ಕಂಗ್ರಾಟ್ಸ್ ಗುಲ್ಜಾರ್ ಸಾಬ್..

ಬಿ ಎಂ ಹನೀಫ್

**

ಗುಲ್ಜಾರ್ ಅವರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಪ್ರೀತಿ, ವಿರಹ, ನೋವು, ನಲಿವುಗಳ ಸಮ್ಮಿಶ್ರದ ಅವರ ಉರ್ದು ಕವಿತೆಗಳಿಗೆ ಗಜಲ್ ಗಳ ಪರಿಮಳವೊಂದು ಸದಾ ಅಂಟಿಕೊಂಡಿರುತ್ತದೆ. ಅವರ ಕವಿತೆಗಳನ್ನು ಬಿಡಿ ಬಿಡಿಯಾಗಿ ಓದುವ, ಅವರ ವಿಡಿಯೊ ಮಾತುಗಳನ್ನು ಕೇಳುವ ನನ್ನಲ್ಲಿ ಅವರನ್ನು ಬೆಂಗಳೂರಲ್ಲಿ ಎರಡು ಬಾರಿ ಭೆಟ್ಟಿಯಾದ ಮಧುರ ನೆನಪುಗಳಿವೆ.

ಒಮ್ಮೆ ಕನ್ನಿಂಗ್ ಹ್ಯಾಂ ರಸ್ತೆಯ ರೆಸ್ಟೋರೆಂಟ್ ಒಂದರಲ್ಲಿ ಸಂಜೆಯ ಕಾಫಿಯ ವೇಳೆಗೆ ನಡೆದ ಭೇಟಿ. PRO ಹೆಣ್ಣುಮಗಳೊಬ್ಬಳು ಸಣ್ಣ ಸಂದರ್ಶನದ ವ್ಯವಸ್ಥೆ ಮಾಡಿದ್ದರು. ಹದಿನೈದು ನಿಮಿಷ ಕಾಫಿ ಹೀರುತ್ತಾ ಮಾತನಾಡಿದೆವು. ಯಾವ ಹಮ್ಮು ಬಿಮ್ಮು ಇಲ್ಲದ ಸರಳ ವ್ಯಕ್ತಿತ್ವ ಅವರದ್ದು.

ಕೊನೆಯಲ್ಲಿ ಸ್ವಲ್ಪ ಅಳುಕುತ್ತಾ ಒಂದು ತುಂಟ ಪ್ರಶ್ನೆ ಕೇಳಿದ್ದೆ. “ರಾಖಿ ಅವರ ಬಗ್ಗೆ ಏನಾದರೂ ಹೇಳಿ..” ಅಂತ! ಪ್ರೀತಿಸಿ ಮದುವೆಯಾಗಿದ್ದ ರಾಖಿ ಅವರಿಂದ ದೂರವಾಗಿ ಅದಾಗಲೇ ದಶಕಗಳು ಉರುಳಿದ್ದವು. ನನ್ನ ಕಡೆಗೆ ಒಂದು ಸಣ್ಣ ಮುಗುಳ್ನಗು ಬೀರಿದ ಅವರು- “ಆಕೆ ನನ್ನ ಜೀವನದ ಒಂದು ಸುಂದರ ಸಣ್ಣ ಕವಿತೆ” ಎಂದರು.

ಆಮೇಲೆ ಮಾತು ಮುಗಿಸಿ ಏಳುವಾಗ ಅವರೊಂದು ಪ್ರಶ್ನೆ ಒಗೆದರು! “ಅವರಿಗೊಂದು ಸೀರೆ ತಗೊಬೇಕಿತ್ತು. ಇಲ್ಲಿ ಬೆಂಗಳೂರಲ್ಲಿ ಚಂದದ ಕಾಟನ್ ಸೀರೆ ಎಲ್ಲಿ ಸಿಗುತ್ತೆ” ಅಂತ. ನನಗೆ ತಬ್ಬಿಬ್ಬು. ನಾನು ಜೀವನದಲ್ಲಿ ಯಾವತ್ತೂ ಸೀರೆ ಖರೀದಿ ಮಾಡಿದವನಲ್ಲ. ಗೊಂದಲದಿಂದ PRO ಕಡೆಗೆ ನೋಡಿದೆ. ತಕ್ಷಣ ಆಕೆ ನೆರವಿಗೆ ಬಂದು ಎರಡು ಮೂರು ಮಳಿಗೆಯ ಹೆಸರು ಹೇಳಿದರು.

ಇನ್ನೊಮ್ಮೆ ಗುಲ್ಜಾರ್ ಅವರನ್ನು ಭೇಟಿಯಾದದ್ದು ಲೀಲಾ ಪ್ಯಾಲೇಸ್ ನಲ್ಲಿ. ಅದೊಂದು ಖಾಸಗಿ ಕಂಪೆನಿಯ ಔತಣಕೂಟ. ನಾನು ಹೋದಾಗ ಎಂಟೂವರೆಯಾಗಿತ್ತು. ಸ್ವಲ್ಪ ಮಂದ ಬೆಳಕಿನಲ್ಲಿ ದೂರದ ಟೇಬಲ್ ಒಂದರಲ್ಲಿ ಗುಲ್ಜಾರ್ ಮತ್ತು ಅವರ ಇನ್ನೊಬ್ಬ ಸ್ನೇಹಿತರು ಕುಳಿತಿದ್ದರು. ಬಳಿಗೆ ಹೋಗಿ ವಿಶ್ ಮಾಡಿ ಪರಿಚಯ ನೆನಪಿಸಿದೆ. ಕುಳಿತುಕೊಳ್ಳಲು ಹೇಳಿದರು.

ಅದು ಗುಜರಾತ್ ಗಲಭೆಯ ಬಳಿಕದ ದಿನಗಳು. ಜ್ಯೂಸ್ ಹೀರುತ್ತಾ ಅವರ ಜೊತೆ ಮಾತು ಆ ಘಟನೆಯ ಕಡೆಗೇ ತೆರಳಿತು. ಅವರು ತಣ್ಣಗೆ ಕುಳಿತಿದ್ದರು. ಏನೂ ಪ್ರತಿಕ್ರಿಯೆ ಕೊಡಲಿಲ್ಲ. ಏನನ್ನೋ ಹೇಳಲು ಬಯಸಿದರು. ಆದರೆ ಮಾತು ಹೊರಳಿಸಿ, ಕಾಲಘಟ್ಟದ ಮಹಿಮೆ ಎಂದು ವಿಷಾದದ ಧ್ವನಿ ಹೊರಡಿಸಿದರು. ಅವತ್ತೂ ಹದಿನೈದು ನಿಮಿಷ ಜೊತೆಗಿದ್ದೆ. ಬಳಿಕ ನನ್ನ ಸ್ನೇಹಿತರಿದ್ದ ಟೇಬಲ್ ಗೆ ಮರಳಿದೆ.

ರಾಖಿ ಮತ್ತು ಗುಲ್ಜಾರ್ ಅವರದ್ದು “ಲವ್ ಅಟ್ ಫಸ್ಟ್ ಸೈಟ್”. ಇಬ್ಬರೂ ಪ್ರೇಮಿಸಿ ಮದುವೆಯಾದದ್ದು. ಮದುವೆಯ ಬಳಿಕ ಸಿನಿಮಾಗಳಲ್ಲಿ ನಟಿಸಬಾರದು ಎಂದು ರಾಖಿಯವರಿಂದ ಗುಲ್ಜಾರ್ ಮಾತು ಪಡೆದಿದ್ದರಂತೆ. ಆದರೆ ಒಂದೆರಡು ವರ್ಷ ಮಾತ್ರ ಈ ಮದುವೆ ಬಾಳಿಕೆ ಬಂದದ್ದು. ಮೇಘನಾ ಹುಟ್ಟಿ ಸ್ವಲ್ಪ ಸಮಯದ ಬಳಿಕ ರಾಖಿ ಅವರು “ಆಯ್ದ ಸಿನಿಮಾಗಳಲ್ಲಿ ನಟಿಸುತ್ತೇನೆ” ಎಂದರೆ ಗುಲ್ಜಾರ್ ಒಪ್ಪಲಿಲ್ಲವಂತೆ. ಈ ವಿಷಯದಲ್ಲೇ ಮನಸ್ತಾಪವಾಗಿ ಇಬ್ಬರೂ ಬೇರೆ ಬೇರೆಯಾದರು ಎನ್ನುವುದು ಸುದ್ದಿ.

ಗುಲ್ಜಾರ್ ಅವರ ಮೂಲ ಹೆಸರು ಸಂಪೂರಣ್ ಕಾಲ್ರಾ ಎನ್ನುವುದು ಇವತ್ತು ಮರೆತೇ ಹೋಗಿದೆ. ಉರ್ದು ಕಾವ್ಯಕ್ಕೆ ನೀಡಿದ ಕೊಡುಗೆಗಾಗಿ ಗುಲ್ಜಾರ್ ಅವರಿಗೆ ಈಗ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ.

ಹಾಗೆ ನೋಡಿದರೆ ಪ್ರಶಸ್ತಿಗಳು ಗುಲ್ಜಾರ್ ಗೆ ಹೊಸತೇನಲ್ಲ. ‘ಸ್ಲಂಡಾಗ್ ಮಿಲಿಯನೇರ್’ ಸಿನಿಮಾದ ‘ಜೈ ಹೋ’ ಹಾಡಿನ ಸಾಹಿತ್ಯಕ್ಕೆ ಪಡೆದ ಗ್ರಾಮ್ಮಿ ಪ್ರಶಸ್ತಿ, ಕೇಂದ್ರದ ಪದ್ಮಭೂಷಣ ಮತ್ತು ಸಿನಿಮಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಎಲ್ಲವೂ ಅವರನ್ನು ಹುಡುಕಿಕೊಂಡು ಬಂದಿವೆ.

ಗುಲ್ಜಾರ್ ಅವರಿಗೀಗ 89 ವರ್ಷ. ಈಗಲೂ ಅವರು ಕವಿತೆಗಳನ್ನು ಬರೆಯುತ್ತಾರೆ. ಹಾಗೆಯೇ ಅವರ ಹಳೆಯ ಕವಿತೆಗಳು ಸದಾ ಹಸಿರಾಗಿದ್ದು ಲಕ್ಷಾಂತರ ಕಾವ್ಯಪ್ರಿಯರನ್ನು ಕಾಡುತ್ತವೆ.

ಬದುಕಿನ ಕುರಿತು ಅವರದೊಂದು ಗಝಲ್ ತುಣುಕು ಈಗಲೂ ನೆನಪಿನಲ್ಲಿದೆ:

ನನ್ನನ್ನು ಸಾಬೀತು ಪಡಿಸುತ್ತಾ ಸಾಕಾಗಿ ಹೋಗಿದೆ ಒಳ್ಳೆಯದಾಯಿತು, ನೀನೇ ನನ್ನನ್ನು ತಪ್ಪಾಗಿ ಭಾವಿಸಿದೆ!

ಕಂಗ್ರಾಟ್ಸ್ ಗುಲ್ಜಾರ್ ಸಾಬ್.

‍ಲೇಖಕರು avadhi

February 17, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: