
Just Shafi
ಕಂಬಳದ ಕೋಣದ
ಬಾಲ ಮುರಿಯುವುದನ್ನು
ಹಿಂಬಾಗಕ್ಕೆ ಮೆಣಸು ಹಚ್ಚುವುದನ್ನೂ,
ನಾವೆಲ್ಲ ವಿರೋಧಿಸುವಾಗ
ಕಂಬದ ಮರೆಯಲ್ಲಿ
ಎದೆ ನೋಯಿಸಿಕೊಂಡ
ಆ ಗುತ್ತಿನವರ ಕೆಲಸದ ಹುಡುಗಿ
ಅಕ್ಷರ ಕಲಿಯುತ್ತಿದ್ದಳು.
ಗತ್ತು ಗೈರತ್ತಿನಲ್ಲಿ ಲಂಗೋಟಿ ಕಟ್ಟಿ
ಪೈಲಟ್ ನ ಕಿರೀಟ ಹೊತ್ತು ನಿಂತಿದ್ದ
ತನಿಯನ ಮಗಳೂ ಎಷ್ಟು ಸಾರಿ
ಆ ಕೋಣಗಳ ಕಣ್ಣಿನ ಹುಸಿ ಅಭಿಮಾನ
ಕಣ್ಣ ಹನಿಯಾಗಿ ಹರಿಯುವುದನ್ನು
ಮಡಿಲಿಗೆ ಒರಗಿಸಿಕೊಂಡು ತಲೆನೇವರಿಸಿದ್ದಳೋ.
ರಕ್ಷಣೆಯ ‘ಪೇಟ’ ಹೊತ್ತು
ಮತ್ತೇನೂ ಧರಿಸದೆ ಬೆತ್ತಲು ನಡೆಯುವವರು
ಲಂಗ ದಾವಣಿ ಜುಮುಕಿ ಒಂದಿಷ್ಟು ಕಾಡು ಹೂವು ಮುಡಿದ
ಹದಿನೈದರವಳನ್ನು ಬೆತ್ತಲು ಎಂದು ಬೆರಳು ತೋರಿಸುವಾಗ
ಗುರಿಯ ದಾಟಿದ ನಂತರವೂ ನುಗ್ಗುವ ಕೋಣಗಳ
ಆಕ್ರೋಶವೆಷ್ಟಿರಬಹುದು ??
ತನಿಯನ ಮನೆಗೇ ಮೆಡಲು ತಲುಪಿಸಿಬಿಡುವಷ್ಟು ?
ಗುತ್ತಿನವನ ಲುಂಗಿ ಕೊಂಬಿಗೆ ಸಿಕ್ಕಿಸಿಕೊಳ್ಳುವಷ್ಟು ?
‘ಪೇಟ’ ದವರ ಕಣ್ಣಿಗೆ ಕೆಸರು ಮುಕ್ಕಿಸಿ
ಕಂಬದ ಮರೆಯಲ್ಲಿ ನೋವುಂಡ ಸಣ್ಣವಳ
ಎದೆಯ ಗಾಯಗಳಿಗೆ ವಿಜಯದ ಹರ್ಷದ ಮಳೆಗರೆಯುವಷ್ಟು ??
ಅವಳು ಕಲಿಯುತ್ತಿರುವ ಅಕ್ಷರ
ಎಲ್ಲ ಚರ್ಚೆಗಳಿಗೆ ಕಡೆಯ ತೀರ್ಪು ಬರೆಯುವ
ಕೈಗಳಾಗಿ ಮಾರ್ಪಡಿಸುವಷ್ಟು …???





0 Comments