ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಡಲಿಗೊಂದಿಷ್ಟು ನಿಗೂಢತೆ ಹಾಗೇ ಇರಲಿ..

ರಾಜೀವ ನಾರಾಯಣ ನಾಯಕ

ಮತ್ತೆ ಕವಿಯಾಗಿರಿ ಹೊಸ ವರ್ಷದಲ್ಲಾದರೂ

ಕಡಲಿನ ನಿಗೂಢತೆಯನ್ನು ಅರಿಯುವ ಬಗೆ ಹೇಗೆ?

ತೆರೆಗಳು ಅದಕ್ಕೆ ವಿರಾಟರೂಪ ನೀಡಬಹುದು

ತರಹೇವಾರಿ ಮೀನುಗಳು  ರುಚಿ-ಗಂಧ ನೀಡಬಹುದು

ಭೋರ್ಗೆರೆವ ದಂಡೆಗಳು ನಾನಾರ್ಥ ಮಥಿಸಬಹುದು

ಕೈಯಾಡಿಸಿದರೆ ಶಂಖು, ಚಿಪ್ಪು, ಸ್ವಾತಿ

ಮುತ್ತುಗಳು ಕಚಗುಳಿಯಿಡಲೂಬಹುದು

 

ಆದರೂ ಅದ್ಯಾವುದೂ ಕಡಲಲ್ಲವಲ್ಲ

ಕಡಲನ್ನು ಅಳೆಯಲು ಪಂಚೇಂದ್ರಿಯಗಳೂ ಪರಿಪೂರ್ಣವಲ್ಲ

ಬಹುಶ: ಕಡಲಿಗೆ ಜೀವ ಕೊಡುವುದೇ

ಕಡಲ ಮನಸ್ಸನ್ನು ಅರಿಯುವ ರೀತಿಯಿರಬಹುದು

ನಸೀಬಿದ್ದರೆ ಅದು ಅನಾದಿಗೂ ಕರೆದೊಯ್ಯಬಹುದು

 

ಪ್ರಶ್ನೆ ಅದಲ್ಲ, ಅರಿತರೆ ಅದರ ನಿಗೂಢತೆ ಉಳಿದೀತೆ!

ವಿಸ್ಮಯವಿಲ್ಲದ ಸಂಜೆಗಳಲ್ಲಿ ಚಂದ್ರನೂ

ಸಮುದ್ರ ಹಾರಿಕೊಳ್ಳಲಿಕ್ಕಿಲ್ಲವೇ?

ಬೆಳ್ಳಕ್ಕಿಗಳು ಮಾಲೆಯಿಂದ ಕಳಚಿ ಚಲ್ಲಾಪಿಲ್ಲಿ ಆಗಲಿಕ್ಕಿಲ್ಲವೇ?

ಪ್ರೇಮಿಗಳು ಪ್ರಲಾಪಿಸುವ ಸಾಗರದಂಥ ಕಣ್ಣುಳ್ಳವಳೇ

ಎಂಬ ಸನಾತನ ಸಾಲನ್ನು ಯಾಕೆ ಹಿಚುಕುವಿರಿ, ಪಾಪ!

 

ಬಿಡಿ ಕಡಲಿಗೊಂದಿಷ್ಟು ನಿಗೂಢತೆ ಹಾಗೇ ಇರಲಿ, ಬದುಕಿಗೂ!

ಕೈಕೊಟ್ಟು ಹೋದಳು ನಿಷ್ಕಾರಣ ಎಂದು ವಿರಹಮುಖಿಯಾಗದಿರಿ

ಮತ್ತೆ ಕವಿಯಾಗಿರಿ ಹೊಸ ವರ್ಷಕ್ಕಾದರೂ!

ಹೇಗೂ ಈ ಸಲ ಭರಪೂರು ಮಳೆಯಾಗಿದೆ

ಅವಳೊಂದು ಕಡಲು ಎಂದುಕೊಳ್ಳಿ, ಅಷ್ಟೇ!

ನಿಮ್ಮ ಜೀವ ಉಳಿಯುತ್ತದೆ,

ಪ್ರೇಮದ ಸಾವಿನ ನಿಗೂಢತೆಯೂ!

‍ಲೇಖಕರು avadhi

6 January, 2020

4 Comments

  1. T S SHRAVANA KUMARI

    ಚೆನ್ನಾಗಿದೆ

    • ರಾಜೀವ ನಾಯಕ

      ಧನ್ಯವಾದಗಳು ಮ್ಯಾಡಂ..ಅವಧಿಯ ಪ್ರತಿ ಲೇಖನವನ್ನು ಓದಿ ಪ್ರತಿಕ್ರಿಯಿಸುವ ನಿಮ್ಮ ಪ್ರೀತಿಗೆ ಶರಣು

  2. Sarojini Padasalgi

    ನಿಜ ನೀವು ಹೇಳುವ ಹಾಗೆ ಕಡಲ ನಿಗೂಢತೆ ಹಾಗೇ ಇರಲಿ.ಅದರಂತರಾಳದ ಮೊರೆತ ಒಂದು ಒಡೆಯಲಾಗದ ಒಗಟು ಆಗೇ ಉಳಿಯಲಿ.ಆಗಲೇ ಅದನ್ನು ಬಾಳು ಎನ್ನಬಹುದು, ಅಂತರಾಳದಾಳ ಸಿಗದ ಅವಳ ಮನ ಎನ್ನಬಹುದು, ಅಲ್ಲೊಂದು ಕಾವ್ಯ ಉಕ್ಕಿದೆ ಎನ್ನಬಹುದು.ಅಲ್ವಾ?ಕಡಲಿನ ಚೆಲುವು ಅದರ ನಿಗೂಢತೆ ಯಲ್ಲೇ. ತುಂಬ ಇಷ್ಟವಾಯ್ತು ಕವನ.

    • ರಾಜೀವ ನಾಯಕ

      ತುಂಬಾ ಥ್ಯಾಂಕ್ಸ್ ಸರೋಜಿನಿ ಅವರೇ…ಕವಿಯ ಆಶಯ ಮತ್ತು ಕವನದ ನಿಗೂಢತೆಗೆ ಸ್ಪಂದಿಸಿದ ನಿಮ್ಮ ಸೂಕ್ಷ್ಮತೆಗೆ ವಂದನೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading