ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಓದುಗ ಬರೆಸಿದ ಕತೆ

ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳುಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು.

ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ.

ಬೆಂಗಳೂರಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿರುವ ಇವರ ಟೈಪಿಸ್ಟ್ ತಿರಸ್ಕರಿಸಿದ ಕಥೆಯನ್ನು ಬಹುರೂಪಿಪ್ರಕಟಿಸಿದೆ. ಇವರು ಇಂಗ್ಲಿಷ್ ಕುರಿತೇ ವಿಜಯ ಕರ್ನಾಟಕದಲ್ಲಿ ಬರೆಯುವ ಅಂಕಣ ಅತ್ಯಂತ ಜನಪ್ರಿಯ 

ಪ್ರತಿ ಬುಧವಾರದ ‘ಮಾವಲಿ ರಿಟರ್ನ್ಸ್’ನಲ್ಲಿ ಅವರುಂಟು ನೀವುಂಟು.

ಡಿಯರ್ ಕತೆಗಾರ,

ನಿನ್ನ ಕತೆಗಳಲ್ಲಿ ಅದೇನೋ ಚಮತ್ಕಾರವಿದೆ. ನಾವು ಊಹಿಸಿದ್ದೆಲ್ಲವನ್ನೂ ನೀನು ಬುಡಮೇಲು ಮಾಡುತ್ತೀಯ. ಅತೀ ಸಣ್ಣ ಕತೆಗಳಲ್ಲಿಯೂ ದೊಡ್ಡ ದೊಡ್ಡ ವಿದ್ಯಮಾನಗಳು ಘಟಿಸಿರುವಂತೆ ಭಾಸವಾಗುವ ಹಾಗೆ ಕತೆ ಹೆಣೆಯುತ್ತೀಯ. ಬಹುತೇಕ ಕತೆಗಳಲ್ಲಿ ‘ಹೀಗಾಗಲು ಕಾರಣವೇನು ?’ ಎಂದು ಯೋಚಿಸುವ ಹಾಗೆ ಮಾಡಿ ಏನೂ ಸ್ಪಷ್ಟವಾಗಿ ಹೇಳದೆ ಏನೋ ಬೃಹತ್ ಅರ್ಥವಿದೆಯೇನೋ ಎಂಬಂತೆ ಮಾಯ ಮಾಡಿಬಿಡುತ್ತೀಯ.

ಈ ಕಾರಣಕ್ಕೆ ನಿನ್ನ ಮೇಲೆ ಸಿಟ್ಟು ಬರುತ್ತದೆ . ಆದರೆ ಈ ಸಿಟ್ಟಿನ ಕಾರಣಕ್ಕಾಗಿಯೇ ನಿನ್ನ ಕತೆಗಳನ್ನು ನಾನು ಓದಿಯೇ ತೀರುತ್ತೇನೆ. You can’t be neglected. ನಿನ್ನ ಓದುಗನಾಗಿ ಈ ಪತ್ರದ ಮೂಲಕ ನಾನೊಂದು ಸವಾಲು ಹಾಕುತ್ತೇನೆ.

ನೀನು ಹೀಗೆ ಏನೋ ಒಂದು ವಿಸ್ಮಯ ಅಥವಾ ಹಠಾತ್ತನೆ ಬೆರಗು ನೀಡುವ ಅಂಶಗಳಿಲ್ಲದ ಒಂದಾದರೂ ಕತೆಯನ್ನು ಬರೆಯಬೇಕು. ಆ ಕತೆಯಲ್ಲಿ‌ ಏನೂ ಮಹತ್ವದ್ದು ಘಟಿಸಬಾರದು. ಏಕೆಂದರೆ ಮನುಷ್ಯರ ಜೀವನ ದಿನನಿತ್ಯ ಅನಿರೀಕ್ಷಿತಗಳಿಂದ ತುಂಬಿಲ್ಲ. ಅದು ತುಂಬಾ ಸಾಮಾನ್ಯವಾಗಿ , ಸಹಜವಾಗಿ‌ ಆದರೂ ಅಚ್ಚರಿಗಳಿಂದ ಕೂಡಿರುತ್ತದೆ.

ಅಂತ ಸಾಮಾನ್ಯ ಅಚ್ಚರಿಗಳ ಕತೆಗಳನ್ನು ನಿನ್ನಿಂದ ನಾನು ನಿರೀಕ್ಷಿಸುತ್ತೇನೆ. ಇದು ಸಾಧ್ಯವೆ ? ನಿನ್ನಿಂದ ಅಂಥದ್ದೊಂದು ಕತೆಯನ್ನು ಶೀಘ್ರದಲ್ಲೇ ನಿರೀಕ್ಷಿಸುತ್ತೇನೆ.‌

ಇತಿ ನಿನ್ನ, ಓದುಗ

ಎಲ್ಲಿಂದ ಬಂದಿತ್ತೆಂಬ ವಿಳಾಸವಿಲ್ಲದ ಈ ಅನಾಮಧೇಯ ಪತ್ರ ಕತೆಗಾರನಿಗೆ ಸವಾಲೊಡ್ಡುವುದರ ಜೊತೆಗೆ ಅವಮಾನಕರವಾಗಿಯೂ ಇತ್ತೆನ್ನಬಹುದು. ಆದರೆ ಹೀಗೆಲ್ಲ ಬರೆದಿರುವ ಓದುಗ ತನ್ನೆಲ್ಲ ಕತೆಗಳನ್ನು ಓದಿರುವುದು ಸತ್ಯವಾಗಿರುವುದರಿಂದ ಅವನ ಈ ಸವಾಲನ್ನು ಸ್ವೀಕರಿಸಿ ಒಂದಷ್ಟು ಏನೂ ಘಟಿಸದ ಪ್ರಸಂಗಗಳ ಕತೆಗಳನ್ನು ಆ ಓದುಗನಿಗೆ ಉತ್ತರವಾಗಿ ಬರೆದು ಕಳುಹಿಸಲು ನಿರ್ಧರಿಸಿದನು. 

ಪ್ರಿಯ ಓದುಗ, ನನ್ನ ಈ ಪ್ರಯತ್ನ ನಿನಗೆ ಇಷ್ಟವಾಗಬಹುದು : 

1.   ಅಮ್ಯೂಸ್ ಮೆಂಟ್ ಪಾರ್ಕ್ ಒಂದರಲ್ಲಿ ವಿಹರಿಸುತ್ತಿದ್ದ ದಂಪತಿಗಳು ಗೇಮ್ ಒಂದರಲ್ಲಿ ತಾವು ಗೆದ್ದ ಗಿಫ್ಟ್ ಕೂಪನ್ ಒಡೆದು ನೋಡಿದಾಗ ಅದರಲ್ಲಿ ಹೀಗೆ ಬರೆಯಲಾಗಿತ್ತು : ‘ನಿನ್ನ ಜೀವಕ್ಕೆ ಅಪಾಯವಿದೆ. ಈ ಬಗ್ಗೆ ಯಾರಿಗೂ ಏನೂ ತಿಳಿಸಬಾರದು. ಈ ಕೂಡಲೇ ನೀನು ಈ ನಗರವನ್ನು ಬಿಟ್ಟು ಹೋಗಬೇಕು. ಮತ್ತೆ ನೆನಪಿಸುತ್ತೇವೆ; ನೀವು ಈ ಬಗ್ಗೆ ಯಾರಿಗೂ ಏನೂ ತಿಳಿಸಬಾರದು’ ಎಂದು ಓದಿದವ ತನ್ನ ಹೆಂಡತಿಗೂ ಇದನ್ನು ಹೇಳಲಾಗದೆ … 

2.  ತನ್ನ ಬಾಯ್ ಫ್ರೆಂಡ್ ನ ಮೆಚ್ಚಿಸಿ ಅವನಿಂದ ಇನ್ನಷ್ಟು ಪ್ರೀತಿಸಿಕೊಳ್ಳಬೇಕೆಂಬ ಹಂಬಲದಿಂದ ಹುಡುಗಿಯೊಬ್ಬಳು ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಂಡಳು. ಅವಳ ನಿರೀಕ್ಷೆಯಂತೆ ಅವನು ಅವಳನ್ನು ಅತಿಯಾಗಿ ಪ್ರೀತಿಸತೊಡಗಿದ. ಆನಂತರ ಅವನು ಕೇವಲ ತನ್ನ ಮುಖದ ಚಹರೆಗಾಗಿಯೇ ತನನ್ನು ಪ್ರೀತಿಸುತ್ತಾನೆ ಎಂದು ಯೋಚಿಸಿ ನೊಂದಕೊಳ್ಳಲಾರಂಭಿಸಿದಳು …

3.  ಮಾರ್ಕೆಟ್ ನಿಂದ ಹೊರಟ ಹೆಂಗಸೊಬ್ಬಳನ್ನು ಯಾರೋ ಒಬ್ಬ ಫಾಲೋ ಮಾಡುತ್ತ ಹೋದ. ಅವಳನ್ನು ಬಿಡದೆ ಫಾಲೋ ಮಾಡಿದ ಆತ, ಅವಳು ಮನೆ ತಲುಪುವವರೆಗೂ ಬಿಡಲಿಲ್ಲ. ಅವಳು ಮನೆಯ ಒಳಗೆ ಹೋದ ನಂತರ ಅವನು ಅಲ್ಲಿಂದ ಹೊರಟ. ಆಮೇಲೆ ಅವಳು ಮನೆಯಿಂದ ಹೊರ ಬಂದು ಅವನನ್ನು ಫಾಲೋ ಮಾಡಿಕೊಂಡು ಹೋದಳು …

4. ರಾತ್ರಿಯಲ್ಲಿ ಧೋ ಎಂದು ಸುರಿಯುತ್ತಿರುವ ಮಳೆಯಲ್ಲಿ ಸಿಲುಕಿದ ಮಕ್ಕಳೊಂದಿಗೆ ಕುಟುಂಬವೊಂದನ್ನು ಮನೆ ಒಳಗೆ ಕರೆತಂದು ಊಟೋಪಚರಿಸಿ ಮಲಗಿಸಿದ ಮನೆಯ ಮಾಲಿಕ. ಬೆಳಗಾದಾಗ ಆ ಕುಟುಂಬ ಮನೆಯಿಂದ ಹೊರ ಹೋಗಲು ಸಿದ್ಧವಿರಲಿಲ್ಲ … 

5.  ಬಹಳ ವರ್ಷಗಳ ಕಾಲ ಉದ್ಯೋಗದಲ್ಲಿದ್ದ ವ್ಯಕ್ತಿಯೋರ್ವ ಕುಟುಂಬದ ಜೊತೆ ಕಾಲ ಕಳೆಯುವ ಉದ್ದೇಶದಿಂದ ಕೆಲಸಕ್ಕೆ ರಾಜೀನಾಮೆ ಕೊಟ್ಟು ಬಂದಿದ್ದ.‌ ಬೆಳಗ್ಗೆ ನಿಧಾನಕ್ಕೆ ಹಾಸಿಗೆಯಿಂದೆದ್ದು ಬಂದು ನೋಡಿದರೆ ಎಂದಿನಂತೆ ಅವನ ಹೆಂಡತಿ ಊಟದ ಬಾಕ್ಸ್ ತಯಾರು ಮಾಡಿಟ್ಟದ್ದಳು. ಇದನ್ನು ಕಂಡ ಆತ ತುಂಬಾ ವಿಚಲಿತನಾದ …

6. ಟ್ರಾಫಿಕ್ ಸಿಗ್ನಲ್ ನಲ್ಲಿ ತನ್ನ ಕಾರಿಗೆ ಬೈಕು ತಾಗಿಸಿದವನ ಜೊತೆ ಚೆನ್ನಾಗಿ ಜಗಳ ಆಡಿದವ ಹೋಟೆಲ್ ನಲ್ಲಿ ಊಟ ತಂದಿಟ್ಟ ವೇಟರ್ ನ ಮುಖ ನೋಡಿದಾಗ ಕಂಗಾಲಾದ.‌ ದುಬಾರಿ ಕಾರಿನ ಮೇಲೆ ಆದ ಸಣ್ಣ ಡ್ಯಾಮೇಜ್ ಗಾಗಿ ಅವನಿಗೆ ಎರಡು ಬಾರಿಸಿದ್ದು ನೆನಪಾಯಿತು. ಅದೇ ಸಿಟ್ಟಿನಿಂದ ಅವನು ತನಗೇನಾದರೂ ಊಟದಲ್ಲಿ ವಿಷ ಹಾಕಿರಬಹುದೆ ಎಂದು ಯೋಚಿಸಿ ತಳಮಳಗೊಂಡ.‌ ಮನೆಗೆ ಬಂದು ಮಲಗುವಾಗ ಸಣ್ಣಗೆ ಹೊಟ್ಟೆ ನೋವು ಕಾಣಿಸಿಕೊಂಡಿತು.‌..

7. ಹೊಸದಾಗಿ ಕಾಲೇಜಿಗೆ ಸೇರಿಕೊಂಡ ಹುಡುಗಿಯೊಬ್ಬಳು ತನ್ನ ವಿಶೇಷ ಪ್ರತಿಭೆಯಿಂದ ಸ್ವತಂತ್ರವಾಗಿ ಪ್ರಸಿದ್ಧಿ ಪಡೆಯಬೇಕೆಂದು ಹಂಬಲಿಸಿದ್ದಳು. ತನಗೆ ಪರಿಚಯವಿರುವವರು ಯಾರೂ ಆ ಕಾಲೇಜಿಗೆ ಸೇರಿರಲಾರರು ಎಂಬ ಬಗ್ಗೆ ಬಹಳವಾಗಿ ಮಾಹಿತಿ ಪಡೆದೇ ಆಕೆ ಆ ಕಾಲೇಜು ಸೇರಿಕೊಂಡಿದ್ದಳು.  ಕಾಲೇಜಿನ ಮೊದಲ ದಿನ ಕ್ಯಾಂಪಸ್ ನಲ್ಲಿ ತನ್ನದೇ ಶಾಲೆಯಲ್ಲಿ ಓದಿದ್ದ ಹುಡುಗನೊಬ್ಬನನ್ನು ಕಂಡು ತನ್ನ ಆಸೆ ಈಡೇರಲಾರದು ಎಂದು ಗಲಿಬಿಲಿಗೊಂಡಳು… 

8.  ಮಾರ್ಕೆಟ್ ನ ಕೊನೆಯಲ್ಲಿದ್ದ ಎದರುಬದುರಾದ ಎರಡು ಅಂಗಡಿಗಳ ನಡುವೆ ದಿನಾಲು ಜಗಳ ನಡೆಯುತ್ತಲೇ ಇರುತ್ತಿತ್ತು.‌ ಆ ಜಗಳ ಎಷ್ಟು ಜನಪ್ರಿಯವಾಗಿತ್ತೆಂದರೆ ಅದರ ಬಗ್ಗೆ ಪತ್ರಿಕೆಗಳಲ್ಲೂ ಬಂದಿತ್ತು. ಇಬ್ಬರ ನಡುವೆ ಜಗಳವಾದಾಗಲೆಲ್ಲ ಆ ಹುಡುಗ ತನ್ನ ಅಂಗಡಿಯಲ್ಲಿರುವ ಸೇಬುಗಳನ್ನು ಎದುರಿನ ಅಂಗಡಿಯಲ್ಲಿರುವ ಅವಳತ್ತ ಎಸೆಯುತ್ತಿದ್ದ. ಅವಳೇನು ಸುಮ್ಮನಿರುತ್ತಿರಲಿಲ್ಲ. ಪ್ರತಿಯಾಗಿ ತನ್ನ ಅಂಗಡಿಯಲ್ಲಿದ್ದ ಕಿತ್ತಳೆ  ಹಣ್ಣುಗಳನ್ನು ಅವನತ್ತ ಎಸೆಯುತ್ತಿದ್ದಳು… 

ಇಷ್ಟೆಲ್ಲ ಬರೆದ ಮೇಲೆ ಆ ಕಥೆಗಾರನಿಗೆ  ಓದುಗನ ಪತ್ರದಲ್ಲಿ ವಿಳಾಸವಿಲ್ಲದ್ದು ನೆನಪಾಯಿತು. ಈ ಬಿಡಿ ಘಟನೆಗಳನ್ನು ಓದಿ ತಾನೇ ಕಥೆ ಸೃಷ್ಟಿಸಿಕೊಳ್ಳಬೇಕಿದ್ದ ಓದುಗ ಮತ್ತೆ ಪತ್ರ ಬರೆಯಬಹುದೆ ಎಂದು ಕಾಯುತ್ತಾ ಕುಳಿತ.

11 November, 2020

1 Comment

  1. ಗೀತಾ ಎನ್ ಸ್ವಾಮಿ

    ಅಯ್ಯಪ್ಪ!!ಸಹಜವೆಂದರೆ ಸಹಜ..,. ಓದಿ ಮುಗಿಸಿ ತಲೆಮೇಲೆತ್ತಿದರೆ ಇಲ್ಲಿರುವ ಎಲ್ಲವೂ ಹೊಸಹಾದಿ ಹುಡುಕಿಕೊಂಡು ಮತ್ತೆ ಕಣ್ಣಿಗೆ ಜೋತು ಬಿದ್ದಿವೆ. ಮತ್ತೆ ಮತ್ತೆ ಓದಿಸಿಕೊಳ್ಳುವಂತೆ ಬರೆವ ನಿಮ್ಮ ಬರಹ ನೈಜತೆಯೊಳಗೊಂದು ಅಸಂಗತ ಪ್ರಜ್ಞೆಗೆ ಅಸ್ತಿತ್ವ ಕೊಡಿಸಿ ತೀವ್ರ ಸ್ವರೂಪದ ನಿಗಾ ಉಳಿಸಿಕೊಂಡು ಮತ್ತೆ ಸಹಜವಾಗಿಬಿಡುವ ಚಮತ್ಕಾರ ತರುತ್ತೀರಲ್ಲ ಈ ಕಾರಣಕ್ಕಾಗಿ ಶರಣು ಗುರುವೆ. ಎಲ್ಲ ಚೋಟು ಕಥೆಗಳಲ್ಲು ದೊಡ್ಡದೊಂದಿದೆ ಸರ್.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading