‘ಶ್ರೀಮತಿ’ ನೆಹರು ಸ್ಥಾನ ಕೊಡುವಿರಾ?

ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆಹುಡುಕುತ್ತಿದ್ದಾರಂತೆಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ.

ಅದೇ ವೇಳೆಗೆ ನಮ್ಮ ಮನೆಯ ಮಟ್ಟಿಗೆ ಇಂಥದ್ದೊಂದು ನಡೆಯಲಿಲ್ಲವಲ್ಲ ನಮ್ಮ ಮಕ್ಕಳು ಮುಚ್ಚಟೆಯಾಗಿದ್ದಾರಲ್ಲ ಎನ್ನುವ ನೆಮ್ಮದಿಯ ಭಾವ ಮನಸಿನಾಳದಲ್ಲಿ ಬೆಚ್ಚಗೆ ಕೂತಿರುತ್ತದೆ.

ಈ ಕಾಣದಾದ ಮತ್ತು ವಾಪಸ್ಸು ಮನೆಗೆ ಹೋಗದ ಹೆಣ್ಣುಮಕ್ಕಳ ಬಗ್ಗೆ ಲೀಲಾ ಸಂಪಿಗೆ ನಮ್ಮ ನಿಮ್ಮೆಲ್ಲರ ವೈಯಕ್ತಿಕ ಮತ್ತು ಸಾಮಾಜಿಕ ಪ್ರಜ್ಞೆಯನ್ನು ತುಸು ಜಾಗೃತಗೊಳಿಸುತ್ತಿದ್ದಾರೆ ‘ಆಫ್ ದಿ ರೆಕಾರ್ಡ್’ ನಲ್ಲಿ.

ಆರಡಿಗಿಂತಲೂ ಎತ್ತರವಿದ್ದು ಕಟ್ಟುಮಸ್ತಾಗಿದ್ದ. ಅವಳಿದ್ದ ವೇಶ್ಯಾಗೃಹಕ್ಕೆ ನುಗ್ಗಿ ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿ ಅವನು ಅವಳ ಮೇಲೆ ಎರಗಿದ್ದ. ಮನುಷ್ಯನೇ ಆಗಿರಲಿಲ್ಲ, ಕುಡಿದ ಮತ್ತಿನಲ್ಲಿದ್ದ.  ಅವಳ ದೇಹದ ಮೇಲೆ ಅವನಿಗಿದ್ದ ಹಸಿವಿನ ಮುಂದೆ ಅವಳ ಜೀವದ ಅರಿವೇ ಅವನಿಗಿರಲಿಲ್ಲ. 

ಎಲ್ಲವನ್ನೂ ಮುಗಿಸಿ ಹೊರನಡೆದ. ಗಿರಾಕಿಯಾಗಿಯಾದರೂ ಹಣವನ್ನೂ ನೀಡದೆ! ಘರ್ವಾಲಿ ಪದ್ಮಾಳಿಗೆ  ಗಾಬರಿಯಾಯ್ತು.  ಅವಳ ಸ್ಥಿತಿ ನೋಡಿ ಕಂಗಾಲಾಗಿ ಕುಸಿದಳು.  ತನ್ನ ಈ  ಸ್ಥಿತಿಗೆ  ಪದ್ಮಳೇ ಕಾರಣ ಅಂತ ಅವಳು ಬುಸುಗುಟ್ಟಿದಳು.  ಪೊಲೀಸರಿಗೆ ದೂರು ಕೊಡುವಂತೆ ಕಿರುಚಿದಳು.  ಆದರೆ ಪದ್ಮಾ ಧೈರ್ಯಮಾಡಲಿಲ್ಲ,  ಏಕೆಂದರೆ ಇಡೀ ಕಾಮಾಟಿಪುರವೇ ಈ  ಪಠಾಣರ ಆರ್ಭಟ, ದೌರ್ಜನ್ಯದಿಂದ ನಲುಗಿತ್ತು.

ಪೋಲೀಸರ ಕಾಟವನ್ನು ಹಫ್ತಾ ಕೊಟ್ಟು ಮ್ಯಾನೇಜ್ ಮಾಡುತ್ತಿದ್ದ ಕಾಮಾಟಿಪುರದ ಎಲ್ಲ ಘರ್ವಾಲಿಗಳು ಈ ಪಠಾಣರ  ಅತಿರೇಕಗಳಿಗೆ ನಡುಗುತ್ತಿದ್ದರು. ಪದ್ಮ ಅವಳಿಗೆ ವಿಶೇಷ ಆರೈಕೆ ಮಾಡಿದಳು. ತನ್ನ ತಪ್ಪಿಗೆ ಒಳಗೊಳಗೇ ಮಿಡಿದಳು.  ನಿಧಾ…….ನವಾಗಿ ಸಹಜವಾದಳು ಅವಳು. ಅವಳು ಗಂಗಾ ಸುಮಾರು ಹತ್ತನ್ನೆರಡು ವರ್ಷಗಳ ಹಿಂದೆ ಪದ್ಮಾಳ ಮನೆಗೆ ಬಿಕರಿಯಾಗಿ ಬಂದಾಗ ಹದಿನೈದರ ಹರೆಯದವಳು.

