಿ ಹಾಡಿಸಿ
ಅರ್ಥದ ಗೋಜು ಹಚ್ಚದೇನೆ
ಕುಣಿಸುತ್ತಿದ್ದರು. ಏಕೆಂದರೆ
ಪದ್ಯಭಾಗ ನೆನಪಿಂದ ಬರೆಯಿರಿ
ಅಂತಷ್ಟೇ ಪರಿಕ್ಷೆಗಿತ್ತು ಹೊರತು
ಪ್ರಶ್ನೋತ್ತರದ ಕಷ್ಟವಿರಲಿಲ್ಲ

ಇಲ್ಲದಿದ್ದರೆ ಹಸಿದ ಹುಲಿಯೂ
ಹಾಲಿಗೆ ಕಾಯುವ ಕರುವೂ
ಒಂದೇ ಅಲ್ಲವೇ ಅಂತೆಲ್ಲ
ಗೊಂದಲವಾಗುತ್ತಿತ್ತೋ ಏನೋ
ನನ್ನ ಮಕ್ಕಳೂ ಈ ಕತೆಗೆ ತೀವ್ರ
ತಕರಾರು ತೆಗೆದಾಗ ಕೊಂಚ
ಮಾರ್ಪಾಡಿಗೆ ಹೊಂಚಿದೆ
ಆದರೆ ಹುಲಿಗೆ
ಹುಲ್ಲು ತಿನ್ನಿಸಲಿಕ್ಕಾಗುತ್ತದೆಯೆ?
ಹಸಿದ ಹುಲಿಗಾಗಿ ಕರುವಿಲ್ಲದ
ಆಕಳ ಹುಡುಕಲಾಗುತ್ತದೆಯೆ?
ಪುಣ್ಯಕೋಟಿಯನ್ನು ಒಡಹುಟ್ಟಕ್ಕ
ಅಂತ ಕರೆದ ತಪ್ಪಿಗೆ ಹುಲಿ
ಖಾಯಂ ಉಪವಾಸವಿರಲಾದೀತೆ?

ದಿನಕ್ಕೊಂದು ಆಕಳು ಸತ್ತರೆ
ಕೊಟ್ಟಿಗೆ ತುಂಬಾ ಅನಾಥ ಕರುಗಳ
ಅಂಬಾ ಕೂಗಿಗೆ ಹಾಲೂಡುವರಾರು?
ಎಷ್ಟು ಕಷ್ಟವಲ್ಲವೆ ಹೌದೆನ್ನುವ
ಒಂದೇ ಒಂದು ಕತೆ ಹುಟ್ಟುವುದು?
ಈಗಲೂ ನನಗೊಂದು ಸಣ್ಣ ಕುತೂಹಲ
ಕರುವಿನ ಪ್ರಶ್ನೆ ಹುಲಿಯ ಹಸಿವು
ಎರಡನ್ನೂ ಸಹಿಸಿಕೊಂಡು ಈ ಕತೆ
ಆಸ್ವಾದಿಸುವ ಮಕ್ಕಳೂ
ಇದ್ದಿರಬಹುದಾ ಅಂತ






ನೀವು ಎತ್ತಿರುವ ಪ್ರಶ್ನೆಗಳು ಎಷ್ಟು ಪ್ರಸ್ತುತ .ಚಿಂತನೆಗೆ ಹಚ್ಚಿವೆ
ನಿಮ್ಮ ಈ ಲೇಖನವನ್ನು ತುಂಬಾ ಆಸಕ್ತಿಯಂದ ಓದಿದೆ. ಸರಿಸುಮಾರು ಇಂತಹುದೇ ಅನಿಸಿಕೆಗಳು ನನ್ನಲ್ಲಿಯೂ ಮೂಡಿದಾಗ ಒಂದು ಲೇಖನವನ್ನು ಬರೆದಿಟ್ಟಿದ್ದೆ. ತಮಗೆ ಆಸಕ್ತಿಯಿದ್ದಲ್ಲಿ ಅದನ್ನು ತಮಗೆ ಕಳಿಸುತ್ತೇನೆ. ತಮ್ಮ ಮಿಂಚಂಚೆ ವಿಳಾಸ ತಿಳಿಸಿದಲ್ಲಿ ಕಳಿಸುತ್ತೇನೆ.