ಅರ್ಧ ಸತ್ಯಗಳು
ಲಕ್ಷ್ಮೀಕಾಂತ ಇಟ್ನಾಳ
ಪ್ರತಿಬಾರಿಯೂ ಬಂದಾಗ ಬಂದು ಹೋಗುವನವನು
ಈ ಸಾರೆ ಬರಲಿಲ್ಲ ಭೇಟಿಗೆ, ಇಲ್ಲಿಗೆ ಬಂದಿದ್ದರೂ ಸಹ
ಎದುರಾದವರೆದುರು ನನ್ನದೇ ಮಧುರ ಮಾತು
ಅದೇನೋ ಮುನಿಸಂತೆ, ನನ್ನರಿವಿಗೆ ಬರದಿದ್ದರೂ ಸಹ
ನಾಲ್ಕು ಗೋಡೆಗಳ ಆವರಣಕ್ಕೆ ಮನೆ ಎನ್ನುವರು ತಾನೆ
ಅವನ ಮನೆಯ ಒಳಗೋಡೆಗೆ ನನ್ನದೇ ತುಡಿತ, ತೋರದಿದ್ದರೂ ಸಹ
ನನ್ನ ಮನಸೂ ಕೂಡ ಅವನದೇ ಗುಂಗಿನಲ್ಲಿರುತ್ತದೆ,
ಎಷ್ಟೊಂದು ಪ್ರೀತಿಸುತ್ತಾನವನು, ದ್ವೇಷದಲ್ಲಿದ್ದರೂ ಸಹ
ಇಲ್ಲವೆನ್ನುವುದು ಅಲ್ಲವಾಗದು, ಅಲ್ಲವೆನ್ನುವುದು ಇಲ್ಲವೆಂದಾಗದು
ಒಲ್ಲದಲ್ಲೂ ಒಲವಿದೆ, ಗೋಚರವು ಅಗೋಚರವಿದ್ದರೂ ಸಹ
ಕಡಲು ಉಕ್ಕಿ ಹರಿವುದು ದಂಡೆ ಹರಿದು
ಸನಿಹ ಬಾರದ ಚಂದಿರ, ದೂರ ಗಗನದಲ್ಲಿದ್ದರೂ ಸಹ
ನೆರೆಹೊರೆಯವರು ಕೇಳುತ್ತಿದ್ದರು, ಅವನು ಈ ಸಾರೆ ಬಂದಿದ್ದನೆ?
ಸುಳ್ಳು ಹೇಳುತ್ತಿಲ್ಲವೆನಿಸಿತು ನನಗೆ, ಅದನ್ನೇ ಹೇಳುತ್ತಿದ್ದರೂ ಸಹ!







ಚೆಂದದ ಕವಿತೆ..
kavite tumbaa chennaagide….
koneguu ulhisikollhuva koutukave kaviteya shakti..