ಗುಜರಾತಿನ ಹಳ್ಳಿಯೊಂದರ ಗಂಗಾ ಪ್ರೀತಿಯೆಂಬ ವಿಷಬಟ್ಟಲಲ್ಲಿ  ಮುಗ್ದತೆಯಿಂದ ತನ್ನ ಹರೆಯವನ್ನು ಬಲಿಕೊಟ್ಟಿದ್ದಳು. ಪ್ರೀತಿಯೆಂಬ ಪಿಂಪ್ ಪದ್ಮಳ ಮನೆಗೆ ಮಾರಿದ್ದು ಕೇವಲ 500 ರೂಪಾಯಿಗೆ. ಮಾಮೂಲಿ ಎಲ್ಲಾ ಹುಡುಗಿಯರಂತೆ ಮೊದಮೊದಲು ತನ್ನ ಸ್ಥಿತಿಗೆ ಗರಬಡಿದಂತಿದ್ದವಳು, ಬರುಬರುತ್ತಾ ಇನ್ನೆಂದೂ ಹೊರಜಗತ್ತಿಗೆ ತೆರೆದುಕೊಳ್ಳಲಾರದ ಕೂಪದೊಳಗೆ ತನ್ನ ಅಸ್ತಿತ್ವ ಕಂಡು ಕೊಳ್ಳತೊಡಗಿದಳು.

ಸಹಜ ಸೌಂದರ್ಯದ ಜೊತೆಗೆ ಗಟ್ಟಿತನವೂ ಇತ್ತು. ಅವಳ ಧೈರ್ಯ, ಪರಿಸ್ಥಿತಿಯ ಹೊಂದಾಣಿಕೆಯಿಂದ, ನಯನಾಜೂಕಿನ ನಡವಳಿಕೆಯಿಂದಲೂ ಅಚ್ಚುಮೆಚ್ಚಾದಳು. ಇವಳೇ ಬೇಕೆಂದು ಗಿರಾಕಿಗಳು ಮುಗಿಬೀಳುತ್ತಿದ್ದರು. ಚಿನ್ನದ ಮೊಟ್ಟೆಯಿಡುವಂತಾದ ಗಂಗಳೆಂದರೆ ಪದ್ಮಳಿಗೂ ಅಕ್ಕರೆ. 

ತಿಂಗಳು ಕಳೆದಿತ್ತಷ್ಟೆ… ಮತ್ತೆ ಅದೇ ಪಠಾಣ ಪದ್ಮಳ ಮನೆಗೆ ನುಗ್ಗಿದ. ಪದ್ಮಾಳ ಸೆಕ್ಯುರಿಟಿ  ಗಂಡಸರು ಅವನನ್ನು ತಡೆಯಲು ಹೋದರು. ಅವರನ್ನು ತಳ್ಳಿ ಏಕಾಏಕಿಯಾಗಿ ಗಂಗಾಳ ಕೊಠಡಿಗೆ ನುಗ್ಗಿದನು.  ಅವಳು ಗಿರಾಕಿಯೊಂದಿಗೆ ಇದ್ದಳು, ಅರೆ ಬೆತ್ತಲೆಯಲ್ಲಿದ್ದ ಅವನನ್ನು  ಒಂದೇ ಕೈಯಲ್ಲಿ ಹೊರಗೆ ಝಾಡಿಸಿದನು. ಅವನು ಬಾಗಿಲು ಮುಚ್ಚಿದ ಶಬ್ದ ಇಡೀ ಮನೆಯನ್ನು, ಘರ್ವಾಲಿಯ ಎದೆಯನ್ನು ನಡುಗಿಸಿತ್ತು. ಈ ಬಾರಿ ಇನ್ನೂ ಕ್ರೂರವಾಗಿ ನಡೆದುಕೊಂಡಿದ್ದ. 

ಕುಡಿದ ಮತ್ತಿನಲ್ಲಿದ್ದ ಅವನಿಗೆ ಕಚ್ಚಿದ ಪರಿಚಿದ ಗಾಯಗಳು ಆಳಕ್ಕಿಳಿದಿದ್ದವು. ಅರೆ ಪ್ರಜ್ಞೆಯಲ್ಲಿದ್ದ ಗಂಗಾಳನ್ನು ಆಸ್ಪತ್ರೆಗೆ ಸೇರಿಸಲಾಯಿತು.  ಸಹಜ ಸ್ಥಿತಿಗೆ ತರಲು ತಿಂಗಳೇ ಕಳೆಯಿತು. ಪದೇ ಪದೇ ಮನುಷ್ಯರಲ್ಲದ ಈ ಪಠಾಣರ ದಾಳಿಯಿಂದಾಗಿ ತತ್ತರಿಸಿದ್ದರು. ಗಂಗಾಳಿಗೆ ಪದ್ಮಾಳ ಮೇಲೆ ಸಿಟ್ಟಿತ್ತು. 

ನಮಗೆ ರಕ್ಷಣೆ ಕೊಡಲಾರದ ನಿನ್ನಂಥವರು ಯಾಕೆ ಈ ದಂಧೆ ಮಾಡ್ತೀರ ಅಂತ ಕೂಗಾಡಿದಳು. ನಮ್ಮ ರಕ್ಷಣೆಯನ್ನು ನಾವೇ ಮಾಡಿಕೊಳ್ಳುವ ಪ್ರಯತ್ನ ಏಕೆ ಮಾಡಬಾರದು ಎಂಬ ಪ್ರಶ್ನೆ ಅವಳೊಳಗೆ ಹುಟ್ಟಿತು!  ಇಲ್ಲದಿದ್ದಲ್ಲಿ ಇಂತಹ ಪಠಾಣರು ದಿನನಿತ್ಯ ಹೀಗೇ ನುಗ್ಗುತ್ತಲೇ ಇರುತ್ತಾರೆ ಎನಿಸಿತು. 

ಕೊನೆಗೂ ತನ್ನ ಮೇಲೆರಗಿದ ಆ ಪಠಾಣನ ಹಿನ್ನೆಲೆ ಕಂಡು ಹಿಡಿದಿದ್ದಳು ಗಂಗಾ !  ದಕ್ಷಿಣ ಮುಂಬೈ ಭೂಗತ ಜಗತ್ತಿನ ನಂಟಿರುವ ಕರೀಂಲಾಲ್ ಎಂಬುವನು ಮುನ್ನಡೆಸುತ್ತಿದ್ದ  ರೌಡಿ ಗುಂಪಿನಲ್ಲಿರುವ ಶೌಖತ್ ಲಾಲ್ ಎಂಬ ಸುಳಿವು ಸಿಕ್ಕಿತು. ಕರೀಂಲಾಲ್ ಸಭ್ಯಸ್ಥನೆಂದೂ,  ಹೆಣ್ಣುಮಕ್ಕಳಿಗೆ ತುಂಬಾ ಗೌರವ ಕೊಡುತ್ತಾನೆಂದು ಸುದ್ದಿ ಇತ್ತು. 

ಗಂಗಾ ಕರೀಂ ಲಾಲ್ ನನ್ನು ಭೇಟಿ ಮಾಡುವ ಸುದ್ದಿ ಕಾಮಾಟಿಪುರಕ್ಕೆಲ್ಲ ಹರಡಿತು. ಪದ್ಮಾ ಹೌಹಾರಿದಳು. ದಕ್ಷಿಣ ಮುಂಬೈನ ಭೂಗತ ಜಗತ್ತಿನ ನಂಟಿರುವ ಅವರುಗಳ ಸಹವಾಸವೇ ಬೇಡ ಅಂತ ಬುದ್ಧಿ ಹೇಳಿದಳು. ಯಾರು ಎಷ್ಟೇ ಅಂಗಲಾಚಿದರೂ ತನ್ನ ನಿರ್ಧಾರವನ್ನು ಗಂಗಾ  ಬದಲಿಸಲಿಲ್ಲ.

ಅವಳ ದೇಹದ ನೋವಿಗಿಂತಲೂ, ತನ್ನನ್ನು ಅಷ್ಟು ಕ್ರೂರವಾಗಿ ನಡೆಸಿಕೊಂಡಿದ್ದ ಆ ಶೌಖತ್ ನ ಬಗ್ಗೆ ಮನಸ್ಸು ಜರ್ಝರಿತವಾಗಿತ್ತು.  ಅವನ ನಿರ್ಧಾಕ್ಷಿಣ್ಯದ  ಅಹಂನ್ನು ಅಡಗಿಸಲೇ ಬೇಕೆಂದು ಅವಳತನ ರಚ್ಚು ಹಿಡಿದೇ ಬಿಟ್ಟಿತ್ತು. ಹೀಗೆ ತಮ್ಮ ಮೇಲೆ ಎರಗುವ ದಾಂಡಿಗರನ್ನು ಹೆಡೆ ಮುರಿಯಲು ಪಣತೊಟ್ಟ ಈ ಘಟನೆ ಇಡೀ ಕಾಮಾಟಿಪುರದ ಇತಿಹಾಸದಲ್ಲೇ ದಾಖಲೆ ಆಗಿಬಿಟ್ಟಿತು. 

ಸದಾ ಕಾಡುವ ಬಹುತೇಕ ಖಾಕಿ, ದೊಣ್ಣೆಗಳಿಗೆ ಇವರ ಸೆರಗ ತುದಿಯ ಕಾಂಚಾಣಕ್ಕೇ ವ್ಯವಹರಿಸುವ ತಾಕತ್ತು ಇತ್ತು.  ದಿನನಿತ್ಯದ ಅಡಚಣೆಗಳ ನಿವಾರಣೆಗೆ ಅವರವರ ಅನುಭವದ ಆಧಾರದಲ್ಲಿ ಕಾರ್ಯತಂತ್ರಗಳು ಇರುತ್ತಿದ್ದವು. ಆದರೆ ಮುಂಬೈನ ಕಾಮಾಟಿಪುರಕ್ಕೆ  ಆಗಾಗ್ಗೆ ಎರಗುವ ಈ ಪಠಾಣರು, ರೌಡಿಗ್ಯಾಂಗ್ ಗಳು, ಮಾಫಿಯಾದ ವಾರಸುದಾರರನ್ನು ಹಿಮ್ಮೆಟ್ಟಿಸಲು ಕಾಮಾಟಿಪುರ ಸದಾ ಕತ್ತಿಯ ಮೇಲಿನ ನಡಿಗೆಯನ್ನು  ಮಾಡುತ್ತಲೇ ಇರಬೇಕಾಗುತ್ತಿತ್ತು. 

ಆ ದಿನ ಕರೀಂಲಾಲ್  ತನ್ನ ಮನೆಗೆ ತೆರಳುತ್ತಿದ್ದ ದಾರಿಯಲ್ಲಿ ಕಾದು ನಿಂತಿದ್ದ ಗಂಗಾ ಅವನಿಗೆ ಎದುರಾದಳು. ನಮಸ್ಕರಿಸಿದಳು.  ನಿಮ್ಮೊಂದಿಗೆ ಮಾತನಾಡಬೇಕಿತ್ತು ದಯವಿಟ್ಟು ಅವಕಾಶ ಕೊಡಿ ಎಂದಳು.  ಅವಳ ಎದೆಬಡಿತ ಅವಳಿಗೇ ಕೇಳಿಸುತ್ತಿತ್ತು.  ಅವಳ ವೇಷಭೂಷಣ ನೋಡಿದ ಕರೀಂ ಬಾಯಿಗೆ ಅವಳು ಕಾಮಾಟಿಪುರದವಳೇ ಎಂದು ಖಾತ್ರಿಯಾಯ್ತು. 

ಹಾದಿಯಲ್ಲಿ ಅವಳೊಂದಿಗೆ ಮಾತನಾಡಲು ಮುಜುಗರಪಟ್ಟುಕೊಂಡ ಕರೀಂಲಾಲ್, ಏನಾಗಬೇಕಿತ್ತು? ಎಂದ. ನಿಮ್ಮ ಗುಂಪಿನಲ್ಲಿರುವ ಕಿರಾತಕನೊಬ್ಬನ ಬಗ್ಗೆ ಮಾತನಾಡಬೇಕು ಎಂದಳು.  ಅವಾಕ್ಕಾದ ಕರೀಂಲಾಲ್, ಮನೆಗೆ ಬಾ ಎಂದವನೇ ಸರಸರನೆ ಮುಂದೆ ನಡೆದ. ಅವನ ದೇಹದಾರ್ಢ್ಯ, ಅವನ ಗಂಭೀರ ಮುಖಭಾವ, ವರ್ಚಸ್ಸು ನೋಡಿ ಅವಳು ದಂಗಾದಳು. 

ಅವನ ಎದುರು ಜನ ಅಡ್ಡಾಡೋಲ್ಲ… ಆದರೆ ನಾನು ಹೀಗೆ ಅವನನ್ನೇ ಅಡ್ಡಗಟ್ಟಿ ಬಿಟ್ಟೆನಲ್ಲ ಅಂತ ಒಳಗೊಳಗೆ ತನ್ನ ಬಗ್ಗೆ ತಾನೇ ಅವಳಿಗೆ ಹೆಮ್ಮೆ ಪಟ್ಟುಕೊಂಡಳು.  ಹಿಂದೆಯೇ  ಅವನ ಮನೆ ತಲುಪಿದ ಅವಳಿಗೆ ಮಹಡಿಯ ಮೇಲೆ ತಾರಸಿ ಮೇಲೆ ಹೋಗಲು ಹೇಳಿದ.  ಸ್ವಲ್ಪ ಹೊತ್ತಿನಲ್ಲಿ ಅವನೂ ಬಂದು ಅಲ್ಲೇ ಇದ್ದ  ಹಾಸು ಕುರ್ಚಿಯಲ್ಲಿ ಕುಳಿತ. ಗಂಗಾ ನಿಂತೇ ಇದ್ದಳು. 

ಕೆಲಸದವನು ಚಹಾ ತಂದು ಅವಳ ಮುಂದಿಟ್ಟ. ತೊಗೋ ಚಹಾ ಅಂದ. ಅವಳು ಕುಡಿಯಲಿಲ್ಲ. ನನ್ನೊಂದಿಗೆ ಮಾತನಾಡಲು, ಮನೆಯ ಆವರಣದಲ್ಲಿ ನಿಲ್ಲಿಸಲೂ ಮುಜುಗರ ಪಡುವ ನಿಮ್ಮ ಮನೆಯಲ್ಲಿ ಹೇಗೆ ಚಹಾ ಕುಡಿಯಲಿ ಅಂದಳು. ಧ್ವನಿಯಲ್ಲಿ  ವಿನಮ್ರತೆ ಹಾಗೂ ಸ್ವಾಭಿಮಾನವಿತ್ತು.  ಅವಳ ಮಾತು ಕೇಳಿ ವಿಚಲಿತನಾದ ಕರೀಂಲಾಲ್, ಯಾರಮ್ಮ ನೀನು?  ಧ್ವನಿ ತಗ್ಗಿತ್ತು. 

ನಾನು ಗಂಗೂ, ಕಾಮಾಟಿಪುರದವಳು….. ನಿಮ್ಮ ಗುಂಪಿನಲ್ಲಿ ಕೆಲಸ ಮಾಡುತ್ತಿರುವ ಶೌಖತ್ ಲಾಲ್ ಎಂಬುವನು ನನ್ನ ಮೇಲೆ ನಿರಂತರ ಅತ್ಯಾಚಾರ ಮಾಡುತ್ತಿದ್ದಾನೆ. ವೇಶ್ಯೆಯೆಂದ ಮಾತ್ರಕ್ಕೆ ಯಾವುದೇ ಸಹಮತವಿಲ್ಲದೆ, ಬಿಟ್ಟಿಯಾಗಿ ನನ್ನ ಮೇಲೆರಗ್ತಾನೆ…… ಗಂಗಾ ಮೈಮೇಲಿನ ನೀಲಿಗಟ್ಟಿದ ಗಾಯಗಳನ್ನು ತೋರಿಸುತ್ತಾ, ತಾನು ತಿಂಗಳಾನುಗಟ್ಟಲೆ ಚಿಕಿತ್ಸೆ ಪಡೆದು ಅನುಭವಿಸಿದ ಯಾತನೆಯ ಬಗ್ಗೆ ವಿವರಿಸ್ತಾಳೆ. 

ಅಮಾಯಕಳಾದ ಒಂದು ಹೆಣ್ಣಿನ ಮೇಲೆ ಅವನು ಮಾಡಿದ ದೌರ್ಜನ್ಯಕ್ಕೆ ಸರಿಯಾದ ಶಿಕ್ಷೆ ನೀಡಬೇಕೆಂದು ಕರೀಂಲಾಲ್ ನಿರ್ಧರಿಸುತ್ತಾನೆ. ‘ಶೌಖತ್ ಮತ್ತೆ ಅಲ್ಲಿಗೆ ಬಂದಾಗ ನನಗೆ ತಿಳಿಸು’ ಅಂತ ಭರವಸೆ ಕೊಡ್ತಾನೆ. ಗಂಗೂ ಭಾವುಕಳಾಗ್ತಾಳೆ. ತನ್ನ ಬ್ಯಾಗಿನಲ್ಲಿದ್ದ ದಾರ ಕಿತ್ತು ಕರೀಂಲಾಲ್ ಕೈಗೆ ಕಟ್ಟುತ್ತಾಳೆ.  ನನ್ನ ಜೀವನದಲ್ಲಿ ಕಟ್ಟಿರುವ ಮೊದಲ ರಾಖಿ ಅಂತ ಕೃತಜ್ಞತೆಯಿಂದ ನೋಡ್ತಾಳೆ. 

ನೀನು ನನ್ನ ಸಹೋದರಿಯಂತೆ ಇನ್ನು ಮುಂದೆ ಯಾವುದಕ್ಕೂ ಧೈರ್ಯಗೆಡಬೇಡ, ಅಂತ ಚಹಾ ಕಪ್ಪನ್ನು ಕೈಗಿಡುತ್ತಾನೆ.  ಬದುಕಿಗೊಂದು ಭರವಸೆ ಸಿಕ್ಕಿದ ಉನ್ಮಾದದಲ್ಲಿ ಯಾವ ಸುಳಿವೂ ಕೊಡದೆ ಗಂಗೂ ಶೌಖತ್ ಗಾಗಿ ಕಾಯ್ತಾಳೆ.  ಅದೊಂದು ದಿನ ಮತ್ತೆ ಬರ್ತಾನೆ ಗೂಳಿಯಂತೆ.  ಕೂಡಲೇ ಕರೀಂಲಾಲ್ ಗೆ ಸುದ್ದಿ ಹೋಗುತ್ತದೆ. ಅಲ್ಲಿಗೆ ಸಹಚರರೊಂದಿಗೆ ಬಂದ ಕರೀಂಲಾಲ್ ಅರೆ ಬೆತ್ತಲೆಯಾದ ಶೌಖತ್ ನನ್ನು ಬಹಿರಂಗವಾಗಿ ಬೀದಿಯಲ್ಲಿ ಮೆರವಣಿಗೆ ಮಾಡಿ ಅವನ ಅಹಂಕಾರದ ಹುಟ್ಟಡಗಿಸುತ್ತಾನೆ….

ಈ ಘಟನೆ ಇಡೀ ಕಾಮಾಟಿಪುರದ ಮೂಲೆ ಮೂಲೆಯನ್ನೂ ದಿಗ್ಭ್ರಮೆಗೊಳಿಸುತ್ತದೆ. ಎಷ್ಟೋ ಕಾಲದ ಎಲ್ಲಾ ಥರದ ದಾಳಿಗೆ ಕಾಮಾಟಿಪುರ ತತ್ತರಿಸಿರುತ್ತದೆ. ಅದಕ್ಕೊಂದು ತೆರೆ ಎಳೆಯುವ ಸಾಧ್ಯತೆಯನ್ನು ಅವರ್ಯಾರೂ ಊಹಿಸಿಯೂ ಇರಲಿಲ್ಲ. ಎಷ್ಟೆಂದರೆ…. ಪೊರ್ಕಿಗಳು, ಪುಡಿ ರೌಡಿಗಳು, ಬಿಟ್ಟೀ ಗಿರಾಕಿಗಳು, ಪುಂಡರು ಎಷ್ಟೋ ದಿನಗಳ ಕಾಲ ಇತ್ತ ತಲೆ ಹಾಕಿಯೂ ಮಲಗದಂತೆ ಮಾಡುತ್ತದೆ.

ಇಲ್ಲಿಂದ ಗಂಗೂ ‘ಗಂಗೂಬಾಯಿ‘ಯಾಗ್ತಾಳೆ. ಕಾಮಾಟಿಪುರದ ನೋವುಂಡ ಬದುಕುಗಳಿಗೆ ನೆರಳಾಗ್ತಾಳೆ, ಅಮ್ಮನಾಗ್ತಾಳೆ, ದೀದಿಯಾಗ್ತಾಳೆ, ಮೇಡಂ ಆಗ್ತಾಳೆ. ಕೊನೆಗೆ ಪ್ರಸಿದ್ಧ ಘರ್ವಾಲಿಯಾಗ್ತಾಳೆ. ಕರೀಂಲಾಲ್ ಕೊಟ್ಟ ಮಾತಿನಂತೆ ಪರೋಕ್ಷವಾಗಿ ಗಂಗೂಬಾಯಿಯನ್ನು ಸಹೋದರಿಯಂತೆ ಕಾಯುತ್ತಾನೆ.   

ಗಂಗೂಬಾಯಿ ತನ್ನ ವರ್ಚಸ್ಸಿನಿಂದ ಕಾಮಾಟಿಪುರದ ಆಕ್ರಂದನದ ಧ್ವನಿಗಳಿಗೆ ಧ್ವನಿಯಾಗಿ ನಿಲ್ತಾಳೆ. ಸಹಜ ಸೌಂದರ್ಯದಿಂದ ಶ್ರೀಮಂತ, ಉನ್ನತ ಅಧಿಕಾರಿಗಳು, ಗಣ್ಯಾತಿಗಣ್ಯರನ್ನು ಆಕರ್ಷಿಸುತ್ತಾಳೆ. ಯಥೇಚ್ಛವಾಗಿ ಹಣ ಸಂಪಾದಿಸ್ತಾಳೆ, ಆಭರಣಗಳ ಬಗ್ಗೆ ಅವಳಿಗಿದ್ದ ಅತಿಯಾದ ವ್ಯಾಮೋಹಕ್ಕೆ ಹೆಚ್ಚು ಆದ್ಯತೆ ನೀಡ್ತಾಳೆ. ಎಷ್ಟೆಂದರೆ  ಚಿನ್ನದಿಂದ ಮಾಡಿದ ಕಟ್ಟಿನ ಕನ್ನಡಕವನ್ನು ಧರಿಸಿದ ಪ್ರಥಮಳಾಗ್ತಾಳೆ.

ತನ್ನ ಒಂದು ಹಲ್ಲನ್ನು ಚಿನ್ನದಿಂದಲೇ ಮಾಡಿಸ್ತಾಳೆ. ಅವಳಿಗೆ ರೇಷ್ಮೆ ಅಂಚಿನ ಸೀರೆ, ಕುಪ್ಪಸಗಳು ಅವಳ ಸಮವಸ್ತ್ರವೇ ಆಗಿಬಿಡ್ತಾವೆ. 1950-60 ರ ದಶಕದಲ್ಲಿ ಅತ್ಯಂತ ಶ್ರೀಮಂತ ಬೀದಿಯಾದ 12ನೇ ಲೇನ್ ನಲ್ಲಿ ತನ್ನ ವೇಶ್ಯಾಗೃಹ ಹೊಂದಿರ್ತಾಳೆ. ಪ್ರಪ್ರಥಮವಾಗಿ ಕಾಮಾಟಿಪುರದ ಒಬ್ಬ ಮಹಿಳೆ ಬೆಂಟ್ಲಿ ಕಾರಿನ ಒಡತಿಯಾಗ್ತಾಳೆ.   

ಹಾಗೆಯೇ ನಾಯಕತ್ವದ ಗುಣಗಳನ್ನು ಗಟ್ಟಿಯಾಗಿಸ್ತಾಳೆ. ಸಾರ್ವಜನಿಕವಾಗಿ ಕಾಮಾಟಿಪುರದ ಎತ್ತಂಗಡಿಗೆ ಒತ್ತಾಯ ಬಂದಾಗ, ಬೀದಿಗಿಳಿದು ಎಲ್ಲ ವೇಶ್ಯೆಯರನ್ನು ಸಂಘಟಿಸಿ ಜಯಗಳಿಸುತ್ತಾಳೆ. ಪ್ರಪ್ರಥಮವಾಗಿ ಆಜಾದ್ ಮೈದಾನದಲ್ಲಿ ಸ್ತ್ರೀ ಸಮ್ಮೇಳನದ ಅತಿಥಿಯಾಗಿ ನೊಂದ ಮಹಿಳೆಯರ ಅಸ್ತಿತ್ವದ ಬಗ್ಗೆ ಗಟ್ಟಿ ಧ್ವನಿಯಾಗ್ತಾಳೆ. ರಾಜಕೀಯ ನಾಯಕರುಗಳ, ಪತ್ರಕರ್ತರ ಒಡನಾಟವಿದ್ದ ಗಂಗೂ ಸದಾ ಸುದ್ದಿಯಲ್ಲಿರುತ್ತಾಳೆ. 

ಕಾಮಾಟಿಪುರದ ಅನಾಥ ಮಕ್ಕಳನ್ನು ದತ್ತು ಪಡೆದು ಅವರ ಬಗ್ಗೆ ವಿಶೇಷ ಕಾಳಜಿ ವಹಿಸಿ ಶಿಕ್ಷಣ ನೀಡುವ ಪ್ರಯತ್ನ ಮಾಡುತ್ತಾಳೆ. ಅವರಲ್ಲಿ ಯಾರೂ ಮತ್ತೆ ಕಾಮಾಟಿಪುರಕ್ಕೆ ಬರಲಿಲ್ಲ…. ಸಮಾಜಮುಖಿಯಾದರು. 

ಭಾರತದ ಇತಿಹಾಸದಲ್ಲಿ ಮೊಟ್ಟ ಮೊದಲಬಾರಿಗೆ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಅವರ ಭೇಟಿಗೆ ಅವಕಾಶ ಪಡೆಯುತ್ತಾಳೆ. ಸಹೃದಯಿ ನೆಹರೂರವರು ಗಂಗೂಬಾಯಿಯೊಂದಿಗೆ ವೇಶ್ಯಾವಾಟಿಕೆಯಲ್ಲಿರುವ ಮಹಿಳೆಯರ ದೈನೇಸೀ ಸ್ಥಿತಿಯ ಬಗ್ಗೆ ಚರ್ಚಿಸುತ್ತಾರೆ. ಅವರೊಂದಿಗೆ ಚರ್ಚಿಸಿದ ಗಂಗೂಬಾಯಿ, ದೇಶದ ವೇಶ್ಯೆಯರ ಬದುಕಿಗೊಂದು ಘನತೆ ಮತ್ತು ಮಾನವೀಯತೆ ನೀಡಬೇಕು ಎಂದು ಒತ್ತಾಯಿಸುತ್ತಾಳೆ. 

ಮಾತಾಡುತ್ತಲೇ ನೆಹರೂರವರು ಸಹಜವಾಗಿ ಗಂಗೂಬಾಯಿಯನ್ನು ಪ್ರಶ್ನಿಸುತ್ತಾರೆ, ‘ಇಷ್ಟೊಂದು ರೂಪವತಿ, ಬುದ್ದಿವಂತೆ, ಚುರುಕಾಗಿದ್ದೀಯ, ನೀನ್ಯಾಕೆ ಯಾರಾದರೂ ಸಭ್ಯರನ್ನು ವಿವಾಹವಾಗಿ ಗೃಹಸ್ಥ ಜೀವನವನ್ನು ನಡೆಸಬಾರದುʼ ಅಂತ ಕೇಳ್ತಾರೆ.

ಅದಕ್ಕೆ ಗಂಗೂಬಾಯಿ, ಒಳಗೆ ಕುದಿವ ಸಂಕಟದ ಜ್ವಾಲೆಯ ಕಾವನ್ನು ತೋರಗೊಡದೆ ಕೂಡಲೇ ಮರುಪ್ರಶ್ನೆ ಹಾಕ್ತಾಳೆ, ‘ಶ್ರೀಮತಿ ನೆಹರೂರವರ ಸ್ಥಾನ ಕೊಡೋದಾದ್ರೆ ನಾನು ಗೃಹಸ್ಥಳಾಗಲು ನಾನು ತಯಾರಿದ್ದೇನೆ…. ತಾವು ಒಪ್ಪುವುದಾದರೆʼ ಅಂತಾಳೆ. ಅನಿರೀಕ್ಷಿತವಾದ ಉತ್ತರದಿಂದ ಕ್ಷಣಕಾಲ ವಿಚಲಿತರಾಗ್ತಾರೆ. ಆಗ ಗಂಗೂಬಾಯಿ,  ನೆಹರೂರವರ ಮನದೊಳಗಿನ ಪೊರೆ ತೆರೆದು ವೇಶ್ಯೆಯರ ಬದುಕಿನ ವಿವಿಧ ಸ್ತರಗಳ ಹೀನ ಸ್ಥಿತಿಯನ್ನು ವಿವರಿಸುತ್ತಾಳೆ. 

ಕಾಮಾಟಿಪುರದ ಪ್ರತಿ ಮನೆಗಳಲ್ಲಿ ಗಂಗೂಬಾಯಿ ಚಿತ್ರಪಟವಾಗ್ತಾಳೆ. ಕಥೆಯಾಗ್ತಾಳೆ. ಕಥಾ ವಸ್ತುವಾಗ್ತಾಳೆ. ಬೆಳಕಾಗ್ತಾಳೆ… ತಾನು ಅನುಭವಿಸಿದ್ದ ಹೆಪ್ಪುಗಟ್ಟಿದ್ದ ನೋವು, ಸಂಕಟ, ದೌರ್ಜನ್ಯಗಳನ್ನು ಎದೆಯಲ್ಲಿ ಬಚ್ಚಿಟ್ಟು ಕಾಮಾಟಿಪುರದ ನೋವಿಗೆ ಮುಲಾಮಾಗ್ತಾಳೆ. ಮಾರಾಟ, ಸಾಗಾಟದ ಕೂಪದಲ್ಲಿ ಜಾರಿ ಹೋದ ಹೆಣ್ಣುಗಳ ಹೃದಯದಲ್ಲಿ ಎಷ್ಟೋ ಕಾಲ ತಣ್ಣಗೆ ಹರಿಯುತ್ತಾಳೆ…

‍ಲೇಖಕರು ಲೀಲಾ ಸಂಪಿಗೆ

November 11, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: