ಅವಳ ಕೈಗಳ ಸಿಹಿ
ವಿನತೆ ಶರ್ಮ
ಮಗು ಹೇಳಿತು
‘ಅಮ್ಮ, ನಿನ್ನ ಕೈ ಬಾಳಾ ಬಿರುಸು’
ಕೈಗಳ ದಿಟ್ಟಿಸಿದ
ಮನ ಹೇಳಿತು,
ಆಹ್, ಚಳಿಗಾಲವೇ! ನಿನ್ನಮಹಿಮೆಯೇ
ಎಲ್ಲಿ ಆ ಮೃದು ಮಾಂತ್ರಿಕತೆಯ ಕ್ರೀಮು?
ಮಗುವಿನ ಹಣೆಯನ್ನು ನೇವರಿಸುತ್ತಾ
ಈ ಕೈಗಳಿಗೆ ಯಾಕೋ ನನ್ನಮ್ಮನ ನೆನಪು.
ಕಾಡುತ್ತಿವೆ ಆ ಕೈಗಳ
ಗೆರೆಗಳು, ಬಿರುಕುಗಳು.
ಅಮ್ಮ ತಟ್ಟಿದ ಅಕ್ಕಿರೊಟ್ಟಿಯಲ್ಲಿ,
ಅವಳ ರಂಗೋಲಿಯಲ್ಲಿ,
ತಿಕ್ಕಿ ತೀಡಿ ಮಡಿಸಿದ
ಗರಿಗರಿ ಬಟ್ಟೆಗಳಲ್ಲಿ
ಕಾಣಿಸುತ್ತಿವೆ ಆ ಬೆರಳಗೆರೆಗಳು.

ಬೆಳೆಯುತ್ತಿದ್ದ ನನ್ನ ಬೆರಳುಗಳಿಗೆ
ಬಣ್ಣ ಹಚ್ಚುವ ಗಮನದಲ್ಲಿ
ನನ್ನಮ್ಮನ ಒಡೆದ ಉಗುರುಗಳು,
ಆಗಾಗ ಆದ ಗಾಯಗಳು, ಒಸರಿದ ರಕ್ತ
ಕಾಣಲಿಲ್ಲ ಮನಕ್ಕೆ.
ತಿರುವಿ ತಿರುವಿ ಸಿಹಿಯಾಗಿಸಿದ ಸಜ್ಜಿಗೆ,
ಬಿಸಿಬಿಸಿ ಹಬೆಯಾಡುವ
ಅನ್ನದ ಅಗಳನ್ನ
ಬಿಡಿಸಿದ ಬೆರಳ ಬಿರುಕುಗಳು.
ಥಳಥಳ ಹೊಳೆಯುತ್ತ
ಒಪ್ಪದಿಂದ ಜೋಡಿಸಿದ ಪಾತ್ರೆಗಳು ಹೇಳಿದ
ಆ ಬಿರುಕುಗಳ ಕತೆಗಳು
ಈಗ ಜೀವ ಮೂಡಿ ಪಾತ್ರಗಳಾಗಿ
ಕಣ್ಣಮುಂದೆ ನಿಂತಿವೆ.
ಯಾಕೋ
ನನ್ನ ನಿಟ್ಟುಸಿರು
ಶಬ್ದವಾಯಿತೆಂಬ ಗಾಬರಿ.
ಕೆನ್ನೆಯಿಂದಿಳಿದ ಕಂಬನಿ
ಕಂದನನ್ನು ತಾಕೀತೆಂಬ ಆತಂಕ.
ಮಗು ಮೆಲ್ಲನೆ
ಹಣೆ ನೇವರಿಸುತ್ತಿದ್ದ
ಕೈಯನ್ನೆಳೆದು
ಕೆನ್ನೆಯ ಕೆಳಗಿರಿಸಿಕೊಂಡಾಗ
ಪಾತ್ರಗಳು ಥಟ್ಟನೆ ಉಸಿರಿದವು.
ಅದು ನೋಡು ಅಮ್ಮನ ಪ್ರೀತಿ.
ಒಡೆದ ಕೈಗಳ
ಬಿರುಕು ಬೆರಳುಗಳ ಸ್ಪರ್ಶ
ಅವಳ ಸಜ್ಜಿಗೆಯಷ್ಟೇ ಹಿತ.






Nostalgically fantastic!… You reminded me so much of my mom’s touch!….