ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಪ್ಪಂದ

ಕಾಂತರಾಜು ಕನಕಪುರ

ನಿಮಗೆ ತಿಳಿದಿರಲಿ
ಎಂದಷ್ಟೇ ಹೇಳುತಿರುವುದು
ಗಾಯ ಕೆರೆಯುವುದಿಲ್ಲ
ಕೀವು ಒಸರುವುದಿಲ್ಲ ಎಂದು
ನನ್ನ ಮತ್ತು ನನ್ನ ನೆನಪುಗಳ
ನಡುವೆ ಒಮ್ಮತದ ಒಪ್ಪಂದವಾಗಿದೆ…

ಏನೋ…
ಭಾನುವಿನುದಯಕೆ ಆಗಸದಿ
ಬಣ್ಣದ ದಿಬ್ಬಣವು ಹೊರಟಾಗ…
ರಜನಿಯ ಅಪ್ಪುಗೆಯಿಂದ ಬಿಡಿಸಿಕೊಂಡ
ಇಳೆಯು ಬಣ್ಣದುಡುಗೆಯನು ತೊಡುವಾಗ…

ಅಚ್ಚ ಹಸುರೆಲೆಗಳ ನಡುವೆ
ಹಕ್ಕಿ ಕಲರವವು ಅಲೆಯಾದಾಗ…
ಅಂಗಳದ ಹೂವಿನೊಡಲಿನಲಿ
ಬಣ್ಣದ ಚಿಟ್ಟೆ ಬಂಡುಣ್ಣುವಾಗ…

ಮಧ್ಯಾಹ್ನದ ಸುಡುಬಿಸಿಲಿನಲಿ
ಅಂಗಳದ ಹೊಂಗೆಯ ಮರವು
ನೆರಳ ರಂಗೋಲಿ ಬಿಡಿಸಿದಾಗ…
ಸಂಜೆ ಗೋಧೂಳಿಯಲಿ
ಮನೆ ಮುಂದಿನ ಹಾದಿಯು
ಮೀಯುತಲಿರುವಾಗ…

ರಾತ್ರಿ ಬಾನಿನಂಗಳದಲಿ
ಚಂದಿರನು ಬೆಳ್ಳಿಯ ಬಟ್ಟಲಾದಾಗ…
ಕಣ್ಣನು ಕಡಿದರೂ ನಿದ್ದೆಯು
ಸುಳಿವೀಯದಿರುವಾಗ…

ಹೀಗೆ…
ಸುಮ್ಮನೆ ಕುಳಿತಿರುವಾಗ
ನಮ್ಮ ಒಪ್ಪಂದ
ಮುರಿಯುತ್ತಿರುತ್ತೇವೆ…
ಅಷ್ಟೇ…

‍ಲೇಖಕರು Admin

6 August, 2021

1 Comment

  1. T S SHRAVANA KUMARI

    ಸೊಗಸಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading