ಹೊಲ, ಮನೆ, ಶಾಲೆಯೊಳಗೆ ಮುಳುಗಿದ ಬಾಲ್ಯ…

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು.

ಹಾಗಾಗಿಯೇ ಅವರಿಗೆ ಕೃಷಿಮಣ್ಣ ಒಡನಾಟರಂಗಭೂಮಿಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ.

ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ ದೊಡ್ಡದು.

‘ಅಲ್ಲೆ ಆ ಕಡೆ ನೋಡಲಾ…’ ಎಂದು ನಿಮಗೆ ತೋರಿಸುತ್ತಿರುವುದು ಅವರ ಊರಿನ ಆತ್ಮವನ್ನು.

ಊರು ನಮಗೆ ಕೊಟ್ಟ ಸವಿ ಕಡಿಮೆಯಲ್ಲ. ಇಂದುವಿನ ಬೆಳಕಿಗೆ ಕಾಯುವ  ಜೊನ್ನವಕ್ಕಿಗಳಂತೆ ನಿತ್ಯವೂ ಒಳಗೆ ಊರು ಬೆಳೆಯುತ್ತಲೇ ಇದೆ. ಇಲ್ಲಿ ಕಂಡ ಬೆಳಕೇ ಅಕ್ಷಿಯಲಿ ಹುಣ್ಣಿಮೆಯ ಕಡೆದಿದ್ದು. ಬೇಕೆನಿಸಿದಾಗ ಹಿಗ್ಗುವ ಬೇಡವಾದಾಗ ಕುಗ್ಗುವ ಬದುಕಿನಲ್ಲಿ ಎಲ್ಲಿಯೂ ನಂಬಿಕೆ ಕಳೆದು ಹೋಗದಂತಾ ತಣ್ಣಗಿನ ಧ್ಯಾನ ಕೊಟ್ಟ ಊರನ್ನು ಏನೆಂದು ಹಾಡಲಿ. ಊರೆಂದ ಮೇಲೆ ಮಕ್ಕಳು ಅರಳಬೇಕು. ಅಕ್ಷರಗಳು ಯಾವ ನೆಲದಲ್ಲಿ ಬೇರು ಬಿಡುತ್ತವೆಯೋ ಅಲ್ಲಿ ಅರಿವಿನ ಹೂಗಳು ಅರಳುತ್ತವೆ.

ನಮ್ಮದು ಒಟ್ಟು ಕುಟುಂಬ. ಐದು ಜನ ಅಣ್ಣತಮ್ಮಂದಿರಿಗೆ ಇಪ್ಪತ್ತೊಂಭತ್ತು ಜನ ಮಕ್ಕಳು. ಹದಿನೇಳು ಜನ ಅಕ್ಕತಂಗಿಯರು. ನನಗೆ ಹದಿನಾರು ಜನ ಅಕ್ಕಂದಿರು, ಹನ್ನೆರಡು ಜನ ಅಣ್ಣಂದಿರು. ಶಿರಾ ತಾಲ್ಲೂಕು ಕೇಂದ್ರಕ್ಕೆ ಒಳಪಡುವ ಎಷ್ಟೊಂದು ಹಳ್ಳಿಗಳಲ್ಲಿ ಶಾಲೆಗಳು ಇರಲಿಲ್ಲ. ನೆರೆಯೂರಿಗೆ ಹೋಗಿ ಕಲಿಯಬೇಕಿತ್ತು.

ನನ್ನ ಅಪ್ಪ ದೊಡ್ಡಪ್ಪಂದಿರು ಕೂಲಿ ಮಠದಲ್ಲಿ ಕಲಿತದ್ದಂತೆ. ಅವರ ಅನುಭವಗಳು ಮರಳಿನ ಜೊತೆಗೆ ಬೆಸೆದುಕೊಂಡಿವೆ. ಆರಂಭದ ಕಲಿಕೆ ದೊಡ್ಡಳ್ಳದ ಮರಳಿನ ಮೇಲೆ ಅಕ್ಕರ ತಿದ್ದಿದ್ದಾಗಿ ಕಲಿಕೆಯ ಸಂದರ್ಭದ ಶಿಕ್ಷೆ ಹಾಗೂ ಕಲಿಯುವ ಉಮೇದುಗಳನ್ನು ಹೇಳುತ್ತಿದ್ದರು. ಸುಮಾರು ನಲವತ್ತರ ದಶಕದಲ್ಲಿ ಊರುಗಳಲ್ಲಿ ಖಾಲಿ ಇರುವ ಮನೆಗಳನ್ನು ಉಚಿತವಾಗಿ ಕಲಿಕೆಗೆ ಬಿಟ್ಟು ಕೊಡೋ ಔದಾರ್ಯವನ್ನು ಮೆಚ್ಚಿ ಹೇಳುತ್ತಿದ್ದರು.

ಹಾಗೆ ನಮ್ಮ ಊರಿನಲ್ಲಿ ಮೊದಲು ಯಜಮಾನ ಗುಡಿಯಪ್ಪ ಎಂಬುವವರ ಖಾಲಿ ಇದ್ದ ಮನೆ ಅಕ್ಷರ ತುಂಬಿಕೊಳ್ಳಲು ಮೊದಲಾಗಿದ್ದು. ನನ್ನ ದೊಡ್ಡ ಅಣ್ಣಂದಿರು, ದೊಡ್ಡ ಅಕ್ಕಂದಿರೆಲ್ಲ ಹೀಗೆ ಕಲಿಕೆಗೆ ಎದುರಾದದ್ದು. ಮಾಳಯ್ಯ ಎನ್ನುವ ಮಾಸ್ತರು ಮೊದಲು ನಮ್ಮ ಊರಿಗೆ ಅಕ್ಷರಗಳ ಜೊತೆಗೆ ಬಂದವರು.

ಆಮೇಲೆ ನನ್ನ ದೊಡ್ಡಪ್ಪ ಕಟ್ಟಿಸಿದ ಮೂರು ಅಂತಸ್ತಿನ ಮನೆಯಲ್ಲಿ ಒಂದು ಗೋಡೌನ್ ಅನ್ನು ಊರಿನೆಲ್ಲ ಮಕ್ಕಳ ಕಲಿಕೆಗೆ ಬಿಟ್ಟು ಕೊಟ್ಟದ್ದು. ಉತ್ತರ ಕರ್ನಾಟಕದ ಶೈವಪಂಥದ ಒಬ್ಬ ಮಾಸ್ತರು ಇಲ್ಲಿಗೆ ಸರ್ಕಾರ ನೇಮಿಸಲ್ಪಟ್ಟು ಬಂದಿದ್ದು. ಬಸವರಾಜು ಎಂಬ ಇವರ ಹೆಸರನ್ನು ಊರಿನವರೆಲ್ಲ ಅಕ್ಕಿತಿಂಬ ಮೇಷ್ಟ್ರು ಎಂಬುದಾಗಿ ಕರೆಯುತ್ತಿದ್ದರಂತೆ.

ನಮ್ಮ ಊರಿನಲ್ಲಿ ಶೈವರು, ವೈಷ್ಣವರು ಯಾರು ಇಲ್ಲ. ಇರುವುದೆಲ್ಲ ಮಾಂಸಭಕ್ತರು. ಸಡಿಲಗೊಳ್ಳದ ಗೊಡ್ಡು ಜಾತಿ ಪ್ರಜ್ಞೆ ಧರಿಸಿದ ಈ ಮೇಷ್ಟ್ರು ತಾವೇ ಅಡಿಗೆ ಮಾಡಿಕೊಳ್ಳುತ್ತಿದ್ದರು. ನಮ್ಮ ಮನೆಗೆ ಹೊಲೆದುಕೊಂಡ ಅಜ್ಜ ತೋಡಿಸಿದ ಕುಡಿಯೋ ನೀರಿನ ಸೇದುವ ಕೂಪವಿದೆ. ಇದರ ಬಡ್ಡೆಗೆ ದೊಡ್ಡ ಕಲ್ಲುಗಳನ್ನು ಇಟ್ಟು ಒಲೆ ಕಟ್ಟಿ ಔಡ್ಲು ಬೇಸಲು ಬಳಸುತ್ತಿದ್ದರು. ಈಗಲು ಈ ಒಲೆ ಹಲವು ನೆನಪುಗಳ ಜೊತೆಗೆ ಅಲ್ಲಿಯೂ ಉರಿಯುತ್ತದೆ; ನನ್ನೊಳಗು ಸುಡದಂತೆ ಹದವಾಗಿ ಉರಿಯುತ್ತದೆ.

ಈ ಒಲೆಯ ಪಾವಕವನ್ನು ಕಸವರಕ್ಕಿಂತಲೂ ಹೆಚ್ಚು ಮೋಹಿಸಲು ನನಗೆ ಸಾಧ್ಯವಾಗಿರುವುದು ಸುಳ್ಳಲ್ಲ. ಏಕೆಂದರೆ ಕಾಳಪ್ಪಳಗಳನ್ನು ದೊಡ್ಡಮ್ಮ ದೊಡ್ಡಪ್ಪಂದಿರು ಸುಟ್ಟು ತಿನ್ನಿಸುತ್ತಿದ್ದರು. ಇದೇ ಒಲೆಯಲ್ಲಿ ಅದೆಷ್ಟು ಪಿಶವನ್ನು ಬೇಯಿಸಿ ಕೊಟ್ಟು ನಮಗೆ ಬಲ ಕೂಡಿದೆಯೋ ಲೆಕ್ಕವಿಲ್ಲ. ಕಾಲಕ್ರಮೇಣ ಇದೇ ಒಲೆ ಬಸವರಾಜ ಮೇಷ್ಟ್ರಿಗೆ ಅಡಿಗೆ ಮಾಡಲು ನೆರವಾಯಿತು. ಊರಿನ ಜನರೆಲ್ಲ ನಮ್ಮ ಮನೆಗಳಲ್ಲಿ ಒಂದೊಂದು ದಿನ ಊಟ ಕೊಡ್ತೇವೆ ಅಡಿಗೆ ಮಾಡ್ಕಬೇಡಿ ಹೇಳುದ್ರು ಈ ಮೇಷ್ಟ್ರು ಯಾರ ಮನೆಯ ಊಟವನ್ನು ಮುಟ್ಟದೆ ಸ್ವತಃ ತಾವೇ ಮಾಡಿಕೊಳ್ಳುತ್ತಿದ್ದರು. ಮಜ್ಜಿಗೆ ಮಾತ್ರ ನಮ್ಮ ಮನೆಯಲ್ಲಿ ಕೇಳೋರು.

ದೊಡ್ಡಮ್ಮ ಅಹಹಾ ನಮ್ಮನೆ ಮಜ್ಗೆ ಕುಡುದ್ರೆ ನಿನ್ ಜಾತಿ ಕೆಡಲ್ವ ಅಂತ ಹೀಯಾಳಿಸಿದರೆ ಅಯ್ಯೋ ತಾಯಿ ಮಜ್ಗೆ ದಾನ ಸುಣ್ ದಾನ ಶಿವ್ ದಾನ ಯಾರ್ ಕೇಳಿರು ಇಲ್ಲ ಅನ್ಬೇಡಿ ಅನ್ನೋ ತನ್ನದೇ ತತ್ವ ಹೇಳ್ತಿದ್ರು ಅಂತ ಹಿರಿಯರು ಈಗಲೂ ನೆನಿತರೆ. ಬರಡಾದ ಜಾತಿ ಮಾತ್ರ ಒಣಗದೆ ನಾರುತ್ತಲೇ ಕ್ರೌರ್ಯವನ್ನು ಜೊತೆಮಾಡಿಕೊಂಡಿದೆ. ಈ ಮೇಷ್ಟ್ರು ಜಾತಿಯನ್ನು ಕಠಿಣವಾಗಿ ಆಚರಿಸುತ್ತಾರೆ ಎನ್ನುವ ಕಾರಣದಿಂದಲೇ ನಮ್ಮೂರಿನ ಜನ ಇವರನ್ನು ತಿಕ್ಲುಮೇಷ್ಟ್ರು ಅಂತಿದ್ರು. ಆದರೆ ಊರಿನೆಲ್ಲ ಮಕ್ಕಳಿಗೂ ಅಕ್ಷರದ ಬಿಸಿಗದಿರನನ್ನು ಒಳಗೆ ಹುಟ್ಟಿಸಿದ ಕಾರಣಕ್ಕೆ ಗೌರವ ಕೊಡದಂತೆ ಉಪೇಕ್ಷಿಸಿಲ್ಲ.

೧೯೮೧-೮೨ ರ ವೇಳೆಗೆ ಸಣ್ಣ ಓಬಳಜ್ಜ ಎನ್ನುವವರು ಜಾಗ ಕೊಟ್ಟು ಸರ್ಕಾರದಿಂದ ಒಂದಿಷ್ಟು ಹಣ ಒದಗಿ ನನ್ನ ಅಪ್ಪ ಮೊದಲು ನನ್ನೂರಿಗೆ ಶಾಲೆ ಕಟ್ಟಿಸಿದರು. ಇದೇ ಶಾಲೆಯಲ್ಲಿ ನಾನು ಪ್ರಾಥಮಿಕ ಶಿಕ್ಷಣ ಕಲಿತದ್ದು. ನಮ್ಮ ಮನೆಯಲ್ಲಿ ಶಾಲೆ ಇದ್ದಾಗ ಎರಡು ವರ್ಷದಿಂದಲೇ ಶಾಲೆಗೆ ಹೋಗಲು ಶುರುವಾಯಿತು.

ಒಂದನೇ ತರಗತಿಗೆ ಸೇರಿದ ಮೇಲೆ ಹೆಚ್ಚು ನೆನಪುಗಳು ಜೊತೆಯಾದವು. ಮಧ್ಯಾಹ್ನ ಊಟದ ಸಮಯದಲ್ಲಿ ಕಟ್ಟೆ ದಂಡೆಗೆ ಏಡಿ ಹಿಡಿಯಲು ಸಂಗ ಕಟ್ಟಿಕೊಂಡು ಹೋದರೆ ಮೂರಕ್ಕೊ ನಾಲ್ಕಕ್ಕೋ ಹಿಂದಿರುಗಿ ಶಾಲೆಗೆ ಬರುತ್ತಿದ್ದೆವು. ಆಗ ವಿಪರೀತ ಆಯ್ತು ಎನಿಸುವಷ್ಟು ಸಜ್ಜನಿಕೆಯ ಲಿಂಗಯ್ಯ ಅಂತ ನನ್ನ ಮೊದಲ ಗುರುಗಳು. ನಮ್ಮ ತಡ ಪ್ರಜ್ಞೆಯ ಚೇಷ್ಟೆ ಇಂಥಾ ನಿಧಾನಸ್ತರನ್ನು ಕೂಡ ಸಿಟ್ಟಿಗೆ ದೂಡ್ತಿತ್ತು.

ಪ್ರತಿದಿನವೂ ಹೇಳಿ ಸಾಕಾಗಿ ದಿನವೂ ಬಾಣಬಗ್ಗಿಸಿ ಬಾಸುಂಡೆ ಬರುವಂತೆ ಬಾರಿಸಿದರು ಮರುದಿನ ಮಧ್ಯಾಹ್ನ ಕಟ್ಟೆದಂಡೆಯ ಏಡಿಗಳಿಗೆ ಜೊತೆಯಾಗ್ತಿದ್ವಿ. ಸ್ವೇಚ್ಛೆಯಿಂದ ಎನಿಸಿದರೂ ನೈಜವಾಗಿ ಬಾಲ್ಯ ಕಳೆದ ನಮಗೆ ಈ ಅನುಭೂತಿಯೇ ಅಪೂರ್ವದ್ದಾಗಿ ಇವತ್ತಿಗೂ ನಿಜಸಂಭ್ರಮ ಕೊಡ್ತಿರೋದು.

ನಾಲ್ಕನೇ ತರಗತಿ ಮುಗಿದ ಮೇಲೆ ಐದನೇ ತರಗತಿಗೆ ಪಕ್ಕದ ಊರು ಚಿನ್ನಯ್ಯನಪಾಳ್ಯಕ್ಕೆ ಹೋಗ್ಬೇಕು. ಈಗಲೂ ಇದೇ ಖಾಯಂ. ನಮ್ಮೂರಿನ ಪಕ್ಕದ ತಾಂಡದಿಂದ ಚಂದ್ರಾನಾಯಕ್ ಅನ್ನೋ ಮಾಸ್ತರು ಐದರಿಂದ ಏಳರವರೆಗೆ ಕಲಿಸಿದ್ದು. ಮೂರು ಹಳ್ಳಿಯ ಮಕ್ಕಳಿಗೆ ಆಂಗ್ಲಭಾಷೆಯ ಅರಿವು ಬಂದದ್ದೇ ಇವರಿಂದ.

ದಡಿಭಯವೇ ಬಂದು ಎದುರು ನಿಂತಂತೆ ಇವರನ್ನು ಕಂಡರೆ ನಡುಗ್ತಾ ಇದ್ವಿ. ಕಲಿಕೆಯ ವಿಷಯದಲ್ಲಿ ಇವರು ಬಲು ಕಠಿಣ. ಇಷ್ಟು ಕಾರುಣ್ಯದ ಹೊರತಾಗಿ ಇವರು ನಡ್ಕೊಳ್ದೆ ಹೋಗಿದ್ರೆ ನಮಗೆ ಆಂಗ್ಲಭಾಷೆಯಲ್ಲಿ ಅಲ್ಪ ಜ್ಞಾನವು ಕೂಡ್ತಾ ಇರ್ಲಿಲ್ಲ. ಆಗೆಲ್ಲ ಬೇಸಿಗೆಯಲ್ಲೂ ತಿಳಿನೀರು ತುಂಬಿ ಶೋಭಿಸುತ್ತಿದ್ದ ದೊಡ್ಡಳ್ಳ ದಾಟಿ ಶಾಲೆ ಕಾಣಬೇಕಿತ್ತು.

ಮಾಸ್ತರು ಬರುವ ವೇಳೆಗೆ ದೊಡ್ಡ ಅಶ್ವತ್ಥ ಮರದಡಿ ಹಣೆಮೇಲೆ ಕೈಯಿಟ್ಟು ಎಲ್ಲರೂ ಸಾಲಾಗಿ ಮೌನದಲ್ಲಿ ನಿಂತಿರುವ ನಿಯತ್ತು ಯಾರು ಕಲಿಸಿದರೋ ನೆನಪಿಲ್ಲ. ಸ್ವಾಮಿ ದೇವನೆ ಲೋಕಪಾಲನೆ ಪ್ರಾರ್ಥನೆಯ ಹಾಡು ದೇವ ಪ್ರಜ್ಞೆಗಿಂತ ಹೆಚ್ಚು ಒಟ್ಟಾಗಿ ಮಕ್ಕಳೆಲ್ಲ ಸೇರುವ ತನ್ಮಯತೆ ಕೊಟ್ಟಿದೆ. ನಮ್ಮ ಪ್ರಾಥಮಿಕ, ಮಾಧ್ಯಮಿಕ ಹಂತದಲ್ಲಿ ಕಲಿಸಿದ ಗುರುಗಳು ರಾಷ್ಟ್ರಭಕ್ತಿಗಿಂತ ಹೆಚ್ಚೆಚ್ಚು ಮನುಷ್ಯಬಕುತಿ ಕಲಿಸಿದವರು.

ಮನುಷ್ಯರಾಗುವ ಕಸರತ್ತಿಗೆ ಮಾನಸಿಕ ತಯಾರಿ ಬೇಕು. ಈ ಹಂತದಲ್ಲಿ ಕಲಿಸುವ ಶಿಕ್ಷಕರ ಸಮುದಾಯ ಬಿತ್ತುವ ಎಚ್ಚರಗಳು ಮೂಲಭೂತವಾದದ ವಿರುದ್ಧ ಇರಬೇಕಾಗುತ್ತದೆ. ಚಂದ್ರಾನಾಯಕ್ ಮಾಸ್ತರರು ಕಲಿಸಿದ ಎಲ್ಲವೂ ಮೌಲ್ಯಗಳ ಧ್ಯಾನದಂತೆಯೇ ಇರುತ್ತಿತ್ತು. ನಮ್ಮೂರಿನ ನಾವೆಲ್ಲ ಮಕ್ಕಳು ಹಳ್ಳದಲ್ಲಿ ಮರಳಿನ ಮೇಲೆ ಉರುಳಾಟಕ್ಕೆ ಬಿದ್ದು ತಡವಾಗಿ ಹೋಗಿ ಇಲ್ಲಿಯೂ ಕೆಟ್ಟ ಶಿಕ್ಷೆ ಅನುಭವಿಸಿದ್ದಿದೆ.

ಆದರೇನಂತೆ ಬಾಲ್ಯ ಹೊಲಗದ್ದೆಗಳಲ್ಲಿ, ಹಳ್ಳಕೊಳ್ಳಗಳಲ್ಲಿ, ಕೆರೆಕಟ್ಟೆಗಳಲ್ಲಿ, ಕೆಂಪು ನೆಲದಲ್ಲಿ ಏಳುವ ಅಣಬೆಗಳ ಜೊತೆಯಲ್ಲಿ ಹೊಸ ದಿವ್ಯತೆಗೆ ಒಳಗೊಂಡು ಬೆರಗಿನಲ್ಲಿ ಹೂತುಹೋಗಿದೆ. ಇಂಥಾ ಅನುಭವಗಳೇ ನನ್ನೂರಿನ ಎಲ್ಲಾ ಮಕ್ಕಳೊಳಗೂ ಸಹಜತೆಯ ಸಂತಸ ಉಳಿಸಿರೋದು. ನಾವೆಲ್ಲ ಮಾಧ್ಯಮಿಕ ಶಾಲಾ ದಿನಗಳಲ್ಲಿ ನನ್ನೂರಿನ ಓಣಿಯಲ್ಲಿ ಗೂಟಿಗೆಂದು ಸುಡುತ್ತಿದ್ದ ಹುಣಸೇ ಬೀಜಗಳನ್ನು ಕೈಚೀಲಗಳಲ್ಲಿ ಹಾಕ್ಕೊಂಡು ಹೋಗ್ತಾ ಇದ್ವಿ.

ಪ್ರೌಢಶಾಲೆಗೆ ಎಂಟು ಕಿಲೋಮೀಟರ್ ನಡೆದು ಹೋಗಬೇಕಾಗಿತ್ತು. ಈ ಕಾರಣಕ್ಕಾಗಿ ನಮ್ಮೂರಿನ ಎಷ್ಟೊಂದು ಜನ ಕಂದಾಚಾರದ, ಗೊಡ್ಡು ಸಂಪ್ರದಾಯಗಳ ಹಿಡಿತಕ್ಕೆ ಸಿಕ್ಕಿ ಹೆಣ್ಣು ಮಕ್ಕಳನ್ನು ಉನ್ನತ ಶಿಕ್ಷಣದ ಕಡೆಗೆ ಕಳಿಸದಂತೆ ಬರೆ ಎಳೆದರು. ಪುಣ್ಯಕ್ಕೆ ನಮ್ಮ ಮನೆಯಲ್ಲಿ ಈ ಪದ್ಧತಿ ಇಷ್ಟು ಘೋರವಾಗಲಿಲ್ಲ. 

ಗಣಿತದ ತರಗತಿ ಬಂದರೆ ಜೋರು ನಿದ್ದೆಯು ನನಗೆ ಜೊತೆಗೂಡ್ತಿತ್ತು, ಆಗೆಲ್ಲ ಹುಣಸೇ ಬೀಜ ಬಾಯಿಗೆ ಬಿದ್ದು ಕಟುಂ ಕಡಿದ ಶಬ್ಧ ಗುರುತಿಸಿ ಗಂಗಯ್ಯ ಮೆಷ್ಟ್ರು ಸರಿಯಾಗಿ ಬಾರುಸ್ತಿದ್ರು. ಅವರೆಷ್ಟು ಶ್ರಮ ಹಾಕಿದರೇನಂತೆ ಗಣಿತದಲ್ಲಿ ಮಾತ್ರ ಶೂನ್ಯಕ್ಕೆ ನಾವು ಸಂಖ್ಯೆ ಸೇರಿಸಿಕೊಂಡದ್ದೇ ಇಲ್ಲ. ಅಂತೂ ಹೇಗೋ ಮುಂದಿನ ತರಗತಿಗೆ ತಳ್ಳಿರೋರು.

ತುಮಕೂರಿನಲ್ಲಿ ಮನೆಕೊಂಡು ನನ್ನನು ಬಿಟ್ಟು ಉಳಿದವರೆಲ್ಲರನ್ನು ನಗರದಲ್ಲಿ ಓದಿಸಿದರು. ಪಿ.ಯು.ಸಿ ಯ ವರೆಗೂ ಊರ ಸುತ್ತಮುತ್ತಲೇ ನಡೆದುಕೊಂಡು ಓದಿದ ಅನೇಕರು ನಾವು ಇವತ್ತು ನೌಕರಿ ಹಿಡಿದು ನಗರ ಸೇರಿದ್ದೇವೆ. ದೊಡ್ಡ ನಗರಗಳಲ್ಲಿ ಓದಿದವರು ಏನೇನೋ ಕಾರಣಕ್ಕೆ ಸಿಕ್ಕಿ ವಿದ್ಯೆ ನಜ್ಜುಗುಜ್ಜಾಗಿ ಖಾಯಂ ಹಳ್ಳಿಗೆ ಸೇರಿದ್ದಾರೆ.

ಹಳ್ಳಿಯ ಶಾಲೆಗಳಲ್ಲಿ ಸಿಕ್ಕ ಸಹಜ ಪ್ರಜ್ಞೆ ಮನರಂಜನೆಗಳು ಉನ್ನತ ಶಿಕ್ಷಣಕ್ಕೆ ನಗರ ಸೇರಿದ ಮೇಲೆ ಸಿಗದ ಕಾರಣಕ್ಕೆ ಕೊರಗಿದ್ದೇವೆ. ಈಗಲೂ ಊರಿಗೆ ಹೋದಾಗ ಕೆಲವು ಮಂದಿ ಹಿರಿಯರು ಕಕ್ಕೆಕಾಯಿ ಬಿಕ್ಕೆಕಾಯಿ ಅಮ್ತ ನಾಯ್ಗೆ ಕಲ್ಲೆಸ್ಕಂಡು ಊರಗ್ ಸುತ್ತಿದ್ರೆ ಏನು ಸಿಗದು. ದೊಡ್ ಪ್ಯಾಟ್ಗೋಗಿ ಆಟೋ ಈಟೋ ಎಚ್ಚಾಗಿ ಓದಿದ್ಕೆ ಒಂದ್ ಗೌರ್ಮೆಂಟ್ ನೌಕ್ರಿ ಸಿಕ್ಕಿ ಸುಕ್ವಾಗಿದ್ದೀರ ಕಣಮಣಿ ಅಂತಾರೆ. ಒಗ್ಗದ ನಗರದ ರಗಳೆಯ ಪಾಡುಗಳನ್ನು ಅವರಿಗೆ ವಿವರಿಸಲಾಗಲ್ಲ.

ನಾನು ಚಿಕ್ಕವಳಿದ್ದಾಗ ನಮ್ಮ ಮನೆಯಲ್ಲಿ ಪ್ರಜಾಮತ, ಸುಧಾ ತರುಸ್ತಿದ್ರು ದೊಡ್ಡಪ್ಪ. ಇಲ್ಲಿಂದಲೇ ಹೆಚ್ಚು ಓದಿಗೆ ಸೇರುವ ಕುತೂಹಲ ಮೂಡಿದ್ದು. ಶಾಲೆಯಿಂದ ಬಂದ ಕೂಡಲೇ ವಾರಪತ್ರಿಕೆಯ ಬಣ್ಣದ ಲೋಕ ಸೆಳೆಯೋದು. ಇರುಳಾದರೆ ಅಕ್ಷರವನ್ನು ಕಲಿಯದ ಇನ್ನೊಬ್ಬರು ದೊಡ್ಡಪ್ಪ ನಮಗೆಲ್ಲ ಜನಪದ ಕಥೆಗಳನ್ನು ಹೇಳೋರು…

ಇವರ ಕಥೆಗಳಲ್ಲಿ ಬರುವ ರಾಜ, ರಾಣಿಯರಿಗಿಂತ ಸಾಮಾನ್ಯರ ಗೋಳುಗಳನ್ನು ಕಾರುಣ್ಯದ ಜೊತೆಗಾಕಿ ಕಥೆ ಮುಗಿಸೋರು. ಈ ಫ್ಯಾಂಟಸಿಯ ಲೋಕದಲ್ಲಿ ಅನಂತಗಳನ್ನು ಬಿತ್ತಿಹೋದರು. ಶಾಲೆಗಳಿಗಿಂತ ಹೆಚ್ಚು ಹೊಲ, ಮನೆ, ಹಳ್ಳ, ಗುಡ್ಡಗಳು ನಮಗೆ ಏನೇನೆಲ್ಲಾ ಬದುಕಿಗೆ ಬೇಕಾದದ್ದನ್ನೇ ಕಲಿಸಿವೆ.

ನನ್ನೂರು ಎಷ್ಟೋ ಕಾಲ ಶಾಲೆ, ಬಸ್ಸುಗಳಿಲ್ಲದೆ ಎತ್ತಿನ ಗಾಡಿಯ ಸಖ್ಯದಲ್ಲಿ ವಿಕಸಿಸಿದೆ. ಅಕ್ಷರ ಸೂರ್ಯ ನನ್ನ ಊರಿನಲ್ಲಿ ಹುಟ್ಟೇ ಇರಲಿಲ್ಲ. ವೈಚಾರಿಕತೆಯ ಕೊರತೆ ಇದ್ದರೂ ಮಾನವೀಯತೆ ಪರಮಾಣು ಬಾಂಬನ್ನು ವಿರೋಧಿಸಿದೆ. ಇಲ್ಲಿಯ ಅನಕ್ಷರಸ್ಥರ ಮಾನವ ಪ್ರೇಮ ನಿದ್ದೆಯಲ್ಲೂ ಇಬ್ಬನಿಯ ಸದ್ದಿಗೆ ಕಣ್ತೆರೆಯಬಲ್ಲ ಜಾಗ್ರತೆಗೆ ಕೂಡಿಕೊಂಡಿದೆ. ಈ ಕಾರಣಕ್ಕಾಗಿ ಊರು ಯಾವಾಗಲೂ ಮುಗಿಯದ ಒಂದು ಭವ್ಯತೆಯಲ್ಲಿ ಲೀನವಾಗುತ್ತದೆ.

November 11, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. Chaitrashree R nayak

    ಊರೆಂಬ ಪ್ರಜ್ಞೆಯನ್ನು, ಶಾಲೆಯನ್ನ ನಿಮ್ಮ ಅಂಕಣದಲ್ಲಿ ತುಂಬಾ ಸುಂದರವಾಗಿ ಕಟ್ಟಿಕೊಟ್ಟಿದ್ದೀರಾ. ನಾನು ಕೂಡ ಇದೆ ರೀತಿ ಕದ್ದು, ಬಿದ್ದು, ಎದ್ದು, ಓದಿದ್ದು SDMC ಅಧ್ಯಕ್ಷರ ಮಗಳು ಎನ್ನವ ಕಾರಣಕ್ಕೋ ಅಪ್ಪಾಜಿಗೆ ಮೇಷ್ಟ್ರು ನನ್ನ ಎಲ್ಲ ಹುಡುಗಾಟಗಳ್ನ್ನು ಹೇಳುತಾರೆ ಎನ್ನವ ಕಾರಣಕ್ಕೂ ನಾನು ಶಾಲೆಯಲ್ಲಿ ಮೌನಿಯಾಗಿರುತಿದ್ದೆ. ಆದರೆ ಹೊರಗಿನ ನಿಸರ್ಗ ಮತ್ತು ನೆಲದ ಜೊತೆಗೆ ಆಪ್ತವಾದ ಸಂಬಂಧ ಬೆಸಗಿಕೊಂಡು ಬದುಕುತಿದ್ದೇನೆ ನನಗೆ ಊರು, ಶಾಲೆ, ಹೊಲ, ಗದ್ದೆ, ಎಂದರೆ ನನ್ನೊಳಗೆ ನಾನೆ ಅರಿಯದ ಒಂದು ವಿಸ್ಮಯದ ಬೆಳಕು ಚಿಮ್ಮುತ್ತದೆ. ನನ್ನ ತಾತ ಕಟ್ಟಿಸಿದ ಶಾಲೆಯಲ್ಲಿಯೇ ನಾನು ಓದಿದ್ದು ಎಂದು ಹೇಳಲು ನನಗೆ ತುಂಬಾ ಹೆಮ್ಮೆಯಾಗುತದೆ.

    ಪ್ರತಿಕ್ರಿಯೆ
  2. ಮೇಘನಾ

    ಎಲ್ಲರು ಮತ್ತೆ ಬದುಕ ಬಯಸುವ ಬಾಲ್ಯದ ನೆನಪುಗಳು ಮೊಗೆದಷ್ಟೂ ಮುಗಿಯದೆ ನಮ್ಮನ್ನು ಸುಳಿಯಂತೆ ತಮ್ಮಲ್ಲಿಗೆ ಸೆಳೆದುಕೊಳ್ಳುವ ಅನುಭವ. ಬಾಲ್ಯ
    ಎಂದ ತಕ್ಷಣ ನೆನಪಾಗುವುದು ಬೇಧವನ್ನೇ ಅರಿಯದ ನಿಷ್ಕಲ್ಮಶ ಪ್ರೀತಿಯಿಂದ ಬೆಳೆಸಿದ ದೊಡ್ಡಮ್ಮ, ದೊಡ್ಡಪ್ಪ , ಆದರೆ ಅಣ್ಣ ಸರ್ವಾಧಿಕಾರಿ ! ಅವನ ತುಂಟಾಟ , ಚುರುಕುತನಕ್ಕೆ ಇದುವರೆಗೂ ನನಗೆ ಹೋಲಿಕೆಯೇ ಸಿಕ್ಕಿಲ್ಲ , ನಮ್ಮೂರಿಗೆ ವರ್ಷಕ್ಕೊಮ್ಮೆ ಮಾತ್ರ ಬರುತ್ತಿದ್ದ ನನಗೆ ಅಡುಗೆ ಆಟ , ಬೊಂಬೆ ಆಟ ಬಿಟ್ಟರೆ, ಬೇರೆ ಯಾವ ಆಟವಾಡಿದ ನೆನಪು ಉಳಿದಿಲ್ಲ ಆದರೆ ಬಾಲ್ಯ ಈಗಿನ ಮಕ್ಕಳಂತಲ್ಲದೆ ಹೆಚ್ಚು ಮುಗ್ದತೆ, ಕುತೂಹಲ, ಪ್ರೀತಿ ತುಂಬಿದ್ದ ಕಾರಣ ಮತ್ತೆ ಜೀವಿಸುವ ಆಸೆ , ಈ ಆಸೆಯ ಕನಸನ್ನು ಮತ್ತೆ ನೆನಪಿಸಿದ ನಿಮಗೆ ಅನಂತ ಧನ್ಯವಾದಗಳು

    ಪ್ರತಿಕ್ರಿಯೆ
  3. Vasudha C.Rai

    Nimma ankana dalli nivu nimma urina janara,school hagu nimma adyapakara parichaya vannu madi kottidira. NImage Nimma urina baggey iruva hemme hagu preethi yeddu kanisuthe .Namma amma yavagalu heluvaru ‘yellaru tamma tamma uralli ranga paravuralli penga’Navu yeste badaladaru,navu Yava hosa urige hodaru namage namma hutti beldantaha urina meley preethi hagu hemme swalpa jastine iruthe.

    ಪ್ರತಿಕ್ರಿಯೆ
  4. ಕಾವ್ಯ

    ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಡುತ್ತವೆ. ಅಂತಹ ಅಕ್ಷರಗಳನ್ನು ನಮ್ಮೊಳೊಗೆ ತುಂಬಿ ಬದುಕನ್ನು ರೂಪಿಸಲು ನೆರವಾದ ಗುರುಗಳಿಗೆ ಕೋಟಿ ನಮನಗಳು. ಪ್ರತಿಯೊಬ್ಬರಿಗೂ ಬಾಲ್ಯವೆಂಬುದು ಜೀವನದಲ್ಲಿ ಮರೆಯಲಾಗದ ಸಮಯವಾಗಿರುತ್ತದೆ.ಬಾಲ್ಯದ ಸವಿ ನೆನಪುಗಳ್ಳನ್ನು ನೆನಸಿಕೊಳ್ಳುತ್ತ ಮತ್ತೆ ಬಾಲ್ಯದ ಮಗುವಾಗದ ಮನುಜರಿಲ್ಲ. ಇಂದಿನ ಬ್ಯುಸಿ ಜೀವನದಲ್ಲಿ ನರಳುವ ಎಲ್ಲರಿಗೂ ಮತ್ತೆ ಬಾಲ್ಯದ ಮಗುವಾಗಿದ್ದರೆ ಚೆನ್ನ ಎಂಬ ಆಸೆ ಇರುತ್ತದೆ. ನಿಮ್ಮ ಲೇಖನದಿಂದ ಬಾಲ್ಯವನ್ನು ನೆನಪಿಸಿಕೊಳ್ಳುವಂತೆ ಆಯಿತು. ಹಳ್ಳಿಯ ಶಾಲೆಯಲ್ಲಿ ಕಲಿತು ಉನ್ನತವಾದ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಂಶುಪಾಲರಾದ ನೀವು ನಮ್ಮಗೆಲ್ಲ ಸ್ಫೂರ್ತಿ.ಧನ್ಯವಾದಗಳು ಆಂಟಿ

    ಪ್ರತಿಕ್ರಿಯೆ
  5. Vishwas

    ‘ಖಾಲಿ ಚೀಲಗಳು’ :
    > ಯಜಮಾನ ಗುಡಿಯಪ್ಪನವರ ಮನೆಯೆಂಬ ‘ಖಾಲಿ ಚೀಲ’ ಅಕ್ಷರಗಳ ಚಿಲುಮೆಯು ಉಗಮವಾಗಿ, ಶಿಕ್ಷಣವೆಂಬ ತುಂತುರನ್ನು ಚಿಮುಕಿಸಿದಂತೆ –
    > ಬಸವರಾಜು ಮಾಸ್ತಾರರ ಬುದ್ಧಿಯೆಂಬ ‘ಖಾಲಿ ಚೀಲ’, ಜಾತಿಯೆಂಬ ತಂತಿ ಬೇಲಿಯಿಂದ ಸುತ್ತುವರೆದಿದ್ದರೂ, ಅಕ್ಷರಾಭ್ಯಾಸ ಮಾಡಿಸುವ ಗುಣಗಳಿಂದ ತುಂಬಿದಂತೆ –
    > ಊರಿನ ಜನರೆಲ್ಲರ ಮನಸ್ಸೆಂಬ ‘ಖಾಲಿ ಚೀಲ’ಗಳು, ತಿಕ್ಲು ಮೇಷ್ಟ್ರು ಎಂದು ಕರೆದರೂ, ಅವರ ಗೌರವಕ್ಕೇನೂ ಕಡಿಮೆ ಮಾಡದ ಭಾವನೆಗಳನ್ನು ಹೊಂದಿರುವಂತೆ –
    > ಅಕ್ಕನ ಅಪ್ಪ ಹಾಗೂ ಓಬಳಜ್ಜರ ಹೃದಯವೆಂಬ ‘ಖಾಲಿ ಚೀಲ’ವನ್ನು, ಅಕ್ಷರ ದಾನ ಮಾಡುವ, ಜವಾಬ್ದಾರಿಯುತ ನಡೆವಳಿಕೆಗಳೆಂಬ ಹಿರಿಮೆಯನ್ನು ತುಂಬಿಸಿ, ಕಟ್ಟಿಸಿದ ಸರ್ಕಾರಿ ಶಾಲೆಯಂತೆ –
    > ಲಿಂಗಯ್ಯ ಮಾಸ್ತಾರರ ಗುಣಲಕ್ಷಣವೆಂಬ ‘ಖಾಲಿ ಚೀಲ’ವು ಸಜ್ಜನಿಕೆ, ನಿಧಾನಸ್ತಿಕೆಗಳಿಂದ ತುಂಬಿಕೊಂಡಿರುವ ಹಾಗೆ –
    > ಬಾಲ್ಯವೆಂಬ ‘ಖಾಲಿ ಚೀಲ’ವನ್ನು, ಕಟ್ಟೆದಂಡೆಯ ಏಡಿಗಳ, ಹೊಲಗದ್ದೆಗಳ, ಹಳ್ಳಕೊಳ್ಳಗಳ, ಕೆರೆಕಟ್ಟೆಗಳ, ಕೆಂಪು ನೆಲದಲ್ಲಿ ಏಳುವ ಅಣಬೆಗಳ ಅಪೂರ್ವ ನೆನಪುಗಳಿಂದ ತುರುಕಿ, ತುಂಬಿಕೊಂಡಿರುವ ಹಾಗೆ –
    > ದೊಡ್ಡಳ್ಳವೆಂಬ ‘ಖಾಲಿ ಚೀಲ’, ಬೇಸಿಗೆಯಲ್ಲೂ ತಿಳಿ ನೀರಿನಿಂದ ತುಂಬಿಕೊಂಡಿರುವ ಹಾಗೆ –
    > ಚಂದ್ರನಾಯಕ್ ಮಾಸ್ತಾರರ, ಆಂಗ್ಲ ಭಾಷೆಯೆಂಬ ‘ಖಾಲಿ ಚೀಲ’ವನ್ನು, ಮೂರ ಹಳ್ಳಿ ಮಕ್ಕಳ ಭಾಷಾ ಪ್ರಜ್ಞೆಗಳಿಂದ ತುಂಬಿಸಿದ ಹಾಗೆ –
    > ಪ್ರೌಢಶಾಲೆಗೆ ಕೆಲವಷ್ಟು ನಡೆಯಬೇಕೆಂದು ಊರಿನವರಲ್ಲಿನ ಸಂಪ್ರದಾಯದ ಕಂದಾಚಾರಗಳಿಂದ ತುಂಬಿದ ತಲೆಗಳೆಂಬ ‘ಖಾಲಿ ಚೀಲ’ಗಳನ್ನು ಹೊರೆತು ಪಡಿಸಿ, ಅಕ್ಕನಂತಹ ಎಷ್ಟೋ ಹೆಣ್ಣು ಮಕ್ಕಳನ್ನು ಓದು ಮುಂದುವರೆಸಲು ಬಿಟ್ಟ ಪೋಷಕರಂತೆ –
    > ಗಂಗಯ್ಯ ಮಾಸ್ತಾರರ ಗಣಿತದಲ್ಲಿ ಬರುವ ಶೂನ್ಯವೆಂಬ ‘ಖಾಲಿ ಚೀಲ’ದಲ್ಲಿ ತುಂಬಿದ *ಜೋರು ನಿದ್ದೆ*, *ಬಾಯಿಗೆ ಬೀಳುವ ಹುಣಸೆ ಬೀಜ*, *ಬೀಳುತ್ತಿದ್ದ ಬಿಸಿ ಏಟು* ಗಳ ಸವಿನೆನಪುಗಳ ಹಾಗೆ –
    > ಅಕ್ಕನ ದೊಡ್ಡಪ್ಪನಿಗೆ ಇದ್ದ ಸಾಕ್ಷರತೆ ಎಂಬ ‘ಖಾಲಿ ಚೀಲ’ದಲ್ಲಿ, ಅತ್ಯುತ್ತಮ ನೈತಿಕ ಕತೆಗಳನ್ನು ಕಟ್ಟುವ ಅಪೂರ್ವ ಪ್ರತಿಭೆಗಳು ತುಂಬಿಕೊಂಡಿರುವ ಹಾಗೆ –

    – ಅಕ್ಕನ ಲೇಖನ ಓದಿ, ನನ್ನ ಕಣ್ಣು,‌ಮನಸ್ಸು, ಬುದ್ಧಿಗಳೆಂಬ ‘ಖಾಲಿ ಚೀಲ’ಗಳು ಸಂತೃಪ್ತಿ, ಸಂತಸಗಳಿಂದ‌‌‌‌ ತುಂಬಿ ಹರಿದಂತಾಯಿತು ನನಗೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: