ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಂಬಳಿ ಒಳಗೆ ಎರಡು ಕೈಗಳ ಮಿಲನ..

***
ಸ್ಪೂರ್ತಿ ಗಿರೀಶ್

 

ಮುಂಗಾಲ
ನಾನು ಮಳೆಯನ್ನು ನೋಡಿದ್ದೆ
ಮಕ್ಕಳೆ
ಅದು ಆಕಾಶದಿಂದ ಧಾರೆಯಾಗಿ ಸುರಿಯುತ್ತಿತ್ತು
ಮತ್ತದು
ಈ ಖಾಲಿಬಿದ್ದ ಕೊಳ್ಳಗಳಲ್ಲಿ
ನದಿಯಾಗಿ ತುಂಬಿ
ಹರಿಯುತ್ತಿತ್ತು

ನಾನು ಅನ್ನ ನೋಡಿದ್ದೆ
ಮಕ್ಕಳೆ
ಭತ್ತದ ಪೈರು ಬಂಗಾರದ ಹರಳುಗಳಿಂದ
ತೂಗುತ್ತಿತ್ತು
ಮತ್ತದು ಅಚ್ಚ ಬಿಳಿಯಾಗಿ
ಬಹಳ ಮೃದುವಾಗಿ ಬೆಂಕಿಯಲ್ಲಿ ಬೆಂದು
ನಾಲಿಗೆಯಲ್ಲಿ ಕರಗುತ್ತಿತ್ತು

ಮಕ್ಕಳೆ
ನಾನು ಸೇಬು, ದ್ರಾಕ್ಷಿ, ಕಲ್ಲಂಗಡಿ, ಕರಬೂಜಗಳು
ಬೆಳೆದು ತಿನ್ನುತ್ತಿದ್ದ
ಕಾಲದಲ್ಲಿ ವಾಸವಾಗಿದ್ದೆ
ನಾನು ಮುಟ್ಟಿದ್ದೇನೆ
ಮತ್ತವುಗಳ ತಿಂದಿದ್ದೇನೆ
ಅವು ಬಹಳ ರುಚಿಯಾಗಿರುತ್ತಿದ್ದವು

ನೀವು ನೋಡುವ ಚಿತ್ರಗಳೆಲ್ಲ
ಜೀವಂತವಾಗಿದ್ದವು ಮಕ್ಕಳೆ
ಪಶುಗಳು ಓಡುತ್ತಾ
ಪಕ್ಷಿಗಳು ಹಾರುತ್ತಾ
ಚಿಟ್ಟೆಗಳು ಬಣ್ಣದಿಂದ ನಳನಳಿಸುತ್ತಿದ್ದವು
ಮರಗಳಲ್ಲಿ ಹಸಿರು ಎಲೆಗಳಿದ್ದವು
ಎಂದರೆ ನೀವು ನಂಬುತ್ತೀರಾ

ಮಕ್ಕಳೆ ನನಗೆ ಕಾಲು
ಕೈಗಳು ಕಣ್ಣು ಇದ್ದವು
ನಾನು ನಡೆಯುತ್ತಿದ್ದೆ
ನೋಡುತ್ತಿದ್ದೆ
ಕೇಳುತ್ತಿದ್ದೆ

ಪುಟ್ಟ ಉಂಡೆಗಳಂತೆ
ಚಲಿಸಲಾರದ ಮಕ್ಕಳೆ
ನೀವು ಇದೆಲ್ಲ ನಂಬುತ್ತೀರಾ?

ಚಳಿಗಾಲ

೧.
ಇನ್ನೇನು ಮುಗಿದು ಹೋಗಲಿದೆ
ಕಂಬಳಿ ಒಳಗೆ
ಎರಡು ಕೈಗಳ ಮಿಲನ

೨.
ಚಳಿಗೆ ಚಂದ್ರ
ನಕ್ಷತ್ರಗಳಿಂದ ಹೊಲೆದ ಕಂಬಳಿ
ಹೊದ್ದು ಮಲಗಿದ್ದಾನೆ
ಈ ರಾತ್ರಿ
ಕಪ್ಪು ಕೊಳದಂತೆ ಹೆಪ್ಪುಗಟ್ಟಿಹೋಗಿದೆ

೩.
ಹಳಿಮೇಲೆ
ಚಲಿಸುವ ರೈಲಿಗೆ ಗಾಲಿಗಳಿಲ್ಲ
ನಿಶ್ಚಲವಾಗಿದೆ ಕಾಲ

೪.
ಗೆಳೆಯ ಬರದೆಯೂ ಊರಿಗೆ
ಚಳಿಗಾಲ
ಕಳೆದು ಹೋಗುತ್ತಿದೆ

೫.
ಎಲೆಗಳು ಅದುರದೆ
ಗಾಳಿಯೂ ಕದಡದೆ
ಹೆಪ್ಪುಗಟ್ಟಿದೆ ಬೆಳಗು ಮೊಸರಿನಂತೆ

‍ಲೇಖಕರು admin

10 January, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading