ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಳಿತು ಮಾಡೋ ಮನುಷ್ಯಾ..ನೀ ಇರೋದು ನಿಮಿಷ..’

ಪ್ರಜಾವಾಣಿಯಲ್ಲಿ ಬಂದ ಒಂದು ವರದಿ ಯಾಕೋ ಮನಕಲುಕಿತು. ಓದಿ

‘ಒಳಿತು ಮಾಡೋ ಮನುಷ್ಯಾ… ನೀ ಇರೋದು ಮೂರು ನಿಮಿಷ..’

-ಅವ್ವನ ನೆನೆದು ಕಣ್ಣೀರಿಟ್ಟ ಹೊರಟ್ಟಿ


‘ನಾನು ಸಚಿವನಾದಾಗ, ಪ್ರತಿನಿತ್ಯ ಪೊಲೀಸರು (ಎಸ್ಕಾರ್ಟ್ ) ಬಂದು ಮನೆಯಿಂದ ಕರೆದುಕೊಂಡು ಹೋಗುತ್ತಿದ್ದರು. ಇದನ್ನು ಕಂಡ ನನ್ನ ಅವ್ವ ಒಂದು ದಿನ, ‘ದಿನಾಲೂ ಪೊಲೀಸರು ಬಂದು ಕರ್‍ಕೊಂಡ್‌ ಹೋಗ್ತಾರಲ್ಲಾ?’ ಎಂದು ಕೇಳಿದಳು. ‘ನಾನು ಸಚಿವ ಆಗೇನಿ’ ಎಂದು ಹೇಳಿದೆ. ಅದಕ್ಕೆ ಅವ್ವ ‘ನೀನು ಅಂಥ ದೊಡ್ಡ ತಪ್ಪು ಏನು ಮಾಡಿದ್ದಿ?’ ಎಂದಳು. ಅಷ್ಟೊಂದು ಮುಗ್ಧತೆ ಅವ್ವನಲ್ಲಿತ್ತು. ನಾನು ಸಚಿವನಾಗಿದ್ದರೂ, ಆಕೆಗೆ ಮುಧೋಳದ ಹಳ್ಳಿ ಮನೆಯೇ ಇಷ್ಟವಾಗಿತ್ತು’

ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಮ್ಮ ತಾಯಿಯನ್ನು ನೆನಪಿಸಿಕೊಂಡು ಭಾವುಕರಾದರು.
‘ನಾನು 9ನೇ ತರಗತಿಯಲ್ಲಿದ್ದಾಗ ಅಪ್ಪ (ಶಿವಲಿಂಗಪ್ಪ ಹೊರಟ್ಟಿ) ತೀರಿಕೊಂಡರು. ಅವ್ವ (ಗುರವ್ವ) ಶ್ರೀಮಂತ ತವರು ಮನೆಯಿಂದ ಬಂದಿದ್ದರೂ, ಸ್ವಾಭಿಮಾನಕ್ಕಾಗಿ ಹೊಲದಲ್ಲಿ ಸ್ವತಃ ದುಡಿದು, ಹಾಲು–ಮೊಸರು ಮಾರಿ ನನ್ನನ್ನು ಶಾಲೆಗೆ ಕಳುಹಿಸಿದಳು.

ನನಗೆ ತಿಂಗಳಿಗೆ ₹ 50 ಕೊಡುತ್ತಿದ್ದಳು’ ಎನ್ನುವಾಗ ಕಣ್ಣೀರು ತಡೆದುಕೊಳ್ಳಲಾಗದೇ, ಹೊರಟ್ಟಿ ಕೆಲ ನಿಮಿಷ ಮೌನವಾದರು.
‘ಬಿಪಿ.ಇಡಿ ಕಲಿಯಲು ಬೆಂಗಳೂರಿಗೆ ಹೋಗಬೇಕಾಗಿ ಬಂದಾಗ ತನ್ನ ಎರಡು ಬಂಗಾರದ ಒಡವೆ ಮಾರಿದ್ದಳು’ ಎಂದು ಮತ್ತೊಮ್ಮೆ ಭಾವುಕರಾದರು.
‘ನನ್ನ ತಂದೆ ವರ್ಷಕ್ಕೆ ಇಬ್ಬರು ಮಕ್ಕಳಿಗೆ ಸ್ಲೇಟು, ಪುಸ್ತಕ, ಚೀಲಗಳನ್ನು ಕೊಡುತ್ತಿದ್ದರು. ಒಮ್ಮೆ ಇನ್ನೆರಡು ಮಕ್ಕಳು ಬಂದು ಕೇಳಿದಾಗ, ಅವರ ಬಳಿ ಹಣ ಇರಲಿಲ್ಲ. ಮನೆಗೆ ಬಂದು, ತಾಯಿಯ ಮುಂದೆ ಕಣ್ಣೀರಿಟ್ಟರು. ಆ ಘಟನೆಯಿಂದ ನೊಂದ ಅವ್ವ, ‘ನೀನು ದೊಡ್ಡವನಾದ ಮೇಲೆ ಒಂದು ಶಾಲೆ ತೆರೆದು ಬಡ ಮಕ್ಕಳಿಗೆ ಶಿಕ್ಷಣ ನೀಡು’ ಎಂದು ನನಗೆ ಹೇಳಿದ್ದಳು’ ಎಂದು ತಮ್ಮ ಬಾಲ್ಯದ ದಿನಗಳಿಗೆ ಜಾರಿದರು.

‘ಈಗ ಮಕ್ಕಳನ್ನು ತಾವೇ ಲಾಲನೆ–ಪಾಲನೆ ಮಾಡದೇ, ಪ್ರತಿಷ್ಠೆಗಾಗಿ ನರ್ಸರಿ, ಇಂಗ್ಲಿಷ್‌ ಮಾಧ್ಯಮ, ರೆಸಿಡೆನ್ಶಿಯಲ್ ಸ್ಕೂಲ್‌ ಎಂದು ಒತ್ತಡ ಹಾಕುತ್ತಾರೆ. ಹೀಗಾಗಿ ಮಕ್ಕಳಿಗೆ ‘ಮಮ್ಮಿ’ ಇದ್ದಾರೆಯೇ ಹೊರತು, ‘ಅವ್ವ’ ಸಿಕ್ಕಿರುವುದಿಲ್ಲ’ ಎಂದು ಗದ್ಗದಿತರಾದರು. ಬಳಿಕ, ತಮ್ಮ ಮೊಬೈಲ್‌ ಮೂಲಕ ‘ಒಳಿತು ಮಾಡೋ ಮನುಷ್ಯಾ… ನೀ ಇರೋದು ಮೂರು ನಿಮಿಷ..’ ಎಂಬ ಹಾಡನ್ನು ಪತ್ರಕರ್ತರಿಗೆ ಕೇಳಿಸಿದರು.

‍ಲೇಖಕರು Admin

12 January, 2016

1 Comment

  1. Kiran

    a rare breed

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading