ರೋಹಿತ್ ವೇಮುಲ ಆತ್ಮಹತ್ಯೆಯನ್ನು ವಿರೋಧಿಸಿ ನಡೆಸುತ್ತಿರುವ ಬೃಹತ್ ಪ್ರತಿಭಟನೆಯ ಸ್ಥಳಕ್ಕೆ ಇತ್ತೀಚಿಗೆ ಖ್ಯಾತ ಪತ್ರಕರ್ತ ಮತ್ತು ಚಿಂತಕ ಪಿ ಸಾಯಿನಾಥ್ ಭೇಟಿ ನೀಡಿದ್ದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು ಹೇಗೆ ಹಲವು ರೀತಿಯ ಮೂಲಭೂತವಾದ ಜನರ ಹಕ್ಕುಗಳನ್ನು ಕನಸುಗಳನ್ನು ಕಸಿಯುತ್ತಿದೆ ಎಂಬುದನ್ನು ಎಲೆ ಎಳೆಯಾಗಿ ಬಿಡಿಸಿಟ್ಟರು .
”ನಮ್ಮ ಹೋರಾಟದ ಮಾದರಿಗಳು ಭಿನ್ನ ಇರಬಹುದು ಆದರೆ ಉದ್ದೇಶ ಅಂಬೇಡ್ಕರ್ ಹೇಳಿದ ಶಿಕ್ಷಣ, ಸಂಘಟನೆ, ಹಾಗೂ ಹೋರಾಟದ ಹಕ್ಕುಗಳಿಗಾಗಿದೆ ಎಂಬುದನ್ನು ಖಂಡಿತಾ ಮರೆಯದಿರೋಣ” ಎಂದರು .
ಅವರ ಭಾಷಣದ ವಿಡಿಯೋ ಇಲ್ಲಿದೆ
ಹಾಗೆಯೇ ಕಿರಣ್ ಗಾಜನೂರು ಅವರು ಮಾಡಿಕೊಟ್ಟಿರುವ ಭಾಷಣದ ಅನುವಾದವೂ ಇದೆ

ಪಿ ಸಾಯಿನಾಥ್
ಕನ್ನಡಕ್ಕೆ : ಕಿರಣ್ ಗಾಜನೂರು
ಭಾರತದ ತಳವರ್ಗದ, ತುಳಿತಕ್ಕೊಳಗಾದವರ, ಅಂಚಿಗೆ ತಳ್ಳಲ್ಪಟ್ಟವರ ನೆಲೆಯಲ್ಲಿ ಯೋಚಿಸಿದರೆ ರೋಹಿತ್ ಬಹಳ ದೊಡ್ಡ ಸಾಧನೆ ಮಾಡಿದ್ದಾನೆ! ಆತ ಮಾಡಿದ ಸಾಧನೆ ನೀವು ತಿಳಿದುಕೊಳ್ಳಬೇಕಾದರೆ ಈ ದೇಶದ ಜನಗಣತಿಯ ವರದಿಗಳನ್ನು, ಸಮುದಾಯಗಳ ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳ ಸಮೀಕ್ಷೆಗಳನ್ನು, ನ್ಯಾಷನಲ್ ಸ್ಯಾಂಪೆಲ್ ಸರ್ವೇ ಇಲಾಖೆಯ ಅಂಕಿ-ಅಂಶಗಳನ್ನು ಗಮನಿಸಬೇಕು. ಆಗ ಆತನ ಸಾಧನೆ ಏನು ಎಂಬುದು ಅರ್ಥವಾಗುತ್ತದೆ.
128 ಕೋಟಿ ಜನಸಂಖ್ಯೆಯುಳ್ಳ ಭಾರತದಲ್ಲಿ ಕೇವಲ ಶೇಕಡಾ 3 , ಕೇವಲ ಮೂರೆ ಮೂರು ಶೇಕಡಾ ಗ್ರಾಮೀಣ ಕುಟುಂಬಗಳು ಪದವೀಧರ ಸದಸ್ಯರನ್ನು ಹೊಂದಿವೆ. ಇದು ಭಾರತದ ಒಟ್ಟು ಜನಸಂಖ್ಯೆಯ ಸರಾಸರಿ. ಇದನ್ನು ಬರೀ ಆದಿವಾಸಿ ಮತ್ತು ದಲಿತರ ಹಿನ್ನಲೆಯಲ್ಲಿ ನೋಡಿದರೆ ಆ ಸಂಖ್ಯೆ ಇನ್ನೂ ಕಡಿಮೆ. ಭಾರತದ ಜನಗಣತಿ ಪ್ರಕಾರ ಈ ದೇಶದಲ್ಲಿ ಸರಿಸುಮಾರು 40 ಕೋಟಿ ಮಂದಿ ಇದುವರೆಗೂ ಯಾವುದೆ ಹಂತದ ಶಿಕ್ಷಣವನ್ನೇ ಕಂಡಿಲ್ಲ! ಅಂತಹ ಹಿನ್ನಲೆಯಿಂದ ಬಂದಂತಹ ರೋಹಿತ್ ಮೆರಿಟ್ ಕೋಟಾದಲ್ಲಿ ಪಿ.ಹೆಚ್.ಡಿ ಹಂತಕ್ಕೆ ಬರುತ್ತಾನೆ ಎಂದರೆ ಅದಕ್ಕಿಂತ ಸಾಧನೆ ಏನಿದೆ! ಇದನ್ನು ಸಾಧನೆ ಎನ್ನುವುದಾದರೆ..
ದುರಂತ ಎಂದರೆ ಸಮಾಜದ ಇಂತಹ ನಿರಂತರ ಶೋಷಣೆ, ತಾರತಮ್ಯವನ್ನು ಜಯಿಸಿ ಮೆರಿಟ್ ಆಧಾರದಲ್ಲಿ ಕೆಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ಪಿ.ಹಚ್.ಡಿ ಹಂತಕ್ಕೆ ಬಂದ ರೋಹಿತನ ವಿರುದ್ಧ ನಿಂತಿರುವುದು ಯಾರು ಗೊತ್ತೇ?- ಕಾಲೇಜು ಡ್ರಾಪ್ ಜೌಟ್ ಆದ ಶಿಕ್ಷಣ ಸಚಿವರು! ಭಾರತದ ರಾಜಕೀಯ ಇತಿಹಾಸದಲ್ಲಿಯೇ ಇವರು ಅತ್ಯಂತ ಕಳಪೆ ಶಿಕ್ಷಣ ಸಚಿವೆ ಎನ್ನುವುದರ ಬಗ್ಗೆ ನನಗೆ ಯಾವ ಸಂಶಯವೂ ಇಲ್ಲ! ನಾನು ರೋಹಿತ್ ನನ್ನು ಅವರೊಂದಿಗೆ ಹೋಲಿಸುವುದಿಲ್ಲ ಏಕೆಂದರೆ ನಮಗೆ ಆಕೆಯ ಶೈಕ್ಷಣಿಕ ಅರ್ಹತೆಗಳೇನು ಎಂಬುದೇ ಗೊತ್ತಿಲ್ಲ! ಅವರು ಪ್ರತಿಭಾರಿ ಪ್ರಮಾಣ ಪತ್ರಗಳನ್ನು ಸಲ್ಲಿಸುವಾಗ ಅವರ ಪದವಿ ಬದಲಾಗುತ್ತಿರುತ್ತವೆ. ಕಳೆದ ಚುನಾವಣೆಯ ನಂತರ ಅವರು ಎ.ಎಲ್ ವಿಶ್ವವಿದ್ಯಾನಿಲಯದ ಪ್ರಮಾಣ ಪತ್ರ ಪ್ರದರ್ಶಿಸಿದ್ದರು..
ಆದರೆ ರೋಹಿತ್ ನನ್ನು ನೋಡಿ. ಈ ಹುಡುಗ ಶಾಲೆಗಳ ಮುಖವನ್ನೆ ನೋಡದ ಆ ೪೦ ಕೋಟಿ ಜನರ ನಡುವಿನಿಂದ ಬಂದಿದ್ದಾನೆ, ಈ ದೇಶದ ಶೋಷಿತ ಇತಿಹಾಸದ ಮಧ್ಯದಿಂದ ಎದ್ದು ಬಂದಿದ್ದಾನೆ. ಈ ಸಮಾಜದ ಶೋಷಣೆಯಲ್ಲಿ ನಲುಗಿ, ಜೀತ ಕಾರ್ಮಿಕನಾಗಿ ದುಡಿದು ಪಿ.ಹೆಚ್.ಡಿ ಅಧ್ಯಯನಕ್ಕೆಂದು ಬಂದಿದ್ದಾನೆ.
ಆದರೆ ಏನಾಗುತ್ತಿದೆ ನೋಡಿ. ಕೇಂದ್ರ ಸಚಿವರು ( ಬಂಡಾರು ದತ್ತಾತ್ರೇಯ) ನಾನು ಎರಡು ಪತ್ರ ಬರೆದೆ ಎನ್ನುತ್ತಾರೆ! ಶಿಕ್ಷಣ ಸಚಿವರು ನಾನು ಐದು ಪತ್ರ ಬರೆದು ಎಂದು ಹೇಳುತ್ತಿದ್ದಾರೆ. ಆಶ್ಚರ್ಯದ ವಿಷಯ ಎಂದರೆ ಆ ಹುಡುಗರ ಮೇಲೆ ಏನು ಕ್ರಮ ಜರುಗಿಸಲಾಗಿದೆ ಎಂದು ಐದು ಪತ್ರ ಬರೆಯುವ ಶಿಕ್ಷಣ ಸಚಿವರಿಗೆ ಆ ಮಕ್ಕಳಿಗೆ ಕಳೆದ ಏಳು ತಿಂಗಳಿಂದ ಶಿಷ್ಯವೇತನ ಏಕೆ ಕೊಟ್ಟಿಲ್ಲ ಎಂದು ಒಂದೇ ಒಂದು ಸಾಲು ಬರೆಯುವುದಿಲ್ಲ..

ಐವರು ವಿದ್ಯಾರ್ಥಿಗಳ ಬಗ್ಗೆ ಏನು ಕ್ರಮ ತೆಗೆದುಕೊಂಡಿದ್ದೀರಿ ಎಂದು ಐದು ಪತ್ರ ಬರೆಯುವ ನೀವು ಅದೇ ಪತ್ರದಲ್ಲಿ ಆ ಹುಡುಗನ ಕುಟುಂಬ ಅವಲಂಬಿಸಿದ್ದ, ಆತ ಹೊಟ್ಟೆ ಬಟ್ಟೆ ಕಟ್ಟಿ ಸರಳ ಬದುಕು ನಡೆಸಿ, ಆದಷ್ಟೂ ದುಡ್ಡು ಉಳಿಸಿ ಕುಟುಂಬಕ್ಕೆ ಕಳುಹಿಸಿ ಕೊಡುತ್ತಿದ್ದ ಶಿಷ್ಯ ವೇತನವನ್ನೇ ತಡೆದು ಹಾಕಿದ ವ್ಯವಸ್ಥೆಯ ಕುರಿತು ಒಂದು ಪ್ಯಾರ, ಒಂದು ಸಾಲು, ಒಂದೇ ಒಂದು ಪದವನ್ನೂ ಬರೆಯುವುದಿಲ್ಲ. ಆತನ ಮೇಲೆ ಏನು ಕ್ರಮ ತೆಗೆದುಕೊಂಡಿದ್ದಾರೆ ಎನ್ನುವುದರಲ್ಲಿ ನಿಮಗಿರುವ ಆಸಕ್ತಿ ಆತನ ಶಿಷ್ಯ ವೇತನ ನಿಲ್ಲಿಸಿರುವುದ ಕುರಿತು, ಅದನ್ನೆ ನಂಬಿಕೊಂಡ ಆತನ ಕುಟುಂಬದ ಪರಿಸ್ಥಿತಿಯ ಬಗ್ಗೆ ಇರುವುದಿಲ್ಲ!
ನಾನು ಇಂದು ರಾಜಕೀಯ, ಅಕಾಡೆಮಿಕ್ ಮತ್ತು ರಾಷ್ಟ್ರ ಎಂಬ ಮೂರೂ ಮುಖ್ಯ ವಿಷಯಗಳನ್ನು ಗಮನಿಸುತ್ತಿದ್ದೇನೆ. ನಾನು ಈ ವಿಷಯಗಳ ಬಗ್ಗೆ ಬರುತ್ತಿರುವ ಪತ್ರಿಕಾ ವರದಿಗಳನ್ನೂ ಗಮನಿಸುತ್ತಿದ್ದೇನೆ. ಈ ವರದಿಗಳಲ್ಲಿ ಆತ ಬರೆದ ಆತ್ಮಹತ್ಯಾ ಪತ್ರವನ್ನು ಆತ್ಮಹತ್ಯೆಯಿಂದ ಪ್ರತ್ಯೇಕಿಸಿ ನೋಡುವ ಪ್ರಯತ್ನ ನಡೆಯುತ್ತಿದೆ. ಆತ್ಮಹತ್ಯಾ ಪತ್ರವನ್ನು ಆತನ ಬದುಕಿನಿಂದ ಪ್ರತ್ಯೇಕಿಸಿ ನೋಡುವ ಪ್ರಯತ್ನಗಳು ನಡೆಯುತ್ತಿವೆ. ನಾವು ರೋಹಿತನ ಸಾವನ್ನಷ್ಟೆ ನೋಡಿದರೆ ಸಾಲದು, ಬದಲಾಗಿ ಆತ ಬದುಕಿದ ಬದುಕಿನ ರೀತಿಯನ್ನು ಗಮನಿಸಬೇಕು ರೋಹಿತನ ಬದುಕನ್ನು, ಸಂಘಟನೆಯನ್ನು, ಸ್ನೇಹಿತರನ್ನು ಸಂಗಾತಿಗಳನ್ನು ಆತ ಬರೆದ ಪತ್ರದಿಂದ ಪ್ರತ್ಯೇಕಿಸಿ ಓಹೋ ಇದು ಒಂದು ದುಖ: ತರುವ ಆತ್ಮಹತ್ಯೆ ಅಷ್ಟೆ, ಇದಕ್ಕೂ ಶೋಷಣೆಗೂ, ಇದಕ್ಕೂ ಈ ಸಮಾಜದಲ್ಲಿನ ರಚನಾತ್ಮಕ ತಾರಮತ್ಯಕ್ಕೂ ಸಂಬಂದವಿಲ್ಲ ಎಂದು ಮಾತನಾಡುವ ಶುಷ್ಕ ಮನಸ್ಸಿನವರು ನಮ್ಮ ನಡುವೆ ಬರೆಯುತ್ತಿದ್ದಾರೆ..
ಇನ್ನೂ ಮುಖ್ಯವಾದ ವಿಚಾರ ಇಂದು ಹಿಂದೂಸ್ಥಾನ್ ಟೈಮ್ಸ್ ನಲ್ಲಿ ಒಬ್ಬ ಪತ್ರಕರ್ತ ಇದು ಒತ್ತಡದಿಂದ ಸಂಭವಿಸಿದ ಆತ್ಮಹತ್ಯೆ ಎಂದು ಬರೆಯುತ್ತಾರೆ. ಇದೇ ವ್ಯಕ್ತಿ ಹಿಂದೆ ರೈತರ ಆತ್ಮಹತ್ಯೆಗಳು ಒತ್ತಡದಿಂದ ಸಂಬವಿಸಿರುವುದು ಇದಕ್ಕೂ ಆರ್ಥಿಕತೆಗೂ ಯಾವುದೇ ಸಂಬಂದವಿಲ್ಲ ಎಂದು ಬರೆದಿದ್ದರು. ಇಂದು ರೋಹಿತನ ಆತ್ಮಹತ್ಯೆ ಒತ್ತಡದಿಂದ ಸಂಭವಿಸಿದೆ, ಇದು ಶೋಷಣೆಯ ಕಾರಣಕ್ಕೆ ನಡೆದ ಘಟನೆ ಅಲ್ಲ ಎಂದು ಬರೆಯುತ್ತಾರೆ. ನಾವು ಇವರಿಗೆ 27ರ ಆ ಹುಡುಗ ಸಾಯುವ ಒತ್ತಡ ಎಲ್ಲಿಂದ ಬಂತು? ನಿಮ್ಮ ತರ್ಕವೆ ಸರಿ ಎಂದಾದರೆ ಈ ಸಮಾಜದ ಕೇಲವೇ ವರ್ಗ ಮತ್ತು ಜಾತಿಯವರು ಯಾಕೆ ಒತ್ತಡಕ್ಕೆ ಒಳಗಾಗುತ್ತಾರೆ? ಎಂಬ ಪ್ರಶ್ನೆಗಳನ್ನು ಕೇಳಬೇಕಿದೆ. . .
ಇಲ್ಲಿ ಇನ್ನೊಂದು ವಿಷಪೂರಿತ ತರ್ಕವೊಂದಿದೆ. ಈ ಲೇಖಕ ವಿವರಿಸುವಂತೆ ಇದು ಭಾವಾನಾತ್ಮಕ ಒತ್ತಡದಿಂದ ಸಂಭವಿಸಿದ ಆತ್ಮಹತ್ಯೆ ಅಲ್ಲ! ಬದಲಾಗಿ ಇದು ಮನೋವೈಜ್ಞಾನಿಕ , ಮಾನಸಿಕ ಸ್ಥಿಮಿತಕ್ಕೆ ಸಂಬಂಧಿಸಿ ಆತನೊಳಗೆ ನಡೆದ ಹೊಯ್ದಾಟ ಎಂದು ಅವರು ಬರೆಯುತ್ತಾರೆ. ರೋಹಿತ್ ನ ಆತ್ಮಹತ್ಯಾ ಪತ್ರ ಎಲ್ಲಿಯೂ ನಮಗೆ ಬೇರೆ ಕಾರಣಗಳನ್ನು ತೋರಿಸುವುದಿಲ್ಲ. ಅದು ಆತನೊಳಗೆ ಹುಟ್ಟಿರುವ ಜೀಗುಪ್ಸೆಯ ಕಾರಣದಿಂದ ಸಂಭವಿಸಿರುವ ಕ್ರಿಯೆ. ಇದಕ್ಕೂ ಹೊರಗಿನ ಸಂಗತಿಗಳಿಗೂ ಸಂಬಂಧವಿಲ್ಲ ಎಂದು ಬರೆಯುತ್ತಾರೆ. ಇಂತಹ ಮಂದಿ ನಮ್ಮ ನಡುವೆ ಇದ್ದಾರೆ. ಈ ಇಡೀ ಹೋರಾಟವನ್ನು ಒಂದು ಪಿತೂರಿ ಎಂದೇ ಕರೆಯುತ್ತಿರುವ ಬರಹಗಾರರನ್ನು ಮರೆತು ಬಿಡೋಣ….
ಅದರ ಬದಲು ಈ ಸಮಾಜವನ್ನು ಅರ್ಥಮಾಡಿಕೊಳ್ಳಲು, ಸಮಸ್ಯೆಯನ್ನು ಗುರುತಿಸಲು ಪ್ರಯತ್ನಿಸೋಣ. ಈ ಸಮಾಜದಲ್ಲಿ ರೋಹಿತ್ ಎಲ್ಲಿದ್ದಾನೆ, ದಲಿತರು ಎಲ್ಲಿದ್ದಾರೆ, ಎಲ್ಲಿ ಶೋಷಣೆ ನಡೆಯುತ್ತಿದೆ ಎಂಬುದನ್ನು ನೋಡೋಣ. 3 ದಿನಗಳ ಹಿಂದೆ ನಾನು ರಾಜಸ್ಥಾನದಲ್ಲಿ ಇದ್ದೆ. ಅಲ್ಲಿನ ಹೈಕೊರ್ಟ್ “ರಾಜಸ್ಥಾನ್ ಪಂಚಾಯಿತಿ ಕಾಯ್ದೆಯನ್ನು” ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಅನೂರ್ಜಿತಗೊಳಿಸಿದೆ.
ನಿಮಗೆ ಗೊತ್ತಿರಲಿ ಪ್ರಸ್ತಾಪಿತ ರಾಜಸ್ಥಾನ್ ಪಂಚಾಯಿತಿ ಕಾಯ್ದೆ ಶೈಕ್ಷಣಿಕ ಅರ್ಹತೆಯನ್ನು ಒಂದು ಮಾನದಂಡ ಎಂದು ಪರಿಗಣಿಸಿರುವುದರಿಂದ ಇದು 90ಶೇ ಮಹಿಳೆಯರು ಗ್ರಾಮೀಣ ಪಂಚಾಯಿತಿ ಚುನಾವಣೆಗಳಲ್ಲಿ ಸ್ಪರ್ಧಿಸುವ ಅವಕಾಶವನ್ನು ನಿರಾಕರಿಸುತ್ತದೆ. ಇದು ಜಾರಿಯಾದರೆ ಶೇ 75 ದಲಿತ ಮಹಿಳೆಯರು ಗ್ರಾಮಿಣ ಚುನಾವಣೆಗಳಲ್ಲಿ ಸ್ಪರ್ಧಿಸುವ ಅವಕಾಶ ಕಳೆದುಕೊಳ್ಳಲಿದ್ದಾರೆ.
ವಿವರವಾಗಿ ನೋಡುವುದಾದರೆ ಈ ಕಾಯ್ದೆಯ ಪ್ರಕಾರ 21 ವರ್ಷ ಮೇಲ್ಪಟ್ಟ ಪ್ರಾಥಮಿಕ ಶಿಕ್ಷಣ ಪೂರೈಸಿದ ಮಹಿಳೆಯರು ಚುನಾವಣೆಗೆ ಸ್ಪರ್ಧಿಸಬಹುದು. 21 ವರ್ಷ ವಯಸ್ಕರ ಗುಂಪಿನಲ್ಲಿ ಕೇವಲ 11.1 ಶೇ ಜನರು ಮಾತ್ರ ಶಾಲೆಯಲ್ಲಿ ಕಲಿತಿದ್ದಾರೆ. ಆ ಕಾರಣಕ್ಕೆ ಮಿಕ್ಕ 89.9 ಶೇ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವನ್ನೆ ಕಳೆದುಕೊಳ್ಳಲಿದ್ದಾರೆ. ಇನ್ನು ಪಂಚಾಯಿತಿ ಅಧ್ಯಕ್ಷರಾಗಲು 8ನೇ ತರಗತಿಗಿಂತ ಮೇಲಿನ ಶೈಕ್ಷಣಿಕ ಅರ್ಹತೆ ಹೊಂದಿರಬೇಕು ಎನ್ನುತ್ತದೆ ಈ ಕಾಯ್ದೆ. ಇದರಿಂದ 90. 4 ಶೇ ದಲಿತ ಮಹಿಳೆಯರು ಮತ್ತು 62 ಶೇ ಪುರುಷರು ಪಂಚಾಯಿತಿ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ.
ನಿಮಗೆ ಒಂದು ಆಸಕ್ತಿಕರ ಅಂಶ ತಿಳಿಸಬೇಕು. ದೇಶದ ಎಲ್ಲಾ ನ್ಯಾಯಾಲಯಗಳಿಗೆ ಹೋಲಿಸಿದರೆ ರಾಜಸ್ತಾನ್ ಹೈಕೊರ್ಟ್ ಗೆ ಒಂದು ವಿಷೇಷತೆ ಇದೆ. ಅಲ್ಲಿ ಸಂವಿಧಾನ ಕರ್ತೃ ಡಾ. ಅಂಬೇಡ್ಕರ್ ಪ್ರತಿಮೆ ನ್ಯಾಯಾಲಯದ ಹೊರಗಿದೆ. ಅದೂ ಟ್ರಾಫಿಕ್ ಕಡೆ ಮುಖ ಮಾಡಿಕೊಂಡು ನಿಂತಿದೆ. ಆದರೆ ನ್ಯಾಯಾಲಯದ ಒಳಗೆ ಮನುವಿನ 20 ಅಡಿ ಪ್ರತಿಮೆಯನ್ನು ನಿಲ್ಲಿಸಲಾಗಿದೆ!.
ದೇಶದ ಯಾವ ನ್ಯಾಯಾಲಯದಲ್ಲಿಯೂ ಇಂತಹ ಅಸಂಗತಿ ಕಾಣಲು ಸಿಗಲಾರದು! ಇರಲಿ ವಿಷಯ ಅದಲ್ಲ. ಈ ರೀತಿಯ ಅನ್ಯಾಯಯುತ ಕಾಯ್ದೆಯನ್ನು ಸುಪ್ರಿಂ ಕೋರ್ಟ್ನ ಸಂವಿಧಾನಿಕ ಪೀಠ ಪರಿಶಿಲನೆಗೆ ಒಳಪಡಿಸುತ್ತದೆ ಎಂಬ ಭರವಸೆಯನ್ನು ನಾವು ಉಳಿಸಿಕೊಳ್ಳೊಣ. ಆದರೆ ಈ ಕಾಯ್ದೆ ನಿಜಕ್ಕೂ ಅನ್ಯಾಯ ಮತ್ತು ಶೋಷಣೆಯ ಪ್ರತೀಕವಾಗಿದೆ ಇದರ ವಿರುದ್ಧ ನಾವು ಹೋರಾಟವನ್ನು ರೋಪಿಸಬೇಕಿದೆ. . . .
ಇದೊಂದೇ ಸಮಸ್ಯೆಯಲ್ಲ, ನಾವು ಜಾತಿಗಳ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ಅಂಕಿ-ಅಂಶಗಳನ್ನು ನೋಡಿದರೆ ಸಾಕು ಈ ದೇಶದ ಬಡವರ ಬದುಕು ಏನಾಗಿದೆ ಎಂದು ಅರ್ಥವಾಗಿ ಹೋಗುತ್ತದೆ. ಸರಿ ಈಗ ಸ್ಮೃತಿ ಇರಾನಿ ಅವರ ಮಾತಿಗೇ ಬರೋಣ. ಒಂದು ವಿಷಯದಲ್ಲಿ ನಾನು ಸ್ಮೃತಿ ಇರಾನಿಯವರ “ಇದು ದಲಿತ ಮತ್ತು ದಲಿತೇತರರ ನಡುವಿನ ಸಂಘರ್ಷವಲ್ಲ” ಎಂಬ ಹೇಳಿಕೆಯನ್ನು ಸಮರ್ಥಿಸುತ್ತೇನೆ. ಖಂಡಿತ ಅದು ಸತ್ಯ. ಇದು ದಲಿತ ಮತ್ತು ದಲಿತೇತರರ ನಡುವಿನ ಹೋರಾಟವಲ್ಲ. ಬದಲಾಗಿ ಇದು “ಹಿಂದೂ ಮೇಲ್ಜಾತಿಯ ಮೂಲಭೂತವಾದಿಗಳು v/s ದಲಿತ- ದಲಿತೇತರ- ಮನುಷ್ಯತ್ವ ಉಳ್ಳವರರ ನಡುವಿನ ಸಂಘರ್ಷ”
ನಾನು ಮೊದಲೇ ಹೇಳಿದಂತೆ ಈ ದೇಶದಲ್ಲಿ 40 ಕೋಟಿ ಜನ ಇದುವರೆಗೂ ಯಾವ ರೀತಿಯ ಶಿಕ್ಷಣ ಸಂಸ್ಥೆಗಳ ಒಳಗೂ ಕಾಲಿಡಲು ಆಗಿಲ್ಲ. ಈ ದೇಶಧ ಒಟ್ಟು ಜನಸಂಖ್ಯೆಯ ಮೂರನೆ ಒಂದು ಭಾಗದಷ್ಟು ಜನರಿಗೆ ಶಿಕ್ಷಣವನ್ನು ನಿರಾಕರಿಸಲಾಗಿದೆ. ಇವರಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ದಲಿತರು, ಆದಿವಾಸಿಗಳು, ಮಹಿಳೆಯರು ಮತ್ತು ಬಡ ಹಿಂದುಳಿದ ಸಮುದಾಯಗಳ ಬದುಕು ವಂಚಿತ ವಿಧ್ಯಾರ್ಥಿಗಳೇ ಇದ್ದಾರೆ.
ಇಂದು ಭಾರತ 68 ಮಿಲಿಯನ್ ಪಧವೀಧರರನ್ನು ಹೊಂದಿದೆ. ಆದರೆ ಇದರ ಆರು ಪಟ್ಟು ಜನರು ಅನಕ್ಷರಸ್ಥರಿದ್ದಾರೆ. ಈ ದೇಶದಲ್ಲಿ ಅಸಮಾನತೆ ಎಷ್ಟು ಹೆಚ್ಚಿದೆ ಎಂದರೆ ಎಲ್ಲಾ ರೀತಿಯ ತಾರತಮ್ಯಗಳನ್ನು ಮತ್ತೆ ಹೇರಲಾಗುತ್ತಿದೆ. ಇಂದು ಸಮೀಕ್ಷೆಗಳನ್ನು ನೋಡಿದರೆ ಈ 1.28 ಬಿಲಿಯನ್ ಜನಸಂಖ್ಯೆಯ ದೇಶದಲ್ಲಿ ಕೇವಲ 100 ಮಂದಿ ಎರಡನೇ ಒಂದು ಭಾಗದಷ್ಟು ಸಂಪತ್ತನ್ನು ಹೊಂದಿದ್ದಾರೆ. ಅದರಲ್ಲಿ 15 ಜನ ಭಾರತೀಯರು ಈ ದೇಶದ ಅರ್ಧದಷ್ಟು ಜನಸಂಖ್ಯೆಯ ಸಂಪತ್ತನ್ನು ಹೊಂದಿದ್ದಾರೆ. ಈ ಎಲ್ಲಾ ಪ್ರಕರಣಗಳ ಪರಿಣಾಮ ಅನುಭವಿಸುತ್ತಿರುವವರು ಈ ದೇಶದ ದಲಿತ, ಆದಿವಾಸಿ, ಮಹಿಳೆ ಮತ್ತು ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳು. . .
ಇನ್ನೂ ಈ ದೇಶದ ಜನಸಂಖ್ಯೆಯ ಉಗ್ರಾಣವಾದ ಗ್ರಾಮೀಣ ಭಾರತವನ್ನು ನೋಡಿದರೆ ನಿಮಗೆ ಆಶ್ಚರ್ಯವಾಗಬಹದು ಈ ದೇಶದ 1 ಶೇ ಜನರು ಈ ದೇಶದ ಶೇ 46 ರಷ್ಟು ಸಂಪನ್ಮೂಲಗಳ ಮೇಲಿನ ಒಡೆತನ ಹೊಂದಿದ್ದಾರೆ. ಇದು ಅಮೇರಿಕಾಕ್ಕಿಂತ ಕೆಟ್ಟ ಸ್ಥಿತಿ. ಅಲ್ಲಿ 1ಶೇ ಜನರು ಆ ದೇಶದ 39ಶೇ ಸಂಪತ್ತಿನ ಒಡೆತನ ಹೊಂದಿದ್ದಾರೆ. ಈ ಎಲ್ಲವೂ ಆಗಿದ್ದು ಕೇವಲ 15-20 ವರ್ಷಗಳಲ್ಲಿ. ನವ ಉದಾರೀಕರಣದ ಹೆಸರಿನಲ್ಲಿ..
ನೀವು ಒಪ್ಪಿ ಬಿಡಿ ನಿಜವಾದ ಅರ್ಥದಲ್ಲಿ ಇಂದು ನಿಮ್ಮ ದೇಶ ಅಳಲ್ಪಡುತ್ತಿರುವುದು ಎರಡು ರೀತಿಯ ಮೂಲಭೂತವಾದಿಗಳಿಂದ. ಸಾಮಾಜಿಕ, ಆರ್ಥಿಕ ಮೂಲಭೂತವಾದಿಗಳು ಹಾಗೂ ಮಾರುಕಟ್ಟೆ ಆರ್ಥಿಕತೆಯ ಮೂಲಭೂತವಾದಿಗಳಿಂದ. ಇದು ಭಾರತಕ್ಕೆ ಸೀಮಿತವಾದ ಮೈತ್ರಿಕೂಟವಲ್ಲ. ಬದಲಾಗಿ ಇದು ಜಗತ್ತಿನಿಡೀ ಹರಡಿಕೊಂಡಿದೆ. ನಿಮಗೆ ಆಶ್ಚರ್ಯ ಆಗಬಹದು ಜಗತ್ತಿಗೆ ಅತ್ಯಂತ ಅಪಾಯಕಾರಿಯಾದ ಬಂಡವಾಳಶಾಹಿ ಆರ್ಥಿಕತೆಯನ್ನು ಕೊಡುಗೆಯಾಗಿ ಕೊಟ್ಟದ್ದು ಅಮೇರಿಕಾ. ಈ ಅಮೇರಿಕಾ ಇಸ್ರೇಲ್ ಮತ್ತು ಸೌದಿ ಅರೇಭಿಯಾ ಎಂಬ ಜಗತ್ತಿನ ಅತಿ ಅಪಾಯಕಾರಿಯಾದ ಎರಡು ಧಾರ್ಮಿಕ ಮೂಲಭೂತವಾದಿ ದೇಶಗಳನ್ನು ತಾನು ನಡೆಸುವ ಯುದ್ಧಗಳಿಗೆ ಬೆನ್ನೆಲುಬಾಗಿ ಮಾಡಿಕೊಂಡಿದೆ. ಅಂದರೆ ಅರ್ಥ ನಾವೀಗ ಹೋರಾಡಬೇಕಿರುವುದು ಅತ್ಯಂತ ಶಕ್ತಿಶಾಲಿಯಾದ, ಒಗ್ಗೂಡಿದ ಶತ್ರುವಿನ ವಿರುದ್ದ. . .
ನಾವು ಇಂದು ನಮ್ಮ ನಡುವಿನ ರಚನಾತ್ಮಕ, ಸಾಮಾಜಿಕ, ಆರ್ಥಿಕ, ಕಾನೂನಾತ್ಮಕ ತಾರತಮ್ಯಗಳ ಕುರಿತು ಧ್ವನಿ ಎತ್ತಬೇಕಿದೆ. ಈ ದೇಶದ ಮುಕ್ಕಾಲು ಭಾಗದ ಗ್ರಾಮೀಣ ಕುಟುಂಬಗಳ ಮುಖ್ಯಸ್ಥ ಅಬ್ಬಬ್ಬಾ ಎಂದರೆ ತಿಂಗಳಿಗೆ 5 ಸಾವಿರ ಸಂಪಾದನೆ ಮಾಡುತ್ತಿದ್ದಾನೆ ಎಂದು ಅಂಕಿ-ಅಂಶಗಳು ಹೇಳುತ್ತಿವೆ. ಇದು ದೇಶದ ಒಟ್ಟು ಜನಸಂಖ್ಯೆಗೆ ಹೋಲಿಸಿದರೆ ದೊರೆಯುವ ಚಿತ್ರಣ. ಇದನ್ನೇ ನೀವು ಅದಿವಾಸಿ ಮತ್ತು ದಲಿತರಿಗೆ ಅನ್ವಯಿಸಿ ನೋಡಿದರೆ ಪರಿಸ್ಥಿತಿ ಇನ್ನೂ ಭೀಕರ. ಇದನ್ನು ನಾವು ಅರ್ಥಮಾಡಿಕೊಳ್ಳಬೇಕು. .
ಕೆಲವರಂತೂ ವಿಶ್ವವಿದ್ಯಾಲಯದ ಈ ಹೋರಾಟವನ್ನು ಓ, ಹೈದರಾಬಾದ್ ಪ್ರಕರಣವಾ, ಅಯ್ಯೋ ಅಲ್ಲಿನ ಸ್ಥಿತಿನೇ ಹಾಗಿದೆ ಬಿಡಿ. ಅಲ್ಲೆಲ್ಲಾ ಈ ರೀತಿಯ ಘಟನೆಗಳು ಮಾಮೂಲು ಇದೆಲ್ಲಾ ನಮಗ್ಯಾಕೆ ಎನ್ನುತ್ತಾರೆ. ಆದರೆ ನಾನು ಒಂದು ವಿಷಯ ಹೇಳಬೇಕು. ಈ ದೇಶದ ಪ್ರತಿಷ್ಠಿತ ಎಂದು ಕರೆಸಿಕೊಳ್ಳುವ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾನಿಲಯ (ಜೆ ಎನ್ ಯು) ಕಾರ್ಯಕಾರಿ ಮಂಡಳಿಯ ಸದಸ್ಯನಾಗಿ ನಾನು ಸೇವೆ ಸಲ್ಲಿಸಿದ್ದೇನೆ. ಕಾರ್ಯಕಾರಿ ಮಂಡಳಿಯ ಸದಸ್ಯನಾಗಿ. ನನ್ನ ಇಡೀ ಅವಧಿಯ ಶೇ 80 ರಷ್ಟು ಸಮಯ ಮಿಸಲಾತಿ ವಿರೋಧಿಸುವ ಮನಸ್ಸುಗಳನ್ನು ಏದುರಿಸುವುದರಲ್ಲಿಯೇ ಕಳೆದು ಹೋಯಿತು. ಈ ಸತ್ಯವನ್ನು ನಿಮ್ಮೆದುರು ಇಡುತ್ತಿದ್ದೇನೆ. ಆ ಎಲ್ಲಾ ಹೋರಾಟಗಳು ಇಂದು ದಾಖಲೆಗಳಲ್ಲಿವೆ. ಆ ಸಮಯದಲ್ಲಿ ಸುಪ್ರಿಂ ಕೋರ್ಟ್ ಅದೇಶವನ್ನು ಧಿಕ್ಕರಿಸಿ ಹಿಂದುಳಿದ ವರ್ಗದ 27ಶೇ ಮಿಸಲಾತಿಯನ್ನು ಕಡಿತಗೊಳಿಸುವ ಪ್ರಯತ್ನಗಳು ನಡೆದವು. ಆದ್ದರಿಂದ ದಯಮಾಡಿ ಇದು ಹೈದಾರಾಬಾದ್ ನಲ್ಲಿ ಮಾತ್ರ ನಡೆಯುವ ನಡೆಯುತ್ತಿರುವ ಸಂಗತಿ ಎಂಬ ಮೂರ್ಖತನದ ಮಾತುಗಳನ್ನು ನಂಬಬೇಡಿ. ತಾರತಮ್ಯ ಎಂಬುದು ದೇಶದ ಎಲ್ಲಾ ಪ್ರತಿಷ್ಠಿತ ಸಂಸ್ಥೆಗಳಲ್ಲಿಯೂ ನಡೆಯುತ್ತಿದೆ . .
ನನ್ನ ಸ್ನೇಹಿತ ಪ್ರೊ. ಸುಖ್ದೇವ್ ಥೋರಟ್ ವಿಶ್ವವಿದ್ಯಾನಿಲಯಗಳ ಉಳಿವಿಗೆ ಏನು ಮಾಡಬೇಕು? ಎಂಬುದರ ಕುರಿತು ಒಂದು ನೀಲನಕ್ಷೆಯನ್ನು ಒದಗಿಸಿದ್ದಾರೆ. ನಾನು ಅವರು ನೀಡಿದ ವರದಿಯನ್ನು ಸಂಪೂರ್ಣವಾಗಿ ಒಪ್ಪುತ್ತೇನೆ. ನಾವು ಬದಲಾವಣೆಗೆ ಮುಂದಾಗುವುದಾದರೆ ಅದು ಈ ವರದಿಯಿಂದಲೇ ಶುರುವಾಗಲಿ. .
ಇಷ್ಟೇ ಅಲ್ಲ, ನಾವು ಇನ್ನೂ ಹಲವು ರಾಜಕೀಯ ಹೋರಾಟಗಳನ್ನು ನಡೆಸಬೇಕಿದೆ. ಹೊರಗೆ ಇನ್ನೂ ಹಲವು ಹೋರಾಟಗಳು ನಮ್ಮನ್ನು ಎದುರು ನೋಡುತ್ತಿವೆ. ದಯಮಾಡಿ ಅರ್ಥಮಾಡಿಕೊಳ್ಳಿ, ಇದು ಹೈದರಾಬಾದ್ ಗೆ ಮಾತ್ರ ಸೀಮಿತವಾಗಿಲ್ಲ. ಅಲಹಬಾದ್ ವಿಶ್ವವಿದ್ಯಾನಿಲಯದಲ್ಲಿ ನನ್ನ ಸ್ನೇಹಿತ ಸಿದ್ಧಾರ್ಥ್ ವರದರಾಜ್ ಅವರನ್ನು ಇದೇ ಎಬಿವಿಪಿ ಗುಂಪು ಕುಲಪತಿಗಳ ಕಟ್ಟಡಲ್ಲಿ ಬಂಧನಕ್ಕೆ ಒಳಪಡಿಸಿತ್ತು. ಅವರ ಭಾಷಣವನ್ನು ಕ್ಯಾಂಪೆಸ್ ನಲ್ಲಿ ನಡೆಯದಂತೆ ನೋಡಿಕೊಳ್ಳಲಾಯಿತು. ನೀವು ಹೊರಕ್ಕೆ ಬಂದರೆ ದಾಳಿ ಮಾಡುತ್ತೇವೆ ಎಂಬ ಬೆದರಿಕೆಯನ್ನೂ ಒಡ್ಡಲಾಗಿತ್ತು! ಜನ ಮರೆತಿರಬಹದು ಮಧ್ಯಪ್ರದೇಶದ ಒಬ್ಬರು ಕುಲಪತಿಗಳನ್ನು ಸಾಯುವಂತೆ ಧಳಿಸಲಾಗಿತ್ತು. ಅವರು ಬಿದ್ದ ಹೊಡೆತಗಳನ್ನು ತಾಳಲಾರದೆ ಅಸುನೀಗಿದ್ದರು. ಆದ್ದರಿಂದ ಇದು ಈ ವಿಶ್ವವಿದ್ಯಾಳಯಾಕೆ ಮಾತ್ರ ಸೀಮಿತವಾದ ಘಟನೆ ಎಂದು ತಿಳಿಯಬೇಡಿ. ಇನ್ನು ನಿಮ್ಮ ಕುಲಪತಿಗಳ ವಿಷಯ. ಅವರು ಧೀರ್ಘ ರಜೆಯ ಮೇಲೆ ತೆರಳಿದ್ದಾರೆ, ಅವರ ರಜೆ ಹಾಗೆಯೇ ಧೀರ್ಘವಾಗಿ ಹೋಗಲಿ ಎಂದು ಆಶಿಸುತ್ತೇನೆ. .
ರೋಹಿತ್ ಸಾವು/ಆತ್ಮಹತ್ಯೆ ನಮ್ಮನ್ನು ಒಂದಾಗಿಸಬೇಕಿದೆಯೇ ಹೊರತು ನಮ್ಮಲ್ಲೆ ಒಡಕು ಬಿತ್ತಬಾರದು. ಅವನು ಅವನ ಸಂಘಟನೆಯನ್ನೇ ವಿರೋಧಿಸುತ್ತಿದ್ದ, ತನ್ನ ಸ್ನೇಹಿತರನ್ನೇ ವಿರೋಧಿಸುತ್ತಿದ್ದ ಎಂಬ ಹೇಳಿಕೆಗಳನ್ನು ನೀಡುವ ಮೂಲಕ ನಮ್ಮನ್ನು ಒಡೆಯುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಆತನ ನೆನಪನ್ನು ನಮ್ಮಿಂದ ಅಳಿಸುವ ಕ್ರೌರ್ಯಕ್ಕೆ, ಅನ್ಯಾಯಕ್ಕೆ ಜನ ಮುಂದಾಗುತ್ತಿದ್ದಾರೆ. ಆದರೆ ಒಂದು ಶ್ಲಾಘನೀಯ ಅಂಶ ಎಂದರೆ ಈ ಎಲ್ಲಾ ವಿರೋಧ, ತಂತ್ರ, ಕುತಂತ್ರಗಳನ್ನು ಎದುರಿಸಿ ಪ್ರತಿರೋಧ ಎಂಬುದು ದೇಶದ ಮೂಲೆ ಮೂಲೆಗಳಿಂದ ಹರಿದು ಬರುತ್ತಿದೆ. ಮತ್ತು ಅದು ವಿಧ್ಯಾರ್ಥಿಗಳ ಕಡೆಯಿಂದ ಹರಿದು ಬರುತ್ತಿದೆ..
ನಿಮಗೆ ನೆನಪಿರಲಿ, ಕಳೆದ 105 ದಿನಗಳಿಂದ ಈ ಸರ್ಕಾರದ ವಿರುದ್ಧ, ವಿಶ್ವವಿದ್ಯಾನಿಲಯದ ಮೇಲೆ ಯುಧಿಷ್ಟಿರನ ಹೇರಿಕೆಯ ವಿರುದ್ಧ ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ವಿಧ್ಯಾರ್ಥಿಗಳು ಹೋರಾಡುತ್ತಿದ್ದಾರೆ. ನಿಮಗೆ ಗೊತ್ತಾ, ಮಹಾಭಾರತದಲ್ಲಿ ಯುಧಿಷ್ಟಿರ ಎಷ್ಟು ಪರಿಶುಧ್ಧ ಎಂದರೆ ಅವನು ಎಂದೂ ಸುಳ್ಳನ್ನೇ ಹೇಳಿರಲಿಲ್ಲ! ಆ ಕಾರಣಕ್ಕಾಗಿಯೇ ಆತನ ರಥ ಯಾವಾಗಲೂ ಭೂಮಿಯಿಂದ 6 ಇಂಚು ಮೇಲೆಯೇ ಚಲಿಸುತ್ತಿತ್ತು. ಪವಿತ್ರತೆಗೆ ಇದೊಂದು ಉದಾಹರಣೆ. ಯುಧಿಷ್ಟಿರ ಒಬ್ಬ ಕುಡುಕ, ಜೂಜುಕೋರ, ಜೂಜಿನಲ್ಲಿ ತನ್ನ ಹೆಂಡತಿಯನ್ನೆ ಪಣವಾಗಿ ಸೋತವನು. ಆದರೆ ಅವನು ಎಂದೂ ಸುಳ್ಳನ್ನು ಮಾತ್ರ ಹೇಳಿರಲಿಲ್ಲ. ಆ ಕಾರಣಕ್ಕಾಗಿಯೇ ಅವನು ಪವಿತ್ರ. . .! ಅವನು ದ್ರೋಣರಿಗೆ “ಅಶ್ವಥಾಮ ಸತ್ತ” ಎಂದು ಸುಳ್ಳು ಹೇಳಿದ ದಿನ ಅವನ ರಥ ನೆಲವನ್ನು ತಾಕಿತಂತೆ ಆದರೆ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ನ ಯುಧಿಷ್ಟಿರನ ರಥ ಭೂಮಿಯಿಂದ ಮೇಲೆ ಎದ್ದೇ ಇಲ್ಲ! ಅದು ಕೆಸರಿನಲ್ಲಿ ಹೂತು ಹೋಗಿದೆ. ಆ ಕಾರಣಕ್ಕಾಗಿಯೇ ಅವರನ್ನು ಯಾರೂ ಗೌರವಿಸುತ್ತಿಲ್ಲ. . ..
ಹೈದ್ರಾಬಾದ್ ವಿಶ್ವವಿದ್ಯಾನಿಲಯದ ವಿಧ್ಯಾರ್ಥಿಗಳೆ ನೀವು ಈ ಹೋರಾಟವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಬೇಕಿದೆ. ಈ ಹೋರಾಟದ ಜೊತೆ ಜೊತೆಗೇ ಇನ್ನೂ ಮುಖ್ಯವಾದ ಅನೇಕ ಸಂಗತಿಗಳನ್ನು ನೀವು ಮುಂಚೂಣಿಗೆ ತರಬೇಕಿದೆ. ಇದನ್ನು ರೋಹಿತ್ ವೇಮುಲ ಎಂಬ ಚೇತನದ ಪರಿಣಾಮ ಎಂದು ನಾನು ಗುರುತಿಸುತ್ತೇನೆ ಮತ್ತು ಜಗತ್ತೂ ಸಹಾ ಹಾಗೆಯೇ ಭಾವಿಸುತ್ತದೆ. .
ಫ್ರೆಂಚ್ ಬರಹಗಾರ ವಿಕ್ಟರ್ ಯುಗೋ ಬರೆಯುತ್ತಾನೆ All the forces in the world are not so powerful as an idea whose time has come.. ನನಗೆ ಅನ್ನಿಸುವಂತೆ 2016 ರಲ್ಲಿ ಭಾರತಕ್ಕೆ ಆ ಸಮಯ ಬಂದಿದೆ. ಆ ಅಲೋಚನೆಯ ಹಿಂದಿನ ಬೇಡಿಕೆ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಲಿಂಗಾಧಾರಿತ, ನ್ಯಾಯದ ಹಕ್ಕೊತ್ತಾಯವಾಗಿದೆ. ಅಲ್ಲದೆ ರೋಹಿತ್ ಮತ್ತು ಆ ರೀತಿಯ ಲಕ್ಷಾಂತರ ರೋಹಿತ್ ಗಳ ನ್ಯಾಯಯುತ ಹಕ್ಕಾಗಿದೆ. ನಮ್ಮ ಹೋರಾಟದ ಮಾದರಿಗಳು ಭಿನ್ನ ಇರಬಹದು ಆದರೆ ಉದ್ದೇಶ ಅಂಬೇಡ್ಕರ್ ಹೇಳಿದ ಶಿಕ್ಷಣ , ಸಂಘಟನೆ, ಹೋರಾಟದ ಹಕ್ಕುಗಳಿಗಾಗಿದೆ ಎಂಬುದನ್ನು ಖಂಡಿತಾ ಮರೆಯದಿರೋಣ. .





ಸಾಯಿನಾಥ್ರವರಿಗೆ ಅವರೇ ಸಾಟಿ. ತೀಕ್ಷ್ಣವಾದ ಪ್ರತಿಕ್ರಿಯೆಯಾದರೂ ಸೂಕ್ಷ್ಮ ಒಳನೋಟಗಳ ಬರಹ.