ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಓದಲೇಬೇಕಾದ ‘ಬಕುಲದ ಬಾಗಿಲಿನಿಂದ’

ಸುಧಾ ಆಡುಕಳ ಅವರ ಕಾಡುವ ಬರಹಗಳ ಸಂಕಲನ  ‘ಬಕುಲದ ಬಾಗಿಲಿನಿಂದ’ 

ಈ ಕೃತಿಯನ್ನು ‘ಬಹುರೂಪಿ’ ಪ್ರಕಾಶನ ಪ್ರಕಟಿಸಿದೆ.

ಈ ಕೃತಿ ಬಗ್ಗೆ ಹಿರಿಯ ವಿಮರ್ಶಕರಾದ ಆರ್.ಡಿ.ಹೆಗಡೆ ಆಲ್ಮನೆ ಅವರು ವಿಮರ್ಶಿಸಿದ್ದಾರೆ.

ಆರ್.ಡಿ.ಹೆಗಡೆ ಆಲ್ಮನೆ

ಸಾಹಿತ್ಯ ಕ್ರಮೇಣ ನಮ್ಮ ವೈಯಕ್ತಿಕ ಅನುಭವದ ಮತ್ತು ಚಿಂತನೆಗಳ ಕಲಾತ್ಮಕ ಅಭಿವ್ಯಕ್ತಿಯಾಗತೊಡಗಿದಂತೆ ಅಭಿವ್ಯಕ್ತಿಯ ಪ್ರಕಾರಗಳು ಕೂಡ ಬದಲಾಗುತ್ತಿವೆ. ಇಂದಿನ ನಮ್ಮ ಮಹತ್ವದ ಸಂವೇದನೆಗಳಲ್ಲಿ ಒಂದಾದ ಮಹಿಳಾ ಸಂವೇದನೆಯೊಂದನ್ನೇ ಗಮನಿಸಿದರೂ ಈ ಬದಲಾವಣೆಯ ಚಿತ್ರಣ ಸಿಗುತ್ತದೆ.

ಕೊಡಗಿನ ಗೌರಮ್ಮ, ದೇವಾಂಗನಾ ಶಾಸ್ತ್ರಿ, ಮುಂತಾದ ಲೇಖಕಿಯರು ಒಂದು ಕಾಲದಲ್ಲಿ ತಮ್ಮ ತಳಮಳದ ಅಭಿವ್ಯಕ್ತಿಗಾಗಿ ಕತೆ, ಕಾದಂಬರಿಗಳನ್ನು ಆರಿಸಿಕೊಳ್ಳುತ್ತಿದ್ದ ಆ ಒಂದು ಕಾಲ ಇದಲ್ಲ. ಈಗ ಪುಂಖಾನುಪುಂಖವಾಗಿ ಮಹಿಳೆಯರು ಕತೆ, ಕವಿತೆಗಳನ್ನು ಬರೆದು ಪುರುಷ ಜಗತ್ತಿನ ಏಕಸ್ವಾಮ್ಯವನ್ನೂ ದಬ್ಬಾಳಿಕೆಯನ್ನೂ ಚಿತ್ರಿಸಿ ಪ್ರತಿಭಟಿಸುತ್ತಿದ್ದರೆ ವೈದೇಹಿ ಮೊದಲಾದವರು ಪುರುಷ ಪ್ರಧಾನ ಸಮಾಜದ ಕಣ್ತೆರೆಸುವ ಮಹತ್ವದ ಕತೆಗಳನ್ನು ಬರೆದಿದ್ದಾರೆ ಮತ್ತು ಈಗಲೂ ಬರೆಯುತ್ತಿದ್ದಾರೆ.

ಮಹಿಳೆಯರ ಪ್ರತಿಭಟನೆಯ ಕಾವ್ಯಾಭಿವ್ಯಕ್ತಿಯ ಬಗ್ಗೆ ಕುತೂಹಲವಿರುವವರು ಮಾಧವಿ ಭಂಡಾರಿ ಸಂಪಾದಿಸಿರುವ ‘ನೀನುಂಟು ನಿನ್ನ ರೆಕ್ಕೆಯುಂಟು’ ಗಮನಿಸಬಹುದು. ಇದನ್ನು ರಂಗಕೃತಿಗಳಲ್ಲಿಯೂ ತರಲು ಯತ್ನಿಸಿದ ಇತ್ತೀಚಿನ ಉದಾಹರಣೆ ಸುಧಾ ಆಡುಕಳ. ಈಗ ಇವರದೊಂದು ಹೊಸ ಪ್ರಕಾರದ ಪುಸ್ತಕ ‘ಬಕುಲದ ಬಾಗಿಲಿನಿಂದ’ ಬಂದಿದೆ.

ಆಧುನಿಕ ಪೂರ್ವ ಭಾರತದಲ್ಲಿ ಬಂದ ಪೌರಾಣಿಕ ಮತ್ತು ಚಾರಿತ್ರಿಕ  ಕಾವ್ಯ ನಾಟಕಗಳಲ್ಲಿ ಚಿತ್ರಣಗೊಂಡ ದಿಟ್ಟ ಮಹಿಳೆಯರ ಕಥೆಗಳನ್ನು ನೆನಪಿಸುವ ಸುಧಾ ಆಡುಕಳ ಬರೆದ ಇಪ್ಪತ್ತೊಂದು ಕಥನಗಳ ಸಂಕಲನ ಇದು. ಇವು ಮೊದಲು ಕನ್ನಡದ ಅವಧಿ ಬ್ಲಾಗ್ ನಲ್ಲಿ ಅಂಕಣ ಬರಹವಾಗಿ ಬಂದಿದ್ದವು. ಈ ಅಂಕಣವನ್ನು ಬರೆಯುವಷ್ಟೂ ಕಾಲ ಒಂದೊಂದು ವಾರ ನಾನು ಒಬ್ಬ ಹೆಣ್ಣು ಮಗಳೊಂದಿಗೆ ಮುಖಾಮುಖಿಯಾಗಿದ್ದೇನೆ ಎನ್ನುತ್ತಾರೆ ಲೇಖಕಿ.

ಈ ಲೇಖನಗಳಲ್ಲಿ ಪಿಸುಮಾತುಗಳಿವೆ ಎಂದು ಲೇಖಕಿ ಮುಖಪುಟದಲ್ಲಿಯೇ ನಂಬಿಸುವರಾದರೂ ಎಲ್ಲಿಯೂ ನಮಗೆ ಪಿಸುಮಾತು ಕೇಳಿಸುವುದಿಲ್ಲ. ಬದಲಿಗೆ, ದುಃಖ, ನೋವು, ಕೆಟ್ಟಕನಸುಗಳು ಹಾಗೂ ಚೀತ್ಕಾರಗಳೇ ಎದುರಾಗುತ್ತವೆ; ಮುಂದೇನೂ ಹೇಳಲಾರೆ, ಮನಸ್ಸು ಭಾರವಾಗಿದೆ (ಪು-೧೦೪) ಎನ್ನುವ ಸಂಕಟವನ್ನು ಕಾಣುತ್ತೇವೆ. ಆದರೂ ಲೇಖಕಿಯ ನಿಟ್ಟುಸಿರು, ಕಿವಿಮಾತುಗಳನ್ನೇ ಇಲ್ಲಿ ಪಿಸುಮಾತುಗಳೆನ್ನಬಹುದು.

ಈ ಪಾತ್ರಗಳೆಲ್ಲ ಇದ್ದಕ್ಕಿದ್ದಂತೆ ಸೃಷ್ಟಿಯಾದದ್ದಲ್ಲ ಎನ್ನುವ ಲೇಖಕಿಗೆ ಎಲ್ಲ ಪಾತ್ರಗಳೂ ನಿಜವೇ. ಬೇರೆ ಬೇರೆ ಕಾಲಘಟ್ಟಗಳಲ್ಲಿ ಬದುಕಿ ಹೋದ ಈ ಪಾತ್ರಗಳು ರಾಮಾಯಣದಲ್ಲಿ, ಶಾಕುಂತಲದಲ್ಲಿ, ಅಹಲ್ಯೆ ಮತ್ತು ಗೌತಮರ ಪ್ರಾಕ್ಕಥನಗಳಲ್ಲಿ, ಕವಿ ಟಾಗೋರರ ನಾಟಕಗಳಲ್ಲಿ, ನಿಜವಾದ ಪಾತ್ರಗಳು.

ಇಂದಿಗೂ ನಮ್ಮ ಸಮಾಜದಲ್ಲಿ ಅಸಂಖ್ಯಾತ ಸೀತೆಯರು, ಕೃಷ್ಣನ ಆಗಮನಕ್ಕೆ ಕಾದು ಕುಳಿತಿರುವ ರಾಧೆಯರು, ಪುರುಷಲೋಕದ ಒಣ ಪ್ರತಿಷ್ಠೆಯನ್ನು ತಣಿಸಲೋಸುಗ ಸರಕಿನಂತೆ ಕೈಯಿಂದ ಕೈಗೆ ದಾಟಿ ಹೋಗುವ ಮಾಧವಿಯರು, ಕರ್ತವ್ಯ ಮತ್ತು ಸೇವೆಯ ಹೆಸರಿನಲ್ಲಿ ಮೂಲೆಗುಂಪಾದ ಊರ್ಮಿಳೆಯರು, ಕಾನೂನನ್ನು ವಿರೋಧಿಸುವ ಸಲುವಾಗಿ ಮೊಲೆಯನ್ನೆ ಕುಯ್ದು ಕೈಗೆ ಕೊಡುವ ನಂಗೇಲಿಯಂತಹ ಅನಕ್ಷರಸ್ತ ದಿಟ್ಟ ಮಹಿಳೆಯರು,  ಅಮೃತಾ ಪ್ರೀತಮ್ ತರಹದವರು, ಹೆಣ್ಣಿನ ಎಲ್ಲ ಗುಣಗಳಿಗೆ ರೂಪಕವಾಗಿದ್ದ ನಂದಿನಿಯಂಥವರು, ತಮ್ಮ ಸಮುದಾಯದಲ್ಲಿದ್ದ ಅತ್ಯಂತ ಕ್ರೂರವಾದ ಸಂಪ್ರದಾಯವನ್ನು ಪ್ರತಿಭಟಿಸಿ ಇನ್ನಿಲ್ಲದಷ್ಟು ಕಷ್ಟಗಳನ್ನು ಅನುಭವಿಸಿ ಕೊನೆಗೆ ಜಗತ್ಪ್ರಸಿದ್ಧಳಾದ ವಾರಿಸ್, ಹೀಗೆ ಇವರೆಲ್ಲ ನಮಗೆ ನೋಡಲು ಸಿಗುತ್ತಾರೆ.

ವಾರಿಸ್ ಇಥಿಯೋಪಿಯಾದ ಅಲೆಮಾರಿ ಜನಾಂಗದ ಹುಡುಗಿ. ಆದರೆ ಈ ಚರಿತ್ರೆಗಳೆಲ್ಲ ವರ್ತಮಾನದಲ್ಲಿಯೂ ಪುನರ್ಘಟಿಸುವುದನ್ನು ಅರಿಯುವ ಒಳಗಣ್ಣು ಮತ್ತು ಪ್ರಾಂಜಲ ಮನಸ್ಸು ನಮಗಿರಬೇಕು. ಈ ಎಲ್ಲ ಕಥನಗಳ ಉದ್ದೇಶ ಮಹಿಳೆಯರನ್ನು ಎಚ್ಚರಿಸುವುದಷ್ಟೆ ಅಲ್ಲ, ಪುರುಷರ ಕಣ್ತೆರೆಸುವುದೂ ಆಗಿದೆ. ‘ಬಹುರೂಪಿ’ಯ ಜಿ.ಎನ್. ಮೋಹನ್,  “ಈ ಎಲ್ಲರೂ ಇಡೀ ಭೂಮಂಡಲದ ಹೆಣ್ಣುಗಳ ಕಥೆಯನ್ನು ಹೇಳುತ್ತಿದ್ದಾರೆ” ಎಂದು ಗುರುತಿಸುವುದು ಸುಮ್ಮನೆ ಉಬ್ಬಿಸಿ ಹೇಳಿದ ಮಾತಿನಂತೆ ತೋರುವುದಿಲ್ಲ.

ಇಂದಿನ ಭಾರತೀಯ ಮಹಿಳೆ ಕೌಟುಂಬಿಕ ಜೀವನಕ್ಕೆ, ಮತ್ತು ಭಾರತೀಯ ಸಂಸ್ಕೃತಿಯಲ್ಲಿರುವ ಧನಾತ್ಮಕ ಅಂಶಗಳಿಗೆ ತಿರುಗಿಬೀಳುವಂತೆ ಪ್ರಚೋದಿಸುವುದು ಇವತ್ತು ಬರೆಯುತ್ತಿರುವ ಮಹಿಳೆಯರ ಉದ್ದೇಶ ಎನ್ನುವ ಒಂದು ಪ್ರತಿರೋಧಾತ್ಮಕ ಆಲೋಚನೆಗೂ ಸುಧಾ ಆಡುಕಳರ ಈ ಬರಹಗಳಲ್ಲಿಯೇ ತಕ್ಕ ಉತ್ತರಗಳಿವೆ.

ಇಂತಹ ಪ್ರತಿರೋಧದ ಉದ್ಗಾರಗಳು ನನಗೆ ಕೇಳಿಸಿದ್ದು ಭಾರತಿ ಹೆಗಡೆಯವರ ಕೃತಿ ‘ಮೊದಲ ಪತ್ನಿಯ ದುಗುಡ’ದ ಕುರಿತು ಒಂದು ಆಪ್ತ ವಲಯದಲ್ಲಿ ಚರ್ಚಿಸುತ್ತಿರುವಾಗ ಒಟ್ಟಾರೆ ಇಂದಿನ ಮಹಿಳಾಸಂವೇದನೆಯ ಬಗ್ಗೆ ಹುಟ್ಟಿಬಂದ ಪ್ರಶ್ನೆ ಇದು. ಬಹುಶಃ ಸುಧಾ ಆಡುಕಳ ಕೂಡ ಎದುರಿಸಬೇಕಾದ ಪ್ರಶ್ನೆಗಳು ಇಲ್ಲಿವೆ.

ಆದರೆ, ಭಾರತೀಯ ಲೇಖಕಿಯರು ನಮ್ಮ ಸಾಂಸ್ಕೃತಿಕ ಚೌಕಟ್ಟಿನ ಕಟ್ಟುಪಾಡುಗಳನ್ನು ಪ್ರಶ್ನಿಸುತ್ತಾರೆ ಹೊರತು ಅದನ್ನು ಸಾರಾಸಗಟು ತಿರಸ್ಕರಿಸಬೇಕು ಎಂದು ವಾದಿಸುವುದಿಲ್ಲ. ಇಂತಹ ಸಂದೇಹ ಮತ್ತು ಪ್ರಶ್ನೆಗಳಿಗೆ ಸುಧಾ ಆಡುಕಳರ ಈ ಕಥನಗಳಲ್ಲಿ ವಿವರಣೆ ಸಿಗಬಹುದು.

ಈ ಕೃತಿಯಲ್ಲಿ ಕೆಲವು ಲೇಖನಗಳು ಲೇಖಕಿಯ ಆಕ್ರೋಶದಲ್ಲಿ ಮುಗಿಯುತ್ತವೆ. ಈ ಆಕ್ರೋಶ ಅರ್ಥವಾಗುತ್ತದೆಯಾದರೂ ಅದರ ಔಚಿತ್ಯ ಅರ್ಥವಾಗುವುದಿಲ್ಲ. ಸಂದರ್ಭದ ಔಚಿತ್ಯ ಅರ್ಥವಾಗದಿದ್ದರೆ ಆಕ್ರೋಶಕ್ಕೆ ನೆಲೆ ಇರುವುದಿಲ್ಲ. ಪ್ರಬಂಧಗಳಲ್ಲಿ ಇರಬೇಕಾದ ಲೇಖಕನ ರೋಲ್ ಗುರುತಿಸಿಯೂ, ನನಗೆ ಈ ಔಚಿತ್ಯದ ಸಂದೇಹ ಸರಿಯೆನಿಸುತ್ತಿದೆ.

ಸುಧಾ ಆಡುಕಳರ ಪ್ರಬಂಧಗಳ ಶೈಲಿ, ನಿರೂಪಣೆಯ ಮೇಲಿನ ಹಿಡಿತ ಮತ್ತು ಪುರಾಣೇತಿಹಾಸಗಳ ಓದು ಮೆಚ್ಚುಗೆಯಾಗುತ್ತವೆ. ಕಾಲ ಕಾಲಕ್ಕೆ ಮಹಿಳೆ ನಡೆದು ಬಂದ ಮುಳ್ಳಿನ ಕಾಲುದಾರಿಯನ್ನು ಹೊಸ ತಲೆಮಾರಿನವರಿಗೆ ಪರಿಚಯಿಸುವ ಒಂದು ನಿರ್ದಿಷ್ಟವಾದ ಈ ಬಗೆಯ ಬರಹಗಳಿಗೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಮಹತ್ವಗಳಿವೆ.

ಆದ್ದರಿಂದ ‘ಬಕುಲದ ಬಾಗಿಲಿನಿಂದ’ ಕೃತಿಯ ಲೇಖನಗಳಿಗೆ, ಇದೊಂದು ಪ್ರತ್ಯೇಕವಾದ ಸಾಹಿತ್ಯ ಪ್ರಕಾರವೂ ಆಗುವುದರಿಂದ, ಒಳ್ಳೆಯ ಸ್ವಾಗತವೂ ಸಿಗಬಹುದಾಗಿದೆ. ಒಟ್ಟಿನಲ್ಲಿ ಓದಬೇಕಾದ, ನಮ್ಮ ಸಂಗ್ರಹದಲ್ಲಿ ಇರಬೇಕಾದ ಕೃತಿ ಇದು.

ಈ ಕೃತಿಯನ್ನು ಕೊಳ್ಳಲು ಈ ಲಿಂಕ್ ಒತ್ತಿ-

https://bahuroopi.in/product/bakuladha-bagilininda/

‍ಲೇಖಕರು avadhi

26 October, 2019

2 Comments

  1. Sudha Hegde

    Thank u R. D.Hegde Almane and Avadhi

  2. T S SHRAVANA KUMARI

    ಒಳ್ಳೆಯ ಪುಸ್ತಕ ಪರಿಚಯ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading