ಈ ಬಂಗಾರಪ್ಪ ಎಲ್ಲಿದ್ರೂ  ಬಂಗಾರಪ್ಪನೇ..  

ನಾನು ಮತ್ತು ಬಂಗಾರಪ್ಪ

ಎನ್.ರವಿಕುಮಾರ್ ಟೆಲೆಕ್ಸ್

ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರು ಶಿವಮೊಗ್ಗ ದ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಬಾರೀ ಸಭೆಯೊಂದರಲ್ಲಿ ಭಾಗವಹಿಸುವವರಿದ್ದರು. ಆಗಷ್ಟೇ ನಡೆದಿದ್ದ ರಾಜೀವ್ ಗಾಂಧಿ ಹತ್ಯೆಯ ಕಾವು ಆರಿರಲಿಲ್ಲ. ಈ ಕಾರಣಕ್ಕಾಗಿಯೇ  ಬಂಗಾರಪ್ಪ ಅವರು ಭಾಗವಹಿಸುವ ಈ ಸಮಾವೇಶಕ್ಕೆ ಇನ್ನಿಲ್ಲದ  ಭಾರೀ ಬಿಗಿ ಪೊಲೀಸ್ ಬಂದೋಬಸ್ತು ಹಾಕಲಾಗಿತ್ತು. ಕೇಂದ್ರ ರಕ್ಷಣಾ ತಂಡಗಳು ಇಡೀ ಸಹ್ಯಾದ್ರಿ ಕಾಲೇಜು ಆವರಣವನ್ನು ವಶಕ್ಕೆ ಪಡೆದು ವೇದಿಕೆ ಬಳಿಗೆ ಆಹ್ವಾನಿತರನ್ನಲ್ಲದೆ ಬೇರಾರನ್ನೂ ಹತ್ತಿರ ಸುಳಿಯಗೊಡದೆ ಕಣ್ಗಾವಲು ಇಟ್ಟಿದ್ದವು.

ಇದೇ ಸಂದರ್ಭದಲ್ಲಿ ಕಾವೇರಿ ವಿವಾದವೂ ಭುಗಿಲೆದ್ದಿದ್ದರಿಂದ ಪೊಲೀಸರ ಸರ್ಪಗಾವಲೆ  ಅಲ್ಲಿ ಹೆಡೆ ಬಿಚ್ಚಿ ನಿಂತಿತ್ತು.

ನಾನು  ಗೆಳೆಯರೊಂದಿಗೆ  ಎಂಕೆಕೆ ರಸ್ತೆಯ ಕ್ಯಾಂಟೀನ್ ವೊಂದರಲ್ಲಿ ಕುಳಿತಿದ್ದ ಸ್ಥಳಕ್ಕೆ ಜನತಾದಳದ ನಗರಾಧ್ಯಕ್ಷ ಭೈರಪ್ಪ ಆಟೋವೊಂದರಲ್ಲಿ ಬಂದಿಳಿದರು. ಆ ಕಾಲಕ್ಕೆ ಭೈರಪ್ಪ ಪ್ರಭಾವಿ ಸ್ಥಳೀಯ ಜನತಾದಳ ನಾಯಕ ಕೂಡ. ಬಂದವರೆ ಗಡಿಬಿಡಿಯಲ್ಲಿ ‘ಬನ್ನಿ , ಬನ್ನಿ ಒಂದು ಸ್ಟ್ರೈಕ್ ಇದೆ ಹೋಗೊಣ . ಬಂದವರಿಗೆ ಚಿತ್ರಾನ್ನ.ಇಪ್ಪತ್ತು ರೂಪಾಯಿ ಕೊಡ್ತಿನಿ ,  ಅದರಲ್ಲೊಂದು ಷರತ್ತು; ಮೊದಲು ಸ್ಟ್ರೈಕ್ ಮಾಡಿದ ಮೇಲೆ ಚಿತ್ರಾನ್ನಾ.ಕಾಸು ಕೊಡ್ತೀನಿ’ ಅಂದ್ರು.
ಚಿತ್ರಾನ್ನ ತಿಂದು ಅದೆಷ್ಟೋ ದಿನ ಆಗಿತ್ತು. ಸರಿ, ಇವತ್ತಿನ ಮಟ್ಟಿಗೆ ನನ್ನ ಭಾಗ್ಯದ ಬಾಗಿಲು ತೆರೆದಂತಾಗಿ ಭೈರಪ್ಪ ನನ್ನ‌ಕಣ್ಣಿಗೆ ಸಾಕ್ಷಾತ್ ‘ ಅನ್ನಪೂರ್ಣೇಶ್ವರಿ’ ಯಂತೆ ಕಾಣತೊಡಗಿದ್ದರು.

ಯಾವಾಗ ಚಿತ್ರಾನ್ನ. ಇಪ್ಪತು  ರೂಪಾಯಿ ಅನ್ನೂ ದನಿ ಕಿವಿಗೆ ಬಿತ್ತೋ..ಯಾಕೆ.?ಯಾವ ಸ್ಟ್ರೈಕ್ ? ಎಲ್ಲಿ? ಹೇಗೆ? ಅನ್ನೋ ಒಂದು ಮಾತು ಕೇಳ್ದೆ ಆಟೋ ಹತ್ತಿ ಕುಳಿತು ಬಿಟ್ಟೆ.   ಒಂದು ಆಟೋದಲ್ಲಿ ಎಂಟು‌ಜನರನ್ನು ಕುರಿತುಂಬಿಕೊಂಡಂತೆ ಲೋಡ್ ಮಾಡಿಕೊಂಡ  ಭೈರಪ್ಪ ಸಹ್ಯಾದ್ರಿ ಕಾಲೇಜು ಆವರಣದ ಮರಗಳ ತೋಪಿನಲ್ಲಿ  ಅನ್ಲೋಡ್ ಮಾಡಿಕೊಂಡರು.

ಎಲ್ಲೆಂದರಲ್ಲಿ ಬಂಗಾರಪ್ಪನವರ‌ ರಂಗು ರಂಗಿನ  ಕಟೌಟು.ಬ್ಯಾನರ್ ಗಳು.
ಅರೆ…!, ಬಂಗಾರಪ್ಪನವರ  ಫಂಕ್ಷನ್. ಒಳ್ಳೇದೆ ಆತು. ಬಂಗಾರಪ್ಪನವರ ಭಾಷಣ ಕೇಳ್ಕೊಕೆ ಒಂದು ಅವಕಾಶ. ನೋಡ್ಲುಬಹುದು ಎಂಬ  ಉತ್ಸಾಹ  ಕುಣಿದು ಕುಪಳಿಸಿತ್ತಿರುವಾಗಲೆ ಭೈರಪ್ಪ ತಮ್ಮ ಜೇಬಿಂದ ಕಪ್ಪು ಬಟ್ಟೆಯ ಉದ್ದುದ್ದು ತುಂಡುಗಳನ್ನು ನಮ್ಮ ಕೈಗೆ ಕೊಟ್ಟು. ‘ಇವುಗಳನ್ನು  ಸಿಕ್ರೇಟಾಗಿ ಜೇಬಿನಲ್ಲಿಟ್ಟುಕೊಳ್ಳಿ. ಎಷ್ಟು ಸಾಧ್ಯವಾಗುತ್ತೋ ಅಷ್ಟು ವೇದಿಕೆ  ಹತ್ತಿರಕ್ಕೆ ಹೋಗೊಣ. ಬಂಗಾರಪ್ಪ ಅವರು ಭಾಷಣ ಮಾಡಲು ಮುಂದಾಗುತ್ತಿದ್ದಂತೆ ಕಪ್ಪು ಬಟ್ಟೆ ತೋರಿಸಿ ಧಿಕ್ಕಾರ ಕೂಗಬೇಕು. ಕಾವೇರಿ ನಮ್ಮದು ಎಂದು ಘೋಷಣೆ ಹಾಕಬೇಕು ‘ ಎಂದು ಯೋಜನೆಯ ರಹಸ್ಯವನ್ನು ವಿವರಿಸಿದರು.

ಬಂಗಾರಪ್ಪ ಅವರ ಅಪ್ಪಟ ಅಭಿಮಾನಿಯಾಗಿದ್ದ ನನಗೆ ಈ ಕಾರ್ಯಾಚರಣೆ ಉಬ್ಬಿದ್ದ ಬಲೂನಿಗೆ ಪಿನ್ನು ಚುಚ್ಚಿ  ದಂತಾಗಿಬಿಟ್ಟಿತು. ದೊಡ್ಡ ಸಂಕಟವನ್ನು ತಂದಿಟ್ಟಿತು. ಒಂದೆಡೆ ನನ್ನ ನೆಚ್ಚಿನ ನಾಯಕ ಬಂಗಾರಪ್ಪ ಅವರ ವಿರುದ್ಧವೆ ಕಪ್ಪು ಬಾವುಟ ತೋರಿಸುವುದಾ? ತೋರಿಸದಿದ್ದರೆ ‘ಚಿತ್ರಾನ್ನ’  ಕಳೆದುಕೊಳ್ಳುವುದಾ?  ಬಂಗಾರಪ್ಪನ ಮೇಲಿನ ಅಭಿಮಾನವಾ? ಚಿತ್ರಾನ್ನಾವಾ? …..ಮನಸ್ಸು ಗೊಂದಲಕ್ಕೆ ಬೀಳುವ ಮೊದಲೆ ಮನಸ್ಸು  ಯಾವ ಮುಲಾಜು ಇಲ್ಲದೆ ಬಂಗಾರಪ್ಪ ಅವರನ್ನೆ ಆಯ್ಕೆ ಮಾಡಿಕೊಂಡಿತು.
ಭೈರಪ್ಪ ನಮ್ಮಬಿಡಲಿಲ್ಲ ಎಲ್ಲರನ್ನೂ  ಗುಡ್ಡೆ ಮಾಡಿಕೊಂಡು ಹೇಗೋ ಬ್ಲಾಕ್ ಕಮಾಂಡೋ. ಮೆಟಲ್‌ ಡಿಟೇಕ್ಟರ್ ಗಳ ಬಾಗಿಲುಗಳನ್ನು ದಾಟಿ  ಜನರ ನೂಕು ನುಗ್ಗಲಿನ ನಡುವೆಯೂ ಜಾಗ ಮಾಡಿಕೊಂಡು  ಸ್ಟೇಜ್ ನ  ಸಮೀಪಕ್ಕೆ ತಂದು ನಿಲ್ಲಿಸಿ ಬಿಟ್ಟರು.

ಬಂಗಾರಪ್ಪ .ಬಂಗಾರಪ್ಪನೇ… ಗೋಲ್ಡ್ ಪ್ರೇಮ್ ನ ಕಡುಗಪ್ಪು ಕನ್ನಡಕದೊಂದಿಗೆ  ಗರಿ ಗರಿ ರೇಷ್ಮೆ ಬಟ್ಟೆ ತೊಟ್ಟು ದರ್ಬಾರಿನ ಕುಳಿತ  ಕದಂಬ ಚಕ್ರವರ್ತಿ ಮಯೂರ ವರ್ಮನಂತೆ ವಿರಾಜಮಾನರಾಗಿದ್ದರು. ನೋಡಿ ಪುಲ್ ಖುಷ್ ಆಗ್ಬಿಟ್ಟೆ.

ಅವರ ಭಾಷಣದ ಸರದಿಗೆ ಕ್ಷಣ ಗಣನೆ ಆರಂಭವಾಯಿತು.  ನಾನು ಭೈರಪ್ಪನ ಕೈ ಕಳಚಿಕೊಂಡು ನನ್ನ ಹಿಂದಿದ್ದ ಗೆಳೆಯರನ್ನು ಒಬ್ಬೊಬ್ಬರನ್ನೆ ಮುಂದೆ ತಳ್ಳುತ್ತಾ  ಒಂದೊಂದೆ ಹೆಜ್ಜೆ ಹಿಂದೆ ಸರಿಯತೊಡಗಿದೆ….. ಬಂಗಾರಪ್ಪ ಅವರು ಮೈಕ್ ಮುಂದೆ ಬರುತ್ತಿದ್ದಂತೆ ಭೈರಪ್ಪ ಕಪ್ಪು ಬಾವುಟ ತೋರಿ ಧಿಕ್ಕಾರ ಕೂಗೆ ಬಿಟ್ಟರು.  ಜನರೂ ಗಾಬರಿಗೊಂಡು ಇತ್ತಲೆ ಎಲ್ಲರ ಕಣ್ಣುಗಳ ನೆಟ್ಟವು.

ಆಗ ನಡೆದಿದ್ದೇ ಬೇರೆ.  ವೇದಿಕೆ ಹಿಂದೆ  ಮುಂದೆ ಕಾವಲಿಗಿದ್ದ, ಸಾವಿರಾರು ಜನರ‌ನಡುವೆ ಮಪ್ತಿಯಲ್ಲಿ ಅಡಗಿದ್ದ ಪೊಲೀಸರ ದಂಡೆ ಭೈರಪ್ಪನ ಮತ್ತು ಅವರ ಜೊತೆಗಿದ್ದವರ ಮೇಲೆ‌   ಅಮರಿಕೊಂಡಂತೆ ಮುಗಿಬಿದ್ದು ಬಾಯಿ ಅದುಮಿ.ಕೈ ಕಾಲುಗಳು ತಿರುವಿ ಅನಾಮತ್ತಾಗಿ ಎತ್ತಿಕೊಂಡು ಹೋಗಿ ಬಿಟ್ಟರು.  ನಾನು ಅಷ್ಟೊತ್ತಿಗಾಗಲೆ ಅಲ್ಲಿಂದ ಚಂಗನೆ ಹಾರಿ ದೂರದ ಮರ ತಬ್ಬಿಕೊಂಡಿದ್ದೆ.

ನೂರಾರು ಪೊಲೀಸರು ಭೈರಪ್ಪ ಮತ್ತುವರ ಐದು ಜನರ ತಂಡವನ್ನು!  ವೇದಿಕೆಯ ಕೂಗಳತೆಯಲ್ಲಿದ್ದ ದೊಡ್ಡ ಸಂಪಿಗೆ‌ಮರದ ಕೆಳಗೆ ಅದುಮಿಕೊಂಡು ಸುತ್ತುವರಿದಿತ್ತು.

ಇದೆಲ್ಲವನ್ನೂ ಗಮನಿಸಿದ ಬಂಗಾರಪ್ಪ ಅವರು ಭಾಷಣ ಆರಂಭಿಸುವ ಮುಂಚೆಯೇ  ” ಹೇ ಯಾರಲ್ಲಿ , ಅವ್ರು ಯಾರನ್ನೂ ಅರೆಷ್ಟ್ ಮಾಡ್ಬೇಡಿ, ಅಂತೋರೆಲ್ಲಾ ಇರ್ಬೇಕು. ಅಂತೋರು ಇರೋದ್ರಿಂದ್ಲೆ  ಈ ಬಂಗಾರಪ್ಪ . ಪ್ರತಿಭಟನೆಗಳೇ ಡೆಮಾಕ್ರಸಿಯ ಗುಣಲಕ್ಷಣಗಳು. ಕಾವೇರಿ ನಮ್ದು.ಅದನ್ನ ಬಿಡೋ ಪ್ರಶ್ನೆ‌ನೆ ಈ ಬಂಗಾರಪ್ಪನತ್ರ ಇಲ್ಲ…, ನಾನೂ ಕಾವೇರಿ ಮಗನೆ’  ಎಂದು ಘೋಷಿಸಿದರು.

ರಾಗಿ ಸುರಿದರೂ ಸಣ್ಣ ಕಾಳು ನೆಲಕ್ಕೆ ಬೀಳದಷ್ಟು ಸೇರಿದ ಜನಸ್ತೋಮ ಶಿಳ್ಳೆ.ಕೇಕೆ ಹಾಕಿ ಉಯ್ಯಿಲಿಕ್ಕಿತು. ಜೊತೆಗೆ ನನ್ನ ಕೈಗಳು  ಅರಿವಿಲ್ಲದೇ ಚಪ್ಪಾಳೆ ತಟ್ಟುತ್ತಿದ್ದವು.

ಬಂಗಾರಪ್ಪ ಅವರ ಆದೇಶದಂತೆ ಭೈರಪ್ಪ ಮತ್ತು‌ಜೊತೆಗಿದ್ದ ನನ್ನ ಗೆಳೆಯರನ್ನು ಪೊಲೀಸರು ಬಿಟ್ಟು ಕಳುಹಿಸಿದರು. ಅವರೆಲ್ಲಾ ದೂರದಲ್ಲಿ ಬಂಗಾರಪ್ಪ ಅವರ ಭಾಷಣ ವನ್ನು ಕೇಳುತ್ತಾ  ನಿಂತಿರುವುದು ಕಾಣಿಸಿತು. ಭಾಷಣ ಮುಗಿಸಿ ಬಂಗಾರಪ್ಪ ಕಾರು ಹತ್ತುತ್ತಿದ್ದಂತೆ  ಚಿತ್ರಾನ್ನ ನೆನಪಾಯಿತು. ಭೈರಪ್ಪ ಅವರನ್ನು ಚಿತ್ರಾನ್ನ ಕೊಡ್ಸಿ ಅಂತ ಕೇಳೋ ಮನಸ್ಸಾಗಲಿಲ್ಲ. ಸಿಟಿ ಬಸ್ಸಿಗೆ ಕಾಸಿಲ್ಲದೆ ನಾಲ್ಕು ಕಿ.ಮೀ ನಡೆದುಕೊಂಡೆ‌ ಮನೆ ಸೇರಿಕೊಂಡು ಗಟ ಗಟ ಚೊಂಬು‌ ನೀರು‌ ಕುಡಿದೆ‌. ಬಂಗಾರಪ್ಪ  ಅವರನ್ನು ಹತ್ತಿರದಿಂದ ನೋಡಬೇಕು ಎಂಬ ಮಹಾದಾಸೆ ಈಡೇರಿತ್ತು.

ಪತ್ರಕರ್ತನಾದ ಮೇಲೆ ಇದೇ ಬಂಗಾರಪ್ಪ ಅವರ ಮುಂದೆ ಮುಖಾ ಮುಖಿ ಕುಳಿತು  ಸಂದರ್ಶನ, ಪತ್ರಿಕಾಗೋಷ್ಟಿ, ಸಭೆ,ಸಮಾರಂಭ ಎಂಬ ನೆಪಗಳಲ್ಲಿ ಅವರನ್ನು ಮಾತಾಡಿಸಿದ್ದೇನೆ. ಅವರೊಂದಿಗೆ ಅದೆಷ್ಟು ಬಾರಿ‌ ಕೈ ಕುಲುಕಿದ್ದು ಲೆಕ್ಕವಿಲ್ಲ.  ಖಾಸಗಿಯಾಗಿ ಆಪ್ತವಾಗಿ ಮಾತಾಡಿದ್ದೇವೆ…
ಅವರು ಬಿಜೆಪಿ ಸೇರಿದಾಗ ನನ್ನ ಆಕ್ಷೇಪವನ್ನು  ಬಂಗಾರಪ್ಪ ಅವರು ಅಷ್ಟೇ  ಮೆದುವಾಗಿ ಸ್ವೀಕರಿಸಿ ಪ್ರತಿಕ್ರಿಯಿಸಿದ್ದು ಹೀಗೆ
“ಮಿಸ್ಟರ್ ರವಿಕುಮಾರ್, ಯು ಡೋಂಟ್ ಥಿಂಕ್  ಯಬೌಟ್ ಮೈ ಪರ್ಸನಾಲಿಟಿ, ಈ ಬಂಗಾರಪ್ಪ ಎಲ್ಲಿದ್ರೂ  ಬಂಗಾರಪ್ಪನೇ”

ಈ ‘ಬಂಗಾರ’ ಹೆಚ್ಚು ದಿನ ಬಿಜೆಪಿಯಲ್ಲಿರಲ್ಲ. ಆದರೆ ಬಿಜೆಪಿ ಯನ್ನು ಅಧಿಕಾರದ ಪಡಸಾಲೆಗೆ ತಂದು ಬಿಟ್ಟು ” ಬಂಗಾರದ ಮನುಷ್ಯನೆ’ ಆಗಿ  ಹೊರಬಂದರು.

ಇವತ್ತು ಬಂಗಾರಪ್ಪ ಅವರ ಹುಟ್ಟಿದ ದಿನ. ಬಂಗಾರಪ್ಪ ಸದಾ ಹಸಿರಾಗಿದ್ದಾರೆ. ತನ್ನನ್ನೆ ತಾನು ಸುಟ್ಟುಕೊಂಡ ಅವರ ಕೆಲವು ರಾಜಕೀಯ ಧೋರಣೆಗಳ ಹೊರತಾಗಿಯೇ ನನ್ನಂತ ಅದೆಷ್ಟೋ ಜನರಲ್ಲಿ.

‍ಲೇಖಕರು avadhi

October 26, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. pratham

    We have seen corrupt regime of Mr Bangarappa 1990-1992, it was so bad, posts were auctioned. However, that was better than subsequent regimes. Gone are the good governments.

    ಪ್ರತಿಕ್ರಿಯೆ
  2. ಗೀತಾ ಎನ್ ಸ್ವಾಮಿ

    ತುಂಬಾ ಚೆನ್ನಾಗಿ ಬರೆಯುವ ರವಿ ಟೆಲೆಕ್ಸ್ ಅವರು ರಾಜಕೀಯ ವಿಚಾರಗಳಿಗಿಂತ ಕಾವ್ಯವನ್ನು ಚೆನ್ನಾಗಿ ಬರೀತಾರೆ. ಅವರ ಕವಿತೆಗಳು ಬಂಗಾರಪ್ಪನಿಗಿಂತ ಹೆಚ್ಚು ಕಾಡುವ ಗಟ್ಟಿತನ ಉಳ್ಳವು. ಈ ಲೇಖನ ಅಷ್ಟೇನೂ ಸೆಳೆದು ಓದಿಸಿಕೊಳ್ಳುವಂತಿಲ್ಲ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: